|| ಹರೇರಾಮ ||
ವಂಶವೆಂದರೆ ದೇವರ ದೀಪೋತ್ಸವವಿದ್ದಂತೆ..!
ದೀಪೋತ್ಸವದಲ್ಲಿ ದೇವರ ನಂದಾದೀಪದಿಂದ ದೀಪವೊಂದನ್ನು ಹೊತ್ತಿಸಿ,
ತದನಂತರ ಒಂದು ದೀಪದಿಂದ ಇನ್ನೊಂದು, ಅದರಿಂದ ಮತ್ತೊಂದು
ಎಂಬಂತೆ ಸಾವಿರಾರು ದೀಪಗಳನ್ನು ಬೆಳಗುವಂತೆ,
ಈಶ್ವರನಿಂದ ಆರಂಭಿಸಿ ನಮ್ಮವರೆಗೆ ಬೆಳಗಿ ಬರುವ
ಚೇತನದೀಪಮಾಲಿಕೆಯೇ ಅಲ್ಲವೇ ವಂಶವೆಂದರೆ..?

ವಂಶವೆಂದರೆ ನಮ್ಮನ್ನು ದೇವರೊಡನೆ,
ಪ್ರಕೃತಬಿಂದುವನ್ನು ಪ್ರಥಮಬಿಂದುವಿನೊಡನೆ ಬೆಸೆಯುವ ಚೇತನ ಸೇತು..
ಇದು ಅರ್ಥವಾಗಬೇಕಾದರೆ ನಾವು ಹಿಂದೆ ಹಿಂದೆ ಹೋಗಬೇಕು..
ನಮ್ಮ ಹಿಂದೆ ನಮ್ಮ ತಂದೆ-ತಾಯಿಗಳು,
ನಮ್ಮ ತಂದೆ-ತಾಯಿಗಳ ಹಿಂದೆ ಅವರ ತಂದೆ-ತಾಯಿಗಳು,
ಅವರ ಹಿಂದೆ ಅವರ ತಂದೆ-ತಾಯಿಗಳು,
ಹೀಗೆಯೇ ಹಿಂದೆ ಹಿಂದೆ ಹೋದರೆ,
ಮೂಲದಲ್ಲಿ ವಿಶ್ವಜನನೀ-ಜನಕರು…!

ಪಿತೃಗಳೆಂದರೆ ಪರಸ್ಪರ ಬೆಸೆದುಕೊಂಡು, ನಮ್ಮ- ಈಶ್ವರನ ಮಧ್ಯೆ ಸಂಪರ್ಕ ಕಲ್ಪಿಸುವ ಸಜೀವ ಕೊಂಡಿಗಳು.
ಸಂಸಾರದ ನದಿಯ ಈಚೆಯ ದಡದಲ್ಲಿ ಜೀವನಿದ್ದರೆ..
ಈಶ್ವರನಿರುವುದು ಆಚೆಯ ದಡದಲ್ಲಿ..
ಎರಡೂ ದಡಗಳನ್ನು ಬೆಸೆಯುವ, ಚೇತನಗಳಿಂದಲೇ ನಿರ್ಮಿತವಾದ ಸೇತುವೆಯೇ ವಂಶ..

ವಂಶವೆಂದರೆ ಸೃಷ್ಟಿಯ ಮೊಟ್ಟಮೊದಲ ಶಕ್ತಿಯು ನಮ್ಮವರೆಗೆ ಹರಿದು ಬರುವ ಚೈತನ್ಯ ತಂತು.
ಭಾರತೀಯ ಸಂಸ್ಕೃತಿಯಲ್ಲಿ ಕುಲಕ್ಕೆ ಅದೆಷ್ಟು ಪ್ರಾಶಸ್ತ್ಯ..!
ಏಕೆಂದರೆ ಕುಲವೆಷ್ಟು ಶುದ್ಧವೋ ನಮ್ಮೆಡೆಗೆ ಈಶ್ವರನ ಚೈತನ್ಯದ ಹರಿವೂ ಅಷ್ಟೇ ನಿರಾತಂಕ.
ನಡುನಡುವೆ ಜನಿಸುವ ಕಲಂಕಿತ ವ್ಯಕ್ತಿತ್ವಗಳು ಚೈತನ್ಯದ ಹರಿವಿಗೆ ತಡೆಗಳು..

ಶ್ರೀರಾಮನುದಯಿಸಿದ್ದು, ಶ್ರೀರಾಮಾಯಣ ಘಟಿಸಿದ್ದು, ಸಾಟಿಯೇ ಇಲ್ಲದ ಸೂರ್ಯವಂಶದಲ್ಲಿ..
ಅದೆಷ್ಟು ಪುರಾತನವಾದ ವಂಶವೆಂದರೆ,ಅದರ ಆದಿಯನ್ನು ಕಾಣಬೇಕೆಂದರೆ ಸೃಷ್ಟಿಪೂರ್ವಾವಸ್ಥೆಗೇ ಹೋಗಬೇಕು..!

