ಬ್ರಹ್ಮೈಕ್ಯ ಪರಮಪೂಜ್ಯಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಸಂಸ್ಮರಣ ಗ್ರಂಥ“ಶ್ರೀ ಗುರು ಭಾರತೀ”. ವಿದ್ವಾನ್ ಗಜಾನನ ಜೋಶೀ, ಗೋಕರ್ಣ ಇವರ ಪ್ರಧಾನ ಸಂಪಾದಕತ್ವದಲ್ಲಿ, ವಿದ್ವಾನ್ ಶ್ರೀ ಶೇಷಾಚಲ ಶರ್ಮಾ, ಎಂ.ಎ, ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು, ಬೆಂಗಳೂರು ಇವರ ಸಂಪಾದಕತ್ವದಲ್ಲಿ, ವಿದ್ವಾನ್ ರಾಮಕೃಷ್ಣ ಅಡ್ಕೋಳಿ, ಸಾಗರ ಇವರ ಕಾರ್ಯನಿರ್ವಾಹತ್ವದಲ್ಲಿ, ಶ್ರೀ ಭಗವತ್ಪಾದ ಶ್ರೀ ರಾಘವೇಂದ್ರ ಭಾರತೀ ಸನಾತನ ಧರ್ಮ ಪೋಷಿಣೀ(ರಿ) ಪ್ರತಿಷ್ಠಾನಂ, ವಿದ್ಯಾಮಂದಿರ, 2 ಎ, ಜೆ.ಪಿ ರಸ್ತೆ, 1ನೆಯ ಹಂತ, ಗಿರಿನಗರ, ಬೆಂಗಳೂರು- 560 085 ಇವರಿಂದಪ್ರಮಾಥೀ ಸಂ| ಮಾರ್ಗಶೀರ್ಷ 1999 ರಲ್ಲಿ ಪ್ರಕಾಶಿತಗೊಂಡು, ಗುರುಜ್ಯೋತಿಯ ದೀಪ್ತಿಯನ್ನು ಶಿಷ್ಯಕೋಟಿಗೆ ಪರಿಚಯಿಸಿದ ಗ್ರಂಥ.ಈ ಕೃತಿರತ್ನದಲ್ಲಿ ಪ್ರಕಾಶಗೊಂಡ ಲೇಖನಗಳಲ್ಲಿ ಶ್ರದ್ಧಾಸುಮ ಅಧ್ಯಾಯದಲ್ಲಿ ಪ್ರಕಟಗೊಂಡ ನಮ್ಮ ಸಮಾಜದ ಮಹಾನ್ ವಿದ್ವಾಂಸರ ವಿದ್ವತ್ಪೂರ್ಣ ಲೇಖನಗಳ ಗುಚ್ಛವನ್ನು ಹರೇರಾಮದ ಓದುಗರಿಗೆ ಕೊಡುತ್ತಿದ್ದೇವೆ.

ಹರೇರಾಮ

~

ಶ್ರದ್ಧಾಸುಮ 18:

