ಪ್ರೀತಿಯನ್ನು ಅತಿಶಯವಾಗಿ ಪ್ರೀತಿಸುವವರು ನಾವು; ಜೀವ~ಜೀವಗಳ ನಡುವಣ ಬಿಡದ ಬೆಸುಗೆಯದು; ಜೀವಲೋಕದೊಳಗಿನ ಭಾವಲೋಕವದು; ಭಾವಲೋಕದೊಳಗಿನ ದೇವಲೋಕವದು! ಪ್ರೀತಿಯ ಸೆಲೆಯಾಗಿ ಜೀವರ ಎದೆಯೊಳಗೆ ದೇವರೇ ಕುಳಿತಿರುತ್ತಾನೆ. ಹೀಗೆಲ್ಲ ಭಾವಿಸುವ ನಮ್ಮ ಭಾವಕ್ಕೆ ಪ್ರೀತಿಯ ಹೆಸರಲ್ಲಿ- ನಡುಹಗಲು, ನಡುಬೀದಿಯಲ್ಲಿ, ಅರಳುವ ಮೊದಲೇ ಅಕ್ಷತಾ ಎಂಬ ಕಮಲ ಕಮರಿದಾಗ ವಜ್ರಾಘಾತವಾಯಿತು! ಕ್ಷಣಕಾಲ ಪ್ರೀತಿಯೆಂದರೆ ಭೀತಿಪಡುವಂತಾಯಿತು!

‘ಒಲುಮೆ’, ಒಂದಕ್ಷರ ಬದಲಾದರೆ ಅದು ‘ಕುಲುಮೆ!’.
ಕಾರ್ತಿಕನಂಥವರ ಒಲುಮೆ; ಪಾಪ, ಅಕ್ಷತಾಳಂಥವರ ಪಾಲಿಗೆ ಅದು ಕುಲುಮೆ!

ಇಷ್ಟಕ್ಕೂ ಅಕ್ಷತಾ ಮಾಡಿದ ತಪ್ಪಾದರೂ ಏನು?  ಹತ್ತು ಸಮಸ್ತರ ಮುಂದೆ, ಹಾಡುಹಗಲೇ ಹಾದಿಯ ಹೆಣವಾಗಿ ಹೋಗುವಂಥ ಯಾವ ಘನಘೋರ ಪಾತಕವನ್ನು ಅಕ್ಷತಾ ಗೈದಿದ್ದಳು? ಸಿಕ್ಕಸಿಕ್ಕಲ್ಲಿ ಚುಚ್ಚಿಚುಚ್ಚಿ ಕೊಲ್ಲುವಂಥ ಯಾವ ಅನ್ಯಾಯವನ್ನು ಯಾರಿಗೆ ಆಕೆ ಮಾಡಿದ್ದಳು?

ಹೆತ್ತವರು “ಓದು” ಎಂದು ಶಾಲೆಗೆ ಕಳುಹಿಸಿದರು; ಆಕೆ ಅದನ್ನೇ ಮಾಡಿದಳು; ಅದಕ್ಕೆ ಸಲ್ಲದ, ಆತ್ಮಕ್ಕೆ ಒಲ್ಲದ ಬೇರಾವ ಕಾರ್ಯದಲ್ಲಿಯೂ ತೊಡಗಲಿಲ್ಲ; ಯಾವನೋ ಹುಡುಗ ಬಂದು ಇದ್ದಕ್ಕಿದ್ದಂತೆ “ನನ್ನನ್ನು ಪ್ರೀತಿಸು” ಎನ್ನುವಾಗ ಆಕೆ ಜಾರಲಿಲ್ಲ! ತನ್ನಾತ್ಮಕ್ಕೆ, ತನ್ನ ಹೆತ್ತವರಿಗೆ ದ್ರೋಹ ಬಗೆಯಲಿಲ್ಲ!

