#LokaLekha by @SriSamsthana via HareRaama.in

ಗೊತ್ತೇ ನಿಮಗೆ?
ಚತುರ್ವೇದಗಳಲ್ಲೊಂದಾದ ಸಾಮವೇದವು ಒಂದು ಕಾಲದಲ್ಲಿ ಸಹಸ್ರ ಶಾಖೆಗಳನ್ನು ಹೊಂದಿತ್ತು!

ಸಹಸ್ರವರ್ತ್ಮಾ ಸಾಮವೇದಃ – ಪಾತಂಜಲ ಭಾಷ್ಯ.

ಅದೆಷ್ಟು ಹೆಮ್ಮೆ! ಒಂದು ವಿದ್ಯೆಯಲ್ಲಿ ಸಹಸ್ರ ಶಾಖೆಗಳು! ಅಂಥ ನೂರಾರು ವಿದ್ಯೆಗಳು ಈ ದೇಶದಲ್ಲಿ! ಆದರೆ ಇದು ಗತ ಕಥೆ; ವರ್ತಮಾನದ ಕಥೆ- ಅದು ಕೇವಲ ವ್ಯಥೆ ಮಾತ್ರ. ಸಾವಿರ ಸಾಮಶಾಖೆಗಳಲ್ಲಿ ಈಗ ಉಳಿದಿರುವುದು ಕೇವಲ ಮೂರು ಮಾತ್ರ!! ಅಳಿದುಳಿದ ಮೂರರಲ್ಲಿಯೂ ಒಂದು ‘ಈಗಲೋ-ಆಗಲೋ’ ಎನ್ನುವಂತಿದ್ದರೆ ಇನ್ನೊಂದು ‘ಇನ್ನೆಷ್ಟು ದಿನ?’ ಎಂಬಂತಿದೆ!
‘ಇದೊಂದು ಮಾತ್ರ ಹೀಗೆ; ಮತ್ತೆಲ್ಲವೂ ಸುಸ್ಥಿತಿಯಲ್ಲಿದೆ’ ಎಂದು ಸಮಾಧಾನ ಪಟ್ಟುಕೊಳ್ಳುವಂತಿಲ್ಲ; ಇಂದು ಭಾರತೀಯ ಮೂಲದ ಪ್ರತಿಯೊಂದು ವಿದ್ಯೆಯ ಕಥೆಯೂ ವಿರೂಪಣ-ವಿನಾಶನಗಳ ವ್ಯಥೆಯೇ ಆಗಿದೆ.

ಮಹಾಮನೀಷಿಗಳಾಗಿದ್ದ ನಮ್ಮ ಪೂರ್ವಜರು ತಲೆಮಾರು-ತಲೆಮಾರು ತಪಗೈದು, ತಮ್ಮ ಆಯುಸ್ಸನ್ನೇ- ಅಲ್ಲ, ಸರ್ವಸ್ವವನ್ನೇ ಧಾರೆಯೆರೆದು ಆವಿಷ್ಕರಿಸಿದ ಒಂದೊಂದು ವಿದ್ಯೆಯೂ ಅದ್ಭುತವಾದುದು! ಅನಂತವಾದುದು! ಜೀವಕೋಟಿಗೆ ಅತ್ಯುಪಯುಕ್ತವಾದುದು! ಆದರೆ ಇಂದು ಅವುಗಳಲ್ಲಿ ಒಂದೊಂದೂ- ಒಂದೋ ರೂಪುಗೆಟ್ಟಿದೆ, ಅಥವಾ ಅರ್ಥ ಕಳೆದುಕೊಂಡಿದೆ, ಅಲ್ಲದಿದ್ದರೆ ಅವಸಾನವನ್ನೇ ಕಂಡಿದೆ, ಉಳಿದವು ಅಳಿವಿನ ದಾರಿಯಲ್ಲಿವೆ!

ಹೀಗೇಕಾಯಿತು!?

