ಚಿಂತೆಗೂ ಚಿತೆಗೂ ಅಂತರ ಸೊನ್ನೆ! ಹಾಗೆ ನೋಡಿದರೆ ಚಿತೆಯೇ ಚಿಂತೆಗಿಂತ ವಾಸಿ! ಚಿತೆಯು ದಹಿಸುವುದು ಸತ್ತ ಬಳಿಕ; ಚಿಂತೆಯು ವ್ಯಕ್ತಿಯನ್ನು ಜೀವಂತ ದಹಿಸುತ್ತದೆ! ಚಿತೆಯು ಸುಡುವುದು ಹೊರಗಿನಿಂದ; ಚಿಂತೆಯು ಹಾಗಲ್ಲ, ಒಳಗಿನಿಂದಲೇ ಸುಟ್ಟುರುಹಿ ವ್ಯಕ್ತಿಯನ್ನು *ಹತಪ್ರಾಯನನ್ನಾಗಿಸಿಬಿಡುತ್ತದೆ. ಚಿತೆಯು ಸುಡುವಾಗ ನೋವೇ ಇಲ್ಲ; ಚಿಂತೆಯು ಸುಡುವಾಗ ನೋವೇ ಎಲ್ಲ!

ಇವೆಲ್ಲಕ್ಕಿಂತ ಮಿಗಿಲಾಗಿ, ಚಿಂತೆಯು ತನ್ನೊಡನೆ ತರುವ ಶಾಪವೊಂದಿದೆ; ಇದಿರಿರುವ ಸುಖ ಪಡಲೂ ಚಿಂತೆ ಬಿಡದು! ಯಾವಾಗಲೂ ಮುದವೀಯುವ ನೃತ್ತ~ಗೀತಗಳು ಚಿಂತಾಗ್ರಸ್ತವಾದ ಹೃದಯಕ್ಕೆ ಹಿತವೆನಿಸವು; ಮುಂದೆ ಮೃಷ್ಟಾನ್ನವೇ ಇದ್ದರೂ ಒಳಗೆ ಚಿಂತೆ ಕವಿದಾಗ ಅದು ರುಚಿಯೆನಿಸದು!

ಅದು ದೇವತೆಗಳ ಈಗಿನ ಸ್ಥಿತಿ! ವಿಧಿಬದ್ಧವಾಗಿಯೇ ಸಿದ್ಧವಾದ, ಪುತ್ರಕಾಮೇಷ್ಟಿಯ ಪರಮೋತ್ಕೃಷ್ಟವಾದ ಹವಿಸ್ಸು ಅವರ ಮುಂದಿದೆ; ಆದರೆ ಚಿಂತಾಕ್ರಾಂತ~ಸ್ವಾಂತರಾದ* ದೇವತೆಗಳಿಗೆ ಅದು ರುಚಿಸುತ್ತಿಲ್ಲ!

ನರರ ಚಿಂತೆಗಳ ಪರಿಹರಿಸುವ ದೇವರುಗಳಿಗೂ ಚಿಂತೆಯೇ!?

ಅಹುದು! ದೇವತೆಗಳಿಗೆ ದಶಕಂಠನೆಂಬ ದೇವಕಂಟಕನ ಚಿಂತೆ! ಯಾರವನು ದಶಕಂಠ? ಬ್ರಹ್ಮರ್ಷಿ ವಿಶ್ರವಸರಿಂದ ರಾಕ್ಷಸಿ ಕೈಕಸಿಯಲ್ಲಿ ಜನಿಸಿದವನು; ತಂದೆಯ ತಪಃಶಕ್ತಿಯನ್ನು ಪಡೆದವನು, ತಾಯಿಯ ರಾಕ್ಷಸತ್ವವನ್ನು ಮೈಗೂಡಿಸಿಕೊಂಡವನು! ಸಾಮರ್ಥ್ಯ ತಂದೆಯ ಕುಲದಿಂದ; ಸ್ವಭಾವ ತಾಯಿಯ ಕುಲದಿಂದ! ತನ್ನ ರಾಕ್ಷಸ-ರಟ್ಟೆಗಳೆಡೆಯಲ್ಲಿ ನಲುಗಿ, ಮೂರು ಲೋಕಗಳೂ ಏಕಕಂಠದಿಂದ ಚೀತ್ಕರಿಸುವಂತೆ ಮಾಡಿದವನವನು!