ಇದುವೇ ಮಹಾಪರಾಧವಾಗಿಹೋಯಿತೇ!? ಸರಿಯಾಗಿರುವುದೇ ತಲೆಹೋಗುವಂಥ ತಪ್ಪೆನಿಸುವುದಾದರೆ ಸಮಾಜದಲ್ಲಿ ಸಾತ್ತ್ವಿಕರು ಬದುಕುವುದಾದರೂ ಹೇಗೆ? ಸ್ವತಂತ್ರಭಾರತ~ಸಂಜಾತೆಗೆ ತನಗಿಷ್ಟವಿಲ್ಲದಿರುವವನನ್ನು ಪ್ರೀತಿಸದಿರುವ ಸ್ವಾತಂತ್ರ್ಯವೂ ಇಲ್ಲವೇ? ಇಷ್ಟವಿಲ್ಲದುದನ್ನು ಇಷ್ಟವಿಲ್ಲವೆಂದ ಮಾತ್ರಕ್ಕೆ ಇನ್ನೂ ಕುಡಿಯಾಗಿರುವಾಗಲೇ ಇಡಿಯಾದ ಬಾಳು ನಡುರಸ್ತೆಯ ಪುಡಿಯಾಗಿಹೋಯಿತಲ್ಲವೇ!?

ತನ್ನನ್ನು ಒಪ್ಪಿಕೊಳ್ಳದ ಅಕ್ಷತಾಳನ್ನು ಕೊಂದೇಬಿಟ್ಟ ಕಾರ್ತಿಕನಲ್ಲಿ ನಮಗೆ ಗೋಚರಿಸಿದ್ದು ರಾಮಾಯಣದ ರಾವಣ; ತನ್ನ ವಶವಾಗಲೊಪ್ಪದ ಸೀತೆಗೆ ರಾವಣನಾಡುವ ಗದರುಮಾತುಗಳನ್ನು ಗಮನಿಸಿ:

ಶೃಣು ಮೈಥಿಲಿ ಮದ್ವಾಕ್ಯಂ ಮಾಸಾನ್ ದ್ವಾದಶ ಭಾಮಿನಿ ||೨೪||
ಕಾಲೇನಾನೇನ ನಾಭ್ಯೇಷಿ ಯದಿ ಮಾಂ ಚಾರುಹಾಸಿನಿ |
ತತಸ್ತ್ವಾಂ ಪ್ರಾತರಾಶಾರ್ಥಂ ಸೂದಾಃ ಛೇತ್ಸ್ಯಂತಿ ಲೇಶಶಃ ||೨೫||
(-ವಾಲ್ಮೀಕಿ ರಾಮಾಯಣ, ಅರಣ್ಯಕಾಂಡ, ಸರ್ಗ 56)

“ಇದೋ! ನಿನಗೆ ಒಂದು ವರ್ಷದ ಅವಕಾಶ; ಅದರೊಳಗೆ ನನ್ನ ವಶವಾದೆಯಾದರೆ ಸರಿ; ಇಲ್ಲವಾದರೆ ನನ್ನ ಅಡುಗೆಯವರು ನಿನ್ನನ್ನು ತರಕಾರಿಯಂತೆ ಸಣ್ಣ ಸಣ್ಣ ಚೂರುಗಳಾಗಿ ಕತ್ತರಿಸಿ, ನನಗೆ ಬೆಳಗಿನ ತಿಂಡಿಯಾಗಿ ಬಡಿಸುವರು!”

ಇದಾವ ನ್ಯಾಯ!? ಇದೆಂಥಾ ಕ್ರೌರ್ಯ!? ಸೀತೆಯ ಮುಂದಿರುವ ಆಯ್ಕೆಯೆಂದರೆ, ಇಷ್ಟವಿಲ್ಲದಿದ್ದರೂ ಆ ದುಷ್ಟನ ವಶವಾಗಬೇಕು, ಅದಲ್ಲದಿದ್ದರೆ ಶವವಾಗಬೇಕು! ಒಂದೋ ರಾವಣನನ್ನು ಒಪ್ಪಿಕೊಳ್ಳದೆ ಶವವಾಗಬೇಕು, ಅಥವಾ ಒಪ್ಪಿಕೊಂಡು ಜೀವಚ್ಛವವಾಗಬೇಕು!

