॥ಶ್ರೀ ಗುರುಭ್ಯೋ ನಮಃ॥
॥ಹರೇ ರಾಮ॥

ಸಂಘಟನೆಯ ಹಾದಿಯ ಅನುಭವಗಳನರ್ಪಿಸುವೆ ಗುರುಪದತಲದಿ..

– ವೀಣಾ ರಮೇಶ್, ಬೈಪದವು

ಅದೊಂದು ದಿನ ಸಂಜೆ ನಮ್ಮ ಮನೆಯವರು ಶ್ರೀ ಪೋಳ್ಯ ಮಠದಲ್ಲಿ ನಡೆದ ಹವ್ಯಕ ಸಭೆಯಿಂದ ಬಂದವರೇ, “ನಾಳೆ ನಾವೆಲ್ಲ ಹೊಸನಗರ ಮಠಕ್ಕೆ ಹೋಗುತ್ತಿದ್ದೇವೆ, ನೀನೂ ಬರುತ್ತೀಯಾ?” ಎಂದರು.  1996 ರಲ್ಲಿ ನಮ್ಮ ಪುತ್ತೂರಿನಲ್ಲಿ ನಡೆದ ವಿಶ್ವಹವ್ಯಕ ಸಮ್ಮೇಳನದಿಂದಾಗಿ ನಮ್ಮಲ್ಲಿ ಸುಪ್ತವಾಗಿದ್ದ ಹವ್ಯಕ ಪ್ರಜ್ಞೆ ಸ್ವಲ್ಪ ಜಾಗ್ರತಗೊಂಡಿತ್ತು. ಹೊಸನಗರ ಮಠಕ್ಕೆ? ಅಲ್ಲೇನಿದೆ? ಮಠಕ್ಕೆ ಹೆಣ್ಣು ಮಕ್ಕಳು ಹೋಗಬಹುದೇ? ಯಾರೆಲ್ಲ ಹೋಗುವುದು? ಹೇಗೆ ಹೋಗುವುದು? ಒಂದೇ ದಿನದಲ್ಲಿ ಹೋಗಿ ಬರುವ ದಾರಿಯೇ? ಇಷ್ಟರವರೆಗೆ ಹೋಗದಿದ್ದ ಊರದು, ಹಲವು ವಿಚಾರಗಳು ಮನಸ್ಸಿನಲ್ಲಿ ಸುಳಿಯುತ್ತಿತ್ತು. ಈ ವಿಚಾರಗಳನ್ನು ಮನೆಯವರಲ್ಲಿ ಕೇಳಿದಾಗ ಇಷ್ಟೇ ಹೇಳಿದರು- “ನಮ್ಮ ಮಠದ, ನಮ್ಮ ಪೀಠದ ನೂತನ ಯತಿಗಳನ್ನು ಕಂಡು ಬರುವುದು, ಮನಸ್ಸಿದ್ದರೆ ಬಾ” ಎಂದರು. ನನಗೂ ನಮ್ಮ ಮಠದ ಯತಿಗಳನ್ನು ನೋಡಬೇಕೆಂಬ ಆಸೆಯಿತ್ತು. ನಮ್ಮ ಮನೆಯವರು ಶಿಷ್ಯಸ್ವೀಕಾರ ಸಮಾರಂಭಕ್ಕೆ ಬೆಂಗಳೂರಿಗೆ ಹೋಗಿ ಬಂದಿದ್ದರು. ನಾನು ಬೆಂಗಳೂರಿನಲ್ಲಿ ಅವರನ್ನು ನೋಡಿದ್ದೇನೆ, ನೀನು ನೋಡದಿದ್ದ ಕಾರಣಕ್ಕಾಗಿ ಬಾ ಎಂದರು. ಅಷ್ಟರಲ್ಲೇ ರಾತ್ರಿ 8 ಗಂಟೆ ಆಗಿತ್ತು. ಗಡಿಬಿಡಿಯಲ್ಲಿ ಹೊರಡುವ ತಯಾರಿ ನಡೆಸಿದೆವು.

ಮರುದಿನ ಬೆಳ್ಳಗ್ಗೆ ನಾವು 10 ಜನ(2 ಹೆಂ,8 ಗಂ) ಎರಡು ಒಮ್ನಿ ವ್ಯಾನ್ ಗಳಲ್ಲಿ ಕೊಲ್ಲೂರು ಮಾರ್ಗವಾಗಿ ರಾಮಚಂದ್ರಾಪುರ ಮಠಕ್ಕೆ 10 ಗಂಟೆಗೆ ತಲುಪಿದೆವು.
ಅಂದು ಜುಲೈ 11, 1998 ನೇ ಇಸವಿ. ಆಷಾಢದ ಮಳೆ ಜಿಟಿ ಜಿಟಿ ಸುರಿಯುತ್ತಿತ್ತು. ತಣ್ಣನೆಯ ಗಾಳಿ, ಪ್ರಶಾಂತ ವಾತಾವರಣ, ಶ್ರೀ ಮಠದ ಸುಂದರ ಪರಿಸರದಲ್ಲಿ ಎರಡು ಪುಟ್ಟ ಕರುಗಳು ಸ್ವೇಚ್ಚೆಯಿಂದ ತಿರುಗಾಡಿಕೊಂಡಿದ್ದವು. ನಾವು ಮಠದ ಮುಖ್ಯದ್ವಾರದ ಬಳಿ ಬರುತ್ತಿದ್ದಂತೆಯೇ ಮಠದ ಸಹಾಯಕರೊಬ್ಬರು ಬನ್ನಿ ಎಂದು ಒಳಗೆ ಕರೆದುಕೊಂಡು ಹೋಗಿ ಆತ್ಮೀಯವಾಗಿ ಉಪಚರಿಸಿ ಅಲ್ಲಿಂದ ಮರೆಯಾದರು. ಸ್ವಲ್ವ ಹೊತ್ತಿನಲ್ಲೇ ಕೆನೆಹಾಲು ಹಾಕಿದ ಹಬೆಯಾಡುವ ಬಿಸಿ ಬಿಸಿ ಕಾಫಿ ತಂದಿಟ್ಟು ಸತ್ಕರಿಸಿದರು.

ನಮ್ಮೊಂದಿಗೆ ಬಂದಿದ್ದವರೆಲ್ಲರೂ ಪ್ರಥಮಬಾರಿಗೆ ಹೊಸನಗರ ಮಠಕ್ಕೆ ಬಂದವರಾಗಿದ್ದರು. 12 ಗಂಟೆಗೆ ಶ್ರೀಕರಾರ್ಚಿತ ಶ್ರೀರಾಮ ದೇವರ ಪೂಜೆಯನ್ನು ನೋಡಿ ಧನ್ಯರಾದೆವು. ಅಂದು ನೋಡಿದ ಶ್ರೀರಾಮ ದೇವರ ಪೂಜೆ ಇಂದಿಗೂ ನನ್ನ ನೆನಪಿನಲ್ಲಿದೆ. ಪೂಜೆಯ ಬಳಿಕ ತೀರ್ಥಪ್ರಸಾದ ಸ್ವೀಕರಿಸಿ ಮಠದ ಆವರಣದಲ್ಲಿಯೇ ಭೋಜನಕ್ಕೆ ಕುಳಿತೆವು. ಪಾಯಸ, ಭಕ್ಷ್ಯಗಳನ್ನೊಳಗೊಂಡ ಸುಗ್ರಾಸ ಭೋಜನ, ಮಠದ ಪರಿವಾರದವರ ಒತ್ತಾಯದ ಉಪಾಚಾರ ಬೇರೆ,  ಸಂತೋಷದಿಂದ ಉಂಡೆವು. ನಮ್ಮಲ್ಲಿ ಕೆಲವರಂತೂ ನಾವು ವಿಶ್ರಾಂತಿ ತೆಗೆದುಕೊಳ್ಳುತ್ತೇವೆ ಎಂದರು. ನಾನೂ ನಮ್ಮ ಯಜಮಾನರೂ ಶ್ರೀಮಠದ ಗೋಶಾಲೆಯನ್ನೆಲ್ಲ ನೋಡಿದೆವು. ಶ್ರೀಮಠದ ಗೋಶಾಲೆಯ ತುಂಬ ಜರ್ಸಿ, ಎಚ್.ಎಫ್ ತಳಿಯ ಆಳೆತ್ತರದ ದನಗಳಲ್ಲದೆ ದೊಡ್ಡ ದೊಡ್ಡ ಎಮ್ಮೆಗಳಿದ್ದವು. ಗೋಶಾಲೆಯ ಪರಿಚಾರಕರೊಬ್ಬರು ಮೇಯಲು ಹೋಗಿದ್ದ ದನಗಳನ್ನೆಲ್ಲ ಕಟ್ಟಿಹಾಕುತ್ತಿದ್ದರು. ವಿಧೇಯ ವಿಧ್ಯಾರ್ಥಿಗಳಂತೆ ಅವುಗಳೂ ಸಾಲಾಗಿ ಗೋಶಾಲೆಯೊಳಗೆ ಹೋಗಿ ತಮ್ಮ ತಮ್ಮ ಸ್ಥಳಗಳಲ್ಲಿ ನಿಲ್ಲುತ್ತಿದ್ದವು.

