ಹರೇ ರಾಮ

ವಿಶ್ವದ ವಿರಾಟ್ ಪುರುಷ, ನಮ್ಮ ದೇಹದಲ್ಲಿ ಸ್ವರಾಟ್ ಪುರುಷನಾಗಿ ವಿಹರಿಸುವ ರಾಮ…

ಇತ್ತ  ದೇವರುಗಳು, ಅತ್ತ ಜೀವರುಗಳು…
ಇತ್ತ ಪರಮಾತ್ಮ, ಅತ್ತ ಸಂಸಾರ…
ಮಧ್ಯೆ ನಾವು..!

ನಿನ್ನೆಬೆಳಗ್ಗೆ ನಡೆದದ್ದು ೯೯೯೯ ನೆಯ ಪೂಜೆ. ಅದರಲ್ಲಿನ ಅಂಕೆಗಳನ್ನು  ಕೂಡಿದರೆ ೩೬ ಬರುವುದು. ನಾವು ಮೂವತ್ತಾರನೆಯ ಪೀಠಾಧಿಪತಿಗಳು…!
ಹಾಗೆಯೇ ನಾವು ೯ನೆಯ ರಾಘವೇಶ್ವರರು…!
ಈ ಎರಡು ದಿನಗಳಲ್ಲಿನ ಒಂದೊಂದು  ಪೂಜೆ ಹತ್ತು ಸಾವಿರ ಪೂಜೆಗೆ ಸಮಾನ, ಯಾಕೆಂದರೆ ಅದನ್ನು ೧೦೦೦೦ ಜನ ಕೂಡಿ ಮಾಡಿದ್ದೇವೆ…

ಸಾವಿರ ಕಂಠಗಳು, ಒಂದು ಕರ…
ದೇವರ ಸನ್ನಿಧಿಯಲ್ಲಿ ನಾವು ಒಂದಾದೆವು, ಇನ್ನೆಂದೂ ಬೇರೆಯಾಗುವುದಕ್ಕೆ ಸಾಧ್ಯವಿಲ್ಲ…
ಪರಮಾತ್ಮನ ಸನ್ನಿಧಿಯಲ್ಲಿ “ಬೇರೆಯಾಗುವುದು”ಎಂಬ ಪದವಿಲ್ಲ..!
ಪೂಜೆಯಲ್ಲಿ ನೀವು ಹೇಳುವುದು, ನಾವು ಮಾಡುವುದು…

“ರಾಮಕಥೆ – ನಮ್ಮ ಬದುಕಿನ ಮಹತ್ತರ ತಿರುವು”..!

ಇಷ್ಟು ಹೊತ್ತು ಕುಳಿತು ಶ್ರಮ ಪಟ್ಟ ನಿಮಗೆಲ್ಲ ಈ ದಿನ ಎಣ್ಣೆ ಹಚ್ಚಿ ಸ್ನಾನ ಮಾಡಿಸುವ ತಾಯಿ ನಾವಾಗಬೇಕಿತ್ತು, ಎಂದು ನಮಗನಿಸುತ್ತಾ ಇದೆ…

ಎಂದೂ ಆಗದಷ್ಟು ಅರ್ಚನೆಗಳು ಈ ಎರಡು ದಿನಗಳಲ್ಲಿ ನಡೆದಿದೆ.  ೧ ಗಂಟೆ ೨೦ ನಿಮಿಷದಲ್ಲಿ ೧ ಕೋಟಿ ಕುಂಕುಮಾರ್ಚನೆ, ೧ ಕೋಟಿ ತುಳಸಿ ಅರ್ಚನೆ ನಡೆದಿದೆ..!

೧೬,೬೬೧ ಬಾರಿ ರುದ್ರ ಪಠಿಸಿದರೆ ಅತಿರುದ್ರ, ಆದರೆ ಇಂದು ಮುಕ್ಕಾಲು ಗಂಟೆಯಲ್ಲಿ ೨೨,೩೬೫ ಬಾರಿ ರುದ್ರ ಪಠಿಸಲಾಗಿದೆ, ‘ವಿಶ್ವ ವಿಕ್ರಮ’ ಇದು..!

