LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ಪ್ರೀತಿಯೊಡನೆ ನೀತಿ, ಇದು ಅಯೋಧ್ಯೆಯ ರೀತಿ..!

Author: ; Published On: ಗುರುವಾರ, ದಶಂಬರ 23rd, 2010;

Switch to language: ಕನ್ನಡ | English | हिंदी         Shortlink:

ಬದುಕು ಮುಂದೆ ಸಾಗಬೇಕು..
ಆದರೆ ಅದು ಸರಿಯಾದ ದಾರಿಯಲ್ಲಿ ಮುಂದೆ ಸಾಗಬೇಕು..
ಬದುಕು ಮುಂದೆ ಸಾಗಲು ಬೇಕು “ಪ್ರೀತಿ”
ಅದು ಸರಿಯಾದ ದಾರಿಯಲ್ಲಿ ಸಾಗಲು ಬೇಕು “ನೀತಿ”
ಬದುಕು ಚಲಿಸಲು ಬೇಕು ’ಪ್ರೀತಿ” ಎಂಬ ಚಾಲನಾಶಕ್ತಿ..
ಅದು ನಿಜವಾದ ಲಕ್ಷ್ಯದೆಡೆಗೆ ಚಲಿಸಲು ಬೇಕು “ನೀತಿ ’ಎಂಬ ಚಾಲಕ..
ಶೂರ್ಪಣಖೆಗೆ ರಾಮನ ಕುರಿತು, ಅವಳ ಅಣ್ಣನಿಗೆ ಸೀತೆಯ ಕುರಿತು ಇದ್ದಿದ್ದು ಪ್ರೀತಿಯಲ್ಲ..ಏಕೆಂದರೆ ಅಲ್ಲಿ ನೀತಿಯಿರಲಿಲ್ಲ..
ನೀತಿಗೆ ಸಲ್ಲದ ಪ್ರೀತಿಯು ಪ್ರೀತಿಯೇ ಅಲ್ಲ..!!

ಆದುದರಿಂದಲೇ ವಾಲ್ಮೀಕಿಗಳು ನಾಡು- ನರೇಶರ ಬಗೆಗೆ ಕೋಸಲದ ಮಂತ್ರಿಗಳಿಗಿದ್ದ ಪ್ರೀತಿಯನ್ನು ವರ್ಣಿಸುವಾಗ ನೀತಿಯನ್ನು ಮರೆಯಲಿಲ್ಲ..!
ಅಯೋಧ್ಯೆಯ ಮಂತ್ರಿಗಳ ನೀತಿಯ ಪರಿಯನ್ನು ಮುನಿನಯನಗಳ ಮೂಲಕ ನೋಡೋಣವೇ..?

* ನೀತಿಮಂತಃ :
ನೀತಿ ಶಬ್ದದ ನಿಷ್ಪತ್ತಿ ‘ಣೀಞ್ – ಪ್ರಾಪಣೇ ಎಂಬ ಧಾತುವಿನಿಂದ…
ಪ್ರಾಪಣವೆಂದರೆ ತಲುಪಿಸುವುದು…
ಭೂಲೋಕದಿಂದ ಭಾಲೋಕಕ್ಕೆ, ‘ಪಾಪದಿಂದ ಪಾದಕ್ಕೆ’ ಅಸತ್ಯದಿಂದ ಸತ್ಯಕ್ಕೆ, ಕ್ಷೋಭೆಯಿಂದ ಶಾಂತಿಗೆ ಯಾವುದು ನಮ್ಮನ್ನು ತಲುಪಿಸುವುದೋ ಅದುವೇ ನೀತಿ..
ಅದುವೇ ಸತ್ಪುರುಷರ ಬದುಕಿನ ರೀತಿ..
ಅಮಾತ್ಯರು ಪ್ರೀತಿಮಂತರು ಮಾತ್ರವಲ್ಲ, ನೀತಿಮಂತರೂ ಆಗಿದ್ದರು..