ಮೂರು ಗಂಟೆಯ ಸುಮಾರಿಗೆ ಶ್ರೀ ಗುರುಗಳು ಪೀಠಕ್ಕೆ ಬರುತ್ತಾರೆ, ನೀವು ಭೇಟಿ ಮಾಡಬಹುದು ಎಂಬ ಮಾಹಿತಿಯನ್ನು ಮಠದ ಪರಿವಾರದವರೊಬ್ಬರು ನೀಡಿದ ಕೂಡಲೇ ನಾವು ಮಠದ ಉಪ್ಪರಿಗೆಯಲ್ಲಿರುವ ಸಭಾಂಗಣಕ್ಕೆ ತೆರಳಿ ಕಾತುರದಿಂದ ಕಾದೆವು. ಕಾತುರದಿಂದ ಕಾಯುತ್ತಿದ್ದ ಹಾಗೆಯೇ ರಾಜಗಾಂಭೀರ್ಯದಿಂದ ಶ್ರೀಶ್ರೀಗಳವರು ಚಿತ್ತೈಸಿದರು. ಪೀಠದಲ್ಲಿ ಅವರು ಆಸೀನರಾಗುತ್ತಿದ್ದಂತೆಯೇ ಶ್ರೀಮಠದ ಸಂಪ್ರದಾಯದಂತೆ ಉದ್ಪೋಷಗಳನ್ನೆಲ್ಲ ಹೇಳಲಾಯಿತು. ನಾವು ನಮಸ್ಕರಿಸಿ ಕೈಮುಗಿದು ಕುಳಿತುಕೊಂಡೆವು. ನಮ್ಮ ಪರಿಚಯವನ್ನು ಮಾಡಿಕೊಂಡೆವು. ನಾನು ಪರಮಪೂಜ್ಯರನ್ನು ಮೊದಲ ಬಾರಿ ಕಂಡಾಗ ನನ್ನಲ್ಲಾದ ಅನುಭವ, ಅದನ್ನು ಶಬ್ದಗಳಲ್ಲಿ ವರ್ಣಿಸಲು ಅಸಾಧ್ಯ. ಒಡಹುಟ್ಟಿದ ಸಹೋದರನಂತೆ, ಆಪ್ತಸ್ನೇಹಿತನಂತೆ, ನಾವೆಷ್ಟೂ ದಿನಗಳ ಪರಿಚಿತರಂತೆ ಆಪ್ತತೆಯಿಂದ ನಮ್ಮೆಲ್ಲರನ್ನೂ ಮಾತನಾಡಿಸಿದರು. ನಾವು ಅವರನ್ನು ಭೇಟಿಯಾದದ್ದು ಚಾತುರ್ಮಾಸ್ಯದ ಪುಣ್ಯಪರ್ವದಲ್ಲಿ.  ಆದಕಾರಣ ಚಾತುರ್ಮಾಸ್ಯದ ಬಗ್ಗೆ, ಅದರ ಮಹತ್ವದ ಬಗ್ಗೆ ತಿಳಿಸಿದರು. ಅನುಗ್ರಹ ಮಂತ್ರಾಕ್ಷತೆಯನ್ನಿತ್ತರು. ಹೊತ್ತು ಸರಿದ್ದದ್ದೆ ತಿಳಿಯಲಿಲ್ಲ. ಸೂರ್ಯ ಪಶ್ವಿಮದತ್ತ ಜಾರುತ್ತಿದ್ದ. ನಾವು ಹೊರಡುವ ಇರಾದೆಯಿಂದ ಎದ್ದು ನಿಂತಾಗ, ‘ಇಂದು ಇಲ್ಲೇ ನಮ್ಮೊಂದಿಗೆ ಇದ್ದು ನಾಳೆ ಹೊರಡುವಿರಂತೆ’ ಎಂದು ಮಾತೃಸ್ವರೂಪಿಯಂತೆ ಒತ್ತಾಯಿಸಿದರು. ಆದರೆ ನಮಗಂದು ಹೊರಡಲೇ ಬೇಕಾದ ಅನಿವಾರ್ಯತೆ ಇತ್ತು. ಒಲ್ಲದ ಮನಸ್ಸಿನಂದಲೇ ಬೀಳ್ಗೊಂಡೆವು. ಪ್ರಥಮ ಭೇಟಿಯಲ್ಲಿಯೇ ನಾವಿಬ್ಬರೂ ಅವರ ಅಭಿಮಾನಿಗಳಾಗಿ ಬಿಟ್ಟಿದ್ದೆವು.
ನಾನು ಈ ಮಾತನ್ನು ಇಲ್ಲಿ ಯಾಕೆ ಉಲ್ಲೇಖಿಸುತ್ತಿದ್ದೇನೆಂದರೆ, ನಾವೆಲ್ಲ ಸಣ್ಣವರಿದ್ದಾಗಿನ ಘಟನೆ. ಪೆರಡಾಲ ಉದನೇಶ್ವರ ದೇವಸ್ಥಾನದಲ್ಲಿ ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಶ್ರೀ ರಾಘವೇಂದ್ರ ಭಾರತೀ ಮಹಾಸ್ವಾಮಿಗಳವರು ಮೊಕ್ಕಾಂ ಹೂಡಿದ್ದರು. ನಾನೂ ನನ್ನ ತಮ್ಮನೂ ತಂದೆಯವರೊಟ್ಟಿಗೆ ಶ್ರೀಗುರುಗಳನ್ನು ನೋಡಲೆಂದು ಹೋಗಿದ್ದವು. ಅಲ್ಲಿಗೆ ಹೋಗುವ ಮೊದಲೇ ತಂದೆಯವರು ಶ್ರೀ ಗುರುಗಳ ಬಗ್ಗೆ ತಿಳಿಸಿದ್ದರು. ಅವರು ಮಹಾತಪಸ್ವಿಗಳು,  ಪ್ರಕಾಂಡ ಪಂಡಿತರು ಮೇಧಾವಿಗಳು ಎಂದೆಲ್ಲ ವರ್ಣಿಸಿದ್ದರು. ಹಾಗಾಗಿ ನಮ್ಮಿಬ್ಬರಲ್ಲೂ ಅವ್ಯಕ್ತ ಭಯವಿತ್ತು ಆದರೂ ತಂದೆಯವರ ಒತ್ತಾಯಕ್ಕೆ ಪೆರಡಾಲ ದೇವಸ್ಥಾನಕ್ಕೆ ಹೋದೆವು. ಶ್ರೀ ರಾಮದೇವರ ಪೂಜೆಯಾದ ಬಳಿಕ ಶ್ರೀ ಗುರುಗಳೇ ತೀರ್ಥ ನೀಡುವಾಗ ನಮ್ಮ ಸರದಿಯೂ ಬಂತು. ತೀರ್ಥ ತೆಗೆದುಕೊಳ್ಳಲು ಅವರ ಮುಂದೆ ನಿಂತಾಗ ತಮ್ಮನಂತೂ ಅಳುವುದೊಂದು ಬಾಕಿ ನಾನು ಕೈ ಮುಂದೊಡ್ಡಲಿಲ್ಲ. ಒಳ್ಳೆ ವಿದ್ಯೆಬುದ್ದಿ ಕೊಡಿ ಎಂದು ಪ್ರಾರ್ಥನೆ ಮಾಡಿ ತೀರ್ಥ ಕುಡಿಯಿರಿ ಎಂದು ತಂದೆಯವರು ಅಕ್ಷರಷಃ ಗದರಿದರು. ಶ್ರೀ ಶ್ರೀಗಳವರ ನೋಟದ ಪ್ರಖರತೆಗೆ, ಆ ತೇಜಸ್ಸಿಗೆ ನಾವು ಗುಬ್ಬಚ್ಚಿಗಳಂತಾಗಿದ್ದೆವು. ಅವರಿಗೆ ಶಿಷ್ಯರ ಮೇಲೆ ಪ್ರೀತಿ ಇರಲಿಲ್ಲವೆಂದಲ್ಲ.  ಒಂದು ಅಂತರವನ್ನು ಕಾಯ್ದುಕೊಂಡಿದ್ದರು. ಕಿರಿಯ ಶ್ರೀಗಳನ್ನು ನೋಡುವಲ್ಲಿವರೆಗೆ ಹೆಚ್ಚಿನವರಲ್ಲಿ ಅದೇ ಭಾವನೆ ಇತ್ತು ಎಂದು ನನ್ನ ಅನಿಸಿಕೆ.

