ಇಂದು ಛತ್ರಪತಿ ಶಿವಾಜಿಯ ಜನ್ಮದಿನ.
ಅಮೃತಸಿಂಧುವಿಗೆ ಸರಿಮಿಗಿಲೆನಿಸುವ ಆ ಮಹಾಪುರುಷನ ಬದುಕಿನ ಒಂದೇ ಒಂದು ಬಿಂದುವನ್ನು ಬುದ್ಧಿಬಿಂದಿಗೆಗೆ ತಂದುಕೊಳ್ಳೋಣವೇ..?

ಕಾಲ: ಇಂದಿಗೆ ಸುಮಾರು ಮೂರೂಮುಕ್ಕಾಲು ಶತಮಾನಗಳ ಹಿಂದಿನ ಒಂದು ದಿನ.
ದೇಶ: ಆದಿಲ್ ಶಾಹಿಗಳಿಂದ ಆಕ್ರಾಂತವಾಗಿದ್ದ ವಿಜಯಪುರದ ಅಗಸೆಬಾಗಿಲೊಂದರ* ಸಮೀಪ.

ಮಂಗಲವೇ ಮೈವೆತ್ತ ಮುಗ್ಧ ಗೋವೊಂದು ಹಾಡುಹಗಲೇ ಅಲ್ಲಿ ಕೊಲ್ಲಲೋಸುಗವಾಗಿ ಸೆಳೆದೊಯ್ಯಲ್ಪಡುತ್ತಿತ್ತು. ಆಕಳ ಕೊರಳಿಗೆ ಕಾಲಪಾಶವನ್ನೇ ಬಿಗಿದು ಸೆಳೆಯುತ್ತಿದ್ದ, ಕರದಲ್ಲಿದ್ದ ಕರಾಲ ಕರವಾಲವನ್ನು ಆಕಳ ಕೊರಳೆಡೆಗೆ ಝಳಪಿಸುತ್ತ, ಕಾಲನ ದೂತನಂತೆ ಮೆರೆಯುತ್ತಿದ್ದ ಕಟುಕನ ಕಾರ್ಕೋಟಕ ಮುಖವು ವಾತಾವರಣದಲ್ಲಿ ಮರಣದ ಕರಿನೆರಳನ್ನೇ ಪಡಿಮೂಡಿಸಿತ್ತು.#LokaLekha by @SriSamsthana SriSri RaghaveshwaraBharati MahaSwamiji
ನಿರಪರಾಧದ, ನಿತ್ಯೋಪಕಾರದ ಆ ಪುಣ್ಯಜೀವದ ನಿಷ್ಕರುಣ, ನಿಷ್ಕಾರಣ ಮಾರಣ! ಎಲ್ಲರೆದುರೇ ನಡೆಯುತ್ತಿರುವ, ಎಲ್ಲೆ ಮೀರಿದ ಆ ಸಲ್ಲದ ಕಾರ್ಯವನ್ನು ಖಂಡಿಸಿ ಸೊಲ್ಲೆತ್ತುವವರು ಅಲ್ಲಿರಲೇ ಇಲ್ಲ!

ಯಾರು ಸೊಲ್ಲೆತ್ತಬೇಕು? ಯಾರ ನಿಷ್ಕಾರಣ-ವಧೆಯಾಗುತ್ತಿದೆಯೋ, ಆಕೆ ಸೊಲ್ಲೇ ಇಲ್ಲದ ತಾಯಿ- ಮೂಕಾಂಬಾ; ತನ್ನ ವಧೆಯೇ ಆಗುತ್ತಿದ್ದರೂ, ಕೈ-ಬಾಯಿಲ್ಲದ ಆ ತಾಯಿ ಅಂಬೆಗರೆಯುವುದನ್ನು ಬಿಟ್ಟು ಬೇರೇನು ತಾನೇ ಮಾಡಿಯಾಳು!?