ಶತಮಾನ-ಶತಮಾನಗಳ ಕಾಲ ನಮ್ಮನ್ನಾಳಿದ ನಮ್ಮವರಲ್ಲದವರು ನಮ್ಮ ಪರಂಪರಾಗತ ವಿದ್ಯಾಪದ್ಧತಿಯನ್ನು ಮೂಲೆಗೆ ತಳ್ಳಿದರು; ತಮ್ಮ (ಅ)ವಿದ್ಯೆಗಳನ್ನು ನಮ್ಮ ಮೇಲೆ ಹೇರಿದರು. ನಮ್ಮವರಾದರೂ ತಮ್ಮ ಹೆಮ್ಮೆಯ ಹಿರಿಯರಿಗೆ ತಕ್ಕ ಮಕ್ಕಳಾಗಲಿಲ್ಲ; ತಮ್ಮ ಪರಂಪರೆಯ ಕುರಿತು ‘ಅರಿವು ಮೊದಲಿಲ್ಲ, ಅಭಿಮಾನ ಹೇಗೂ ಇಲ್ಲ’ದ ನಮ್ಮವರು ಭಾರತೀಯ ವಿದ್ಯೆಗಳೆಂಬ ಅಮೃತತುಲ್ಯವಾದ ಕ್ಷೀರವನ್ನು ಚೆಲ್ಲಿ, ಬಿಸುಟು, ಪರಕೀಯ ಪರಂಗಿಗಳು ಬಡಿಸಿದ-ಕುಡಿಸಿದ ಸುಣ್ಣದ ನೀರನ್ನು ಕುಡಿದೇ ಕುಡಿದರು!

ಪರಿಣಾಮ- ನಮ್ಮ ಮನೆಯ ಕನಕ ಕುಂಭವು ಪಕ್ಕದ ಮನೆಯ ಪಾಲಾಯಿತು; ಪಕ್ಕದ ಮನೆಯ ಪ್ಲಾಸ್ಟಿಕ್ ಚೊಂಬು ನಮ್ಮ ಮನೆಯ ದೇವರ ಕೋಣೆಯಲ್ಲಿ ಪ್ರತಿಷ್ಠಾಪಿತಗೊಂಡಿತು!

ಹಾಗೆಂದು ಅಳುತ್ತಾ ಕುಳಿತುಕೊಳ್ಳುವುದರಲ್ಲಿ ಅರ್ಥವಿಲ್ಲ; ಅಳಲಿ ಫಲವೇನಿಲ್ಲ. ಕಾಲವು ಹೇಗೆ ಬಂದಿದೆಯೆಂದರೆ ಧರ್ಮ-ಸಂಸ್ಕೃತಿಗಳಿಗಾಗಿ ಅತ್ತರೂ ಕೇಳುವವರಿಲ್ಲ, ಸತ್ತರೂ ಕೇಳುವವರಿಲ್ಲ! ನಮ್ಮ ದೇಶ-ಧರ್ಮಗಳನ್ನು ನಾವೇ ಉಳಿಸಿಕೊಳ್ಳಬೇಕು. ಸ್ವೇದ-ರುಧಿರಗಳನ್ನು ಬಸಿದಾದರೂ ನಮ್ಮ ಸಂಸ್ಕೃತಿ-ಸಂಪತ್ತನ್ನು ಉಳಿಸಿಕೊಳ್ಳಬೇಕು.

ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ|
ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಮ್॥

ಮರಣದ ಮೊದಲು ಕರುಣದ ಆಗಮನವಾಗಲೇಬೇಕು; ನಿಶೆಯ ನೀಗಿ ಉಷೆಯುದಿಸಿಬರಲೇಬೇಕು; ಆ ಭರವಸೆಯ ದಿಟಗೊಳಿಸಲೆಂಬಂತೆ – ಭಾರತದ ಜೀವನಾಡಿಗಳಾದ ವಿದ್ಯೆಗಳನ್ನು ರಕ್ಷಿಸಲು ವಿದ್ಯಾಮೂಲನಾದ ವಿಷ್ಣುವು ಗುಪ್ತವಾಗಿ- ವಿಷ್ಣುಗುಪ್ತ ವಿಶ್ವವಿದ್ಯಾಪೀಠವಾಗಿ ಅವತರಿಸಿ ಬರುತ್ತಿದ್ದಾನೆ!
ಅದು ದೂರದಲ್ಲೆಲ್ಲೋ ಅಲ್ಲ, ಸನಿಹದಲ್ಲಿಯೇ! ಯಾವಾಗಲೋ ಅಲ್ಲ… ಸಮೀಪ-ಸಮಯದಲ್ಲಿಯೇ!