ಅಂದು ಸೃಷ್ಟೀಶ್ವರನಿದ್ದನು..
ಆದರೆ ಸೃಷ್ಟಿಯಿರಲಿಲ್ಲ…!
ಕಾಲವೇ ಹುಟ್ಟಿರದ ಕಾಲವದು..!
ನೀರ ಮೇಲೆ ನಾರಾಯಣನೊಬ್ಬನೇ ಪವಡಿಸಿದ್ದನಂದು..
ಬದುಕಿನ ಒಂದನೇ ತತ್ತ್ವಕ್ಕೂ ಒಂಟಿತನ ಬೇಸರವೆಸಿತೇನೋ…?
ಬಹುವಾಗಬಯಸಿತದು..ಜಗವಾಗಬಯಸಿತದು..!
ಮೊದಲ ತತ್ವದ ಆ ಮೊದಲ ಕಾಮನೆಯರಳಿತು ಕಮಲವಾಗಿ..
ಸೃಷ್ಟಿಯ ಪ್ರಥಮಾಂಕುರವೆನಿಸಿದ ಆದಿಕಮಲದಲ್ಲಿ ಆವಿರ್ಭವಿಸಿದನು ವಿಶ್ವಸ್ರಷ್ಟಾ..
ಯಂತ್ರಗಳಿಲ್ಲದೆ..
ಕಾರ್ಮಿಕರಿಲ್ಲದೆ..
ಕಟ್ಟಡಗಳಿಲ್ಲದೆ..
ಕಚ್ಛಾವಸ್ತುಗಳಿಲ್ಲದೆ..
ಆರಂಭವಾಯಿತು ಸೃಷ್ಟಿಯೆಂಬ ಕಾರ್ಖಾನೆ…!!

ಆದಿನಾರಾಯಣನ ಕಾಮನಾಮಾತ್ರದಿಂದ ಕಮಲ-ಕಮಲಜರು ಸಂಭವಿಸಿದರೆ,
ಕಮಲಜನ ಸಂಕಲ್ಪಮಾತ್ರದಿಂದ ಮರೀಚಿಯೇ ಮೊದಲಾದ ಸೃಷ್ಟಿಕಾರಕರಾದ,
ಸೃಷ್ಟಿಗುಪಕಾರಕರಾದ ಶಕ್ತಿರೂಪದ ವ್ಯಕ್ತಿಗಳು ಜನಿಸಿದರು..

ಸೃಷ್ಟಿವೃಕ್ಷದ ಕಾಂಡಸ್ವರೂಪವಾದ ಕಶ್ಯಪರು ಮರೀಚಿಯಿಂದ ಸಂಭವಿಸಿದರು..
ಧರ್ಮಸಂತಾನವನ್ನು ಬಯಸಿದ ಕಶ್ಯಪರು ಅದಿತಿ, ದಿತಿ, ದನು ಮೊದಲಾದ ದಕ್ಷಸುತೆಯರನ್ನು ವರಿಸಿದರು..
ಬೇರೆ ಬೇರೆ ವಿಧವಾದ ಪಾತ್ರೆಗಳಲ್ಲಿ ನಿಹಿತವಾದ ನೀರು ಬೇರೆ ಬೇರೆ ಆಕಾರಗಳನ್ನು ತಾಳುವಂತೆ ..
ಪರಮರ್ಷಿಗಳಾದ ಕಶ್ಯಪರ ಮಹಾತೇಜಸ್ಸು ಬೇರೆ ಬೇರೆ ಪತ್ನಿಯರಲ್ಲಿ ನಿಹಿತವಾದಾಗ ಬೇರೆ ಬೇರೆ ರೂಪವನ್ನು ತಾಳಿತು..
ಅದಿತಿಯಿಂದ ಆದಿತ್ಯರು (ದೇವತೆಗಳು),
ದಿತಿಯಿಂದ ದೈತ್ಯರು,
ದನುವಿನಿಂದ ದಾನವರು,
ಕದ್ರುವಿನಿಂದ ಸರ್ಪಗಳು,
ವಿನತೆಯಿಂದ ಅರುಣ- ಗರುಡರೇ ಮೊದಲಾದ ಪಕ್ಷಿಗಳು..
ಹೀಗೆ ಬಗೆಬಗೆಯ ಜೀವ ಸಂತತಿಗಳು ಕಶ್ಯಪ ಕುಟುಂಬದಿಂದಲೇ ಉಗಮಿಸಿದವು..!

ಅದಿತಿ ಕಶ್ಯಪರ ಅಪೂರ್ವ ತೇಜಸ್ಸುಗಳ ಸಮಾವೇಶದಿಂದ ಆವಿರ್ಭವಿಸಿದವನೇ ಭಗವಾನ್ ಭಾಸ್ಕರದೇವ..
ಬೆಳಕಿನ ರಾಶಿಯೇ ಆದ ಆತನಿಂದ ಅತಿಶಯವಾಗಿ ಬೆಳಗುವ ವಂಶವೊಂದು ಅನಾವರಣಗೊಂಡಿತು..

ಅದುವೇ ತ್ರಿಲೋಕ ವಿಖ್ಯಾತವಾದ ಸೂರ್ಯವಂಶ..!

|| ಹರೇರಾಮ ||

Facebook Comments