ಹೊಸನಗರದ ಭೇಟಿಯ ನಂತರ ನಾನು ಶ್ರೀಗುರುಗಳನ್ನು ಭೇಟಿ ಮಾಡಿದ್ದು ಮಂಗಳೂರು ಹೋಬಳಿಯ ಮಾಣಿ ಪೆರಾಜೆ ಮಠದಲ್ಲಿ. ಮಾಣಿ ಮಠಕ್ಕೆ ಶ್ರೀಶ್ರೀಗಳವರ ಮೊದಲ ಭೇಟಿ ಅದಾಗಿತ್ತು. ಸುಮಾರು ಒಂದು ತಿಂಗಳು ಶ್ರೀಶ್ರೀಗಳವರು ಮಾಣಿ ಮಠದಲ್ಲಿ ಮೊಕ್ಕಾಂ ಇದ್ದಾಗ 25 ದಿನ ನಾವೂ ಮಾಣಿಮಠಕ್ಕೆ ಭೇಟಿ ಕೊಟ್ಟಿದ್ದವು. ಆಗ ಮೊದಮೊದಲು ಮಠಕ್ಕೆ ಬರುವವರ ಸಂಖ್ಯೆ ತೀರಾ ವಿರಳವಾಗಿತ್ತು. ಆಮೇಲಾಮೇಲೆ ಅಂದರೆ ಕೊನೆಯ ಒಂದು ವಾರ ಜನಸಂಖ್ಯೆ 2 ರಿಂದ 3 ಸಾವಿರದಷ್ಟಿತ್ತು. ಅದಕ್ಕೆ ಕಾರಣವೂ ಇಲ್ಲದ್ದಿಲ್ಲ. ಒಂದು ತಿಂಗಳ ಮೊಕ್ಕಾಮಿನ ಸಂಧರ್ಭದಲ್ಲಿ ಶ್ರೀಶ್ರೀಗಳವರು ಮಂಗಳೂರು ಹೋಬಳಿಯ ಎಲ್ಲ ಸೀಮೆಗಳಿಗೂ ಭೇಟಿಯಿತ್ತಿದ್ದರು. ಹೋದೆಡೆಯಲ್ಲೆಲ್ಲ ಹಿರಿಕಿರಿಯರೆನ್ನದೆ ಎಲ್ಲರನ್ನೂ ಕರೆದು ಮಾತನಾಡಿಸಿದ್ದರು. ಹವ್ಯಕ ಸಮಾಜಕ್ಕೆ ಹೊಸ ಶಕೆ ಪ್ರಾರಂಭವಾಗಿತ್ತು. ಒಂದು ಹೊಸ ಮನ್ವಂತರಕ್ಕೆ ಶ್ರೀಶ್ರೀಗಳವರ ಮಂಗಳೂರು ಹೋಬಳಿಯ ಭೇಟಿ ನಾಂದಿಯಾಗಿತ್ತು. ‘ಬೆಳಗಾಗಿ ನಾನೆದ್ದು ಯಾರ್ಯಾರ ನೆನೆಯಲೀ’ ಎಂಬ ಜಾನಪದ ಹಾಡಿನ ಆಶಯದಂತೆ ನಾವು ಹವ್ಯಕರು ಬೆಳಗೆದ್ದು ನಮ್ಮ ಪೀಠದ ೩೫ ಯತಿಗಳಾಗಿದ್ದ ಪರಮ ಪೂಜ್ಯರನ್ನು ಸ್ಮರಿಸಲೇಬೇಕು. ಸೂರ್ಯನ ಬೆಳಕಿನಷ್ಟು ಪ್ರಖರವಾದ ತಪ:ಶಕ್ತಿಯುಳ್ಳ ಅವರು ನಮಗಾಗಿ, ನಮ್ಮ ಏಳಿಗೆಗಾಗಿ, ಸಮಾಜದ ಒಳಿತಿಗಾಗಿ, ಸಮಾಜವೆಂಬ ಸಾಗರದಿಂದ ಅನರ್ಘ್ಯರತ್ನವೊಂದನ್ನು ಆರಿಸಿ ಮುಂದಿನ ಮಾರ್ಗದರ್ಶಕರಾಗಿ ತೋರಿಸಿಕೊಟ್ಟಿದ್ದಾರೆ ಆ ಹಿರಿಯ ಚೇತನಕ್ಕೆ ನಮ್ಮ ನಮನಗಳು.

2000ನೇ ಇಸವಿ ಆಗಸ್ಟ್ ತಿಂಗಳಿನಲ್ಲಿ, ‘ಕಬಕ ಗ್ರಾಮದ ಹವ್ಯಕ ಮಹಿಳೆಯರ ಒಂದು ಸಭೆ ಮಾಡುತ್ತಾರಂತೆ, ಅದಕ್ಕೆ ನೀನು ಹೋಗಬೇಕಂತೆ’ ಎಂದು ನನ್ನ ಯಜಮಾನರು ಒಂದು ದಿನ ತಿಳಿಸಿದರು. ನಮ್ಮ ಸಮಾಜದ ಕೆಲವು ಹಿರಿಯ ಮಹಿಳೆಯರ ಸಭೆ ಶ್ರೀಮತಿ ಸಾವಿತ್ರಿ.ಯಂ.ಭಟ್ಟ ಮುಳಿಯ ಇವರ ನೇತೃತ್ವದಲ್ಲಿ ಮಂಗಳೂರಿನಲ್ಲಿ ನಡೆದಿತ್ತು. ಸೀಮಾ ಮಟ್ಟದಲ್ಲಿ, ಗ್ರಾಮ ಮಟ್ಟದಲ್ಲಿಯೂ ಮಹಿಳೆಯರ ಸಂಘಟನೆಯಾಗಬೇಕು, ಮಹಿಳೆಯರು ಮುಖ್ಯವಾಹಿನಿಯಲ್ಲಿ ಸೇರಿ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು, ಇದರಿಂದ ಸಮಾಜಕ್ಕೆ ಒಳಿತಾಗುತ್ತದೆ ಎಂದು ಶ್ರೀಶ್ರೀಗಳವರ ದೂರದರ್ಶಿತ್ವದ ಪರಿಣಾಮವೇ ಮಹಿಳಾ ಪರಿಷತ್ತು. ಸಮಾಜದ ಸಂಘಟನೆ, ಸಂಘಟನೆಯಿಂದ ಸಂವರ್ಧನೆ ಎಂಬುದು ಶ್ರೀರಾಮಚಂದ್ರಪುರ ಮಠದ ಅವಿಚ್ಛಿನ್ನ ಪರಂಪರೆಯ 36ನೇ ಯತಿಗಳಾದ ಪರಮಪೂಜ್ಯ ಆಶಯವಾಗಿತ್ತು. ಹಾಗೆಯೇ ನಮ್ಮ ಕಬಕ ಗ್ರಾಮದ ಶ್ರೀಪೋಳ್ಯ ಮಠದಲ್ಲಿ ಕಬಕ ಕೊಡಿಪ್ಪಾಡಿ ಗ್ರಾಮ ಹವ್ಯಕ ಮಹಿಳಾ ಪರಿಷತ್ತು 20.08.2000 ದಂದು ಅಸ್ತಿತ್ವಕ್ಕೆ ಬಂತು. ಆ ದಿನ ಪುತ್ತೂರಿನಿಂದ 7 ಜನ ಮಹಿಳೆಯರು ಶ್ರೀಪೋಳ್ಯಮಠಕ್ಕೆ ಬಂದಿದ್ದರು. ಆದರೆ ನಮ್ಮ ಕಬಕ ಗ್ರಾಮದ 150 ಮನೆಗಳ ಪೈಕಿ ಬಂದಿದ್ದರು 5 ಜನ ಮಾತ್ರ. ಕಾರಣವಿಷ್ಟೆ, ಮಹಿಳಾ ಪರಿಷತ್ತಿನ ಅಧ್ಯಕ್ಷೆಯಾಗಿ ಜವಾಬ್ದಾರಿಯನ್ನು ಹೊರಿಸಬಹುದು ಎಂಬ ಭಯ. ಶ್ರೀಗುರುಗಳ ಅನುಗ್ರಹವೋ ಎಂಬಂತೆ ನನ್ನನ್ನು ಅಧ್ಯಕ್ಷೆಯನ್ನಾಗಿ ಆರಿಸಿದರು. ನನಗಿಂತ ಹಿರಿಯರು, ಅರ್ಹರು, ವಿದ್ಯಾವಂತರು ತುಂಬಾ ಜನರಿದ್ದರು. ನಾನು ಜವಾಬ್ದಾರಿ ವಹಿಸುವ ಮುನ್ನ ಅವರನ್ನು ಸಂಪರ್ಕಿಸಿ, ಈ ಜವಾಬ್ದಾರಿಯನ್ನು ಹೊರುವುದಾದರೆ ಅವರಿಗೆ ಮನವರಿಕೆ ಮಾಡಿ ಈ ಜವಾಬ್ದಾರಿಯನ್ನು ಅವರಿಗೆ ವಹಿಸಿಕೊಡೋಣ ಎಂದು ಪರಿಪರಿಯಾಗಿ ಬೇಡಿಕೊಂಡೆ. ಶ್ರೀಮತಿ ಸವಿತಾ ರಾಮ ಭಟ್ಟ ಅವರು ನಿನ್ನೊಂದಿಗೆ ನಾವಿದ್ದೇವೆ ಎಂದು ಧೈರ್ಯ ತುಂಬಿದರು.

ಪುತ್ತೂರು ಸೀಮಾ ಹವ್ಯಕ ಮಹಿಳಾ ಪರಿಷತ್ತನ್ನು ರಚಿಸುವಾಗಲೂ ನನ್ನನ್ನು ಅದರ ಜತೆಕಾರ್ಯದರ್ಶಿಯನ್ನಾಗಿ ನೇಮಕ ಮಾಡಿದರು. ವಯಸ್ಸಿನಲ್ಲಿ, ಅನುಭವದಲ್ಲಿ ಸಣ್ಣವಳಾದ ನನಗೆ ಅಂದು ಸ್ವಲ್ಪ ಇರಿಸುಮುರಿಸಾದರೂ ವೈಯಕ್ತಿಕವಾಗಿ  ತುಂಬಾ ಲಾಭವೇ ಆಯಿತು. ಸಂಘಟನೆಯ ನೆಪದಲ್ಲಿ ನಾವು ಎಷ್ಟೋ ಸ್ಥಳಗಳಿಗೆ, ಮನೆಗಳಿಗೆ ಭೇಟಿ ನೀಡಿ ಸಂಪರ್ಕಿಸಿದೆವು. ಆ ಮೂಲಕ ಆ ಮನೆಯವರ ಪರಿಚಯವಾಯಿತು, ಸಮಾಜದ ಪರಿಚಯವಾಯಿತು. ಶ್ರೀಶ್ರೀಗಳವರ ಎಷ್ಟೋ ಸಮಾಜಮುಖಿ ಯೋಜನೆಗಳಲ್ಲಿ ಸರ್ವಪ್ರಥಮವಾಗಿ ಮಹಿಳೆಯರಿಗಾಗಿ ಮುಷ್ಟಿಭಿಕ್ಷೆ ಸಂಗ್ರಹದ ಗುರಿಯನ್ನಿರಿಸಿದರು. ಮನೆಮನೆಗಳಲ್ಲಿ ಮುಷ್ಟಿಅಕ್ಕಿಯನ್ನು ದಿನವೂ ತೆಗೆದಿರಿಸಿ ತಿಂಗಳ ಕೊನೆಯಲ್ಲಿ ಸೂಕ್ತ ಫಲಾನುಭವಿಗಳಿಗೆ ವಿತರಿಸುವ ಯೋಜನೆ ಅದಾಗಿತ್ತು. ಬಿಂದು-ಸಿಂದು ಕಾಣಿಕೆ ಸಂಗ್ರಹ ಶ್ರೀಗುರುಗಳ ಇನ್ನೊಂದು ಯೋಜನೆ. ಪ್ರತಿ ಮನೆಯಿಂದ ಕನಿಷ್ಠ ದಿನಕ್ಕೊಂದು ರೂಪಾಯಿ ಸಂಗ್ರಹಿಸುವ ಯೋಜನೆ-ಇವೆರಡೂ ಯೋಜನೆಗಳನ್ನು ಕಾರ್ಯಗತಗೊಳಿಸುವಲ್ಲಿ ಪರಿಷತ್ತೂ, ಅನುಷ್ಠಾನಗೊಳಿಸುವಲ್ಲಿ ಸಮಾಜವೂ ಇಂದಿನವರೆಗೆ ಹಿಂದೆ ಬಿದ್ದಿದೆ ಎಂದು ನನ್ನ ಭಾವನೆ.