ಹೌದು, ನಮ್ಮ ದೇಶದ ಅಮೂಲ್ಯವಾದ ವಿದ್ಯೆಗಳನ್ನು, ಅಮೋಘವಾದ ಕಲೆಗಳನ್ನು ಉಳಿಸಿ-ಬೆಳೆಸಲು, ಬೆಳೆಸಿ ಬೆಳಗಿಸಲು ಪ್ರಾಚೀನ ತಕ್ಷಶಿಲೆಯ ವಿಶ್ವವಿದ್ಯಾಲಯವನ್ನು ನೆನಪಿಸುವ ವಿಶ್ವವಿದ್ಯಾಪೀಠವೊಂದು ಅತಿಶೀಘ್ರದಲ್ಲಿಯೇ ಮೂಡಿಬರುತ್ತಿದೆ! ಅದು ಪ್ರಭು ಶಂಕರನ ಏಕೈಕ ಆತ್ಮಲಿಂಗದ ನೆಲೆಯೆನಿಸಿದ ಗೋಕರ್ಣ ಕ್ಷೇತ್ರದಲ್ಲಿ; ಗುರು ಶಂಕರರ ತ್ರಿವಾರ ಪಾದಸ್ಪರ್ಶದಿಂದ ಪೂತ-ಪರಿಪೂತಗೊಂಡ ಅಶೋಕೆಯಲ್ಲಿ!
#LokaLekha by @SriSamsthana via HareRaama.in

ಅಶೋಕೆಯೇ ಏಕೆ?

 • ‘ಈಶಾನಃ ಸರ್ವವಿದ್ಯಾನಾಮ್’- ಸರ್ವವಿದ್ಯಾಧೀಶ್ವರನಾದ ಪರಮಶಿವನ ಏಕಮಾತ್ರ ಆತ್ಮಲಿಂಗವು ವಿರಾಜಿಸುವ ಶ್ರೀಗೋಕರ್ಣದ ಶಿರೋಭಾಗವು ಅಶೋಕೆ.
 • ಯಾವ ಮಹನೀಯನ ಮಹಾವಿದ್ವತ್ತಿಗೆ ಸ್ವಯಂ ಶ್ರೀರಾಮನೂ ತಲೆದೂಗಿದನೋ ಅಂಥ ಹನುಮನ ಜನ್ಮಸ್ಥಾನವು ಅಶೋಕೆಯ ನೆರೆಹೊರೆ.
 • ಸರ್ವಜ್ಞಮೂರ್ತಿಗಳೂ, ಜ್ಞಾನಸಾಮ್ರಾಜ್ಯದ ನಿತ್ಯಚಕ್ರವರ್ತಿಗಳೂ, ಗುರುಗಳ ಪಂಕ್ತಿಯ ಪ್ರಥಮ ಪುರುಷರೂ ಆದ ಶ್ರೀಶಂಕರ ಭಗವತ್ಪಾದರು ಅತಿ ಹೆಚ್ಚು ಬಾರಿ- ಎಂದರೆ ಮೂರು ಬಾರಿ ಭೇಟಿ ನೀಡಿದ್ದು ಮಾತ್ರವಲ್ಲ, ಮಾಸಪರ್ಯಂತ ವಾಸವನ್ನೂ ಮಾಡಬೇಕೆಂದರೆ ಅಶೋಕೆಯ ಮಣ್ಣಿನಲ್ಲಿ ಅನಿತರಸಾಧಾರಣವಾದ ಮಹತಿಯು ಇದ್ದಿರಲೇಬೇಕಲ್ಲವೇ?
 • ಇದೆಲ್ಲಕ್ಕೂ ತಿಲಕವಿಟ್ಟಂತೆ, ಆದ್ಯಶಂಕರರು ಧರ್ಮಸಂರಕ್ಷಣ ಮತ್ತು ಜ್ಞಾನಪ್ರಸರಣಕ್ಕಾಗಿ ಆದ್ಯ-ರಘೂತ್ತಮ-ಮಠವನ್ನು- ಎಂದರೆ ಈಗಿನ ಶ್ರೀರಾಮಚಂದ್ರಾಪುರಮಠವನ್ನು ಇದೇ ಸ್ಥಳದಲ್ಲಿಯೇ ಸ್ಥಾಪಿಸಿದರು!
 • ಆತ್ಮಲಿಂಗವು ಗೋಕರ್ಣದ ಸಮುದ್ರತೀರದಲ್ಲಿದ್ದರೂ, ಅದರ ನಂದಾದೀಪವು- ಎಂದರೆ ಆತ್ಮಲಿಂಗವನ್ನು ಆರಾಧಿಸಿಕೊಂಡು ಬಂದ ವೇದಶಾಸ್ತ್ರಜ್ಞರ ಜ್ಞಾನ-ವಿಜ್ಞಾನಗಳು ವಿರಾಜಿಸಿದುದು ಶತಶೃಂಗಶಿಖರದಲ್ಲಿ ಶೋಭಿಸುವ ಅಗ್ರಹಾರರತ್ನ ಅಶೋಕೆಯಲ್ಲಿಯೇ!
 • ನವಯುಗದ ವೇದದ್ರಷ್ಟಾ ಎನಿಸಿದ ಬ್ರಹ್ಮರ್ಷಿ ದೈವರಾತರ ತಪೋಭೂಮಿ ಮತ್ತು ಕರ್ಮಭೂಮಿಯಾಗಿತ್ತು ಅಶೋಕೆ. ವೇದವಿದ್ಯೆಗಳ ಅಧ್ಯಯನ-ಕೇಂದ್ರವೊಂದನ್ನು ಅಶೋಕೆಯಲ್ಲಿ ಸ್ಥಾಪಿಸುವ ಕನಸು ಕಂಡಿದ್ದರು ದೈವರಾತರು; ‘ಗೋರಕ್ಷಬ್ರಹ್ಮಚರ್ಯಾಶ್ರಮ’ವೆಂಬ ಅಭಿಧಾನದೊಂದಿಗೆ ಆ ಸಂಕಲ್ಪದಲ್ಲಿ ಸ್ಥಳವನ್ನೂ ಅವರು ಮೀಸಲಿರಿಸಿದ್ದರು.
  ಪ್ರಕೃತ ವಿಶ್ವವಿದ್ಯಾಪೀಠಕ್ಕೆ ನೆಲವಿತ್ತು ನೆಲೆಯನ್ನು ಕಲ್ಪಿಸುತ್ತಿರುವವರು, ಬಲವಿತ್ತು ಪ್ರಕಲ್ಪವನ್ನು ಮುನ್ನಡೆಸುತ್ತಿರುವವರು ಅವರದೇ ಸುಪುತ್ರರಾದ ದೇವಶ್ರವ ಶರ್ಮರು.