ಎಲ್ಲ ಅರ್ಥದಲ್ಲಿಯೂ ಈ ರಾವಣನ ತಂಗಿಯೇ ಆದ ಶೂರ್ಪಣಖೆಯ ಪರಿ ನೋಡಿ:- ವನಮಧ್ಯದಲ್ಲಿ ನವನೀರದ~ನೀಲನಾದ ರಾಮನ ಕಂಡು, ಅವನ ಚೆಲುವಿಗೆ ಮನಸೋತು “ಹೇ ಪುರುಷೋತ್ತಮ! ನಿನ್ನನ್ನು ಭರ್ತನೆಂದು ಭಾವದಿಂದ ಭಜಿಸಿ ಬಂದೆ!” (ಸಮುಪೇತಾಸ್ಮಿ ಭಾವೇನ ಭರ್ತಾರಂ ಪುರುಷೋತ್ತಮಮ್- ವಾಲ್ಮೀಕಿ ರಾಮಾಯಣ) ಎನ್ನುವ ಆಕೆ, ಆಸೆ ಈಡೇರದಾದಾಗ ಅಣ್ಣ ಖರಾಸುರನ ಬಳಿಸಾರಿ ‘ರಣದಲ್ಲಿ ರಾಮನ ನೊರೆ-ರಕ್ತವನ್ನು ಕುಡಿಯಬೇಕು; ಇದುವೇ ನನ್ನ ಮೊದಲ ಆಸೆ’ ಎನ್ನುತ್ತಾಳೆ. (ಸಫೇನಂ ಪಾತುಮಿಚ್ಛಾಮಿ ರುಧಿರಂ ರಣಮೂರ್ಧನಿ| ಏಷ ಮೇ ಪ್ರಥಮಃ ಕಾಮಃ|-ವಾಲ್ಮೀಕಿ ರಾಮಾಯಣ)#LokaLekha by @SriSamsthana SriSri RaghaveshwaraBharati MahaSwamiji 

ಪ್ರೀತಿಯಲ್ಲಿ ಸ್ವಾರ್ಥಯುಕ್ತ ಮತ್ತು ಸ್ವಾರ್ಥಮುಕ್ತ ಎಂದು ಎರಡು ವಿಧ:

ಸ್ವಾರ್ಥಯುಕ್ತ ಪ್ರೀತಿಯಲ್ಲಿ ತನ್ನ ಸುಖದ ಚಿಂತೆ ಮಾತ್ರ; ತನ್ನ ಪ್ರೀತಿಗೊಳಪಟ್ಟವರ (?) ಸುಖದ ಕಾಳಜಿ ಅಲ್ಲಿಲ್ಲವೇ ಇಲ್ಲ! ತಾನು ಬಯಸಿದವರು ತನ್ನ ಸುಖಕ್ಕೆ ಸಲ್ಲಬೇಕು; ಇಲ್ಲದಿದ್ದರೆ ಅವರನ್ನು ಕೊಲ್ಲಬೇಕು! ತನಗೆ ಸಿಗದವರು ಜಗತ್ತಿನಲ್ಲಿ ಯಾರಿಗೂ ಸಿಗಬಾರದು ಅಥವಾ ಈ ಜಗತ್ತಿನಲ್ಲಿಯೇ ಇರಬಾರದು; ಇದು ಅಲ್ಲಿಯ ಭಾವ! ಆದುದರಿಂದಲೇ ಪ್ರೀತಿಯು ಸ್ವಾರ್ಥಯುಕ್ತವಾದರೆ ಫಲವು ರಕ್ತಸಿಕ್ತ!