ಸುತ್ತ ಮುತ್ತಿರುವವರೆಲ್ಲ *ಆತತಾಯಿಗಳು! ಮೈವೆತ್ತ ಮಾತೃತ್ವವನ್ನು ಮಾಂಸದ ಮುದ್ದೆಯೆಂದು ಭಾವಿಸುವ ಮತಿಹೀನರು! ಕರದಲ್ಲಿ *ಕರವಾಲ, *ಉರದಲ್ಲಿ ಹಾಲಾಹಲವಿರುವ ಹತ್ಯಾ-ಸಂತೋಷಿಗಳು! ನೀರಾಡದ ನಯನಗಳ, ದಯವಿಲ್ಲದ ಹೃದಯಗಳ ಆ ಸುಲ್ತಾನನ ಸ್ವಮತೀಯರ ದೃಷ್ಟಿಯಲ್ಲಿ ಗೋವಿಗೆ ನೋವೀಯುವುದು ಸ್ವಧರ್ಮ! ಮಾತ್ರವಲ್ಲ, ಅದು ಹಿಂದುಗಳ ತಾಯಿಯನ್ನು ಕೊಂದ ಸಂಭ್ರಮ!

‘ಹಿಂಸೆಯೇ ಹಬ್ಬ; ಸಾವೇ ಸಂಭ್ರಮ’ವೆಂಬ ಸಿದ್ಧಾಂತದ ಎದುರು ಕರುಣರೋದನವೇನು, ಮರಣರೋದನವೂ ಅರಣ್ಯರೋದನವೇ ಸರಿ!

ಹ್ಞಾ! ‘ಗೋವೆಂದರೆ ತಾಯಿ, ಸಕಲದೇವತೆಗಳೂ ನೆಲೆಸಿರುವ- ನಡೆದಾಡುವ ದೇವಸ್ಥಾನ’ ಎಂಬ ನಂಬಿಕೆಯ ಹಿಂದುಗಳೂ ಅಲ್ಲಿದ್ದರು; ಆದರೆ ಅವರ ಇರುವಿಕೆಗೂ ಇಲ್ಲದಿರುವಿಕೆಗೂ ಯಾವ ಅಂತರವೂ ಇರಲಿಲ್ಲ! ಗೋವು ಮಾತಿಲ್ಲದೆ ಮೂಕಪ್ರಾಣಿಯೆನಿಸೆದರೆ ಇವರು ಮಾತಿದ್ದೂ ಮೂಕರು! ಎತ್ತಲಾರದ ತಲೆ ಹೊತ್ತವರು; ಉಸಿರಿದ್ದರೂ ಉಸಿರೆತ್ತಲಾರರು; ಸುಲ್ತಾನನ ಭಯದಲ್ಲಿ ಹಿಮಗಟ್ಟಿದ ಎದೆಯದು ತಾಯ ವಧೆಗೂ ಕರಗದು; ಕಾಮಧೇನುವಿನ ವಧೆಯು ಕಣ್ಮುಂದೆಯೇ ನಡೆದರೂ ಕಂಡೂ ಕಾಣದಂತಿರುವ ಅವರ ಕಂಗಳಲ್ಲಿ ತನ್ನರಿವಿನ ಮರೆವಿನ ಕುರುಡು! ಕಂಡರೂ ಪ್ರತಿಭಟಿಸಲು ಮೇಲೇಳದ ಕೈಗಳಲ್ಲಿ ಹೇಡಿತನದ ಪಾರ್ಶ್ವವಾಯು! ಈ *ಭಾ-ರತರು ನಿಜಕ್ಕೂ *ಭೀ-ರತರು!