ವಿಶ್ವವಿದ್ಯಾಪೀಠ; ಯಾರದೀ ಮತಿ? ಮತ್ತಾರದೀ ಕೃತಿ?

ಮಹಾಸಂಕಲ್ಪಗಳಿಲ್ಲದೇ ಮಹತ್ಕಾರ್ಯಗಳು ಮೂಡಿಬರಲಾರವು; ಮಹಾಪುರುಷರು-ಮಹಾಸಂಸ್ಥೆಗಳಲ್ಲದೇ ಅನ್ಯರು ಮಹಾಸಂಕಲ್ಪಗಳನ್ನು ಕೈಗೊಳ್ಳಲಾರರು!
ವಿಶ್ವವಿದ್ಯಾಪೀಠವೆಂಬ ಮಹಾಪ್ರಕಲ್ಪದ ಹಿಂದಿರುವ ಮಹಾಶಕ್ತಿಯು ಬೇರಾವುದೂ ಅಲ್ಲ; ಆದಿಶಂಕರರ ಏಕೈಕ ಅವಿಚ್ಛಿನ್ನ ಪರಂಪರೆಯ ಹೆಗ್ಗಳಿಕೆಯ ಶ್ರೀಸಂಸ್ಥಾನಗೋಕರ್ಣ_ಶ್ರೀರಾಮಚಂದ್ರಾಪುರಮಠ; ಸರ್ವಜ್ಞಪೀಠವನ್ನು ಅಧಿರೋಹಿಸಿದ ಸರ್ವಗುರುವಿನ ನೈಜ ಪರಂಪರೆಗೆ ಭಾರತದ ಸರ್ವವಿದ್ಯೆಗಳ ಸಂರಕ್ಷಣೆಯ ಪ್ರಕಲ್ಪಕಲ್ಪನೆಯು ಪ್ರಥಮ ಕರ್ತವ್ಯವೇ ಅಲ್ಲವೇ?

ಶಂಕರರೇ ಪ್ರೇರಣೆ; ಅವರದೇ ಸ್ಮರಣೆ; ಅವರಿಗೇ ಸಮರ್ಪಣೆ..

ಶ್ರೀರಾಮಚಂದ್ರಾಪುರಮಠವು ಎಲ್ಲಿಯೂ ಇಲ್ಲದ ವಿಶ್ವವಿದ್ಯಾಪೀಠವೊಂದನ್ನು- ತನ್ನ ಸೃಷ್ಟಿಸ್ಥಳವಾದ ಅಶೋಕೆಯಲ್ಲಿ- ತನ್ನನ್ನು ಸೃಷ್ಟಿಸಿದ ಆದಿಶಂಕರರ ನೆನಪಿನಲ್ಲಿ, ಅವರಿತ್ತ ಶಕ್ತಿಯಿಂದಲೇ ನಿರ್ಮಿಸುತ್ತದೆ, ಮಾತ್ರವಲ್ಲ, ಅದನ್ನು ಅವರ ಚರಣಗಳಲ್ಲಿಯೇ ತನ್ನ ಕಿರುಗಾಣಿಕೆಯಾಗಿ ಸಮರ್ಪಿಸುತ್ತದೆ!

