ಕನಸೆಲ್ಲ ನನಸಾಗುವಂತಿದ್ದರೆ….???
ಕಲ್ಪನೆಯೆಲ್ಲ ವಾಸ್ತವವಾಗುವಂತಿದ್ದರೆ..?
ಒಳಗಣ್ಣಿಗೆ ಕಂಡದ್ದು ಹೊರಗಣ್ಣಿಗೂ ಕಾಣುವಂತಿದ್ದರೆ..?
‘ ಅಂದರ್ ರಾಮಾ ಬಾಹರ್ ರಾಮಾ…’
ಕಣ್ಮುಚ್ಚಿದಾಗ ಕಂಡ ಅನಂತ ಸುಂದರಮೂರ್ತಿಯೊಂದು ಕಣ್ಣೆದುರು ಬರುವಂತಿದ್ದರೆ…?
ಹುತ್ತಗಟ್ಟಿದ ಚಿತ್ತದಲ್ಲಿ ಚೈತನ್ಯಮೂರ್ತಿಯನ್ನು ಕಂಡ ಮುನಿಯ ಮನದಲ್ಲಿ ಹುಟ್ಟಿಕೊಂಡ ಪ್ರಶ್ನೆಯಿದು:

ಈ ಕಾಲದಲ್ಲಿ…ಈ ದೇಶದಲ್ಲಿ ಅಂಥವನೊಬ್ಬನಿರಲು ಸಾಧ್ಯವೇ..?
ದೋಷಗಳ್ಯಾವುವೂ ಇಲ್ಲ…!!
ಗುಣಗಳ್ಯಾವುವೂ ಇಲ್ಲದಿಲ್ಲ…!
ಇಂಥಾ ವ್ಯಕ್ತಿತ್ವವೊಂದನ್ನು  ನಾವು ಬದುಕಿರುವ ಭೂಮಿಯಲ್ಲಿ ನಾವು ಬದುಕಿರುವಾಗಲೇ ಕಾಣಲು ಸಾಧ್ಯವೇ..?

ಹಗಲ ಮೊದಲು ರಾತ್ರಿಯಿರುವಂತೆ……!
ಹಸಿವು ತೃಪ್ತಿಗೆ ಪೀಠಿಕೆಯಾಗಿರುವಂತೆ….!
ಮುಕ್ತಿಯ ಮೊದಲು ಬಂಧನವಿರುವಂತೆ..!!
ಉತ್ತರವೊಂದು ಉದಯಿಸಬೇಕಾದರೆ ಪೂರ್ವದಲ್ಲಿ ಪ್ರಶ್ನೆಯೊಂದು ಪ್ರಾದುರ್ಭವಿಸಲೇಬೇಕಲ್ಲವೇ..?

ಆದರೆ ಮುನಿಯ ಈ ಪ್ರಶ್ನೆಗೆ ಲಭಿಸಿದ್ದು ಅಂತಿಂಥ ಉತ್ತರವಲ್ಲ…!

ಜ್ಯೋತಿಯಲ್ಲಿ ಸೇರಿದವು ದಿವಿ-ಭುವಿಗಳು...

ಜ್ಯೋತಿಯಲ್ಲಿ ಸೇರಿದವು ದಿವಿ-ಭುವಿಗಳು...

ಲೋಕೋತ್ತರವಾದ ರಾಮಾಯಣ…!!!

ಆ ಪ್ರಶ್ನೆಯಲ್ಲಿ ಅದೆಂಥ ಸೆಳೆತವಿತ್ತೋ..?
ಅದಾವ ಮಿಡಿತವಿತ್ತೋ..?
ಅದೇನು ತುಡಿತವಿತ್ತೋ..?
ಉತ್ತರಿಸಲು ದೇವಲೋಕವೇ ಧರೆಗಿಳಿಯಿತು..!!!

ನರನ ಪ್ರಶ್ನೆ ನಾರಾಯಣನನ್ನೇ ಮುಟ್ಟಿರಬೇಕು…!
ನಾರಾಯಣ ನಾರಾಯಣ ‘ ನಾಮೋಚ್ಚಾರದೊಡನೆ ನಾರದರು ನಾಕದಿಂದಿಳಿದು ಬಂದರು ವಾಲ್ಮೀಕಿಯೆಡೆಗೆ..!
ವಾಲ್ಮೀಕಿಯ ಮೂಲಕ ಭುವಿ ಕೇಳಿದ ಪ್ರಶ್ನೆಗೆ ನಾರದರ ಮೂಲಕ ದಿವಿಯ ಉತ್ತರ..
ಅದುವೇ ರಾಮಾಯಣ..!

ರಾಮಾಯಣವೆಂದರೆ ದಿವಿಭುವಿಗಳ ಸಂಗಮದ ಕಥೆ…
ದಿವಿಯಿಂದ ಭುವಿಗಿಳಿದು ಬಂದವನು ಶ್ರೀರಾಮ…!
ದೇವಲೋಕದಿಂದ ದೇವದೂತ ತಂದಿತ್ತ ದಿವ್ಯಪಾಯಸದಿಂದಲಲ್ಲವೇ ಶ್ರೀರಾಮನ ಆವಿರ್ಭಾವ…!
ಭುವಿಯಿಂದ ಮೇಲೆದ್ದು ಬಂದವಳು ಸೀತೆ..!
ಸಂಸ್ಕೃತದಲ್ಲಿ ಸೀತೆಯೆಂದರೆ ನೇಗಿಲ ರೇಖೆ..!
ಯಜ್ಞಸಮಯದಲ್ಲಿ ಭೂಮಿಯನ್ನುಳುವಾಗ ಜನಕನಿಗೆ ನೇಗಿಲರೇಖೆಯಲ್ಲಲ್ಲವೇ ಆಕೆ ಲಭಿಸಿದ್ದು…!!
ಅವರೀರ್ವರ ಸಮಾಗಮದ ಕಥೆಯೇ ರಾಮಾಯಣ…!!!

ಆದುದರಿಂದಲೇ ಇರಬೇಕು ವಾಲ್ಮೀಕಿ – ನಾರದರ ರೂಪದಲ್ಲಿ ದೇವಲೋಕ-ಭೂಲೋಕಗಳು ಸಂಗಮಿಸಿದಾಗ ರಾಮಾಯಣದ ಅವತಾರವಾಯಿತು…

ರಾಮಬಾಣ ;
ಕೌಸಲ್ಯಾ-ದಶರಥರ ಸಂಬಂಧದಲ್ಲಿ ಜಗತ್ತಿಗೆ ಶ್ರೀರಾಮ ಲಭಿಸಿದಂತೆ…
ವಾಲ್ಮೀಕಿ-ನಾರದರ ಸಂವಾದದಲ್ಲಿ ಜೀವಲೋಕಕ್ಕೆ ಶ್ರೀರಾಮಾಯಣದ ಅಲಭ್ಯಲಾಭವಾಯಿತು…!
Facebook Comments