10 ನವೆಂಬರ್, 2012 ಸಂಪಾಜೆ ಯಕ್ಷೋತ್ಸವ 2012:
ಭಗವಂತನ ಭಕ್ತಿಯ ಪ್ರಸಾದವೇ ಕಲೆ, ನೃತ್ಯ, ಸಂಭಾಷಣೆ, ಗಾಯನ, ವಾದನಗಳನ್ನೊಳಗೊಂಡ ಕಲೆ ಯಕ್ಷಗಾನ. ತೆಂಕು ಮತ್ತು ಬಡಗು ಮೇಳಗಳು ಇಂದು ರಾಜ್ಯದಾದ್ಯಂತ ಯಶಸ್ವಿ ಪ್ರದರ್ಶನ ನೀಡುತ್ತಿವೆ ಎಂದು ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದಂಗಳವರು ನುಡಿದರು. ಅವರು ಡಾ. ಕಿಲಾರು ಗೋಪಾಲಕೃಷ್ಣಯ್ಯನವರ ಸಂಸ್ಮರಣೆ ಮತ್ತು ಸಂಪಾಜೆ ಯಕ್ಷೋತ್ಸವ 2012 ಉದ್ಘಾಟಿಸಿ ಆಶೀರ್ವಚನ ನೀಡುತ್ತಿದ್ದರು. ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮಿಗಳು ಮಾತನಾಡಿ ವ್ಯಕ್ತಿಯ ಉದ್ದಾರವಾಗಬೇಕಾದರೆ ಕಲೆಯಲ್ಲಿ ಸಂದೇಶ ಮತ್ತು ಮನೋರಂಜನೆಗಳು ಒಟ್ಟಿಗೆ ಸಿಗಬೇಕು ಇಂದು ಹೇಳಿದರು.

ಸಭಾ ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿದ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಸಂತೋಷವನ್ನು ಕೊಟ್ಟು ತೆಗೆದುಕೊಳ್ಳುವ ಕಾರ್ಯಕ್ರಮ, ಇಲ್ಲಿ ಸಂತೋಷದೊಂದಿಗೆ ವಿವಿಧ ಸಂಘ ಸಂಸ್ಥೆ, ಬಡ ವಿದ್ಯಾರ್ಥಿಗಳಿಗೆ ಸಹಾಯ ದೊರೆತಿದೆ. ಕಲ್ಲುಗುಂಡಿ ಕಲಾ ಸಾಗರವಾಗಲಿ ಎಂದು ಹಾರೈಸಿದರು. ಕಲಾಕ್ಷೇತ್ರದಲ್ಲಿ ಶಿಸ್ತು ಮತ್ತು ಚುರುಕುತನಕ್ಕೆ ಚಿಟ್ಟಾಣಿ ಹೆಸರಾದರೆ, ಸನ್ಯಾಸಿಗಳ ಮಧ್ಯೆ ಪೇಜಾವರದವರು ಚಿಟ್ಟಾಣಿ ಇದ್ದಂತೆ ಎಂದು ಹೇಳಿದರು. ಪದ್ಮಶ್ರಿ ಪ್ರಶಸ್ತಿ ಪುರಸ್ಕೃತ ಚಿಟ್ಟಾಣಿ ರಾಮಚಂದ್ರ ಹೆಗಡೆ ಹಾಗೂ ಯಕ್ಷಗಾನ ಕಲಾವಿದ ಕುಂಬಳೆ ಶ್ರೀಧರ ರಾವ್ ಅವರನ್ನು ಸನ್ಮಾನಿಸಲಾಯಿತು. .ಪದ್ಯಾಣ ಶಂಕರನಾರಾಯಣ ಭಟ್ಟರನ್ನು ಶ್ರೇಣಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಉಜಿರೆ ಅಶೋಕ್ ಸ್ವಾಗತಿಸಿ, ವೇ| ಹಿರಣ್ಯ ಗಣಪತಿ ಭಟ್ ನಿರೂಪಿಸಿದರು. ಸಂಪಾಜೆ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶಂಕರನಾರಾಯಣ ಭಟ್ ಅಭಿನಂದನಾ ಭಾಷಣ ಮಾಡಿದರು.

ನಾಡಿನ ಪ್ರಸಿದ್ದ ಕಲಾವಿದರಿಂದ ಚಂದ್ರಾವಳಿ, ರುಕ್ಮಾಂಗದ, ಚಂದ್ರಹಾಸ, ಸ್ವಯಂಪ್ರಭೆ ಮತ್ತು ಶ್ರೀದೇವಿ ಲಲಿತಾಂಬಿಕೆ ಎನ್ನುವ ಯಕ್ಷಗಾನ ಬಯಲಾಟ ನಡೆಯಿತು..

ಚಿತ್ರ,ವರದಿ: ಗೌತಮ್ ಬಿ ಕೆ.

Facebook Comments