* ಜಾಗ್ರತೋ ನಯಚಕ್ಷುಷಾ
ಬಾಹ್ಯನಯನಗಳು ನಿದ್ರಿಸಲಿ, ಚಿಂತೆಯಿಲ್ಲ..
ನೀತಿನಯನವು ನಿದ್ರಿಸಿದರೆ ಭೀತಿ ತಪ್ಪಿದ್ದಲ್ಲ..!
ಆದರೆ ಅಯೋಧ್ಯೆಯನ್ನೆಂದಿಗೂ ಭೀತಿ ಮುಟ್ಟಲು ಸಾಧ್ಯವಿರಲಿಲ್ಲ..
ಏಕೆಂದರೆ ಸೂರ್ಯಸಿಂಹಾಸನದ ಸೇವಕರ ನೀತಿನೇತ್ರಗಳು ನರರ-ನರೇಂದ್ರನ ರಕ್ಷೆಯ ವಿಷಯದಲ್ಲಿ ಸದಾ ಜಾಗೃತವಾಗಿಯೇ ಇರುತ್ತಿದ್ದವು..
ನೀತಿಯಿರುವಲ್ಲಿ ಭೀತಿಗೆ ಎಡೆಯೆಲ್ಲಿ..?

*ಕ್ರೋಧಾತ್ ಕಾಮಾರ್ಥಹೇತೋರ್ವಾ ನ ಬ್ರೂಯುರನೃತಂ ವಚಃ ||
ಕಾಮಕ್ಕಾಗಿಯಾಗಲೀ, ಕ್ರೋಧದಿಂದಲಾಗಲೀ, ಲೋಭಕ್ಕೊಳಗಾಗಿಯಾಗಲೀ ಅವರು ಎಂದೂ ಸುಳ್ಳಾಡುತ್ತಿರಲಿಲ್ಲ..

ತ್ರಿವಿಧಂ ನರಕಸ್ಯೇದಂ ದ್ವಾರಂ ನಾಶನಮಾತ್ಮನಃ|
ಕಾಮಃ ಕ್ರೋಧಃ ತಥಾ ಲೋಭಃ ತಸ್ಮಾದೇತತ್ತ್ರಯಂ ತ್ಯಜೇತ್ ||
– ಭಗವದ್ಗೀತೆ

(ಕಾಮ-ಕ್ರೋಧ-ಲೋಭಗಳು ನರಕದ ಮುಬ್ಬಗೆಯ ದ್ವಾರಗಳು..
ನಮ್ಮೊಳಸೇರಿ ನಮ್ಮಾತ್ಮವನ್ನೇ ಹಾನಿಗೈಯುವವು..
ನಾಶ-ನರಕಗಳಿಂದ ಬಚಾವಾಗಬಯಸುವವನು ಇವುಗಳಿಂದ ದೂರವೇ ಇರಬೇಕು..)

ಮನವೆಂಬ ಅಂತರಂಗ ಮತ್ತು ಮಾತೆಂಬ ಬಹಿರಂಗಗಳ ನಡುವೆ ಸಾಮರಸ್ಯ-ಸಹಚಾರಗಳಿದ್ದರೆ  ಅದುವೇ ’ಸತ್ಯ’
ದೌರ್ಭಾಗ್ಯವಶಾತ್ ಅವುಗಳ ನಡುವೆ ವೈರಸ್ಯ-ವ್ಯಭಿಚಾರಗಳುಂಟಾದರೆ ಅದುವೇ ಮಿಥ್ಯೆ..
ಒಂದು ಮನೆಯೊಳಗೆ ಬರುವ ಭಿನ್ನತೆಯೇ ಅದೆಷ್ಟು ಅಶಾಂತಿ- ಅನಾಹುತಗಳಿಗೆ ಕಾರಣವಾಗುತ್ತದೆ..!?
ಹಾಗಿರುವಾಗ ಒಂದಾಗಿಯೇ ಇರಬೇಕಾದ ಮೈ-ಮಾತು- ಮನಗಳೊಳಗೇ ಭಿನ್ನತೆ ಬಂದರೆ ಬದುಕು ಭಗ್ನವಾಗದೇ ಇದ್ದೀತೇ..?
ದೇಶವೆಂಬ ದೇಹಕ್ಕೆ ಮಂತ್ರಿಯೇ ಮನವಲ್ಲವೇ..?
ಆತನೇ ಸುಳ್ಳಾಡಿದರೆ ದೇಶವೇ ಸುಳ್ಳಾಗುವುದಿಲ್ಲವೇ..!?
ಒಮ್ಮೊಮ್ಮೆ ದುರ್ಲಾಭಗಳ ಲೋಭದಿಂದ, ಒಮ್ಮೊಮ್ಮೆ ನಿಷ್ಕಾರಣವಾದ ದ್ವೇಷದಿಂದ ಮಿಥ್ಯೆಗೆ ವಶವಾಗುವ ಇಂದಿನ ಮಂತ್ರಿಗಳಂತಿರಲಿಲ್ಲ ಅಂದಿನ ಅಯೋಧ್ಯೆಯ ಮಂತ್ರಿಗಳು..