ಕೌಸಲ್ಯೆ ರಾಮನಿಗಾಗಿ ಕಾದಂತೆ ಅಶೋಕೆಯೂ ಕಾದಿತ್ತು ರಾಮನಿಗಾಗಿ.. ಎಷ್ಟೋ ಕಾಲದಿಂದ, ಎಷ್ಟೋ ಶತಮಾನಗಳಿಂದ ಕಾದಿತ್ತು ಅಶೋಕೆ…

ಇಲ್ಲಿ ಮೊದಲು ಇದ್ದಿದ್ದು ಗೇಯರು. ಈಗ ಇರುವುದು ಗುರು…

ಶಂಕರಾಚಾರ್ಯರು ಹಲವು ಕಡೆ ಮಠಗಳನ್ನು ಸ್ಥಾಪನೆ ಮಾಡಿದ್ದಾರೆ. ಆದರೆ ಅಶೋಕೆಯ ಪರಂಪರೆ ಮಾತ್ರ ಈ ವಿಶ್ವದಲ್ಲಿ  ‘ಅವಿಚ್ಛಿನ್ನ’ವಾಗಿ ಉಳಿದಿದೆ..!

ಕರಪತ್ರದಲ್ಲಿ  ‘ಹತ್ತು ಸಾವಿರದೆಡೆಗೆ’ ಅಂತ ಬರೆದಿತ್ತು…
ಅಂದರೆ ಹತ್ತು, ಸಾವು ಇರದ ಕಡೆಗೆ… ಅಮೃತತ್ವದ ಕಡೆಗೆ..!

ಬೇಸಿಗೆಯಲ್ಲಿ ನದಿ ಬತ್ತಿದಂತೆ ಕಂಡರೂ ಅದು ಬತ್ತಿರುವುದಿಲ್ಲ. ಹಾಗೆಯೇ ಅಶೋಕೆಯ ಮಠವೂ ನಾಶವಾಗಿಲ್ಲ. ಅದು ಸುಪ್ತವಾಗಿತ್ತು. ಈ ಸಮಯ ಬಂದೊಡನೆ ಅದು ವಿಶ್ವರೂಪವಾಗಿ ಪ್ರಕಟವಾಯ್ತು…

ಹನುಮಾನ್ ಎಂದರೆ ದವಡೆಯುಳ್ಳವನು.  ಆತನಿಗೆ ಒಂದು ದವಡೆ ಹೋಯ್ತು, ನೂರು ದವಡೆ ಬಂತು…
ಹಾಗೆಯೇ ಅಶೋಕೆಗೆ ಒಂದು ಕಡೆ ಹಾನಿಯಾದರೆ ನೂರು ಕಡೆಯಿಂಡ ಶಕ್ತಿ ಬರುತ್ತೆ, ಅದಕ್ಕೆ ಸಾಕ್ಷಿ ಈ ಕಾರ್ಯಕ್ರಮ..!

ಕಡು ಬಡವನೊಬ್ಬ ದೇವರ ಕುರಿತು ತಪಸ್ಸು ಮಾಡಿ ‘ಆನೆ’ ಕೊಡು ಅಂತ ಕೇಳುತ್ತಾನೆ…
ದೇವರು, ಆನೆ ಯಾಕೆಂದು ಕೇಳಿದಾಗ ಆತ ಹೇಳುತ್ತಾನೆ-
ಆ – ಎಂದರೆ ಆರೋಗ್ಯ
ನೆ – ಎಂದರೆ ನೆಮ್ಮದಿ ಎಂದು.
ಶರೀರಕ್ಕೆ ಆರೋಗ್ಯ ಮನಸ್ಸಿಗೆ ನೆಮ್ಮದಿ ಬೇಕು…
ನಮ್ಮ ಗುರು ಪೀಠ  ಸಾವಿರ ಸಾವಿರ ವರ್ಷಗಳಿಂದ ಸಮಾಜಕ್ಕೆ ಅಂಥ ‘ಆನೆ’ಯನ್ನು ಕೊಡ್ತಾ ಬಂದಿದೆ…
ಈ ಸಭಾಂಗಣದಲ್ಲಿಟ್ಟ ೩೫ ಆನೆಗಳು ಅದರ ಪ್ರತೀಕ..!