ಬ್ರಹೈಕ್ಯ ಪೂಜ್ಯಗುರುವರ್ಯರು
      -ನಾನು ದರ್ಶನ ಮಾಡಿದಂತೆ

             ವಿದ್ವಾನ್ ವಿ. ಜಿ. ಹೆಗಡೆ, ಗುಡ್ಗೆ

       1972ನೇ ಇಸವಿಯಲ್ಲಿ ಶ್ರೀಮಜ್ಜಗದ್ಗುರು ಶ್ರೀರಾಘವೇಂದ್ರಭಾರತೀ ಸ್ವಾಮಿಗಳ ಸವಾರಿಯು ಶ್ರೀಕ್ಷೇತ್ರ ಸುಬ್ರಹ್ಮಣ್ಯ ದೇವಾಲಯಕ್ಕೆ ಚಿತ್ತೈಸಿದಾಗ ಪೀಠಾರೂಢರಾದ ಯತಿಗಳ ದಿವ್ಯದರ್ಶನದ ಅವಕಾಶ ನನಗೆ ಲಭಿಸಿತು. ಪ್ರಾಪ್ತವಾದ ಈ ಸಂದರ್ಭದಲ್ಲಿ ಆತ್ಮಜ್ಞಾನಿಗಳೂ ಶ್ರೀಶಂಕರಾಚಾರ್ಯರ ದಿವ್ಯಾಂಶ ಸಂಭೂತರೂ, ತಪೋನಿಷ್ಠರೂ ಆದ ಯತಿವರೇಣ್ಯರ ಮುಂದೆ ನನ್ನ ಚಿತ್ತ ಧನ್ಯತೆಯಭಾವ ಪಡೆಯಿತು. ಸಾಷ್ಟಾಂಗ ನಮನ ಸಾರ್ಥಕತೆಯನ್ನು ಪಡೆದು ಪೂಜ್ಯಗುರುಗಳ ಸದಾಶೀರ್ವಾದ ಬಯಸಿ ನವಚೈತನ್ಯವನ್ನು ಪಡೆದ ಆನಂದ ಉಂಟಾಯಿತು.

ಶ್ರೀಗುರುಗಳ ಆಶೀರ್ವಾದದ ಶ್ರೀರಕ್ಷೆಯಲ್ಲಿ ಆರಂಭಿಸಿದ ಕಾರ್ಯಗಳೆಲ್ಲವೂ ಸಮರ್ಥವಾಗಿ ಮುನ್ನಡೆದು ಸಂಪೂರ್ಣವಾಗಿ ಸಾಕಾರವನ್ನು ಪಡೆದ ಅನುಭವ ನನಗೆ ಒಂದೆರಡಲ್ಲ. ಕಡುಬಡವನೊಬ್ಬ ಆತ್ಮಹತ್ಯೆಗೆ ಮುಂದಾದಾಗ ಗುರು ಪರಿವಾರ ನೋಡಿ ಶ್ರೀಗಳ ಸನ್ನಿಧಿಗೆ ಕರೆದು ತಂದಾಗ ಆತ್ಮಹತ್ಯಾದೋಷ ಹೇಗೆ ಮಹಾಪರಾಧ? ಸನ್ಮಾರ್ಗದತ್ತ ವ್ಯಕ್ತಿ ಹೇಗೆ ತನ್ನನ್ನು ತೊಡಗಿಸಿಕೊಳ್ಳಬಲ್ಲ ಎನ್ನುವ ಶ್ರೀಗಳ ತತ್ತ್ವಭೋಧನೆ ಆತನಿಗೆ ಪುನರ್ಜನ್ಮ ನೀಡಿತು. ಆತನ ಸುಖಮಯ ಜೀವನ ಶ್ರೀಗಳ ಸಂಪೂರ್ಣ ಆಶೀರ್ವಾದದಿಂದ ಮುನ್ನಡೆದದ್ದು ನನ್ನ ಪಾಲಿಗೆ ಅವಿಸ್ಮರಣೀಯ ವೃತ್ತಾಂತಗಳಲ್ಲೊಂದು.