ಅಧಿಕೃತವಾಗಿ ಪುತ್ತೂರು ಸೀಮಾ ಹವ್ಯಕ ಮಹಿಳಾ ಪರಿಷತ್ತು ರಚನೆಯಾದ ಮೇಲೆ ಶ್ರೀಪೋಳ್ಯ ಮಠದಲ್ಲಿ ಸೇರಿ ನಾವು ನಮ್ಮ ಕಾರ್ಯಕ್ರಮಗಳ ರೂಪುರೇಷೆ ಮಾಡಿಕೊಂಡೆವು. ಶ್ರೀಗುರುಗಳ ನಿರ್ದೇಶನಾನುಸಾರ ಸೀಮಾ ಅಧ್ಯಕ್ಷೆ ಸವಿತತ್ತೆಯ (ಶ್ರೀಮತಿ ಸವಿತಾ ರಾಮ ಭಟ್) ಹಿರಿತನದಲ್ಲಿ ನಾವು, ಪ್ರತೀ ತಿಂಗಳ ಮೊದಲ ಮಂಗಳವಾರದಂದು ಶ್ರೀಪೋಳ್ಯ ಮಠದಲ್ಲಿ ಶ್ರೀಲಲಿತಾಸಹಸ್ರನಾಮ ಕುಂಕುಮಾರ್ಚನೆ ಕಾರ್ಯಕ್ರಮವನ್ನು ನಡೆಸುವುದೆಂದು ನಿಶ್ವೈಸಲಾಯಿತು. ಆ ಜಗನ್ಮಾತೆಯ ಅನುಗ್ರಹದಿಂದ ಶ್ರೀಗುರುಗಳ ಆಶೀರ್ವಾದದಿಂದ ಅವನ್ನು ಇಂದಿಗೂ ನಡೆಸಿಕೊಂಡು ಬರುತ್ತಿದ್ದೇವೆ.

ಸಂಘಟನೆಯಾಗಬೇಕಾದರೆ ಎನಾದರೂ ಒಂದು ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು ಎಂದು ನಮ್ಮ ಸಭೆಯಲ್ಲಿ ಬಂದ ಸಲಹೆಯಂತೆ ವಿಟ್ಲ ಸೀಮೆಯವರ ಜತೆಗೊಡಿ ಮೈಸೂರಿನ ಶ್ರೀ ಶಂಕರನಾರಾಯಣ ಜೋಯಿಸ ಇವರನ್ನು ಸಂಪನ್ಮೂಲ ವ್ಯಕ್ತಿಗಳಾಗಿ ಕರೆಸಿ, “ಸ್ವಾತಿಕ ಆಹಾರ ಮತ್ತು ಜೀವನ” ಎಂಬ ಒಂದು ದಿನದ ಕಾರ್ಯಗಾರವನ್ನು ಶ್ರೀಪೋಳ್ಯಮಠದಲ್ಲಿ ನಡೆಸಿದೆವು. ಒಂದು ಬಾರಿ ಹೊಸನಗರ ಮಠದಲ್ಲಿ ‘ಶ್ರೀಗುರುಪರಂಪರಾ ಪೂಜೆ’ಯಲ್ಲಿ ನಾವು ಭಾಗವಹಿಸಿದ್ದೆವು. ಅಲ್ಲಿ ನಾವು ಕೆಲವೇ ಜನ ಪಾಲ್ಗೊಳ್ಗಲು ಸಾಧ್ಯವಾಯಿತಷ್ಟೇ. ಈ ಕಾರ್ಯಕ್ರಮವನ್ನು ನಮ್ಮಲ್ಲಿಯೂ ಏರ್ಪಡಿಸಿದರೆ ಹೆಚ್ಚಿನ ಸಂಖ್ಯೆಯಲ್ಲಿ ನಮ್ಮೂರಿನ ಸಹೋದರಿಯರಿಗೆ ಭಾಗವಹಿಸಲು ಅನುಕೂಲ ಎಂದು ಭಾವಿಸಿ ಸೀಮಾ ಪರಿಷತ್ತಿನಲ್ಲಿ ಪ್ರಸ್ತಾಪ ಮಾಡಿದೆವು.  ನಿಮಗೆ ಅಲ್ಲಸಲ್ಲದ ಕಾರ್ಯಮಾಡುವ ಉಸಾಬರಿ ಯಾಕೆ ? ಇದನ್ನೆಲ್ಲ ಗುರುಗಳು ಒಪ್ಪಲಿಕ್ಕಿಲ್ಲ ಎಂದು ಕೆಲವರು ಮೂಗುಮುರಿದರು. ಕಾರ್ಯಕ್ರಮವನ್ನು ಮಾಡುವ ಮೂಲಕ ಸಂಘಟನೆ ಸಾಧ್ಯ ಎಂಬ ಹುಳ ನನ್ನ ತಲೆ ಹೊಕ್ಕಿತ್ತು. ಉರಿಮಜಲು ಮಾವ ಶ್ರೀ ರಾಮಭಟ್ಟರು, ‘ಸಾವಿರ ಮೈಲಿ ನಡೆಯಬೇಕಾದರೂ ಒಂದು ಹೆಜ್ಜೆ ಮುಂದಿಡದೆ ಸಾಧ್ಯವಿಲ್ಲ, ನೀನು ಮಾಡುವ ಕೆಲಸಕ್ಕೆ ನಮ್ಮ ಬೆಂಬಲ ಇದೆ’ ಎಂದು ಭರವಸೆಯೊಂದಿಗೆ ಶ್ರೀಶ್ರೀಗಳವರಲ್ಲಿ ಮನದಲ್ಲಿದ್ದ ಕಾರ್ಯವನ್ನು ಬಿನ್ನವಸಿಕೊಂಡೆವು. ಸಂತೋಷದಿಂದ ಒಪ್ಪಿಗೆಯನ್ನಿತ್ತ ಶ್ರೀಶ್ರೀಗಳವರು ಅನುಗ್ರಹ ಮಂತ್ರಾಕ್ಷತೆಯನ್ನಿತ್ತರು. ಶ್ರೀಪೋಳ್ಯಮಠದಲ್ಲಿ ಕಾರ್ಯಕ್ರಮವೇನೋ ಉತ್ತಮ ರೀತಿಯಲ್ಲಿ ನಡೆಯಿತು. ನನಗೆ ಅದರ ಪೂರ್ವತಯಾರಿ,(ಮುಖ್ಯವಾಗಿ ಆರ್ಥಿಕ ಪರಿಸ್ಥಿತಿ) ಮಾಹಿತಿಯ ಕೊರತೆಯಿಂದಾಗಿ ಸ್ವಲ್ಪ ಆರ್ಥಿಕ ಸಂಕಷ್ಟ ಎದುರಾಯಿತು. ಆಗ ಸೀಮಾ ಅಧ್ಯಕ್ಷೆಯಲ್ಲದೆ ಮಂಗಳೂರು ಹೋಬಳಿ ಪರಿಷತ್ತಿನ  ಪ್ರಧಾನ ಕಾರ್ಯದರ್ಶಿ ಶ್ರೀಮತಿ ಶಂಕರಿ ಸುಬ್ರಹ್ಮಣ್ಯ ಭಟ್ಟ ಉಪ್ಪಂಗಳ ಇವರಲ್ಲದೆ ಸೀಮಾ ಪರಿಷತ್ತಿನ ಕೆಲ ಮಹನೀಯರು ಮಾತ್ರವಲ್ಲದೆ ನಮ್ಮ ಕಬಕ ಗ್ರಾಮ ಪರಿಷತ್ತು ಕೂಡ ನನ್ನ ಬೆಂಬಲಕ್ಕೆ ನಿಂತಿತ್ತು. ಹೊಸನಗರ ಶ್ರೀಮಠದಲ್ಲಿ ಬಿಟ್ಟರೆ ಪ್ರಪ್ರಥಮವಾಗಿ ‘ಶ್ರೀ ಗುರುಪರಂಪರಾ ಪೂಜೆ’ಯನ್ನು ನಡೆಸಿದ ಹೆಗ್ಗಳಿಕೆ ನಮ್ಮದು. ಈತನ್ಮಧ್ಯೆ ಪಡ್ನೂರು ಗ್ರಾಮ ಮಹಿಳಾ ಪರಿಷತ್ತಿನ ಅಧ್ಯಕ್ಷೆ ಶ್ರೀಮತಿ ಭಾರತಿ ಬನಾರಿ ಪಡ್ನೂರು ಗ್ರಾಮದಲ್ಲಿ ನವರಾತ್ರಿಯ ಒಂಬತ್ತು ದಿನಗಳಲ್ಲಿ ಬೇರೆ ಬೇರೆ ಮನೆಗಳಲ್ಲಿ ಕುಂಕುಮಾರ್ಚನೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿದ್ದರು. ಅದರಿಂದ ಸ್ಪೂರ್ತಿ ಪಡೆದ ನಾವು ನಮ್ಮ ಗ್ರಾಮಗಳಲ್ಲಿಯೂ ಅದನ್ನು ಅಳವಡಿಸಿ ಯಶಸ್ವಿಯಾದೆವು. ಮುಂದೆ ಕೆಲವು ವರ್ಷಗಳಲ್ಲಿ ಸೀಮಾ ವ್ಯಾಪ್ತಿಯಲ್ಲಿ ಬೇರೆ ಬೇರೆ ವಲಯಗಳಲ್ಲಿಯೂ ಅದನ್ನು ಅಳವಡಿಸಿದೆವು. ನಮ್ಮ ಕಬಕ ಗ್ರಾಮದಲ್ಲಿ ಸಂಘಟನೆಯ ಕಿಚ್ಚು ಸ್ವಲ್ಪ ಹೆಚ್ಚೇ ಇತ್ತು. ಹಿರಿಯರಾದ ಶ್ರೀ ಶಿವರಾಮ ಕಜೆಯವರು ಮಾತ್ರವಲ್ಲದೆ ಪರಿಷತ್ತಿನ ಎಲ್ಲ ವಿಭಾಗದವರೂ ಮಹಿಳಾ ಪರಿಷತ್ತಿಗೆ ಎಲ್ಲ ರೀತಿಯ ಸಹಕಾರವಿತ್ತರು. ಕಬಕ ಗ್ರಾಮ ವ್ಯಾಪ್ತಿಯಲ್ಲಿ ನಿರಂತರ 32 ದಿನ, ದಿನಕ್ಕೊಂದು ಮನೆಯಲ್ಲಿ ಕುಂಕುಮಾರ್ಚನೆಯನ್ನು ನಡೆಸಿದ್ದಲ್ಲದೇ 2005 ಮತ್ತು 2010 ರಲ್ಲಿ ಎರಡು ಬಾರಿ ಅಖಂಡ ಶ್ರೀ ಲಲಿತಾಸಹಸ್ರನಾಮ ಕುಂಕುಮಾರ್ಚನೆ ಕಾರ್ಯಕ್ರಮವನ್ನು ಶ್ರೀಪೋಳ್ಯ ಮಠದಲ್ಲಿ ನಡೆಸಿದೆವು.

