ಗೋಕರ್ಣ.ಮಾ೯. ಪತಿಯಾದ ಮಹರ್ಷಿಗೌತಮರ ಶಾಪಕ್ಕೊಳಗಾಗಿ ಯಾರಕಣ್ಣಿಗೂ ಬೀಳದೆ ಅದೃಶ್ಯವಾಗಿದ್ದ ಅಹಲ್ಯೆಯನ್ನು ಉದ್ಧರಿಸಿ ಮಹಾತಪಸ್ವಿನಿಯಾದ ಆಕೆಯ ಪಾದವನ್ನು ಸ್ಪರ್ಶಿಸುವ ಮೂಲಕ ಆಕೆ ಪರಮಪವಿತ್ರಳಾದವಳು, ಕಳಂಕಿತಳಲ್ಲ ಎಂಬುದನ್ನು ಲೋಕಕ್ಕೆ  ತೋರಿಸಿದವನು ಪ್ರಭುಶ್ರೀರಾಮಚಂದ್ರ.ಅರಿತೋ ಅರಿಯದೆಯೋ ಬದುಕಿನಲ್ಲಿ ಪಾಪಗಳು ಘಟಿಸುವುದು ಸಹಜ. ಆದರೆ ಪಾಪವು ಪಶ್ಚಾತ್ತಾಪದಿಂದ ತಪಸ್ಸಿನಿಂದ ದೂರಾಗುತ್ತದೆ. ಆದ್ದರಿಂದ ಪಾಪವನ್ನು ದೂರಮಾಡಬೇಕೇ ಹೊರತು ಪಾಪಿಯನ್ನಲ್ಲ ಎಂಬ ಸಂದೇಶ ಈ ಪ್ರಕರಣದಲ್ಲಿ ಧ್ವನಿತವಾಗುತ್ತದೆ ಎಂದು ಪರಮಪೂಜ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳು ಅಭಿಪ್ರಾಯಪಟ್ಟಿದ್ದಾರೆ.
9th 1
ಶಿವರಾತ್ರಿಯ ಪುಣ್ಯಪರ್ವದ ಸಂದರ್ಭದಲ್ಲಿ ಗೋಕರ್ಣದ ಸಾಗರತೀರದ ಮಹರ್ಷಿ ದೈವರಾತವೇದಿಕೆಯಲ್ಲಿ ಆಯೋಜಿತವಾದ “ಶ್ರೀರಾಮಕಥಾ” ದ ಅಂತಿಮದಿನವಾದ ಇಂದು ರಾಮಾಯಣದ ಅಹಲ್ಯಾಪ್ರಕರಣವನ್ನು ಕುರಿತು ಪ್ರವಚನವನ್ನು ಅನುಗ್ರಹಿಸುತ್ತಿದ್ದ ಪೂಜ್ಯಶ್ರೀಗಳು ಶ್ರೀರಾಮನ ಸ್ವಭಾವವೇ ಹಾಗೆ. ಸಕಲಜೀವಕಾರುಣ್ಯ ಅವನಿಗೆ ಜನ್ಮಜಾತ. ಯಾವುದೇ ಸುಖ-ಸಂತೋಷವನ್ನು ತಾನು ಪಡೆಯುವ ಮೊದಲು ಅದನ್ನು ತನ್ನವರಿಗೆ ಕೊಟ್ಟು ಆಮೇಲೆ ತಾನು ಅದನ್ನು ಅನುಭವಿಸುವ ಮಹಾಗುಣ ಅವನದು. ಆದ್ದರಿಂದಲೇ ತಾನು ಸೀತೆಯಕೈಹಿಡಿದು ಮದುವೆಯಾಗಉವ ಮೊದಲು ಮುರಿದುಬಿದ್ದಿದ್ದ ಗೌತಮ-ಅಹಲ್ಯೆಯರ ಸಂಸಾರವನ್ನು ಸರಿಪಡಿಸಿದ. ತಾನು ಸಿಂಹಾಸನವನ್ನೇರುವ ಮೊದಲು ಸುಗ್ರೀವನಿಗೆ ಶರಣುಬಂದವಿಭೀಷಣನಿಗೆ ಸಿಂಹಾಸನವನ್ನೇರಿ ರಾಜ್ಯವನ್ನಾಳುವ ಅಧಿಕಾರವನ್ನು ಕೊಡಿಸಿ ನಂತರ ತಾನು ಚಕ್ರವರ್ತಿಯಾಗಿ ಮೂರ್ಧಾಭಿಷಿಕ್ತನಾದ. ಕರೂಣಾಳುವಾದ ಶ್ರೀರಾಮಚಂದ್ರನ ಬದುಕಿನ ಪೂರ್ತಿ ಇಂತಹಪ್ರಸಂಗಗಳೇ ತುಂಬಿವೆ. ಹೃದಯಂಗಮ ವಾದ ಇಂತಹ ಅನೇಕಘಟನೆಗಳನ್ನು ನೇರವಾಗಿ ಇನ್ನು ಕೆಲವೊಮ್ಮೆ ಧ್ವನಿಯಮೂಲಕ ಮಹರ್ಷಿವಾಲ್ಮೀಕಿ ರಾಮಾಯಣದಲ್ಲಿ ನಿರೂಪಿಸಿದ್ದಾರೆ.
9th 2
ಇಂದು ಅತ್ಯಂತರೂಕ್ಷವಾದ ಕಾಲಘಟ್ಟದಲ್ಲಿ ನಮ್ಮ ಜೀವನ ಸಾಗಿದೆ.ಸಾತ್ವಿಕವಾದಮೃದುಸ್ಪರ್ಶದ ಜ್ಞಾನವನ್ನು ಕಳೆದುಕೊಳ್ಳು ತ್ತಿದ್ದೇವೆ. ದೂರವಾಗುತ್ತಿರುವ ಮಾನವೀಯವಾದ ಮೌಲ್ಯಗಳನ್ನು ಬದುಕಿನಸಫಲತೆಯನ್ನು ಪಡೆಯಲು ರಾಮಾಯಣ ಪ್ರೇರಣೆ ನೀಡುತ್ತದೆ ಎಂದೂ ನುಡಿದ ಪೂಜ್ಯಶ್ರೀಗಳು ಜೀವಸಂಸ್ಕಾರಕ್ಕೆ ರಾಮನಾಮ ಬೇಕು ಹಾಗೆಯೇ ಜೀವನದ ಪರಿಶುದ್ಧಿಗೆ ರಾಮಾಯಣ ಬೇಕು ಎಂದೂ ನುಡಿದರು.