ದೈನಂದಿನ ಜೀವನದಲ್ಲಿ ಷಟ್ಕರ್ಮಗಳಾಚರಣೆ ಪ್ರಾಮುಖ್ಯವಾಗಿದೆ.ಅವುಗಳನ್ನು ನಡೆಸುವದು ಪ್ರತಿಯೊಬ್ಬನ ಆದ್ಯಕರ್ತವ್ಯ. ಪ್ರತೀ ದಿನವೂ ಸಂಧ್ಯಾವಂದನೆ ಮತ್ತು ದೇವರ ಉಪಾಸನೆ, ಇವೆಲ್ಲವು ತಪ್ಪದೇ ನಡೆಸಬೇಕಾದ ಕರ್ಮಗಳು. ‘ಸ್ವಧರ್ಮೇ ನಿಧನಂ ಶ್ರೇಯಃ‘ ಎನ್ನುವಂತೆ ನಿಮ್ಮ ನಿಮ್ಮ ಧರ್ಮಾಚರಣೆ ಮಾಡಿದಿದ್ದರೆ ಜೀವಿ ತನ್ನ ಬದುಕಿನ ಜೀವಿತಾರ್ಥದಲ್ಲಿ ಶ್ರೇಯಸ್ಸಿನಿಂದ ದೂರವಿರುತ್ತಾನೆ. ಈ ರೀತಿ ಶ್ರೀರಾಘವೇಂದ್ರಭಾರತೀ ಸ್ವಾಮಿಗಳು ದೈನಂದಿನ ಅನುಷ್ಟಾನ ಲೋಪಕ್ಕೆ ನಿಷ್ಠುರವಾಗಿ, ನಿತ್ಯಾನುಷ್ಠಾನ ಲೋಪ ಮಾಡಬೇಡಿ ಎಂದು ಹೇಳಿದ್ದುಂಟು. ನಿತ್ಯಾನುಷ್ಠಾನಿಗಳನ್ನು ಕಂಡು ಇದೇ ರೀತಿ ಅನುಷ್ಠಾನ ಬಿಡದೇ ಸದಾ ನಡೆಸಿ ಅನ್ಯರಿಗೂ ಹೀಗೆ ಅನುಷ್ಠಾನಪರರಾಗಿರಿ ಎಂದು ಶ್ಲಾಘಿಸಿದ್ದು ಉಂಟು. ಹೀಗೆ ನಿತ್ಯಾನುಷ್ಠಾನ ವಿಷಯದಲ್ಲಿ ಎಂದು ಲೋಪ ಮಾಡಬಾರದೆಂಬ ಅವರ ಕಠೋರವಾದ ಆಜ್ಞೆ. ಅನೇಕರನ್ನು ನಿತ್ಯಾನುಷ್ಠಾರನ್ನಾಗಿಸಿ ಸನ್ಮಾರ್ಗದತ್ತ ಪರಿವರ್ತಿಸಿದ್ದು ಅನೇಕರ ಸೌಭಾಗ್ಯ.

ಶ್ರೀಗಳ ಪ್ರೀತಿ ವಾತ್ಸಲ್ಯಗಳು ವೇದಜ್ಞರಲ್ಲಿ, ಶಾಸ್ತ್ರಜ್ಞದಲ್ಲಿ ಸವಿಶೇಷ, ಸದಾ ವಿಶೇಷವಾದ ಗೌರವ, ಅವರ ಆಳವಾದ ಜ್ಞಾನಕ್ಕೆ ಅವರ ಸರಸ್ವತಿ ಸೇವೆಗೆ, ವಿಶೇಷ ಪುರಸ್ಕಾರ, ಉಳಿದವರೂ ಅವರಂತೆ ಸದ್ಗುಣಗಳನ್ನು ಅನುಸರಿಸುವಂತೆ ವಿಶೇಷೋಕ್ತಿ. ಇವುವೆಲ್ಲವುಗಳನ್ನು ಶ್ರೀಗಳ ಆನಂದವನ್ನು ನೋಡಿಯೇ ತಿಳಿಯಬೇಕಾಗಿತ್ತು. ಸದಾ ಭಾಗವತ ಮಹಾಭಾರತದ ಉಕ್ತಿಗಳೊಂದಿಗೆ ಪಂಡಿತರೊಡನೆ ಚರ್ಚೆ ತದನಂತರ ಶ್ರೀಗಳ ಸರಿಯಾದ ಸಮಾಧಾನಕರ ತೀರ್ಮಾನ ಸಹಿತ ಉತ್ತರ ನೋಡಿ ಆನಂದಿಸಿದ ಘಟನೆಗಳು ಅನೇಕ.