ಭಾರತೀಯ ವಿದ್ಯಾವಿಶ್ವವೇ ವಿಶ್ವವಿದ್ಯಾಪೀಠದ ಪಠ್ಯಕ್ರಮ!

ಒಂದು ಕಾಲದಲ್ಲಿ ಭಾರತ ದೇಶದಲ್ಲಿ ವಿದ್ಯೆಯೆಂದು ಯಾವುದೆಲ್ಲವನ್ನೂ ಪರಿಗಣಿಸಲಾಗಿತ್ತೋ, ಅವೆಲ್ಲವನ್ನೂ ಯಥಾಸಾಧ್ಯ ವಿಶ್ವವಿದ್ಯಾಪೀಠದ ಪಠ್ಯಕ್ರಮವಾಗಿ ಅಳವಡಿಸಲಾಗುತ್ತಿದೆ.

ಅದು ಹೀಗಿದೆ:

 • ನಾಲ್ಕು ವೇದಗಳು– ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವವೇದ.
 • ನಾಲ್ಕು ಉಪವೇದಗಳು– ಆಯುರ್ವೇದ, ಧನುರ್ವೇದ, ಗಾಂಧರ್ವವೇದ, ಅರ್ಥಶಾಸ್ತ್ರ.
 • ಆರು ವೇದಾಂಗಗಳು– ಶಿಕ್ಷಾ, ವ್ಯಾಕರಣ, ಛಂದಸ್ಸು, ನಿರುಕ್ತ, ಜ್ಯೌತಿಷ, ಕಲ್ಪ.
 • ರಾಮಾಯಣ-ಮಹಾಭಾರತ-ಭಾಗವತವನ್ನೊಳಗೊಂಡಂತೆ ಇತಿಹಾಸ-ಪುರಾಣಗಳು.
 • ಷಡ್ದರ್ಶನಗಳು– ಮೀಮಾಂಸಾ, ವೇದಾಂತ, ನ್ಯಾಯ, ವೈಶೇಷಿಕ, ಸಾಂಖ್ಯ, ಯೋಗ.
 • ದೋಷವಿಲ್ಲದ ಬದುಕಿನ ದಾರಿ ತೋರುವ ಧರ್ಮಶಾಸ್ತ್ರ.
 • ಯಾವುದಿಲ್ಲದೇ ಜೀವನವೇ ಇಲ್ಲವೋ ಅಂಥ ಅಮೃತಾನ್ನವನ್ನು ಅವನಿಯು ಅನುಗ್ರಹಿಸಿ ನೀಡುವಂತೆ ಮಾಡುವ ಅದ್ಭುತ ವಿದ್ಯೆ ಕೃಷಿ.
 • ಸರ್ವದೇವಮಯಿಯಾದ, ಸರ್ವಜನನಿಯಾದ ಗೋಮಾತೆಯ ಸೇವೆಗೆ ದಾರಿದೀವಿಗೆಯಾದ ಗೋರಕ್ಷ.
 • ಪ್ರಾಚೀನ ಭಾರತೀಯರ ಮಿಥ್ಯಾ-ವಂಚನೆಗಳಿಂದ ಮುಕ್ತವಾದ ಕ್ರಯ-ವಿಕ್ರಯವೈಖರಿಯನ್ನು ಪರಿಚಯಿಸುವ ವಿದ್ಯೆ ವಾಣಿಜ್ಯ.
 • ಯಥಾಸಾಧ್ಯವಾದ 64 ಕಲೆಗಳು– ಪ್ರಮುಖವಾಗಿ, ಗಾಯನ, ವಾದನ, ನರ್ತನ, ಅಭಿನಯ, ನೇಪಥ್ಯಪ್ರಯೋಗ(ವೇಷಧಾರಣೆ), ಕಾವ್ಯರಚನೆ, ಚಿತ್ರಕಲೆ, ಕಾಷ್ಠಶಿಲ್ಪ, ವಾಸ್ತುಶಾಸ್ತ್ರ, ಪಾಕಶಾಸ್ತ್ರ, ನಿಮಿತ್ತಜ್ಞಾನ(ಶಕುನಶಾಸ್ತ್ರ), ವೃಕ್ಷಾಯುರ್ವೇದ, ಗಂಧಯುಕ್ತಿ(ಪರಿಮಳ ದ್ರವ್ಯಗಳ ಸಂಯೋಜನೆ), ಕಸೂತಿ-ಹೊಲಿಗೆ, ಕರಕುಶಲವಸ್ತುಗಳ ರಚನೆ, ರತ್ನಪರೀಕ್ಷಾ, ಧಾತುವಾದ(ಲೋಹವಿದ್ಯೆ) ಅಭ್ಯಂಗ-ದೇಹಮರ್ದನ, ದೇಶಭಾಷಾವಿಜ್ಞಾನ, ಬಾಲಕ್ರೀಡನಕ, ವ್ಯಾಯಾಮಕೀ.