ದಂಡನೀತಿ–
ಭಾರತೀಯ ಸಂಸ್ಕೃತಿಯಲ್ಲಿ ದಂಡವೆಂಬುದು ಜೀವಹಿತೈಷಿತೆಯ, ಜೀವಕಾರುಣ್ಯದ ಪ್ರತೀಕ..!
ಜೀವಹಿಂಸೆಯಲ್ಲವದು..!
ಕೊಲೆಗಡುಕನು ಹರಿತವಾದ ಆಯುಧದಿಂದ ಶರೀರವನ್ನು ಭೇದಿಸುತ್ತಾನೆ..
ಕೊಲ್ಲುವುದೇ ಉದ್ದೇಶವಲ್ಲಿ..!
ವೈದ್ಯನೂ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಹರಿತವಾದ ಆಯುಧದಿಂದ ಶರೀರವನ್ನು ಭೇದಿಸುತ್ತಾನೆ..
ಬದುಕಿಸುವುದೇ ಉದ್ದೇಶವಲ್ಲಿ..!
ಭಾರತೀಯದಂಡನೀತಿಯೆಂದರೆ ಅದೊಂದು ಬಗೆಯ ಜೀವಚಿಕಿತ್ಸೆ..
ದೇಹದಲ್ಲಡಗಿದ ರೋಗದ ಗಡ್ಡೆಯನ್ನು ವೈದ್ಯನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆದು ಹಾಕುವಂತೆ, ಜೀವದಲ್ಲಡಗಿದ ಪಾಪದ ಗಡ್ಡೆಯನ್ನು ದಂಡದ ಮೂಲಕ ತೆಗೆದು, ಜೀವವನ್ನು ಶುದ್ಧಗೊಳಿಸುವ, ಭವಿಷ್ಯವನ್ನು ಮಂಗಲಮಯಗೊಳಿಸುವ  ವೈಜ್ಞಾನಿಕ ಪ್ರಕ್ರಿಯೆಯದು..!
ಆದುದರಿಂದಲೇ ಅಪರಾಧಿಯ ಮೇಲೆ ಕರುಣೆಯಿದ್ದರೆ ಆತನನ್ನು ದಂಡಿಸಲೇಬೇಕು..!!
ರಾಜನ, ರಾಜಪ್ರತಿನಿಧಿಗಳ ಕರ್ತವ್ಯವದು ..
ಹಾಗೆ ದಂಡಿಸದ ರಾಜನು ಅಪರಾಧಿಯ ಪಾಪದಲ್ಲಿ ತಾನೂ ಭಾಗಿಯಾಗುವನೆಂದು ಶಾಸ್ತ್ರಗಳು ಸಾರುತ್ತವೆ..!
ಅಯೋಧ್ಯೆಯ ಮಂತ್ರಿಗಳನ್ನು “ಸುತೀಕ್ಷ್ಣ ದಂಡ”ರೆಂದು ವಾಲ್ಮೀಕಿಗಳು ಬಣ್ಣಿಸುತ್ತಾರೆ..
ಜೀವಗಳ ವಿಷಯದಲ್ಲಿ ಅವರು ಸುಮಕೋಮಲರು..
ಆದರೆ ಅಪರಾಧಗಳ ವಿಷಯದಲ್ಲಿ ವಜ್ರಕಠೋರರು..!!
ಏಕೆಂದರೆ ಅಪರಾಧಗಳೇ ಪಾಪದ ಗಡ್ಡೆಗಳಾಗಿ ಒಳಸೇರಿ ಜೀವವನ್ನು ಬಿಸುಡಿಸುತ್ತವೆ..ಜೀವದ ಉತ್ಕರ್ಷವನ್ನೇ ಹಾನಿಗೈಯುತ್ತವೆ..!!
ಅಪರಾಧಿಗಳನ್ನವರು ದಂಡಿಸದಿರುತ್ತಿರಲಿಲ್ಲ..ಆದರೆ ಅವರ ದಂಡದಲ್ಲಿ ರೋಷ-ದ್ವೇಷಗಳಿರಲಿಲ್ಲ..ವಿವೇಕವಿತ್ತು..!

