ಶ್ರೀ ಮೂಲಾಪುರ ಪರಮೇಶ್ವರ ದೇವಸ್ಥಾನ ಮೂಳೂರು

ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲೂಕು ಬಾಳೆಪುಣಿ ಗ್ರಾಮದ ಮೂಳೂರು (ಮಂಗಳೂರಿನಿಂದ ಸುಮಾರು ೨೭ಕಿ.ಮೀ ದೂರ)ನಲ್ಲಿರುವ ಶ್ರೀ ಮೂಲಾಪುರ ಪರಮೇಶ್ವರ ದೇವಸ್ಥಾನವನ್ನು ೧೦ನೆಯ ಶತಮಾನದಲ್ಲಿ ಈ ಪ್ರದೇಶವನ್ನಾಳಿದ ಕಿಲ್ಲವಂಶದ ಕನ್ನಯ್ಯ ಮತ್ತು ವಿಕ್ರಮಾದಿತ್ಯ ಎಂಬ ರಾಜರು ಕಟ್ಟಿಸಿದರು. ಜೈನರ ಆಡಳಿತದಲ್ಲಿ ಬಹಳ ವಿಜೃಂಭಣೆಯಿಂದ ಪೂಜೆ ಉತ್ಸವಾದಿಗಳು ನಡೆಯುತ್ತಿದ್ದು ಮಹಾಕ್ಷೇತ್ರವಾಗಿ ಮೆರೆದು ಗ್ರಾಮದೇವಸ್ಥಾನವಾಗಿ ಬೆಳೆಯಿತು.

ಅನ್ಯರ ಆಕ್ರಮಣದಿಂದ ಶಿಥಿಲಗೊಂಡು ಪಾಳುಬಿದ್ದ ಈ ದೇವಾಲಯವನ್ನು ೧೯೫೩ನೇ ಇಸವಿಯಲ್ಲಿ ಮೂಳೂರು ಗಣಪತಿ ಭಟ್ಟರು ಪುನರ್ನಿರ್ಮಾಣ ಮಾಡಿ ಬ್ರಹ್ಮಕಲಶಾದಿ ಕಾರ್ಯಗಳನ್ನು ನೆರವೇರಿಸಿದರು. ಈ ಸಮಯದಲ್ಲಿ ಅಲ್ಲೆ ಇದ್ದ ಪುರಾತನ ಶಿವಲಿಂಗವನ್ನು ಪ್ರತಿಷ್ಠಾಪಿಸಿದರು. ಇದರೊಂದಿಗೆ ಮಹಾಗಣಪತಿ ಮತ್ತು ಪರಿವಾರ ದೈವ ವೈದ್ಯನಾಥನನ್ನು ಪ್ರತಿಷ್ಠಾಪಿಸಿ ನಿತ್ಯಪೂಜೆ, ಪರ್ವದಿನದ ಆಚರಣೆಗಳನ್ನು ನಿರ್ವಹಿಸಿಕೊಂಡು ಬಂದರು. ಗಣಪತಿ ಭಟ್ಟರ ತರುವಾಯ ಅವರ ಕುಟುಂಬಿಕರು ಇದನ್ನು ಮುಂದುವರಿಸಿದರು. ಈ ದೇವಸ್ಥಾನದ ಗರ್ಭಗುಡಿಯ ಬಾಗಿಲು ಪಶ್ಚಿಮ ದಿಕ್ಕಿಗೆ ಇದೆ.

೨೦೦೫ನೇ ಇಸವಿಯಲ್ಲಿ ಅಷ್ಠಬಂಧ ಬ್ರಹ್ಮಕಲಶೋತ್ಸವವನ್ನು ನಡೆಸುವ ಸಂಕಲ್ಪದೊಂದಿಗೆ ಅಷ್ಠಮಂಗಲ ಪ್ರಶ್ನೆಯನ್ನಿಟ್ಟು ಅದರಲ್ಲಿ ಕಂಡುಬಂದ ಪರಿಹಾರಕಾರ್ಯಗಳನ್ನು ಮುಂದುವರಿಸಲು ಸಾಧ್ಯವಾಗದೆ ಪುನಃ ಚಿಂತನೆ ಮಾಡಿದಾಗ, ಈ ದೇವಾಲಯವನ್ನು ಶ್ರೀಗುರುಗಳಿಗೆ ಸಮರ್ಪಿಸಿ ಗುರುಗಳ ಆದೇಶದಂತೆ ಕೆಲಸ ಕಾರ್ಯಗಳನ್ನು ಮಾಡುವುದು ಸೂಕ್ತವೆಂದು ಕಂಡು ಬಂದು ಶ್ರೀ ಸಂಸ್ಥಾನ ಗೋಕರ್ಣ ಮಠಾಧೀಶರಾದ ಶ್ರೀ ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳನ್ನು ೨೯.೦೫.೦೭ರಂದು ಬಂಟ್ವಾಳ ತಾಲೂಕು ಕೈರಂಗಳ ಗ್ರಾಮದ ಪುಣ್ಯಕೋಟಿ ನಗರದಲ್ಲಿ ಸಂಪರ್ಕಿಸಿ ವಿಷಯ ಪ್ರಸ್ತಾಪಿಸಲಾಯಿತು. ೩೦.೦೫.೦೭ ರಂದು ದೇವಸ್ಥಾನದಲ್ಲಿ ಪಾದುಕಾ ಪೂಜೆಯನಂತರ ಆಶೀರ್ವಚನ ನೀಡಿದ ಶ್ರೀಗಳು ದೇವಸ್ಥಾನವನ್ನು ವಹಿಸಿಕೊಳ್ಳುವ ಬಗ್ಗೆ ಮೌಖಿಕ ಆದೇಶ ನೀಡಿದರು.

೨೭.೦೮.೨೦೦೮ರಂದು ಶ್ರೀ ಪರಮೇಶ್ವರ ದೇವಸ್ಥಾನದ ಮತ್ತು ಇದರ ಸುತ್ತುಮುತ್ತಲಿನ ೩ ಎಕ್ರೆ ೧೬ಸೆಂಟ್ಸ್ ವಿಸ್ತೀರ್ಣದ ಜಾಗವನ್ನು ದಿ| ಮೂಳೂರು ಗಣಪತಿ ಭಟ್ಟರ ಕುಟುಂಬಿಕರು ದಾನಪತ್ರ ದಸ್ತಾವೇಜಿನ ಮುಖಾಂತರ ಶ್ರೀಗಳಿಗೆ ವಹಿಸಿಕೊಟ್ಟರು. ೦೫.೧೨.೨೦೦೮ರಂದು ಗೋಕರ್ಣ ಕ್ಷೇತ್ರದಲ್ಲಿ ಈ ದಾನಪತ್ರವನ್ನು ಘೋಷಿಸಲಾಯಿತು.

ಸಂಪರ್ಕ ವ್ಯಕ್ತಿ:

ಶಂಕರಯ್ಯ ಎಂ. ಮೂಳೂರು ಮನೆ.

ಅಂಚೆ & ಗ್ರಾಮ: ಬಾಳೆಪುಣಿ,

ಬಂಟ್ವಾಳ ತಾಲೂಕು.

ದ.ಕನ್ನಡ ೫೭೪೧೫೩

ಮೊ: ೯೮೪೫೭೮೯೨೭೧

Facebook Comments