ಗುರುವರೇಣ್ಯರು ಆತ್ಮವಿದ್ಯೆ ಕುರಿತು ಹೇಳುವ ಉಕ್ತಿಗಳು ಅವಿಸ್ಮರಣೀಯ ಈ ನಶ್ವರ ಶರೀರ, ಸಾಧನೆಗೆ ಆತ್ಮಾನು ಸಂಧಾನ, ಅದರಂತೆ ಸಕಲ ಜೀವಿಗಳಿಗೂ, ಕರ್ಮಾಕರ್ಮ ಫಲಭೋಕ್ತೃತ್ವ ಅದರಂತೆ ಇವೆಲ್ಲ ಅವರ ನಿರ್ದಿಷ್ಟವಾದ ಜ್ಞಾನೋಕ್ತಿಗಳು ಕೆಲವರಿಗೆ ಜ್ಞಾನೋದಯವಾದರೆ, ಅಲ್ಪಮತಿಗಳಿಗೆ ನುಂಗಲಾರದ ತುತ್ತಾಗಿದ್ದವು. ಹೀಗೆ ಆತ್ಮೋದ್ಧಾರ ಸ್ವಶಕ್ತಿ ಸಾಮರ್ಥ್ಯವರ್ಧನೆ ಪ್ರತಿ ವ್ಯಕ್ತಿಯಲ್ಲೂ ಹುದುಗಿರುವ, ಅವ್ಯಕ್ತ ಶಕ್ತಿವರ್ಧನ ಇವೆಲ್ಲವುಗಳ ಸಾಧ್ಯಾಸಾಧ್ಯತೆಗಳ ಬಗ್ಗೆ ಅವರ ಅಧಿಕಾರವಾಣಿ ಮೈ “ಜುಂ” ಎನ್ನಿಸುವಂತಿತ್ತು ಎಂದರೆ ಆಶ್ಚರ್ಯವಿಲ್ಲ.

ಮಠದ ಶಿಷ್ಯರ ಸಾಮೂಹಿಕ ಪ್ರಯತ್ನ, ಅವರ ಅಭಿಲಾಷೆಗಳು, ಶಿಷ್ಯ ಸಮೂಹದ ಅಭಿವೃದ್ಧಿ, ಇವೆಲ್ಲವುಗಳ ಒಕ್ಕೂಟದ ಚಿಂತನೆ, ಸಾಕಾರತೆ ಶಿಷ್ಯರನ್ನೇ ಅವಲಂಬಿಸಿದೆ. ಮಠದ ವಿಚಾರ ವ್ಯವಹಾರವೆಲ್ಲ ಶಿಷ್ಯರ ಆಶೆ-ಆಕಾಂಕ್ಷೆಗಳಿಗೆ ಸಂಬಂಧಿಸಿದ್ದು, ದೇಶ ಹೇಗೆ ಪ್ರಜಾತಂತ್ರವೋ ಹಾಗೇ ಮಠ ಶಿಷ್ಯತಂತ್ರ ಎನ್ನುವುದು ಅವರ ನುಡಿ. ಹೀಗೆ ಸದಾ ಶಿಷ್ಯರ ಮೇಲಿನ ಪ್ರೀತಿ ವಾತ್ಸಲ್ಯಗಳಿಂದ ಶ್ರೇಯಸ್ಸು ಪ್ರೇಯಸ್ಸುಗಳು ಕಂಡುಬರುತ್ತಿದ್ದವು. ಹೀಗೆ ಶ್ರೀಗಳು ಸಮಸ್ತ ಶಿಷ್ಯಕೋಟಿ ಸದಾ ಸಂತೃಪ್ತವಾಗಿರಲೆಂದೂ, ಶಿಷ್ಯರೇ ಮಠದ ಅಸ್ತಿತ್ವ ಎಂದೂ ಪ್ರೀತಿಯಿಂದ ಹರಸಿ ಶಿಷ್ಯರನ್ನು ಪ್ರೋತ್ಸಾಹಿಸಿ ಹುರಿದುಂಬಿಸಿದ ಘಟನೆಗಳು ಅನೇಕ.
~

ಶ್ರೀ ರಾಘವೇಂದ್ರ ಭಾರತೀ ಸವೇದ ಸಂಸ್ಕೃತ ಮಹಾವಿದ್ಯಾಲಯ, ಸುಬ್ರಹ್ಮಣ್ಯ, ಸುರ್ಕಟ್ಟೆ-ಅಂಚೆ,ತಾ-ಹೊನ್ನಾವರ
ಪ್ರಗತಿಯ ಪರಿಚಯ