ಸುತೀಕ್ಷ್ಣ ದಂಡಾಃ ಸಂಪ್ರೇಕ್ಶ್ಯ ಪುರುಷಸ್ಯ ಬಲಾಬಲಂ||
ದಂಡವೆಂಬುದು ಎಲ್ಲಾ ಅಪರಾಧಗಳಿಗೂ ಒಂದೇ ಆಗಲು ಸಾಧ್ಯವಿಲ್ಲ..
ಹಾಗೆಯೇ ಅಪರಾಧವು ಒಂದೇ ಆದರೂ ಅಪರಾಧಿಗಳು ಬೇರೆ ಬೇರೆಯಾದಾಗ ದಂಡವೂ ಬೇರೆ ಬೇರೆಯೇ ಆಗಬೇಕಾಗುತ್ತದೆ..
ಎಲ್ಲಾ ರೋಗಗಳಿಗೂ ಒಂದೇ ಚಿಕಿತ್ಸೆಯಲ್ಲ ..
ರೋಗವೊಂದೇ ಆದರೂ ಬೇರೆ ಬೇರೆ ರೋಗಿಗಳಿಗೆ ಅವರ ಪ್ರಕೃತಿಯನ್ನನುಸರಿಸಿ ಬೇರೆ ಬೇರೆ ಚಿಕಿತ್ಸೆಯನ್ನೇ ನೀಡಬೇಕಾಗುತ್ತದೆ..!
ದೊಡ್ಡವರಿಗೆ ಕೊಡುವ ಔಷಧವನ್ನು ಎಳೆಮಗುವಿಗೆ ನೀಡಿದರೆ ಔಷಧವೇ ಮೃತ್ಯುವಾಗಬಹುದಲ್ಲವೇ..?

ಕುಶಲ ಶಿಕ್ಷಕನೊಬ್ಬ ತರಗತಿಯ ಮಕ್ಕಳನ್ನು ಅವರ ಪ್ರಕೃತಿಯನ್ನನುಸರಿಸಿ ಬೇರೆ ಬೇರೆ ವಿಧದಲ್ಲಿ ತಿದ್ದುತ್ತಾನೆ..
ಕೆಲವು ಮಕ್ಕಳಿಗೆ ತೀಕ್ಷ್ಣ ದೃಷ್ಟಿಯೇ ಸಾಕಾದೀತು..
ಕೆಲವರಿಗೆ ಬೈಗುಳವೇ ಬೇಕಾದೀತು..!
ಕೆಲವರು ಬೆತ್ತದ ಹೊರತು ದಾರಿಗೆ ಬರಲಾರರು..
ಕೆಲವು ಸೂಕ್ಷ್ಮ ಸಂವೇದಿ ಮಕ್ಕಳಿಗೆ ಎಂದಿನಂತೆ ಮಾತಾಡದಿದ್ದರೆ ಸಾಕು, ಬೆತ್ತಕ್ಕಿಂತ ಹೆಚ್ಚು ಪರಿಣಾಮವನ್ನು ಅದುವೇ ಬೀರುತ್ತದೆ..

ಅಮಾತ್ಯರು ಅಪರಾಧಿಗಳನ್ನು ಕಂಡುಹಿಡಿದು ಕಠೋರವಾಗಿ ದಂಡಿಸುವುದು ಖಂಡಿತವಾಗಿದ್ದುದರಿಂದ ಅಯೋಧ್ಯೆಯಲ್ಲಿ ಅಪರಾಧಗಳಿಗೆ ಆಸ್ಪದವೇ ಇರಲಿಲ್ಲ..!
ಆದರೆ ಅಪರಾಧಿಗಳ -ಅಪರಾಧದ ಬಲಾಬಲಗಳನ್ನು ಚೆನ್ನಾಗಿ ವಿವೇಚಿಸಿಯೇ ಅವರು ದಂಡನೆ ನೀಡುವುದರಿಂದಾಗಿ ಅಪರಾಧಿಗಳಿಗೂ ಅನ್ಯಾಯವಾಗುತ್ತಿರಲಿಲ್ಲ..!