ರಾಮ ಜಗತ್ತಿಗೆ ಒಬ್ಬನೇ, ನಮ್ಮ ರಾಮನ ವಿಗ್ರಹವೂ ಹಾಗೆಯೆ…
ಆತನ ಒಂದು ಕೈ ಊರ್ಧ್ವ ಮುಖ, ಇನ್ನೊಂದು ಅಧೋಮುಖವಾಗಿದೆ.
ಒಂದು ದಿವಿಯತ್ತ, ಇನ್ನೊಂದು ಭುವಿಯತ್ತ…

ಹೆಬ್ಬೆರಳು ಪರಮಾತ್ಮ, ತೋರುಬೆರಳು ಜೀವಾತ್ಮ..
ಜೀವಾತ್ಮ ಪರಮಾತ್ಮನನ್ನು ಸೇರಿದಾಗ ವೃತ್ತ ಪರಿಪೂರ್ಣವಾಗುತ್ತದೆ – ಚಿನ್ಮುದ್ರೆಯ ಸಂದೇಶವಿದು..!

ಮೌಳಿಸ್ಥಾನದಲ್ಲಿ ಚಂದ್ರನಿರುವಾತನೇ – ಚಂದ್ರಮೌಳೀಶ್ವರ..
ಅಂತೆಯೇ ನಮ್ಮ ಚಂದ್ರಮೌಳೀಶ್ವರ ಲಿಂಗವು ಹೆಸರಿಗೆ ಅನುರೂಪವಾಗಿದೆ…
ಸರಿಯಾಗಿ ಗಮನಿಸಿ ನೋಡಿದರೆ,  ಆ ಲಿಂಗದಲ್ಲಿ ಸಂಪೂರ್ಣ ಭಾರತದ ಚಿತ್ರವಿದೆ..!
ಚಂದ್ರಮೌಳೀಶ್ವರ ಲಿಂಗದ ಹಿಂಭಾಗದಲ್ಲಿ ಸುಸ್ಪಷ್ಟವಾಗಿ ಆತ್ಮಲಿಂಗದ ಛಾಯೆ ಮೂಡಿದೆ..!

ಇಲ್ಲಿನ ರಾಜರಾಜೇಶ್ವರಿಯ ಶ್ರೀಚಕ್ರವೂ ಅತ್ಯಂತ ಅಪರೂಪವಾದದ್ದು…
ಗಣಪತಿಯ ಮೂರ್ತಿಯೂ ಗೋಕರ್ಣದಲ್ಲಿರುವ ಗಣಪತಿಯಂತೆಯೆ ಇದೆ..!
ಹಾಗಾಗಿ ನಾವು ಸಲ್ಲಿಸುವ ಪೂಜೆಯೆಲ್ಲಾ ಗೋಕರ್ಣಕ್ಕೆ ಸಲ್ಲುತ್ತದೆ..
ಪೂರ್ಣಸಾನ್ನಿಧ್ಯದ ಈ ವಿಗ್ರಹಗಳು ಶತಶತಮಾನಗಳಿಂದ ಲೆಕ್ಕಕ್ಕೇ ಸಿಗದಷ್ಟು ಬಾರಿ ಪೂಜಿಸಲ್ಪಟ್ಟಿವೆ…

‘ಅಶೋಕೆಗೆ ಬರುವ ರಸ್ತೆ ಚಿಕ್ಕದಾಯ್ತು’ ಅಂತ ಅನೇಕರ ಅಭಿಪ್ರಾಯ…
ಆದ್ರೆ ಅಶೋಕೆಗೆ ಬರುವ ರಸ್ತೆ ಸಣ್ಣದಾದ್ದಲ್ಲ, ಬರುವಶಿಷ್ಯರ ಸಂಖ್ಯೆ ಜಾಸ್ತಿಯಾದದ್ದು..!

ಪೂರ್ವಂ ನ ಭೂತಃ – ಅಭೂತಪೂರ್ವ ಕಾರ್ಯಕ್ರಮ ಇದಾಗಿದೆ..!
ಪಶ್ಚಿಮ ಸಮುದ್ರದ ಅಶೋಕೆ ಪೂರ್ವ ಸಮುದ್ರದ ಕಲ್ಕತ್ತಾವನ್ನು ಸೆಳೆದಿದೆ…

ದೇವ, ಜೀವ, ಗುರು ಸಂಗಮ – ಈ ತ್ರಿವೇಣಿ ಸಂಗಮ ಎಂದಿಗೂ ಆಗುತ್ತಾ ಇರಲಿ…

Facebook Comments