2005 ಜನವರಿಯಲ್ಲಿ ಪುತ್ತೂರು ಸೀಮೆಯನ್ನು ಪುರ್ನವಿಂಗಡನೆ ಮಾಡಿ 7 ವಲಯಗಳನ್ನಾಗಿ ಮಾಡಿದರು. ಕಬಕ-ಕೊಡಿಪ್ಪಾಡಿ-ಪಡ್ನೂರು ಗ್ರಾಮವನ್ನೊಳಗೊಂಡ ಕಬಕ ವಲಯದ ಮಹಿಳಾ ಪರಿಷತ್ತಿನ ಅಧ್ಯಕ್ಷೆಯನ್ನಾಗಿ ನನ್ನನ್ನು ಆಯ್ಕೆ ಮಾಡಲಾಯಿತು. ನಮ್ಮೆಲ್ಲರ ಜವಾಬ್ದಾರಿ ಮತ್ತಷ್ಟು ಹೆಚ್ಚಾಯಿತು. ಹೊಸನಗರ ಶ್ರೀ ಮಠದಲ್ಲಿ ನಡೆದ ವಿಶ್ವ ಗೋಸಮ್ಮೇಳನ, ಶ್ರೀ ರಾಮಯಣ ಮಹಾಸತ್ರದಂತಹ ಬ್ರಹತ್ ಕಾರ್ಯಕ್ರಮಗಳಲ್ಲಿ ನಾವೂ ಶಕ್ತ್ಯಾನುಸಾರ ಸೇವೆ ಸಲ್ಲಿಸಿದೆವು. ಪುತ್ತೂರು ಸೀಮಾ ವ್ಯಾಪ್ತಿಯ ಬೇರೆ ಬೇರೆ ಕಡೆಗಳಲ್ಲಿ ಕುಂಕುಮ ತಯಾರಿ ಮಾಹಿತಿ, ಶ್ರೀವಿಷ್ಣು ಸಹಸ್ರನಾಮ ಪಾರಾಯಣ, ಶ್ರೀ ಸೌಂದರ್ಯಲಹರೀ ಸ್ತೋತ್ರ ಪಾರಾಯಣ, ಸಣ್ಣ ಸಭೆಗಳನ್ನು ನಡೆಸಿ ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ಉಪನ್ಯಾಸ, ವಿವಿಧ ವಿಷಯಗಳ ಬಗ್ಗೆ ಮಾಹಿತಿ ಹೀಗೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಂಘಟನೆಯನ್ನು ಬಲಪಡಿಸಲು ಪ್ರಯತ್ನಿಸಿದೆವು.

ಶ್ರೀ ಗುರುಗಳ ಆಶಯದಂತೆ ಶತಕೋಟಿ ಕುಂಕುಮಾರ್ಚನೆಯ ಸಮಾರೋಪ ಸಮಾರಂಭವು ಶಿರಸಿಯ ಶ್ರೀ ಅಂಬಾಗಿರಿ ಮಠದಲ್ಲಿ ಜರಗಿದ ಸಂದರ್ಭದಲ್ಲಿ ಶ್ರೀಲಲಿತಾ ಹವನವನ್ನು ಏರ್ಪಡಿಸಿದ್ದರು. ಅದರಲ್ಲಿ ಭಾಗವಹಿಸಿದ ನಾನು ಇದನ್ನೂ ನಮ್ಮ ಶಕ್ತ್ಯಾನುಸಾರ ನಮ್ಮೂರಿನಲ್ಲಿಯೂ ಮಾಡಬಹುದಿತ್ತು ಅನಿಸಿತು. ಹಳೆಯ ಅನುಭವದಿಂದ ಕಲಿತ ಪಾಠದಿಂದ ಮೊದಲಾಗಿ ಸವಿತತ್ತೆಯಲ್ಲಿ ಹಾಗೂ ಶಂಕರಿ ಅಕ್ಕನಲ್ಲಿ ನನ್ನ ಅನಿಸಿಕೆಯನ್ನು ಹಂಚಿಕೊಂಡೆ. ಎಷ್ಟು ವೆಚ್ಚ, ಯಾವರೀತಿ ಸಮಾಜದಲ್ಲಿ ನಾವು ಸಂಪನ್ಮೂಲ ಹಾಗೂ ಸುವಸ್ತುಗಳನ್ನು ಸಂಗ್ರಹಿಸಬಹುದು ಎಂದು ಚರ್ಚಿಸಿದೆವು. ಎಲ್ಲಾ ವಲಯಗಳ ಅಧ್ಯಕ್ಷೆಯರೊಂದಿಗೆ ಮತ್ತು ವೈದಿಕ ಪರಿಷತ್ತಿನವರಲ್ಲಿ ಸಮಲೋಚನೆ ನಡೆಸಿದೆವು. ಕೆಲವರಿಂದ ನಕಾರತ್ಮಕ ಹಾಗೂ ಇನ್ನೂ ಕೆಲವರಿಂದ ಸಕಾರಾತ್ಮಕ ಪ್ರತಿಕ್ರಿಯೆಗಳು ಬಂದವು. ಏನೇ ಆಗಲಿ ಮುಂದಿಟ್ಟ ಹೆಜ್ಜೆಯನ್ನು ಹಿಂದಿಡುವುದು ಬೇಡ ಎಂದು ವಲಯಗಳ ಅಧ್ಯಕ್ಷೆಯರ ಬೆಂಬಲದೊಂದಿಗೆ 17-07-2007 ರಂದು ಶ್ರೀ ಪೋಳ್ಯ ಮಠದಲ್ಲಿ ‘ಶ್ರೀ ಲಲಿತಾ ಸಹಸ್ರನಾಮ ಹವನವು’ ನೇರವೇರಿತು. ಅದಕ್ಕೆ ಸಿಕ್ಕ ಪ್ರತಿಕ್ರಿಯೆಯಿಂದಾಗಿ ಪುತ್ತೂರು ಸೀಮಾ ಮಹಿಳಾ ಪರಿಷತ್ತಿಗೆ ಹೊಸ ಹುರುಪು ಬಂದಂತಾಗಿತ್ತು.

2007 ಆಗಸ್ಟ್ ನಲ್ಲಿ ಸೀಮಾ ಪರಿಷತ್ತಿನ ಪುನರಚನೆಯ ಸಂದರ್ಭದಲ್ಲಿ ಮಹಿಳಾ ಪರಿಷತ್ತಿನ ಅಧ್ಯಕ್ಷೆಯನ್ನಾಗಿ  ನನ್ನನ್ನು ನೇಮಿಸಲಾಯಿತು. ಹೊಸ ಪದಾಧಿಕಾರಿಗಳ ಸಭೆಯಲ್ಲಿ ನಾವು, ಮುಂದಿನ ಮೂರು ವರ್ಷಗಳಲ್ಲಿ ಶ್ರೀ ಲಲಿತಾ ಸಹಸ್ರನಾಮ ಕೋಟಿ ಕುಂಕುಮಾರ್ಚನೆಯನ್ನು ನಡೆಸುವುದು ಹಾಗೂ ಅದರ ಸಮಾರೋಪವನ್ನು ಶ್ರೀಗುರುಗಳ ದಿವ್ಯ ಉಪಸ್ಥಿತಿಯಲ್ಲಿ ನೆರವೇರಿಸುವುದು ಮತ್ತು ಅದರಲ್ಲಿ ಸಂಗ್ರಹವಾದ ಕಾಣಿಕೆಯನ್ನು ನಮ್ಮ ಗೋಕರ್ಣದ ಅಶೋಕೆಯಲ್ಲಿ ನಿರ್ಮಾಣವಾಗುತ್ತಿರುವ ‘ಶ್ರೀಮೂಲ ಮಠ’ಕ್ಕೆ ಸಮರ್ಪಿಸುವುದೆಂದು ಸರ್ವಾನುಮತದಿಂದ ನಿರ್ಣೈಸಲಾಯಿತು.