ಬಿಸಿಲ ಬೇಗೆಯಿಂದ ಬಳಲಿ ಬಂದು ಆಶ್ರಯಿಸಿದವರಿಗೆ ಪರಿಮಳದ ನೆರಳಿತ್ತು ತಂಪೆರೆವುವು ಚಂದನದ ವೃಕ್ಷಗಳು; ಅದುವೇ ಅಲ್ಲವೇ ದೇವತ್ವವೆಂದರೆ? ಅಂತೆಯೇ ಬದುಕಿನ ಬವಣೆಯ ಬೇಗೆಯಲ್ಲಿ ಬಸವಳಿದು ಬಂದು ಆಶ್ರಯಿಸಿದವರಿಗೆ ಆಶೀರ್ವಾದದ ಆಸರೆಯಿತ್ತು ತಂಪೆರೆವವರು ದೇವತೆಗಳು.
ಆದರೆ ಕಾಡ್ಗಿಚ್ಚಿನ ಗುಣ ಬೇರೆ; ಅದಕ್ಕೆ ಸುಡುವುದೊಂದೇ ಗೊತ್ತು! ಚಂದನವೂ ಅದಕ್ಕೆ ಇಂಧನವೇ! ಅಂತೆಯೇ ದುರ್ಜನರು; ಸತ್ಪುರುಷರನ್ನು ಕಾಡುವುದು ಅವರಿಗೆ ಜೀವನದ ವ್ರತ! ಚಂದನವನಕ್ಕೆ ಕಾಡ್ಗಿಚ್ಚು ಮಹಾಚಿತೆಯಾದರೆ, ದೇವತೆಗಳೆಂಬ ನಂದನವನಕ್ಕೆ ರಾವಣನೇ ಮಹಾಚಿಂತೆ!

ದೇವತೆಗಳಲ್ಲಿ ಶಕ್ತಿ ಇಲ್ಲವೇ? ಅವರು ಜಗತ್ತನ್ನೇ ನಡೆಸುವ ಮಹಾಶಕ್ತಿ ಉಳ್ಳವರಲ್ಲವೇ? ಶಕ್ತಿಗಳನ್ನೇ ಬಾಧಿಸುವ ಶಕ್ತಿ ರಾವಣನಿಗಾದರೂ ಎಲ್ಲಿಂದ!?

ದೇವಪಿತಾಮಹನ ವರದಿಂದ: ತನ್ನ ಸಹಜ ಶಕ್ತಿಯಿಂದ ಸೆಣಸಿದರೆ ರಾವಣನ್ನು ಮಣಿಸುವುದು ದೇವತೆಗಳಿಗೆ ಉಣಿಸಿನಷ್ಟೇ ಸುಲಭ! ಆದರೆ ಅದೇ ರಾವಣನು ವರಬಲಾನ್ವಿತನಾದ ಬಳಿಕ, ಅವನ ನೆನಪಾದರೆ ಉಣಿಸೂ ಸೇರದ ಸ್ಥಿತಿ! ಮನುಷ್ಯರು ಮತ್ತು ಮರ್ಕಟಗಳನ್ನು ಹೊರತು ಪಡಿಸಿ, ಮತ್ತಾರಿಂದಲೂ ತನಗೆ ಸೋಲು-ಸಾವುಗಳು ಬರಬಾರದೆಂಬುದು ರಾವಣನಿಗೆ ವಿಧಿಯಿತ್ತ ವರ; ದೇವತೆಗಳು ಮನುಷ್ಯರೂ ಅಲ್ಲ, ಮರ್ಕಟರೂ ಅಲ್ಲ; ದೇವತೆಗಳೇ ರಾವಣನನ್ನು ದಂಡಿಸಲು ಮುಂದಾಗಲಿ, ಅಥವಾ ರಾವಣನೇ ದೇವತೆಗಳ ಮೇಲೆ ದಂಡೆತ್ತಿ ಹೋಗಲಿ, ಸಮರವೇರ್ಪಟ್ಟರೆ- ಬ್ರಹ್ಮನ ವರದಂತೆ ದೇವತೆಗಳ ಸೋಲು ನಿಶ್ಚಿತ!