ತಾನು ಪ್ರೀತಿಸಿದವರ ಸುಖದಲ್ಲಿಯೇ ತನ್ನ ಸುಖವನ್ನು ಕಾಣುವುದು ಸ್ವಾರ್ಥಮುಕ್ತಪ್ರೀತಿ. ಈರ್ವರು ತಾಯಿಯರು ಮಗುವೊಂದನ್ನು ತನ್ನದು ತನ್ನದು ಎಂದು ವಾದಿಸುತ್ತ ವಿಕ್ರಮಾದಿತ್ಯನ ಮುಂದೆ ಬರುತ್ತಾರೆ. ಮಗು ಯಾರದೆಂಬುದನ್ನು ಕಂಡುಹಿಡಿಯಲು ವಿಕ್ರಮಾದಿತ್ಯನು ಉಪಾಯವೊಂದನ್ನು ಹೂಡುತ್ತಾನೆ. ‘ಮಗುವನ್ನು ಎರಡು ಪಾಲಾಗಿ ಕತ್ತರಿಸಿ ತಾಯಿಯರೀರ್ವರಿಗೂ ಹಂಚಿಬಿಡಿರಿ!’ ಎಂದು ಭಟರಿಗೆ ಆದೇಶಿಸುತ್ತಾನೆ. ಆಗ ಈರ್ವರಲ್ಲಿ ಓರ್ವಳು ತಾಯಿಯು ದೊರೆಯ ಕಾಲಿಗೆ ಬಿದ್ದು “ಮಗುವನ್ನು ಆಕೆಗೇ ಕೊಟ್ಟುಬಿಡಿ, ಅದು ಬದುಕಿದ್ದರೆ ಸಾಕು!” ಎಂದು ಗೋಗರೆಯುತ್ತಾಳೆ. ಕೂಡಲೇ ವಿಕ್ರಮಾದಿತ್ಯನು “ನಿಜವಾದ ತಾಯ್ತನ ಇಲ್ಲಿದೆ, ಮಗುವನ್ನು ಈಕೆಗೇ ಕೊಡಿ” ಎಂದು ಆದೇಶಿಸುತ್ತಾನೆ. ಈ ತಾಯಿಯ ಪ್ರೀತಿಯೆಂದರೆ – ಅದು ನಿಜವಾದ ಸ್ವಾರ್ಥಮುಕ್ತಪ್ರೀತಿ!

ಬಾಲಶಂಕರರಿಗೆ ಸನ್ಯಾಸ ಸ್ವೀಕರಿಸುವ ಕನಸು. ತಾಯಿಗೆ ಅದು ಸರ್ವಥಾ ಒಪ್ಪಿಗೆಯಿಲ್ಲ. ಒಮ್ಮೆ ಪೂರ್ಣಾನದಿಯಲ್ಲಿ ಮೀಯುವ ಆ ಬಾಲವಟುವನ್ನು ಮೊಸಳೆ ಹಿಡಿಯಿತು. ತೀರದಲ್ಲಿ ಅಸಹಾಯಕಳಾಗಿ ರೋದಿಸುವ ತಾಯಿಗೆ ಬಾಲಶಂಕರರು ಕೂಗಿ ಹೇಳಿದರು “ಅಮ್ಮಾ, ಸನ್ಯಾಸ ಸ್ವೀಕರಿಸಿದರೆ ಮೊಸಳೆ  ಬಿಡುವುದಂತೆ!”; ಆಕೆ ಕಣ್ಣೀರಿಡುತ್ತಾ ಅನುಮತಿಸಿದಳು. ಎಲ್ಲಿಯಾದರೂ ಸರಿ, ಹೇಗಾದರೂ ಸರಿ, ತನ್ನ ಮಗ ಬದುಕಿದ್ದರೆ ಸಾಕು ಎನ್ನುವುದು ಆಕೆಯ ಭಾವ! ಇದು ಸ್ವಾರ್ಥಮುಕ್ತಪ್ರೀತಿ!