#LokaLekha by @SriSamsthana via HareRaama.in

ವಿಶ್ವವಿದ್ಯಾಪೀಠದಲ್ಲಿ ವಿಕಾಸಗೊಂಡ ವಿದ್ಯಾವೀರನು ಆಧುನಿಕ ಜಗತ್ತಿನಲ್ಲಿ ಅಪ್ರಸ್ತುತನಾಗಬಾರದೆಂಬ ಕಾರಣಕ್ಕೆ-

 • ಇಂಗ್ಲೀಷ್, ಹಿಂದಿ ಮೊದಲಾದ ನವಸಮಾಜದ ಭಾಷೆಗಳು,
 • ಸಮಯುಗದ ಜಗದ ಸಾಮಾನ್ಯ ಜ್ಞಾನ,
 • ಅವಶ್ಯವಿರುವಷ್ಟು ಆಧುನಿಕ ತಂತ್ರಜ್ಞಾನ,
 • ರಾಷ್ಟ್ರದ ವರ್ತಮಾನ ಸಂವಿಧಾನ,
 • ನಮ್ಮ ದೇಶದ ನೈಜ ಚರಿತ್ರೆ,

ಕೊನೆಯದಾಗಿ- ವಿಶ್ವವಿದ್ಯಾಪೀಠದಲ್ಲಿ ವಿದ್ಯಾರ್ಜನೆ ಮಾಡಿದುದರ ಫಲವಾಗಿ ಜ್ಞಾನನಿಧಿಯೂ, ಧರ್ಮಯೋಧನೂ ಆಗಿ ಹೊರಹೊಮ್ಮುವ ಭಾರತಾಂಬೆಯ ವರಪುತ್ರನಿಗೆ ಸಂಭವನೀಯವಾದ ವಿಪತ್ತುಗಳನ್ನು ಮನಸ್ಸಿನಲ್ಲಿರಿಸಿಕೊಂಡು-

 • ಧರ್ಮರಕ್ಷಣೆಯ ಜೊತೆಯಲ್ಲಿ ಆತ್ಮರಕ್ಷಣೆಯನ್ನೂ ಸಾಧಿಸಿಕೊಡುವ ಸಮರ ವಿದ್ಯೆಗಳು

ಹೀಗೆ ವಿಶ್ವವಿದ್ಯಾಪೀಠದ ಗರ್ಭವನ್ನು ಪ್ರವೇಶಿಸುವ ವಿದ್ಯಾಶಿಶುವು ಹೊರಬರುವಾಗ ಬ್ರಹ್ಮಾಂಡಗರ್ಭನೇ ಆಗಿರುವಂತೆ ಕಲ್ಪಿತವಾಗಲಿದೆ ಇಲ್ಲಿಯ ವಿದ್ಯಾವಿನ್ಯಾಸ!

Jack of all; Master of one!

ವಿಶ್ವವಿದ್ಯಾಪೀಠದಲ್ಲಿ ವಿಕಸಿತನಾಗುವ ವಿದ್ಯಾಪುತ್ರನು ಯಾವುದಾದರೂ ಒಂದು ಮಹಾವಿದ್ಯೆಯಲ್ಲಿ ಪರಿಪೂರ್ಣವಾಗಿ ಪಾರಂಗತನಾಗಬೇಕು; ಮತ್ತುಳಿದ ಸಕಲ ಭಾರತೀಯವಿದ್ಯೆ-ಕಲೆಗಳ ಪರಿಚಯ/ಪ್ರವೇಶಗಳನ್ನು ಪಡೆದಿರಬೇಕು. ಇದು ಇಲ್ಲಿಯ ಶಿಕ್ಷಾಸೂತ್ರ.