9th 3

ಶ್ರೀರಾಮಕಥಾ ವೃಂದದ ಕಲಾವಿದರಾದ ಶ್ರೀಪಾದ ಭಟ್, ಶ್ರೀ ಟಿ.ವಿ.ಗಿರಿ, ಕುಮಾರಿ ದೀಪಿಕಾ ಭಟ್, ಕುಮಾರಿ ಪೂಜಾ,  ಇವರ  ಸುಮಧುರವಾದ ತುಂಬುಕಂಠದ ಗಾಯನ, ಪ್ರಸಿದ್ಧ ತಬಲಾವಾದಕ ಶ್ರೀ ಗೋಪಾಲಕೃಷ್ಣ ಹೆಗಡೆ ಮತ್ತು ಕುಮಾರಿ ವಿಜೇತಾ ಇವರ ತಬಲಾ, ಶ್ರೀ ಗಣೇಶರ ವೇಣುವಾದನ, ಉದಯಭಂಡಾರಿಯವರ ಕೀಬೋರ್ಡ್, ಶ್ರೀ ಲೀಲಾಶುಕರ  ಮನೋಹರ ಹಾರ್ಮೋನಿಯಂ ವಾದನಗಳು ರಾಮಕಥೆಯ ಶ್ರೋತೃಗಳಿಗೆ ಅಪೂರ್ವವಾದ ಆನಂದವನ್ನು ನೀಡಿದವು. ನೀರ್ನಳ್ಳಿ ಗಣಪತಿಯವರ ಆಶುಚಿತ್ರ ಜನರ ಗಮನಸೆಳೆಯಿತು.  ಶ್ರೀಪಾದ ಹೆಗಡೆ ಹಡಿನಬಾಳ, ವಿಷ್ಣುಭಟ್ ಮೂರೂರು, ಈಶ್ವರಭಟ್ ಕಟ್ಟೆ, ವಿಶ್ವೇಶ್ವರ ಹೆಗಡೆ ದಾಮೋದರ ನಾಯಕ ಕುಮಾರಿ ಪೂರ್ಣಿಮಾ ಶ್ರೀಶ ಹೆಗಡೆ ಮೊದಲಾದ ಕಲಾವಿದರ ಸಂಯೋಜನೆಯಲ್ಲಿ ಶ್ರೀ ಶಂಕರನಾರಾಯಣ ಉಪಾಧ್ಯಾಯ ಇವರ ನಿರ್ದೇಶನದಲ್ಲಿ “ಸೀತಾಕಲ್ಯಾಣ”ಎಂಬ ಸುಂದರ ರೂಪಕವು ಪ್ರದರ್ಶಿತವಾಯಿತು.

ಪ್ರಾರಂಭದಲ್ಲಿ ಮಾಜಿಶಾಸಕ ಡಾ.ಎಮ್.ಪಿ.ಕರ್ಕಿ, ತಾಲೂಕು ಪಂಚಾಯ್ತಿ ಅಧ್ಯಕ್ಷೆ ಶ್ರೀಮತೆ ಭಾರತೀ ದೇವತೆ, ಶ್ರೀ ಪರಶಿವಮೂರ್ತಿ, ಕೊಲ್ಕತಾದ ಇಮಾಮಿ ಸಮೂಹ ಸಂಸ್ಥೆಗಳ ಮುಖ್ಯಸ್ಥರಾದ ಶ್ರೀ ರಾಧೇಶ್ಯಾಂ ಗೋಯೆಂಕಾ, ಶ್ರೀ ಎಮ್.ಪಿ.ಸೋನಿಕಾ ಮೊದಲಾದ ಗಣ್ಯರು ಶ್ರೀರಾಮಾಯಣ ಗ್ರಂಥಕ್ಕೆ ಮಾಲಾರ್ಪಣೆ ಮಾಡಿದರು. ವೇ.ಭಾಲಕೃಷ್ಣ ಭಟ್ಟ ಜಂಬೆ ದಂಪತಿಗಳು ಪೂಜ್ಯಶ್ರೀಗಳಿಗೆ ಫಲಕಾಣಿಕೆಯನ್ನು ಸಮರ್ಪಿಸಿದರು.

Facebook Comments Box