ಸ್ವಾರ್ಥಮುಕ್ತ ಪ್ರೀತಿಯಲ್ಲಿ ತ್ಯಾಗದ ಸುಗಂಧವಿದೆ; ತಾನು ಪ್ರೀತಿಸುವ ಜೀವದ ಕ್ಷೇಮಚಿಂತನೆಯ ಸದ್ಭಾವವಿದೆ; ಕನಿಕರದ ತಂಪಿದೆ; ಕಾಳಜಿಯ ಕಂಪಿದೆ!
ಸ್ವಾರ್ಥಯುಕ್ತ ಪ್ರೀತಿಯಲ್ಲಿ ಭೋಗದ ದುರ್ಗಂಧವಿದೆ; ತಾನು ಪ್ರೀತಿಸುವ ಜೀವವನ್ನು ಶೋಷಿಸುವ ದೌಷ್ಟ್ಯವಿದೆ; ನಿತ್ಯಕ್ಲೇಶ- ನೆಮ್ಮದಿಯ ನಾಶವಿದೆ; ಕ್ರೌರ್ಯದ ಕೆಂಪಿದೆ!#LokaLekha by @SriSamsthana SriSri RaghaveshwaraBharati MahaSwamiji 

ತನ್ನ ಪ್ರೀತಿಯನ್ನು ಒಪ್ಪಲಿಲ್ಲ ಎಂಬ ಕಾರಣಕ್ಕೆ ಅಕ್ಷತಾಳನ್ನು ಕೊಂದ ಕಾರ್ತಿಕನು ರಾವಣ~ಶೂರ್ಪಣಖೆಯರ ಸಾಲಿನಲ್ಲಿ ನಿಂತಂತಾಗಲಿಲ್ಲವೇ!

ಸತ್ಯಯುಗದಲ್ಲಿಯೇ ಆರಂಭವಾದ ರಾಮಾಯಣವು ಇದೀಗ ಸುಳ್ಯಯುಗ ಬಂದರೂ ಮುಗಿದಿಲ್ಲ! ಅದಿಲ್ಲದಿದ್ದರೆ, ಅಕ್ಷತಾ ಏಕೆ ಸಾಯಬೇಕು?? ಆಕೆಯ ಕುಟುಂಬವೇಕೆ ನೋಯಬೇಕು?? ಇಷ್ಟಕ್ಕೂ ಅಕ್ಷತಾಳನ್ನು ಕೊಂದು ಕಾರ್ತಿಕನು ಮಾಡಿದ ಸಾಧನೆಯಾದರೂ ಏನು? ಆಕೆ ಪರಲೋಕದಲ್ಲಿ; ತಾನು ಜೈಲಿನಲ್ಲಿ! ಆಕೆಯ ಕುಟುಂಬ ಕಣ್ಣೀರಿನಲ್ಲಿ; ತನ್ನ ಕುಟುಂಬ ಕಲಂಕದಲ್ಲಿ! ಅನರ್ಥ ಪರಂಪರೆ!! ಈ ದಾರಿಗೆಟ್ಟ ಹುಡುಗರಿಗೆ ಬುದ್ಧಿ ಹೇಳುವವರೇ ಇಲ್ಲವೇ!?