1952ನೇ ಇಸವಿಯಲ್ಲಿ ಶ್ರೀ ಮಜ್ಜಗದ್ಗುರು ಶ್ರೀ ಶಂಕರಾಚಾರ್ಯ ಶ್ರೀಮದ್ರಾಘವೇಂದ್ರ ಭಾರತೀ ಮಹಾಸ್ವಾಮಿಗಳವರ ಸವಾರಿ ಚಂದಾವರ ಸೀಮೆಗೆ ಚಿತ್ತೈಸಿದ್ದು, ಭಕ್ತರ ಹೃದಯದಲ್ಲಿ ಧಾರ್ಮಿಕ ಜಾಗೃತಿ ಉಂಟಾದದ್ದು, ಮುಗ್ವಾ ಗ್ರಾಮದ ಸಾಮಗಾನ ಪ್ರಿಯ ಶ್ರೀ ಸುಬ್ರಹ್ಮಣ್ಯ ದೇವರ ಸಾನಿಧ್ಯದಲ್ಲಿ ವೇದಾಧ್ಯಯನ, ಸಂಸ್ಕೃತಾಭ್ಯಾಸದ ಕುರಿತು ಸಾಂಘಿಕ ಶಕ್ತಿಗೆ ಮೂರ್ತರೂಪ ಬಂದದ್ದು- ಇದೆಲ್ಲಾ ಈಗ ಇತಿಹಾಸ.

ಪಂಚಗ್ರಾಮದ ಹೊಸಾಕುಳಿಯಲ್ಲಿ ಶ್ರೀ ಸ್ವಾಮೀಜಿಯವರ ಸವಾರಿ ಚಿತ್ತೈಸಿದಾಗ ಸಾಮವೇದ ಪ್ರಿಯರ ಈ ಪ್ರದೇಶದಲ್ಲಿ ಸಾಮವೇದ ಪಾಠಶಾಲೆಯೊಂದು ಇಲ್ಲಿ ಆವಶ್ಯಕ ಎನ್ನುವ ಭಕ್ತರ ಬೇಡಿಕೆ ಹಾಗೂ ಶ್ರೀಗಳವರ ಅಶೀರ್ವಾದ ಪಾಠಶಾಲೆಗೆ ನಾಂದಿಯಾಯಿತು. ತದನಂತರ ಕೆಲವಾರು ಕಾರಣಗಳಿಂದ ಅದೇ ಪಾಠಶಾಲೆಯು ನೆರೆ ಗ್ರಾಮವಾದ ಮುಗ್ವಾದಲ್ಲಿ ಶ್ರೀ ಸುಬ್ರಹ್ಮಣ್ಯ ದೇವನ ಸಾನಿಧ್ಯದಲ್ಲಿ ಸ್ಥಳಾಂತರಿಸಲ್ಪಟ್ಟು ಕೈ.ವಾ.ಬ್ರಹ್ಮಶ್ರೀ ಅರೊಳ್ಳಿ ರಾಮಚಂದ್ರ ಭಟ್ಟರು ಹಾಗೂ ಕೈ.ವಾ.ಬೇಳೆ ಈಶ್ವರ ಹೆಗಡೆ ಇವರುಗಳ ಅದಮ್ಯ ಉತ್ಸಾಹ ಹಾಗೂ ಶ್ರೀಗಳವರ ಆಶೀರ್ವಾದ ಶ್ರೀರಕ್ಷೆಯೊಂದಿಗೆ ಶುಭಾರಂಭಗೊಂಡು ಪ್ರಗತಿಯತ್ತ ಹೆಜ್ಜೆ ಇರಿಸಿತು.

1968 ಜೂನ್ 21ರಂದು ಮುಗ್ವಾ ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ‘ಶ್ರೀ ರಾಘವೇಂದ್ರಭಾರತೀ ಸವೇದ ಸಂಸ್ಕೃತ ವಿದ್ಯಾಸಂಸ್ಥೆ’ ಎಂಬ ನಾಮಾಂಕಿತ ಪಡೆದು ಆಡಳಿತ ಸಂಸ್ಥೆಯೊಂದು ಅಧಿಕೃತವಾಗಿ ಉಗಮವಾಯಿತು. ಪಂಚಗ್ರಾಮದ ಸರ್ವರ ಅಪೇಕ್ಷಣೀಯ ವೇದ, ಸಂಸ್ಕೃತ ಅಧ್ಯಯನದ ಸರಸ್ವತೀ ಸೇವೆ ಶ್ರೀಗಳ ಅನುಗ್ರಹದಿಂದ ಸಾಕಾರವಾಯಿತು.