* ಪ್ರಾಪ್ತಕಾಲಂ ತು ತೇ ದಂಡಂ ಧಾರಯೇಯುಃ ಸುತೇಷ್ವಪಿ |
ಅಹಿತಂ ಚಾಪಿ ಪುರುಷಮ್  ನ ಹಿಂಸ್ಸುರವಿದೂಷಕಂ ||

ಹೆತ್ತ ಮಕ್ಕಳೇ ಆದರೂ ತಪ್ಪು ಮಾಡಿದರೆ ದಂಡಿಸದೇ ಬಿಡುತ್ತಿರಲಿಲ್ಲ..
ತಮಗಾಗದವರೇ ಆದರೂ ತಪ್ಪಿಲ್ಲದಲ್ಲಿ ಖಂಡಿತವಾಗಿಯೂ ದಂಡಿಸುತ್ತಿರಲಿಲ್ಲ..

ಒಬ್ಬನೇ ಒಬ್ಬ ನಿರಪರಾಧಿಗೂ ಶಿಕ್ಷೆಯಾಗಬಾರದು, ಬೇಕಾದರೆ ನೂರು ಅಪರಾಧಿಗಳು ತಪ್ಪಿಸಿಕೊಳ್ಳಲಿ “
ಇದು ಇಂದಿನ ದಂಡತಜ್ಞರ ಘೋಷವಾಕ್ಯ..
“ಒಬ್ಬನೇ ಒಬ್ಬ ಅಪರಾಧಿಯೂ ತಪ್ಪಿಸಿಕೊಳ್ಳಬಾರದು ..
ಒಬ್ಬನೇ ಒಬ್ಬ ನಿರಪರಾಧಿಯೂ ದಂಡನೆಗೊಳಗಾಗಬಾರದು “

ಇದು ಅಯೋಧ್ಯೆಯ ಅಮಾತ್ಯರ ಧ್ಯೇಯವಾಕ್ಯ..
ಅಪರಾಧಿಗಳನ್ನು ತಪ್ಪಿಸಿಕೊಳ್ಳಲು ಬಿಡುವುದು ನಿರಪರಾಧಿಯ ಪೀಡನೆಯಲ್ಲಿಯೇ ಪರ್ಯವಸಾನವಾಗುತ್ತದೆ..
ರಾಜನಿಂದಲ್ಲವಾದರೂ ನಿರಂಕುಶರಾದ ದುರ್ಜನರಿಂದ ನಿರಪರಾಧಿಗಳು ಪೀಡನೆಗೆ ಒಳಗಾಗಿಯೇ ಒಳಗಾಗುತ್ತಾರೆ..!

ದಂಡಾಧಿಕಾರಿಯು ತನ್ನ ಕರ್ತವ್ಯವನ್ನು ನಿರ್ವಹಿಸುವಾಗ ರಾಗ-ದ್ವೇಷಗಳ ಪೂರ್ವಾಗ್ರಹಕ್ಕೆ ಒಳಗಾಗಲೇಬಾರದು..
ಹಾಗೊಂದು ವೇಳೆ ಒಳಗಾದರೆ “ವ್ಯಾಮೋಹವಿರುವಲ್ಲಿ ಅಪರಾಧಿಗೂ ದಂಡನೆಯಿಲ್ಲ..ವಿರೋಧವಿರುವಲ್ಲಿ ನಿರಪರಾಧಿಗೂ ದಂಡನೆ”ಎಂಬಂತೆ ಆಗಿಬಿಡುತ್ತದೆ..!
ಅಯೋಧ್ಯೆಯ ಅಮಾತ್ಯರು ದಂಡವನ್ನು ಧಾರಣೆ ಮಾಡುವಾಗ ಅವರಿಗೆ ಗೋಚರಿಸುತ್ತಿದ್ದುದು “ಅಪರಾಧ-ನಿರಪರಾಧಗಳು” ಮಾತ್ರ..!
ವೈಯಕ್ತಿಕ ಸಂಬಂಧಗಳು ಆ ಸಮಯದಲ್ಲಿ ಅವರ ಹತ್ತಿರವೂ ಸುಳಿಯುತ್ತಿರಲಿಲ್ಲ..!!