ಧಾರ್ಮಿಕ ಕಾರ್ಯಕ್ರಮವಲ್ಲದೆ ಇತರ ಚಟುವಟಿಕೆಗಳನ್ನು ಹಮ್ಮಿಕೊಂಡರೆ ಸಂಘಟನೆ  ದೃಷ್ಟಿಯಿಂದ ಉತ್ತಮ ಎಂಬ ಸಲಹೆ ಬಂದ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ಹಾಡುಗಳು, ಭಕ್ತಿಗೀತೆಗಳು, ಕಿರುಪ್ರಹಸನಗಳನ್ನೊಳಗೊಂಡ ಸೀಮಾ ಮಟ್ಟದ ಸ್ಪರ್ಧೆಗಳನ್ನು ಶ್ರೀ ಪೋಳ್ಯ ಮಠದಲ್ಲಿ 10-11-2008 ರಂದು ನಡೆಸಿದೆವು. ‘ಸ್ನೇಹ ಮಿಲನ-2008‘ ಎಂಬ ಈ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ದೊರಕಿತು.  ಪ್ರತಿ ವರ್ಷ ಶ್ರೀಶ್ರೀಗಳವರು ಸನ್ಯಾಸ ಸ್ವೀಕರಿಸಿದ ದಿನವನ್ನು ‘ಜೀವದಾನ’ ಎಂಬ ವಿಶಿಷ್ಟ ಕಾರ್ಯಕ್ರಮ ಹಾಗೂ ರಕ್ತದಾನ ಶಿಬಿರಗಳನ್ನು ಏರ್ಪಡಿಸುವ ಮೂಲಕ ಆಚರಿಸುತ್ತಿದ್ದರು. ನಾನೂ 4 ಬಾರಿ ರಕ್ತದಾನ ಮಾಡಿದ್ದೆ. ನಮ್ಮ ಪುತ್ತೂರು ಸೀಮೆಯಲ್ಲಿಯೂ ರಕ್ತದಾನ ಶಿಬಿರವನ್ನು ಏರ್ಪಡಿಸುವ ಎಂದು ಪರಿಷತ್ತಿನ ಹಿರಿಯರಲ್ಲಿ ಹೇಳಿದಾಗ ಅದಕ್ಕೆ ತಕ್ಕ ಸ್ಪಂದನೆಯಾಗಲೀ ಮಾಹಿತಿಯಾಗಲೀ ದೊರೆಯಲಿಲ್ಲ. ಒಂದು ದಿನ ಆಕಸ್ಮಿಕವೆಂಬಂತೆ ಪುತ್ತೂರು ರೋಟರಿ ಸಂಸ್ಥೆಯ ಹಿರಿಯ ಸದಸ್ಯ, ಖ್ಯಾತ ಪಶುವೈದ್ಯರಾದ ಡಾ.ಯಂ.ಯಸ್.ಭಟ್ಟ ಅವರು- ನೀವು ಮಹಿಳಾ ಪರಿಷತ್ತು ರಕ್ತದಾನದ ಮಹತ್ವದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಮೂಲಕ ಸಾಮಾಜಿಕವಾಗಿ ತೊಡಗಿಸಿಕೊಳ್ಳಬೇಕೆಂದರು. ಅವರಿತ್ತ ಮಾಹಿತಿಯಂತೆ ನಾವು ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕು ಪುತ್ತೂರು ಇದರ ಉಸ್ತುವಾರಿ ವೈದ್ಯರಾದ ಡಾ. ರಾಮಚಂದ್ರ ಭಟ್ಟರನ್ನು ಭೇಟಿ ಮಾಡಿದೆವು. ವಿವಿಧ ಜಾತಿ ಸಂಘಟನೆಗಳು ರಕ್ತದಾನ ಶಿಬಿರ ಏರ್ಪಡಿಸುತ್ತಿವೆ. ಆದರೆ ಪುತ್ತೂರಿನ ಹವ್ಯಕ ಸಮಾಜ ಈ ಕೆಲಸಕ್ಕೆ ಮುಂದೆ ಬಂದುದು ಇದೇ ಪ್ರಥಮ ಎಂದು ತನ್ನಿಂದಾದ ಎಲ್ಲ ಸಹಕಾರವನ್ನೂ ನೀಡುವುದಾಗಿ ಭರವಸೆಯಿತ್ತರು. ರೋಟರಿ ಕ್ಲಬ್ ಪುತ್ತೂರು ಸಿಟಿ, ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಇವರ ಸಹಯೋಗದಲ್ಲಿ ಮಹಿಳಾ ಪರಿಷತ್ತು 09-08-2009 ರಂದು ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಏರ್ಪಡಿಸಿತು.