ಕಣ್ಮುಂದೆ ಅರಳಿ ಕಂಗೊಳಿಸಬೇಕಿದ್ದ ಕೂಸಂತೂ ಕಾಣದ ಲೋಕಕ್ಕೆ ತೆರಳಿತು; ಕಣ್ಣೀರ ಕಡಲಲ್ಲಿ ಮುಳುಗೇಳುವ ಆ ಕುಟುಂಬದ ತೀರದ ವ್ಯಥೆಯನ್ನು ಎಣಿಸಿದಾಗ ನಮಗೆ ತೀರಾ ವ್ಯಥೆಯೆನಿಸುತ್ತದೆ.
ಕೊಲ್ಲಲು ನಮ್ಮ ಮಗಳು ಏನು ತಪ್ಪು ಮಾಡಿದ್ದಳು” ಎಂದು ಕೇಳುವ ಅವಳ ದೊಡ್ಡಪ್ಪ..
ಶಾಲೆಯಿಂದ ಮರಳುವ ಹುಡುಗಿಯೋರ್ವಳ ಕಡೆ ಕೈ ತೋರಿಸಿ “ನೋಡಿ.. ನೋಡಿ.. ನಮ್ಮ ಅಕ್ಷತಾ ಇಷ್ಟೇ ಹೊತ್ತಿಗೆ, ಅವಳ ಜೊತೆಗೇನೇ ಬರುತ್ತಿದ್ದಳು” ಎನ್ನುವ ಅಮ್ಮ..
ತಂಗಿಯ ಸಾವಿನ ಶೋಕದ ಸುಳಿಯಿಂದ ಹೊರಬರಲಾರದೆ ಅನ್ನ-ನೀರು ತ್ಯಜಿಸಿ ಶೂನ್ಯದೆಡೆ ನೋಟವ ನೆಟ್ಟ ಸಹೋದರಿ..
ಒಂದು ಸಲ ಚೂರಿ ಹಾಕಿದಾಗಲೇ ಅವ್ಳಿಗೆ ಪ್ರಜ್ಞೆ ತಪ್ಪಿರ್ಬೋದಲ್ವಾ? ಆಮೇಲೆ ಅವ ಚುಚ್ಚಿದ್ದು ಅವ್ಳಿಗೆ ನೋವಾಗಿರ್ಲಿಕ್ಕಿಲ್ಲ, ಅಲ್ವಾ?” ಎಂದು, ಕರುಳಕುಡಿಯ ಕೊರಳ ಬಗೆದ ಚೂರಿಯು ತನ್ನ ಕರುಳೊಳಗೇ ಈಗಲೂ ಆಡುತ್ತಿರುವಂತೆ ಹಳಹಳಿಸುವ ತಂದೆ..

ಇವರ ಜೊತೆಗೆ ಇಂದು ಬೇರೆ ಯಾರೂ ಇಲ್ಲ! ಕೊಂದವರು ಅಲ್ಪಸಂಖ್ಯಾತರಾದರೆ ಸಹಾಯ ಮಾಡುವವರು ಕೆಲವರು; ಸತ್ತವರು ಅಲ್ಪಸಂಖ್ಯಾತರಾದರೆ ಸಹಾಯ ಮಾಡುವವರು ಹಲವರು! ನಮ್ಮ ಅಕ್ಷತಾ ಇದು ಯಾವುದೂ ಅಲ್ಲ! ಆದುದರಿಂದಲೇ ಸರಕಾರದ ಪರಿಹಾರವಿಲ್ಲ; ಸಾರ್ವಜನಿಕರ ಸ್ಪಂದನವಿಲ್ಲ; ಮಾಧ್ಯಮಗಳ ಗಮನವೂ ಇಲ್ಲ!#LokaLekha by @SriSamsthana SriSri RaghaveshwaraBharati MahaSwamiji 

ಆದರೆ ನಮಗೆ ಹಾಗಲ್ಲವಲ್ಲ; ಪೀಠದ ಶಿಷ್ಯೆಯಾಕೆ; ಮಠದ ಮಗಳಾಕೆ! ರಾಮಚರಣದ ನೆರಳನ್ನು ಆಕೆಗೆ ದೊರಕಿಸಲು, ಆಕೆಯ ಸಾವಿಗೆ ಕಾನೂನಿನ ಕಕ್ಷೆಯ ಯೋಗ್ಯನ್ಯಾಯವನ್ನು ಒದಗಿಸಲು, ಆ ಕುಟುಂಬಕ್ಕೆ ಮರೀಚಿಕೆಯಾಗಿರುವ ನೆಮ್ಮದಿಯನ್ನು ಕಿಂಚಿತ್ತಾದರೂ ಕೂಡಿಸಿಕೊಡಲು ಪೀಠವು ಎಂದೂ ಬದ್ಧ. ನಮ್ಮ ಜೊತೆಯಲ್ಲಿರುವವರೆಲ್ಲರಿಗೂ ಈ ದುರ್ಭರ ದುಃಖಕರ ಸನ್ನಿವೇಶದಲ್ಲಿ ಆ ಕುಟುಂಬದ ಜೊತೆಯಿರಲು ಕರುಳಾಳದ ಕಳಕಳಿಯ ಕರೆ ನೀಡುವೆವು!