ಅದರೊಂದಿದೆ…
ದಂಡವಿರುವುದು ಕೇವಲ ಶಿಕ್ಷೆಗಾಗಿಯಲ್ಲ, ರಕ್ಷೆಗಾಗಿ..!
ಶಿಕ್ಷೆಗೆ ಶಿಕ್ಷೆಯೇ ಉದ್ದೇಶವಲ್ಲ..ರಕ್ಷೆಯದರ ಪರಮೋದ್ದೇಶ…
ಶಿಕ್ಷೆಯಿರುವುದು ಶಿಷ್ಟರನ್ನು ದುಷ್ಟರಿಂದ ರಕ್ಷಿಸಲು..
ಶಿಕ್ಷೆಯಿರುವುದು ದುಷ್ಟರನ್ನು ದುಷ್ಟತ್ವದಿಂದ ರಕ್ಷಿಸಲು- ಶಿಷ್ಟರನ್ನಾಗಿಸಲು..
ಅಯೋಧ್ಯೆಯ ಮಂತ್ರಿಗಳು ಧರಿಸಿದ್ದ ದಂಡವು ಈ ಬಗೆಯದೆಂಬುದನ್ನು ಮುನಿಪದಗಳು ಬಣ್ಣಿಸಿದ ಪರಿಯಿದು..

ಶುಚೀನಾಂ ರಕ್ಷಿತಾರಶ್ಚ ನಿತ್ಯಂ ವಿಷಯವಾಸಿನಾಮ್ ||

ದುಷ್ಟರ ವಿಷಯದಲ್ಲಿ ಯಮನ ಮನ..
ಶಿಷ್ಟರ ವಿಷಯದಲ್ಲಿ ಸುಮನಮನ..

ಧರ್ಮಕಂಟಕರಿಗೆ ಭಯಂಕರರು..
ಧರ್ಮಶೀಲರಿಗೆ ಅಭಯಂಕರರು..

ತಪ್ಪು ಕಂಡಲ್ಲಿ ಬೆಂಕಿಯಾಗಿ, ಒಪ್ಪು ಕಂಡಲ್ಲಿ ಬೆಳಕಾಗಿ ಬಾಳಿದರವರು..ಆಳಿದರವರು.!

8 Responses to ಪ್ರೀತಿಯೊಡನೆ ನೀತಿ, ಇದು ಅಯೋಧ್ಯೆಯ ರೀತಿ..!

 1. shwetha m shasthry

  ಹರೇರಾಮ.
  ಗುರುಗಳ ಆಶೀರ್ವಾದದ ಬಲವೊ೦ದ್ದಿದ್ದರೆ ಸಾಕು, ಬಾಳು ನ೦ದನವಾಗಲು ಇನ್ನೇನು ಬೇಕು?

  [Reply]

 2. gopalakrishna pakalakunja

  ರಾಮಾಯಣದ ತಿರುಳ ಎಳೆ ಎಳೆ ಯಾಗಿ ಬಿಡಿಸಿಡುವ ಬಗೆ ಇದು ಅದ್ಭುತ ! ಅಪೂರ್ವ ! ಆದರ್ಶ ವಿಮರ್ಶೆ.
  ಸಾಗರಕ್ಕೆ ,ರಾಮರಾವಣರ ಯುದ್ಧಕ್ಕೆ, ರಾಮಾಯಾಣಕ್ಕೆ ಹೇಗೆ ಉಪಮೆಗಳಿಲ್ಲವೋ ಹಾಗೆ ಶ್ರೀ ಗುರು ಶೈಲಿಯ ಧ್ವನಿ-ವ್ಯಾಖ್ಯಾನ ವಿಶೇಷತೆ ಇದಕೂ.
  “….ನೀತಿಗೆ ಸಲ್ಲದ ಪ್ರೀತಿಯು ಪ್ರೀತಿಯೇ ಅಲ್ಲ..!
  ….ನೀತಿಯಿರುವಲ್ಲಿ ಭೀತಿಗೆ ಎಡೆಯೆಲ್ಲಿ..?
  …..ಮನವೆಂಬ ಅಂತರಂಗ ಮತ್ತು ಮಾತೆಂಬ ಬಹಿರಂಗಗಳ ನಡುವೆ ಸಾಮರಸ್ಯ-ಸಹಚಾರಗಳಿದ್ದರೆ ಅದುವೇ ’ಸತ್ಯ
  …….ದಂಡದಲ್ಲಿ ರೋಷ-ದ್ವೇಷಗಳಿರಲಿಲ್ಲ..ವಿವೇಕವಿತ್ತು..!
  ….ಭಾರತೀಯ ಸಂಸ್ಕೃತಿಯಲ್ಲಿ ದಂಡವೆಂಬುದು ಜೀವಹಿತೈಷಿತೆಯ, ಜೀವಕಾರುಣ್ಯದ ಪ್ರತೀಕ..!
  …..ತಪ್ಪು ಕಂಡಲ್ಲಿ ಬೆಂಕಿಯಾಗಿ, ಒಪ್ಪು ಕಂಡಲ್ಲಿ ಬೆಳಕಾಗಿ ಬಾಳಿದರವರು..ಆಳಿದರವರು.!..”