ದಿನಾಂಕ 03-03-2009 ರಂದು ಕಬಕ ಶ್ರೀ ಮಹಾದೇವಿ ದೇವಸ್ಥಾನದಲ್ಲಿ ಶ್ರೀಗುರುಗಳ ದಿವ್ಯಸಾನಿಧ್ಯದಲ್ಲಿ ‘ಶ್ರೀ ನವಚಂಡಿಕಾ ಹವನ‘ವು ಬಹಳ ವಿಜೃಂಭಣೆಯಿಂದ ಜರಗಿತು. ಹವ್ಯಕ ಸಮಾಜ ಭಾಂದವರಲ್ಲದೆ ಇತರರೂ ಭಾಗವಹಿಸಿದ್ದ ಈ ಕಾರ್ಯಕ್ರಮವು ನಮ್ಮಲ್ಲಿ ಹೊಸ ಚೈತನ್ಯವನ್ನು ತುಂಬಿತು. 2010 ರಲ್ಲಿ ನಾವು ಕೋಟಿಕುಂಕುಮಾರ್ಚನೆಯ ಸಮಾರೋಪ ಸಮಾರಂಭವನ್ನು ಏರ್ಪಡಿಸುವುದೆಂದು 2007 ರಲ್ಲೇ ನಿರ್ಧರಿಸಿಯಾಗಿತ್ತು. 2010 ರ ಆರಂಭದಲ್ಲಿ ಶ್ರೀಗುರುಗಳು ಎಲ್ಲಾ ಸೀಮಾಪರಿಷತ್ತುಗಳನ್ನು ವಿಸರ್ಜಿಸಿದರು. ನನಗಂತೂ ದಿಕ್ಕೇ ತೋಚದಂತಾಯಿತು. ಈ ಬಗ್ಗೆ ಯಾರಲ್ಲಿ ಹೇಳುವುದು, ಕೇಳುವುದು ಎಂದು ತಿಳಿಯದಾಯಿತು. ಸಾಲದಕ್ಕೆ ನಿನ್ನ ಯೋಚನೆ, ಯೋಜನೆಗಳನ್ನೆಲ್ಲ ಕಟ್ಟಿ ಅಟ್ಟದಲ್ಲಿಡು ಎಂದು ಕೆಲವರು ಉರಿಯುವ ಗಾಯಕ್ಕೆ ಬರೆ ಎಳೆದರು. ಆದದ್ದಾಗಲೀ ನಾವು ಕೋಟಿ ಕುಂಕುಮಾರ್ಚನೆಯನ್ನು ಪೂರೈಸಿಬಿಡುವ ಎಂದು ತೀರ್ಮಾನಿಸಿ ‘ಶ್ರೀ ಲಲಿತಾ ಸಹಸ್ರನಾಮ ಕೋಟಿ ಕುಂಕುಮಾರ್ಚನೆ ಸಮಿತಿ’ ಎಂದು ನಮಗೆ ನಾವೇ ಸಮಿತಿಯನ್ನು ರಚಿಸಿಕೊಂಡೆವು. ಶ್ರೀಗುರುಗಳು ಮಂಡಲಗಳ ಕುರಿತಾದ ಚಿಂತನೆಯಲ್ಲಿದ್ದರು. 2010 ಮೇ ತಿಂಗಳಿನಲ್ಲಿ ಶ್ರೀಮಾಣಿ ಮಠದಲ್ಲಿ ಶ್ರೀಗುರುಗಳ ಮೊಕ್ಕಾಮಿನ ಸಂದರ್ಭದಲ್ಲಿ ನಮ್ಮ ಕಾರ್ಯಕ್ರಮಕ್ಕೆ ಶ್ರೀಸಂಸ್ಥಾನದಿಂದ ಒಪ್ಪಿಗೆ ಪಡೆದುಕೊಂಡು ದಿನ ನಿಗದಿ ಪಡಿಸಿದೆವು. 2010 ನವೆಂಬರ್ ತಿಂಗಳಿನಲ್ಲಿ ‘ಶ್ರೀಪೋಳ್ಯ ಮಠ’ ದಲ್ಲಿ ಶ್ರೀ ಗುರುಭಿಕ್ಷಾ ಸೇವೆ, ಶ್ರೀ ಲಲಿತಾ ಹವನವನ್ನು ನಡೆಸುವುದೆಂದು ನಿಶ್ಚೈಸಲಾಯಿತು. 1ಕೋಟಿ ಕುಂಕುಮಾರ್ಚನೆಯ ಸಂಕಲ್ಪ 2007 ಆಗಸ್ಟ್ ನಲ್ಲಿ ಪ್ರಾರಂಭವಾದರೆ 2010 ಮೇ ಯಲ್ಲಿ 40 ಲಕ್ಷವನ್ನು ದಾಟಿತ್ತಷ್ಟೇ. 34 ತಿಂಗಳಿನಲ್ಲಿ ಮಾಡಿದ ಸಾಧನೆಯನ್ನು ಗಮನಿಸಿದ ಕೆಲವರು, ಇನ್ನು ಐದು ತಿಂಗಳಿನಲ್ಲಿ ನೀವು ಈ ಗುರಿಯನ್ನು ತಲುಪಲು ಸಾಧ್ಯವಿಲ್ಲ ಎಂದು ಎಚ್ಚರಿಸಿದ್ದರು. ಯಾವಾಗ ಶ್ರೀಗುರುಗಳು ಒಪ್ಪಿಗೆ ನೀಡಿ ಅನುಗ್ರಹ ಮಂತ್ರಾಕ್ಷತೆಯನ್ನಿತ್ತರೋ ಆ ಕ್ಷಣದಿಂದ ನಮ್ಮಲ್ಲಿ ವಿದ್ಯುತ್ ಸಂಚಾರವಾದಂತಾಯಿತು. ಎಲ್ಲೆಡೆಗಳಲ್ಲಿ ಕುಂಕುಮಾರ್ಚನೆ ಕಾರ್ಯಕ್ರಮಗಳು ಭರದಿಂದ ನಡೆದವು. ಮಾಣಿ ವಲಯದ ಮಿತ್ತೂರು ಮನೆಯ ಶ್ರೀಮತಿ ಮಹಾಲಕ್ಷ್ಮಿ.ಯಂ.ಭಟ್ಟ-ಇವರು 2007 ರಿಂದಲೇ ತಮ್ಮ ಮನೆಯಲ್ಲಿಯೇ ಪ್ರತೀ ಮಂಗಳವಾರ ಮತ್ತು ಶುಕ್ರವಾರಗಳಂದು ಆಸುಪಾಸಿನ ಮನೆಯವರನ್ನೆಲ್ಲ ಸೇರಿಸಿಕೊಂಡು ಕುಂಕುಮಾರ್ಚನೆ ನಡೆಸಿದ್ದರು. ಕೆದಿಲ ವಲಯದ ಶ್ರೀಮತಿ ವಿದ್ಯಾಶಂಕರಿ ಪೆರ್ನಾಜೆ- ಇವರು ವೈಯಕ್ತಿಕವಾಗಿ ೫ ಲಕ್ಷ ಕುಂಕುಮಾರ್ಚನೆ ಮಾಡಿದರು. ಮಾಜಿ ಕಾರ್ಯದರ್ಶಿ  ಶ್ರೀಮತಿ ವನಿತಾ.ಭಟ್ಟ,  ಕಾರ್ಯದರ್ಶಿ ಶ್ರೀಮತಿ ಗೀತಾ ಯನ್.ಭಟ್ಟ,  ಅಧ್ಯಕ್ಷೆ ಶ್ರೀಮತಿ ಉಷಾ ಜಯರಾಮ್, ಶ್ರೀಮತಿ ಭಾಗ್ಯಲಕ್ಷ್ಮಿ ಅರ್ತಿಕಜೆ, ಶ್ರೀಮತಿ ಶ್ಯಾಮಲಾ ಕಜೆ, ಶ್ರೀಮತಿ ಶ್ಯಾಮಲಾ ಪಾರ, ಶ್ರೀಮತಿ ವಿದ್ಯಾ.ಆರ್.ಗೌರಿ, ಶ್ರೀಮತಿ ಲಲಿತಾ ಯಸ್.ಭಟ್ಟ, ಕಬಕ ವಲಯದ ಅಧ್ಯಕ್ಷೆ ಶ್ರೀಮತಿ ಶಾರದಾ ರಾಮಚಂದ್ರ ಭಟ್ಟ, ಶ್ರೀಮತಿ ಶಾರದಾ ಪಂಜಿಗುಡ್ಡೆ, ಶ್ರೀಮತಿ ಚಂದ್ರಕಲಾ ಪಂಜಿಗುಡ್ಡೆ, ಶ್ರೀಮತಿ ವೆಂಕಟೇಶ್ವರಿ ಮಂಜಲ್ಪಡ್ಪು, ಸರ್ವೆ ವಲಯದ ಅಧ್ಯಕ್ಷೆ ಶ್ರೀಮತಿ ಶ್ರೀದೇವಿ ಕಾನಾವು, ಶ್ರೀಮತಿ ದೇವಕಿ. ಯಂ.ಭಟ್ಟ, ಶ್ರೀಮತಿ ಲಲಿತಾ ಮೈಕೆ, ಶ್ರೀಮತಿ ಮಹಾಲಕ್ಷ್ಮಿ.ಯಂ.ಭಟ್ಟ, ಶ್ರೀಮತಿ ವನಜಾಕ್ಷಿ ಮಿತ್ತೂರು, ಕೆದಿಲ ವಲಯದ ಅಧ್ಯಕ್ಷೆ ಶ್ರೀಮತಿ ವಿದ್ಯಾಶಂಕರಿ ಪೆರ್ನಾಜೆ, ಶ್ರೀಮತಿ ಸರಸ್ವತಿ ವಡ್ಯದಗಯ, ಪಾಣಾಜೆ ವಲಯದ ಅಧ್ಯಕ್ಷೆ ಶ್ರೀಮತಿ ಮಧುರಾ ಗಿಳಿಯಾಲು, ಶ್ರೀಮತಿ ವನಮಾಲ ಆರ್ಲಪದವು, ಶ್ರೀಮತಿ ಪಾರ್ವತಿ ಭಟ್ಟ ಇರ್ದೆ ಅವರಲ್ಲದೇ ಇನ್ನೂ ಅನೇಕ ಮಹಿಳೆಯರು ಸತತವಾಗಿ ಕುಂಕುಮಾರ್ಚನೆ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡರು. ಶ್ರೀ ಗುರುಗಳ ಅನುಗ್ರಹದಿಂದ 2010 ನವರಾತ್ರಿಯ ವೇಳೆಗಾಗಲೇ ನಾವು ಗಮ್ಯವನ್ನು ತಲುಪಿದ್ದೆವು.(1 ಕೋಟಿ 16 ಲಕ್ಷ). 16-11-2010 ರಂದು ‘ಶ್ರೀ ಪೋಳ್ಯ ಮಠ’ದಲ್ಲಿ ಶ್ರೀ ಗುರುಭಿಕ್ಷಾ ಸೇವೆ, ಶ್ರೀ ಲಲಿತಾಹವನ, ಕೋಟಿಕುಂಕುಮಾರ್ಚನೆಯ ಸಮರೋಪ ಸಮಾರಂಭವು ಶ್ರೀಗುರುಗಳ ದಿವ್ಯಸಾನ್ನಿಧ್ಯದಲ್ಲಿ ವಿಜೃಂಭಣೆಯಿಂದ ನೆರವೇರಿತು. ಪುತ್ತೂರು ಸೀಮೆಯಲ್ಲದೆ ಮಂಗಳೂರು ಹೋಬಳಿಯ ವಿವಿಧೆಡೆಗಳಿಂದ ಬಂದ 250ಕ್ಕೂ ಹೆಚ್ಚು ಮಹಿಳೆಯರು ಅಂದಿನ ಕುಂಕುಮಾರ್ಚನೆಯಲ್ಲಿ ಪಾಲ್ಗೊಂಡು ಧನ್ಯರಾದರು.

ಈ ಎಲ್ಲಾ ಕಾರ್ಯಕ್ರಮಗಳಿಗೆ ಶ್ರೀ ಪೋಳ್ಯಮಠದ ಆಡಳಿತ ಮಂಡಳಿ, ಕಬಕ ವಲಯ ಪರಿಷತ್ತು, ಪುತ್ತೂರು ಸೀಮಾ ಪರಿಷತ್ತು, ಪುತ್ತೂರು ಸೀಮಾ ವೈದಿಕ ಪರಿಷತ್ತು ಹೀಗೆ ಎಲ್ಲರ ಸಹಕಾರ, ಪ್ರೋತ್ಸಾಹವನ್ನು ನಾವು ಸ್ಮರಿಸಲೇಬೇಕಾಗಿದೆ. ಪೂರ್ವ ತಯಾರಿ, ಸುವಸ್ತು ಸಂಗ್ರಹ, ಸಂಪರ್ಕ ಹೀಗೆ ಪ್ರತಿಯೊಂದು ವಿಚಾರದಲ್ಲಿಯೂ, ಹೆಸರಿಗೆ ಮಹಿಳಾ ಪರಿಷತ್ತಿನ ಕಾರ್ಯಕ್ರಮವಾದರೂ ಅನೇಕ ಮಹನೀಯರು ತ್ರಿಕರಣಪೂರ್ವಕವಾಗಿ ಶ್ರಮಿಸಿದರು. ವೇಮೂ.ಶ್ರೀ ಬಡಜ ಜಯರಾಮ ಜೋಯಿಸ, ವೇ.ಮೂ.ಶ್ರೀ ನಾರಾಯಣ ಜೋಯಿಸ ಕೊಡಿಪ್ಪಾಡಿ, ವೇ.ಮೂ.ಶ್ರೀ ಸತ್ಯನಾರಾಯಣ ಭಟ್ಟ ಹಾಗೂ ಇತರ ವೈದಿಕರ ಸಹಕಾರಕ್ಕೆ ನಾವು ಚಿರಋಣಿಗಳು. ಶ್ರೀ ಲಲಿತಾ ಹವನ ಹಾಗೂ ಶ್ರೀ ನವಚಂಡಿಕಾ ಹವನವನ್ನು ಸೇವಾರೂಪದಲ್ಲಿ ನಡೆಸಿಕೊಟ್ಟು ಇತರರಿಗೆ ಮಾದರಿಯಾಗಿದ್ದಾರೆ. ಹಾಗೆಯೇ ಇನ್ನೋರ್ವ ಗುರುಸೇವಕ ಶ್ರೀ ವೇಣುಗೋಪಾಲ ಕೋನಡ್ಕ ಇವರು ಸಹ ನಮ್ಮ ಕಾರ್ಯಕ್ರಮಗಳನ್ನು ಸೇವಾರೂಪದಲ್ಲಿ ಚಿತ್ರೀಕರಿಸಿ ನಮ್ಮೊಂದಿಗೆ ಕೈಜೋಡಿಸಿದ್ದಾರೆ.