ಬ್ರಹ್ಮಶ್ರೀ ಶಂಕರ ತಿಮ್ಮಣ್ಣ ಭಟ್ಟ, ತೋಟಿ, ಇವರು ಚೇರ್ ಮನ್ ರಾಗಿ ಕೈ.ವಾ.ಬ್ರಹ್ಮಶ್ರೀ ಶಂಕರ ಕೃಷ್ಣ ಭಟ್, ಅಣ್ಣೆ ಇವರು ಕಾರ್ಯದರ್ಶಿಗಳಾಗಿ ಸಂಸ್ಥೆಯನ್ನು ಮುನ್ನಡೆಸಿದರು. ಹೀಗೆ ಮುಂದಿನ ಹೆಜ್ಜೆಗಳನ್ನಿಡುತ್ತಾ ಈ ಸಂಸ್ಥೆ ತನ್ನದೇ ಅದ ಅನೇಕ ಕನಸುಗಳನ್ನು ನನಸಾಗಿಸುವಲ್ಲಿ ಅತ್ಯಂತ ಪರಿಶ್ರಮದಿಂದ ಕಾರ್ಯೋನ್ಮುಖವಾಯಿತು.

ಬ್ರಹ್ಮಶ್ರೀ ರಾಮಚಂದ್ರ ಶಾಸ್ತ್ರಿ ಸೂರಿ ಇವರ ಮಾರ್ಗದರ್ಶನ ಈ ಪಾಠಶಾಲೆಯನ್ನು ಮುನ್ನಡೆಸುವಲ್ಲಿ ಅತ್ಯವಶ್ಯವೆಂದು ಚಿಂತಿಸಿದ ಸಮಿತಿ ಸದಸ್ಯರು ಅವರಲ್ಲಿ ಮಾತನಾಡಿ ಚರ್ಚಿಸಿ ಅವರಿಗೆ ನಮ್ಮ ಪಾಠಶಾಲೆಯ ಪ್ರಧಾನ ಆಚಾರ್ಯರ ಜವಾಬ್ದಾರಿ ಇತ್ತು ಮುನ್ನಡೆಸುವಲ್ಲಿ ಕಾರ್ಯಪ್ರವೃತ್ತರಾದರು. ದಿ.ಬ್ರಹ್ಮಶ್ರೀ ಸುಬ್ರಾಯ ಪರಮೇಶ್ವರ ಭಟ್ಟ ಅಗ್ನಿ, ಖರ್ವಾ ಇವರು ಸಾಮವೇದ ಅಧ್ಯಾಪಕರಾಗಿ ಶ್ರೀ ಶಂಭು ಸುಬ್ರಾಯ ಭಟ್ಟ ಕರ್ಕಿ ಇವರು ಯಜುರ್ವೇದ ಅಧ್ಯಾಪಕರಾಗಿ ಶಾಲೆಯ ಗುರುತರವಾದ ಜವಾಬ್ದಾರಿಯನ್ನು ಯಶಸ್ವಿಯಾಗಿ ನೆರವೇರಿಸಿದರು. ಉತ್ತಮ ರೀತಿಯ ಪಾಠ ಪ್ರವಚನ ವಿದ್ಯಾರ್ಥಿಗಳ ಉತ್ಸಾಹ ಇವೆಲ್ಲ ಶಾಲೆಯನ್ನು ಉತ್ತಮವಾಗಿ ನಡೆಸುವಲ್ಲಿ ಯಶಸ್ವಿಯಾದವು.