ಹೀಗೆ ವಿಶ್ವಸಹಾಯಿಗಳು ಅಸಹಾಯರಾದರು! ಬಲನೆಂಬ ಬಿರುದು ಹೊತ್ತ ದೇವರಾಜ ದುರ್ಬಲನಾದ! ದಶಕಂಠನು ದೇವಕಂಟಕನಾದ! ರಾವಣನಾಗಿದ್ದವನು ಕ್ರಮೇಣ ಲೋಕರಾವಣನಾದ! ಮೂರು ಲೋಕಗಳ ಮಹಾವ್ಯವಸ್ಥೆಯನ್ನು ಅವನು ಮುರಿಮುರಿದೆಸೆಯುವಾಗ ದೇವತೆಗಳು ಮೂಕಪ್ರೇಕ್ಷಕರಾದರು!

ದೇಹದೊಳ ಹೊಕ್ಕು, ದೇಹದಾದ್ಯಂತ ವ್ಯಾಪಿಸಿದ ರೋಗಾಣುವು ದೇಹಾಂತವನ್ನೇ ತಂದೊಡ್ಡುವಾಗ ಹೇಗೆ ಸ್ವಾದಿಷ್ಟವಾದ ಊಟವೂ ರುಚಿಸದೋ, ಹಾಗೆಯೇ ರಾವಣನೆಂಬ ರೋಗಾಣುವು ವಿಶ್ವದಾದ್ಯಂತ ವ್ಯಾಪಿಸಿ- ವಿಜೃಂಭಿಸಿ, ವಿಶ್ವಾಂತ್ಯವನ್ನೇ ತಂದೊಡ್ಡಬಹುದಾದ ಭವಿತವ್ಯವು ಕಣ್ಮುಂದೆ ಕಟ್ಟುವಾಗ ದೇವತೆಗಳಿಗೆ ಪುತ್ರಕಾಮೇಷ್ಟಿಯ ಪರಮಾನ್ನವೂ ರುಚಿಸಲಿಲ್ಲ!

ಮುಂದೇನು ಗತಿ..?

ರಾವಣನ ಸೃಷ್ಟಿಕರ್ತನೇ ಇದಕ್ಕೆ ಉತ್ತರಿಸಬೇಕಿದೆ!

~*~*~

(ಸಶೇಷ)

ಕ್ಲಿಷ್ಟ~ಸ್ಪಷ್ಟ:

  • ಹತಪ್ರಾಯ= ಬಸವಳಿದ.
  • ಸ್ವಾಂತ = ಮನಸ್ಸು

ತಿಳಿವು~ಸುಳಿವು:

  • <ರಾವಣ ಕ್ರಮೇಣ ಲೋಕರಾವಣನಾದ> = ರಾವಣ ಎಂದರೆ ಆಕ್ರಂದ ಎಂಬ ಅರ್ಥವಿದೆ. ರಾವಣನು ಲೋಕವೇ ಆಕ್ರಂದನ ಮಾಡುವಂತಾಗಿಸಿದ – ಎಂಬ ಅರ್ಥವು ಈ ಮಾತಿನಲ್ಲಿದೆ.

ಇದು, ಜಗದ್ಗುರುಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಅಕ್ಷರರೂಪದಲ್ಲಿ ಅನುಗ್ರಹಿಸುತ್ತಿರುವ ರಾಮಾಯಣ – #ರಾಮರಶ್ಮಿ71ನೇ ರಶ್ಮಿ.

 

70 ನೇ ರಶ್ಮಿಯನ್ನು ಓದಲು ಇಲ್ಲಿದೆ ಕೊಂಡಿ.

ರಾಮರಶ್ಮಿಯ ಈವರೆಗಿನ ಎಲ್ಲಾ ಲೇಖನಗಳನ್ನು ಓದಲು : ಇಲ್ಲಿದೆ ಕೊಂಡಿ.

Facebook Comments