ಕಬಕ ಗ್ರಾಮ ಪರಿಷತ್ತಿನ, ಕಬಕ ವಲಯದ, ಪುತ್ತೂರು ಸೀಮಾ ಮಹಿಳಾ ಪರಿಷತ್ತಿನ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸುವಲ್ಲಿ ನನ್ನ ಪತಿ ಶ್ರೀ ರಮೇಶ ಭಟ್ಟ, ಬೈಪದವು- ಇವರ ಸಹಾಯ ದೊಡ್ಡದು. ಕೆಲವೊಂದು ಸಾರಿ ನಿರುತ್ಸಾಹದಿಂದ ಕೈಚೆಲ್ಲಿದಾಗ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದರು. ನನ್ನ ಮಾವನವರಾದ ಶ್ರೀ ಬೈಪದವು ಭೀಮ ಭಟ್ಟ-ಇವರು ನೀಡಿದ ಮಾರ್ಗದರ್ಶನ ಪರಿಷತ್ತು ಮಾತ್ರವಲ್ಲ ಅದರಾಚೆಗೂ ಮೀರಿದೆ. ನನ್ನ ಸೇವೆ ಶ್ರೀಮಠಕ್ಕೆ ಅಳಿಲ ಸೇವೆಯಷ್ಟೇ, ಅನುಭವವೆಲ್ಲವೂ ಸಿಹಿಯಾಗಿರಲಿಲ್ಲ. ಒಂದೆರಡು ಭಾರಿ ವಿಪರೀತ ನೋವು ಕೊಡುವಂತಹ ಅನುಭವವೂ ನನಗಾಗಿತ್ತು. ಕಾರ್ಯಕ್ರಮಗಳನ್ನು ನಡೆಸುವಾಗ, ಜವಾಬ್ದಾರಿಗಳನ್ನು ನಿರ್ವಹಿಸುವಾಗ ಬಹಳಷ್ಟು ಲೋಪಗಳು, ಕೊರತೆಗಳು ಇರಬಹುದು. ಅದೆಲ್ಲದರ ಹೊಣೆಗಾರಿಕೆ ನನ್ನದು. ಈ ಜನ್ಮದಲ್ಲಿ ಪೂರ್ವಜನ್ಮದ ಪಾಪ ತೊಳೆಯಲು ಶ್ರೀಗುರುಸೇವೆಯಂತಹ ಅಪೂರ್ವ ಅವಕಾಶ ನನ್ನ ಪಾಲಿಗೆ ಒದಗಿ ಬಂದಿದೆ. ಬಂದ ಕೆಲಸವನ್ನು ನನ್ನ ಅರಿವಿನ ದ್ರವ್ಯದಿಂದ ಪೂರೈಸಿದ್ದೇನೆ. ಕಿರಿಯಳಾದ ನನ್ನ ಕೆಲಸಗಳನ್ನು ಒಪ್ಪಿದ, ತಪ್ಪುಗಳನ್ನು ಮನ್ನಿಸಿದ, ತಿದ್ದಿ ಬೆಳೆಸಿದ ಹಿರಿಯರೆಲ್ಲರಿಗೂ ನನ್ನ ನಮನಗಳು. ಸೇವಾಕಾರ್ಯಗಳ ಯಶಸ್ಸು ನಮ್ಮೆಲ್ಲರದು.  ನನ್ನ ಕಾರ್ಯವ್ಯಾಪ್ತಿಯ ಯಶಸ್ಸೆಲ್ಲವನ್ನೂ ಶ್ರೀಗೋಕರ್ಣ ಮಂಡಲಾಧೀಶ ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯ ಚರಣಕಮಲಗಳಿಗೆ ಸಮರ್ಪಿಸುತ್ತಿದ್ದೇನೆ. ನನ್ನ ಮನದ ಮಾತುಗಳನ್ನು ಶ್ರೀಗುರು ‘ಸಮ್ಮುಖ’ದಲ್ಲಿ ನಿವೇದಿಸಲು ಅವಕಾಶವಿತ್ತ ಈ ಶ್ರೀಗುರುಗಳ ಮುಖವಾಣಿಯಾಗಿರುವ ಹರೇರಾಮ ವೆಬ್ಸೈಟ್ ನ ಎಲ್ಲ ಸಹೋದರ ಸಹೋದರಿಯರಿಗೆ ವಂದನೆಗಳು.

ವಂದನೆಗಳು,

ಶ್ರೀಮತಿ ವೀಣಾ ರಮೇಶ್, ಬೈಪದವು
ರಜತಾದ್ರಿ,
ಕಬಕ, ಪುತ್ತೂರು

~

ಶ್ರೀಮತಿ ವೀಣಾ ರಮೇಶ್ ಬೈಪದವು ಇವರು ಶ್ರೀ ಪಳ್ಳತ್ತಡ್ಕ ನಾರಾಯಣ ಭಟ್ಟ ಹಾಗೂ ಶ್ರೀಮತಿ ರತ್ನಾವತಿ  ಯವರ ಪುತ್ರಿಯಾಗಿದ್ದು, 24. 6.1966 ರಲ್ಲಿ ಜನಿಸಿದರು. ತಮ್ಮಪ್ರಾಥಮಿಕ ವಿದ್ಯಾಭ್ಯಾಸವನ್ನು ಮಂಗಳೂರಿನಲ್ಲಿಯೂ, ನಂತರದ ವಿದ್ಯಾಭ್ಯಾಸವನ್ನು ಪಳ್ಳತ್ತಡ್ಕ ಹಾಗೂ ಪೆರ್ಲದ ಸತ್ಯನಾರಾಯಣ ಹೈಸ್ಕೂಲ್ ನಲ್ಲಿಯೂ ಮಾಡಿದರು.

ವೀಣಾ ರಮೇಶ್ ಬೈಪದವು

ವೀಣಾ ರಮೇಶ್ ಬೈಪದವು

8.11. 1985ರಲ್ಲಿ ಶ್ರೀ ಬೈಪದವು ಭೀಮ ಭಟ್ ಹಾಗೂ ಶ್ರೀಮತಿ ಪದ್ಮಾವತಿ ಯವರ ಪುತ್ರರಾದ ಶ್ರೀ ರಮೇಶ್ ಭಟ್ ಬೈಪದವು ಇವರೊಂದಿಗೆ ವಿವಾಹವಾಗಿ ಕೃಷಿಜೀವನವನ್ನು ಆತ್ಮೀಯವಾಗಿ ಒಪ್ಪಿ ನಡೆಸಿಕೊಂಡು ಬಂದಿರುತ್ತಾರೆ. ಸಂಗೀತದಲ್ಲಿ ಅಭಿರುಚಿಯಿರುವ ಇವರು ಸಂಘಟನೆಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಸದಾ ನಗುಮೊಗದಲ್ಲಿದ್ದು, ಮನೆಗೆ ಬಂದ ಎಲ್ಲರನ್ನು ಉಪಚರಿಸುವುದು ಇವರ ಹವ್ಯಾಸ.
ಮಾಣಿಮಠದಲ್ಲಿ ನಡೆದ ವಿಜಯ ಚಾತುರ್ಮಾಸ್ಯದ ಶಬರಿ ಆತಿಥ್ಯದ ಕಾರ್ಯದರ್ಶಿಯಾಗಿ, ಅರುವತ್ತು ದಿನದ ಶಬರಿ ಆತಿಥ್ಯದ ಕೆಲಸಗಳನ್ನು ಸಮರ್ಪಕವಾಗಿ ನಡೆಸಿರುತ್ತಾರೆ.
ಮಾಣಿ ಮಠದಲ್ಲಿ ಇಂದು ಕಾರ್ಯಕರ್ತರ ಸಮಾವೇಶ. ಸ್ವತಃ ಒಬ್ಬ ಶ್ರೀ ಮಠದ ಕಾರ್ಯಕರ್ತೆಯಾಗಿ ಶ್ರೀಮಠದ ಸೇವೆಯಲ್ಲಿ ದುಡಿದು ಶ್ರೀಗುರುಗಳ ಆಶೀರ್ವಾದವನ್ನು ಪಡೆಯುತ್ತಿರುವ ವೀಣಕ್ಕನ ಮನದ ಮಾತುಗಳು ಶ್ರೀಗುರುಗಳ ಸಮ್ಮುಖದಲ್ಲಿ ಸಮರ್ಪಿತವಾಗಿವೆ.
ಇನ್ನು ಮುಂದೆಯೂ ಶ್ರೀಮಠದ ಸೇವೆಯಲ್ಲಿ ತಮ್ಮ ಪೂರ್ಣ ಸೇವೆಯನ್ನು ನಿರ್ವಹಿಸುತ್ತಾ, ಶ್ರೀಗುರುಗಳ, ಶ್ರೀ ರಾಮನ ಅನುಗ್ರಹ ಪ್ರಾಪ್ರಿಯಾಗಲಿ ಎಂಬ ಹಾರೈಕೆ.

~

ಫೋಟೋ ಸಂಗ್ರಹ:

Facebook Comments