ಇಷ್ಟಕ್ಕೂ, ಅದು ಒಂದು ಗೋವಿನ ಕಥೆಯಲ್ಲ; ಕೇವಲ ಅಂದೊಂದು ದಿನದ ಕಥೆಯೂ ಅಲ್ಲ. ವಿಜಯಪುರದ ಮುಳ್ಳಗಸಿಯ ಮಗ್ಗುಲಲ್ಲಿ ಗೋಹತ್ಯೆಯೆಂಬುದು ನಿತ್ಯಕಾರ್ಯವಾಗಿದ್ದಿತು. ಅದು ಈಗಲೂ ಹಾಗೆಯೇ ಇದೆ! ಆದರೆ ಅಂದಿನ ಕಥೆಯು ಮಾತ್ರ ಎಂದಿನಂತೆ ಮುಂದುವರೆಯಲಿಲ್ಲ; ಏಕೆಂದರೆ ಮುಂದೊಮ್ಮೆ ಸಮಗ್ರ ಭಾರತವರ್ಷದ ಕಥೆಯನ್ನೇ ಬದಲಿಸಲಿರುವ ವೀರಬಾಲಕನೋರ್ವನ ಕ್ಷಾತ್ರತೇಜಸ್ಸಿನ ಕಿಡಿಗಂಗಳು ಅದಾಗಲೇ ಆ ದೃಶ್ಯವನ್ನು ನೋಡಿಬಿಟ್ಟಿದ್ದವು! ಎಲ್ಲಿಲ್ಲದ ರೋಷಾವೇಶವು ಆ ಪುಟ್ಟ- ಆದರೆ ದಿಟ್ಟ ಎದೆಯನ್ನು ಆವರಿಸಿತ್ತು; ಉಸಿರು ಬಿಸಿಯೇರಿತ್ತು; ಮುಷ್ಟಿ ಬಿಗಿಯಾಗಿತ್ತು; ಮುಖವು ಕೆಂಪೇರಿತ್ತು; ಜ್ವಾಲಾಮುಖಿಯ ಲಾವಾರಸವು ಅಗ್ನಿಪರ್ವತವನ್ನೊಡೆದು ಕುದಿದುಕ್ಕಿತ್ತು!

ಜಗಜ್ಜನನಿ ಗಿರಿಜಾಬಾಯಿಯ ಸುಕುಮಾರನಾದ ಕುಮಾರಸ್ವಾಮಿಯನ್ನು ಹೋಲುವ ಆ ಅಗ್ನಿಕುಮಾರಕನಾರು?
ಅವನೇ ಜನನಿ ಜೀಜಾಬಾಯಿಯು ಹಡೆದ, ಜಗಜ್ಜನನಿ ಗಿರಿಜಾಬಾಯಿಯಿಂದ ಖಡ್ಗವ ಪಡೆದ, ಪ್ರಲಯಾಗ್ನಿಯ ಕಿಡಿ ‘ಶಿವಾಜಿ’! ಇದೀಗ ಮೊಳಕೆಯಲ್ಲಿರುವ ಮಹಾವೀರ! ಮಹಾರಾಷ್ಟ್ರದಲ್ಲಿ ಉದಿಸಿ ಭಾರತವೆಂಬ ಮಹಾನ್ ರಾಷ್ಟ್ರವನ್ನೇ ಬೆಳಗಿದ ಭಾಸ್ಕರ!

ಅದರೆ, “ಅದೆಲ್ಲ ಮುಂದಿನ ಕಥಾನಕ; ಇಂದವನು ಕೇವಲ ಬಾಲಕ; ಕಣ್ಮುಂದಿರುವುದು ಕರಾಲ ಕಟುಕ; ಮುಂದಾಗುವ ಅನಾಹುತದ ಕಲ್ಪನೆಯೇ ಭಯಾನಕ! ಬೆಣ್ಣೆಯ ಮುದ್ದೆಯು ಬಂಡೆಯನ್ನು ಬಡಿದುರುಳಿಸಲುಂಟೇ!? ಹಾ! ಯಮಲೀಲೆಯೇ! ಹಸುವಿನ ಜೊತೆಗೆ ಶಿಶುವೂ ಅಸು ನೀಗಿತೇ!?” ಎಂದು ತಿಳಿದವರೂ ಕಳವಳಿಸಿದರು.
ಆದರೆ, ಕಿಚ್ಚಿಗೆ ಬಾಲ್ಯವುಂಟೇ? ಕಿಡಿಯಾದರೂ ಕಿಚ್ಚು ಸುಡದಿರುವುದೇ? ಮಿಡಿನಾಗರವಾದರೇನು, ಕೆಣಕಿದರೆ ಕಚ್ಚಿ ಕೊಲ್ಲದಿರದೇ? ಅಂತೆಯೇ ಶಿವಾಜಿಯು ಬಾಲಕನಾಗಿದ್ದರೂ ಅವನ ಕೆಚ್ಚಿಗೆ ಬಾಲ್ಯವಿರಲಿಲ್ಲ! ಕಣ್ಮುಂದೆಯೇ ನಡೆಯುವ ಬರ್ಬರ ಗೋಹತ್ಯೆಯನ್ನು ನೋಡಿ ಸಹಿಸುವುದು ಅವನಿಂದ ಸಾಧ್ಯವೂ ಇರಲಿಲ್ಲ!