ಸೂತ್ರದ ಹಿಂದಿನ ತತ್ತ್ವ:

ಒಂದು ದೇಹದೊಳಗಿನ ಹಲವು ಅವಯವಗಳಂತೆ- ಭಾರತೀಯವಿದ್ಯೆಗಳೆಲ್ಲವೂ ಪರಸ್ಪರ ಅವಿನಾಭಾವ-ಬಂಧವನ್ನು ಹೊಂದಿವೆ; ಒಡಗೂಡಿ ಅಭ್ಯಸಿಸಿದವನಿಗೆ ಮಾತ್ರವೇ ಪೂರ್ಣವಾಗಿ ಒಲಿಯುತ್ತವೆ.

ಧರ್ಮವೀರರ ಸೃಷ್ಟಿಯೇ ಮೂಲಧ್ಯೇಯ:

ತಕ್ಷಶಿಲೆಯ ವಿಶ್ವವಿದ್ಯಾಲಯದಲ್ಲಿ ಆಚಾರ್ಯನಾಗಿದ್ದ ವಿಷ್ಣುಗುಪ್ತ ಚಾಣಕ್ಯನು ಧರ್ಮಯೋಧ ಚಂದ್ರಗುಪ್ತನನ್ನು ಸೃಷ್ಟಿಸಿ, ಅವನ ಮೂಲಕ ನಂದನ ಅಂಧಕಾರಶಾಸನವನ್ನು ಕೊನೆಗೊಳಿಸಿ, ಧರ್ಮಸಾಮ್ರಾಜ್ಯವನ್ನೇ ಉದಯಗೊಳಿಸಲಿಲ್ಲವೇ?
ಅಂತೆಯೇ, ವಿಶ್ವವಿದ್ಯಾಪೀಠದ ಮಡಿಲಲ್ಲಿ ವಿಶ್ವವಿಜಯೀ ವಿದ್ಯಾವೀರರನ್ನು ಸೃಜಿಸಿ, ತನ್ಮೂಲಕ ಭಾರತವರ್ಷದಲ್ಲಿ ಮತ್ತೊಮ್ಮೆ ರಾಮರಾಜ್ಯವನ್ನು ಉದಯಗೊಳಿಸುವುದು, ಧರ್ಮಪ್ರಭುತ್ವವನ್ನು ಮರಳಿ ಸ್ಥಾಪಿಸುವುದು.

ಆದುದರಿಂದಲೇ ವಿಶ್ವವಿದ್ಯಾಪೀಠವನ್ನು ‘ವಿಷ್ಣುಗುಪ್ತ ವಿಶ್ವವಿದ್ಯಾಪೀಠ’ವೆಂದೇ ಹೆಸರಿಸಲಾಗುತ್ತಿದೆ.

ಮರಳಿ ಉದಿಸಲಿ ತಕ್ಷಶಿಲೆ..

ಅಂದು- ಸಕಲ ಭಾರತೀಯ ವಿದ್ಯೆಗಳ ತವರುಮನೆಯಾಗಿದ್ದ, ವಿಶ್ವದ ಉದ್ದಗಲಗಳಿಂದ ವಿದ್ಯೆಯನ್ನರಸಿ ಬರುವ ಹತ್ತಾರು ಸಹಸ್ರ ಜ್ಞಾನಕಂದಗಳ ಬುದ್ಧಿಯನ್ನು ಬೆಳಕಾಗಿಸುತ್ತಿದ್ದ, ಭಾರತವರ್ಷದ ಹೆಮ್ಮೆಯ ಗೌರೀಶಂಕರವೇ ಆಗಿದ್ದ ತಕ್ಷಶಿಲೆಯ ವಿಶ್ವವಿದ್ಯಾಲಯವನ್ನು ಸತತ ಪ್ರಯತ್ನಗಳ ಮೂಲಕ ನಾಶಪಡಿಸಲಾಯಿತು!