  ಅದೆಂತಹ ಭಾಗ್ಯಶಾಲಿ ಪ್ರಜೆಗಳೊ…?
  …ವರ್ತಮಾನದ ಮಂತ್ರಿ ಮಾಗಧರ (ಆಢಳಿತ) ತುಳಿತಕ್ಕೊಳಗಾಗುವ ನಾವೆಷ್ಟು…….ವಂತರೊ..?

  [Reply]

 3. K.N.BHAT

  ಹರೇ ರಾಮ…
  ‘ಪ್ರೀತಿ’ಯಲ್ಲಿ ಅದೆಷ್ಟು ಶಕ್ತಿ……!
  ‘ನೀತಿ’ಯುತ ಪ್ರೀತಿಯಲ್ಲಿ ಬದುಕು ಸಾಗಿಸಿದರೆ
  ಅದು ಜೀವ-ದೇವರ ಸಂಗಮಿಸಿ ಬದುಕು ಸಾರ್ಥಕ್ಯಕ್ಕೂ ಮಾಧ್ಯಮ………….
  ಬದುಕಿನ ‘ನೀತಿ’-‘ರೀತಿ’ ಪಾಠವ ನಿತ್ಯ ಅರುಹುವ ಶ್ರೀ ಗುರು ಚರಣಗಳಿಗೆ
  ಅನಂತ ಪ್ರಣತಿಗಳು……

  [Reply]

 4. seetharama bhat

  ಹರೇರಾಮ್,

  ಪ್ರೀತಿಯೊ೦ದಿಗೆ ನೀತಿ ಇರಬೇಕಾದ ರೀತಿ
  ದ೦ಡನೆಯಲ್ಲಿರ ಬೇಕಾದ ಮಾನದ೦ಡ
  ಜೀವ ದೇವರೆಡೆಗೆ ಹೋಗಬೇಕಾದ ಬಾವ
  ರಾಮಾಯಣದ ಈ ಪ್ರಯಾಣವೇ ಪ್ರಮಾಣ

  ಪ್ರಣಾಮಗಳು ಗುರುದೇವಾ

  [Reply]

 5. ಮಂಗ್ಳೂರ ಮಾಣಿ...

  ಪ್ರೀತಿ ನೀತಿಯುಕ್ತವಾಗಿದೆಯೇ ಎನ್ದು ತಿಳಿಯುವುದು ಹೇಗೆ ಗುರುಗಳೇ?
  ನೀತಿ ಬದುಕನ್ನು ಅದರ ಲಕ್ಶದೆಡೆಗೆ ಕೊಂಡೊಯ್ಯುತ್ತದೆ ಎಂದಾದರೆ, ಬದುಕಿನ ಲಕ್ಶ್ಯ ಏನು ಗುರುಗಳೇ?

  [Reply]

 6. Vishwa M S Maruthipura

  ಹರೆರಾಮ……
  ಬಸ್ಸಿನಲ್ಲಿ ಬರೆದ ಬರಹ….”ನಿಮ್ಮ ನೀತಿಗೆ ತಕ್ಕ ನಮ್ಮ ಪ್ರೀತಿ”

  [Reply]

 7. mamata hegde

  ಹರೇ ರಾಮಾ

  Gurudeva illiruva Chalana Shakti mattu Chalaka iveradannu anugrahisi nannannu munnadesu endu prartisuve…

  [Reply]

 8. dattu

  ಪ್ರಭು ಸಂಹಿತೆ,ಮಿತ್ರಸ್ಂಹಿತೆ ಮತ್ತು ಕಾಂತಾ ಸಂಹಿತೆಗಳ ಹದದ ಮಿಶ್ರಣ ಈ ಬದುಕಲು ಕಲಿಸುವ ವಿಧಾನ.
  ಹರೇ ರಾಮ! ಒಂದು ಡಾಟ್(dot) ಇನ್(in) ಆದರೆ,
  ಬದುಕಿನ ವಿಧಾನವೇ ಸುಂದರ!!!

  [Reply]

Leave a Reply

Highslide for Wordpress Plugin