ನಿಜಾರ್ಥದ ಸಹಾನುಭೂತಿಯೇ ನಿಜವಾದ ಮನುಷ್ಯತ್ವ!

ಕ್ಷತವೆಂದರೆ ಗಾಯ; ಅಕ್ಷತಾ ಎಂದರೆ ಗಾಯವಿಲ್ಲದವಳು. ವಿಪರ್ಯಾಸವೆಂದರೆ, ಕ್ಷತ-ವಿಕ್ಷತಳಾಗಿ ಆಕೆಯು ಕೊನೆಯುಸಿರೆಳೆಯಬೇಕಾಯಿತು.
ತನುವೇನಾದರೇನು, ಮನದಲ್ಲಿ, ಜೀವನದಲ್ಲಿ ಅಕ್ಷತಳಾಗಿಯೇ ಉಳಿದ ಅಕ್ಷತಾಳಿಗೆ ಅಕ್ಷಯ ಸುಖವು ಪ್ರಾಪ್ತವಾಗಲೆಂದು,
ಇದೋ- ಕುಲಗುರುವಿನ ಅಕ್ಷರಾಕ್ಷತೆ!

~*~

ತಿಳಿವು~ಸುಳಿವು:

 • ಸಮಾಜದ ತಂಗಿ, ಶ್ರೀಪೀಠದ ಶಿಷ್ಯೆ ಕುಮಾರಿ ಅಕ್ಷತಾಳ ಅಕಾಲ ಮರಣವು ಕುಟುಂಬಕ್ಕೆ ಆದ ಅನಿರೀಕ್ಷಿತ ಆಘಾತ. ಮಗಳ ಭವಿಷ್ಯಕ್ಕಾಗಿ ಸರ್ವಸ್ವವನ್ನೂ ಧಾರೆಯೆರೆದು, ಇದೀಗ ಭವಿಷ್ಯವೇ ಕಮರಿ ಹೋಗಿರುವ ಅಶಕ್ತ ಕುಟುಂಬಕ್ಕೆ ನಿಮ್ಮ ಸಾಂತ್ವಾನವಿರಲಿ. ಅವರ ಕಣ್ಣೀರನ್ನು ಒರಸುವಲ್ಲಿ ನಾವೂ ಜೊತೆಯಾಗೋಣ, ಅವರ ನೋವಿನೊಂದಿಗೆ ನಾವೂ ಸಹ~ಅನುಭೂತಿ ತೋರಿಸೋಣ. ಅಕ್ಷತಾಳ ತಂದೆ, ಶ್ರೀ ರಾಧಾಕೃಷ್ಣ ಭಟ್ಟರ ಖಾತೆ ವಿವರ ಇಲ್ಲಿದೆ, ನಿಮ್ಮ ಕಿಂಚಿತ್ ಧನಸಹಾಯವು ಅವರ ಕುಟುಂಬಕ್ಕೆ ಆಸರೆಯಾದೀತು:
  Name: RadhaKrishna K
  Account Number: 340300101000055
  Bank : Corporation Bank
  Branch : Mulleria Branch
  IFSC Code: CORP0003403

ಇದು, ಜಗದ್ಗುರುಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಸಾಮಾಜಿಕ ಕಾಳಜಿಯ ಬ್ಲಾಗ್ ಬರಹಗಳ – #ಲೋಕಲೇಖ ದ ಸಂಚಿಕೆ.

ಈವರೆಗಿನ ಎಲ್ಲಾ ಲೋಕ~ಲೇಖಗಳನ್ನು ಓದಲು : ಇಲ್ಲಿದೆ ಕೊಂಡಿ.

Facebook Comments