ಇಂದು- ಶಂಕರನ ಕಾರುಣ್ಯವನ್ನೂ, ಶಂಕರರ ಪಾದಸ್ಪರ್ಶದ ಪುಣ್ಯವನ್ನೂ, ಧರ್ಮನಿಷ್ಠರ- ದೇಶಪ್ರೇಮಿಗಳ ತ್ಯಾಗ-ಸೇವೆಗಳನ್ನೂ ಮೂಲಾಧಾರವಾಗಿರಿಸಿಕೊಂಡು, ಶ್ರೀಕ್ಷೇತ್ರ ಗೋಕರ್ಣದ ಅಶೋಕೆಯಲ್ಲಿ ಅದೇ ತಕ್ಷಶಿಲಾ-ವಿಶ್ವವಿದ್ಯಾಲಯವನ್ನು ಮಹಾಪ್ರಯತ್ನದ ಮೂಲಕ ಮರಳಿ ನಿರ್ಮಿಸಲಾಗುತ್ತಿದೆ! #LokaLekha by @SriSamsthana via HareRaama.in

ಸ್ವಾರ್ಥದ ಬಿಂದುವಲ್ಲವಿದು, ಸರ್ವಾರ್ಥದ ಸಿಂಧು!

ಇಲ್ಲಿ ಕಟ್ಟಲಾಗುತ್ತಿರುವುದು ದೇಶವನ್ನು; ಕೇವಲ ವಿದ್ಯಾಸಂಸ್ಥೆಯನ್ನಲ್ಲ! ಒಂದು ವ್ಯಕ್ತಿಯನ್ನೋ, ಸಂಸ್ಥೆಯನ್ನೋ ಬೆಳಗಿಸುವುದು ಇಲ್ಲಿ ಉದ್ದೇಶವಲ್ಲ; ವಿದ್ಯೆಯೆಂಬ ವಿದ್ಯುತ್ತನ್ನಿತ್ತು ಸಹಸ್ರ ಸಹಸ್ರ ಭಾರತೀಯರನ್ನು ಜ್ಞಾನದೀಪಗಳನ್ನಾಗಿಸಿ, ಅವರ ದ್ವಾರಾ ಭಾರತವನ್ನೇ ಬೆಳಕಾಗಿಸುವುದು, ಬಳಿಕ ಭಾರತದ ಬೆಳಕಿನಲ್ಲಿ ವಿಶ್ವವನ್ನೇ ಬೆಳಗುವುದು ಮೂಲೋದ್ದೇಶ!

ಆದುದರಿಂದ ಇದು ನನ್ನ ಕಾರ್ಯ ಮಾತ್ರವಲ್ಲ; ನಮ್ಮ ಕಾರ್ಯ ಮಾತ್ರವಲ್ಲ; ನಿಮ್ಮ ಕಾರ್ಯ ಮಾತ್ರವಲ್ಲ; ನಮ್ಮ-ನಿಮ್ಮೆಲ್ಲರ ಕಾರ್ಯ! ದೇಶಕಾರ್ಯ! ದೇವಕಾರ್ಯ! ಜೀವಕಲ್ಯಾಣಕಾರ್ಯ!

ಭಾರತವು ನನ್ನ ದೇಶವೆಂದು ಹೆಮ್ಮೆಯಿಂದ ಎದೆ ತಟ್ಟಿ, ತಲೆಯೆತ್ತಿ ಹೇಳಿಕೊಳ್ಳುವವರೇ,
ನಿಮಗಿದು ದೇವರ ಕರೆ! ದೇಶದ ಕರೆ! ಪೂರ್ವಪುರುಷರ ಕರೆ! ನಿಮ್ಮಾತ್ಮದ ಕರೆ!

ಭಾವೀ ಭವ್ಯಭಾರತ ಭವನದ ಒಂದಿಟ್ಟಿಗೆಯಾಗಬನ್ನಿ!
ವಿಶ್ವಪ್ರಕಾಶಕವಾದ ವಿದ್ಯಾಮಹಾಗ್ನಿಯಲ್ಲಿ ನೀವೂ ಒಂದು ಕಟ್ಟಿಗೆಯಾಗಬನ್ನಿ!
ಬ್ರಹ್ಮಾಂಡಕ್ಕೆ ಭಾರತದ ಕೊಡುಗೆಯಾಗಬಲ್ಲ ಅನರ್ಘ್ಯ ವಿದ್ಯಾರತ್ನಗಳ ಪೆಟ್ಟಿಗೆಯಾಗಬನ್ನಿ!

ಉಳಿದಿರುವ ವಿದ್ಯೆಗಳನ್ನಾದರೂ ಉಳಿಸಿಕೊಳ್ಳೋಣ; ಬೆಳೆಸಿಕೊಳ್ಳೋಣ; ಜೀವಲೋಕಕ್ಕೆ ದೇವರಿತ್ತ ಬೆಳಕನ್ನು ಬಳಸಿಕೊಳ್ಳೋಣ.

~~~~~~***********~~~~~

ಚಿತ್ರಗಳು:

 

 

Facebook Comments Box