1979ರಲ್ಲಿ ನಮ್ಮ ಘನ ಸರಕಾರದಿಂದ ಅನುದಾನಕ್ಕೆ ಒಳಪಟ್ಟ ಈ ವಿದ್ಯಾಲಯ ಸಾಮವೇದ, ಯಜುರ್ವೇದ, ಪ್ರಥಮ, ಕಾವ್ಯ, ಸಾಹಿತ್ಯ ಅಧ್ಯಯನಗಳ ಪಾಠ ಪ್ರವಚನದಲ್ಲಿ ಮುಂದಿನ ಹೆಜ್ಜೆಯಿಡಲು ಆರಂಭಿಸಿತು. ಸ್ವಂತ ಕಟ್ಟಡವನ್ನು ಹೊಂದಿ ಅವು ಹೆಚ್ಚು ಕೊಠಡಿಗಳಿಂದ ವೃದ್ಧಿಯಾದವು. ಸರ್ಕಾರದ ನಿಯಮಾನುಸಾರ ಬೋಧನೆ, ವಿದ್ಯಾರ್ಥಿಗಳ ಉತ್ತಮ ಫಲಿತಾಂಶ, ವಿಶೇಷ ಮಹನೀಯರ ಭೇಟಿ ಇವೆಲ್ಲ ಈ ವಿದ್ಯಾಲಯದ ಪ್ರಗತಿಯ ಮೆಟ್ಟಿಲುಗಳಾಗಿ ಮುಂದುವರಿದವು. ಪ್ರತೀವರ್ಷವೂ ನಡೆಯುವ ವಾಣೀಪೂಜೆ ವಿಶೇಷ ಜ್ಞಾನವರ್ಧಕ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಸತ್ಪ್ರೇರಣೆ ನೀಡಿ ಹೆಚ್ಚಿನ ವ್ಯಾಸಾಂಗಕ್ಕೆ ಅನುವಾದರೆ, ಅವರ ಪ್ರತಿಭೆ, ಸಾಮರ್ಥ್ಯಗಳು ಈ ದೇಶದ ಹಲವೆಡೆ ಪ್ರಭಾವ ಬೀರಿ ಪ್ರಶಂಸೆಗೆ ಪಾತ್ರವಾದವು.

‘ಋಷೀಣಾಂ ಪುನರಾದ್ಯಾನಾಂ ವಾಚಮರ್ಥೋನುಧಾವತಿ‘ಎನ್ನುವಂತೆ ಪ್ರಗತಿಯ ಹೆಜ್ಜೆಯನ್ನಿಡುವ ನಮ್ಮ ವಿದ್ಯಾಲಯ, ಪರಮಪೂಜ್ಯರಾದ ಶ್ರೀ ರಾಘವೇಂದ್ರ ಭಾರತೀ ಸ್ವಾಮಿಗಳು ಶುಭಾಶೀರ್ವಾದದಿಂದ 1990ರಲ್ಲಿ ಮಹಾವಿದ್ಯಾಲಯವಾಗಿ ಪರಿವರ್ತಿತವಾಗಿ ಸಂವರ್ಧಿಸಿತು. ಅಲಂಕಾರ, ವ್ಯಾಕರಣ ಶಾಸ್ತ್ರಗಳ ಅಧ್ಯಯನ ಆರಂಭವಾಗಿ ಈ ಎರಡೂ ಶಾಸ್ತ್ರಗಳಲ್ಲಿ ವಿದ್ವತ್ ಉತ್ತಮಾ ತನಕ ವ್ಯಾಸಾಂಗ ಮುಂದುವರಿಯಲು ಅವಕಾಶ ಕಲ್ಪಿಸಲಾಯಿತು. ಹೀಗೆ ಸಾಮವೇದ, ಯಜುರ್ವೇದ, ಸಂಸ್ಕೃತ ಪ್ರಥಮಾದಿಂದ ವಿದ್ವತ್ ಉತ್ತಮ ಪರ್ಯಂತ ನಿರಂತರ ಅಧ್ಯಯನ ಶ್ರೀ ಸುಬ್ರಹ್ಮಣ್ಯ ಸನ್ನಿಧಿಯಲ್ಲಿರುವ ಈ ಜ್ಞಾನ ದೇಗುಲದಲ್ಲಿ ಉತ್ತಮವಾಗಿ ಮುನ್ನಡೆಯುತ್ತದೆ. ಹೀಗೆ ಬ್ರಹ್ಮೈಕ್ಯ ಪೂಜ್ಯ ಗುರುವರ್ಯರ “ಮಹಾವಿದ್ಯಾಲಯವಾಗಲಿ” ಎನ್ನುವ ಆಶೀರ್ವಾದ ವಾಣಿಯು ಅರ್ಥದಲ್ಲಿ ಸಾಕಾರತೆಯನ್ನು ಪಡೆದು ಸಾರ್ಥಕತೆಯನ್ನು ಪಡೆಯುತ್ತಿದೆ.

~*~

Facebook Comments Box