ಮುಂದಿನ ಕ್ಷಣದಲ್ಲಿ…#LokaLekha by @SriSamsthana SriSri RaghaveshwaraBharati MahaSwamiji
ಕಿರಿಗತ್ತಿಯು ಇರುವೆಡೆಗೆ ಅವನ ಕರವಿಳಿಯಿತೇ? ಅಥವಾ ಆ ವೀರವರನ ಕರದೆಡೆಗೆ ಖಡ್ಗವು ತಾನೇ ಹಾರಿತೇ? ಶಿವನೇ ಬಲ್ಲ*!
ಪೊರೆಗಳಚಿ ಹೊರಬರುವ ಕಾಳೋರಗನ ನೆ‌ನಪಿಸುವ, ಶಿಶುಶಿವನ ವರಖಡ್ಗವು ಒರೆಗಳಚಿ ಹೊರಬಂದು, ಕರ ಸೇರಿ, ಮುಗಿಲಮುಖಿಯಾಗಿ ಮೇಲೆದ್ದಿತು.

ಅಹ್! ಆದೆಂಥ ಸಾಮ್ಯ! ಅಲ್ಲಿ ಕೈಲಾಸದಲ್ಲಿಯೂ ಶಿವ; ಇಲ್ಲಿ ವಿಜಯಪುರದಲ್ಲಿಯೂ ಶಿವ! ಅಲ್ಲಿ, ಪರಶಿವನ ಕೊರಳಲ್ಲಿ ಮೆರೆಯುವ ವರ ಸರ್ಪ; ಇಲ್ಲಿ ವೀರಶಿವನ ಬೆರಳಲ್ಲಿ ಬಿಗಿದು ಬೆಳಗುವ ವರ ಖಡ್ಗ!

ಎವೆಯಿಕ್ಕುವುದರೊಳಗಾಗಿ ಕಾಮಧೇನುವಿನ ಕುತ್ತಿಗೆಯ ಮೇಲೆ ಕತ್ತಿಯೆತ್ತಿದ ಕರವನ್ನೇ‌ ಕತ್ತರಿಸಿ ಚೆಲ್ಲಿದನು ಶಿವಾಜಿ! ಬರಸಿಡಿಲು ಬಡಿದಾಗ ಮುರಿದು ಧರೆಗುರುಳುವ ವಿಷವೃಕ್ಷದ ಕೊಂಬೆಯಂತಾಯ್ತು ಕಟುಕನ ಕರವಾಲ ಹಿಡಿದ ಕರದ ಸ್ಥಿತಿ! ಹಸುವಿನ ಅಸುವುಳಿದಿತ್ತು; ಕತ್ತರಿಸುವ ಕೈಗೇ ಕುತ್ತು ಬಂದಿತ್ತು; ವಿಜಯಪುರವೆಂಬ ನಾಮಧೇಯಕ್ಕೆ ಒಂದಿಷ್ಟಾದರೂ ಅರ್ಥ ಬಂದಿತ್ತು! ಅತಿ ದೀರ್ಘಕಾಲದ ಅಂಧಕಾರದ ಬಳಿಕ ಭಾರತ ಆಗಸದಲ್ಲಿ ಬಾಲಸೂರ್ಯನ ಕಿರಣವೊಂದರ ಉದಯವಾಗಿತ್ತು!

ತಾಯ್ತನದ ಅಸುವುಳಿಸಿದ ಬಾಲ ಶಿವಾಜಿಯನ್ನು, ತನ್ನದೇ ವತ್ಸನಿಗೆ ಸಲ್ಲುವುದಕ್ಕಿಂತ ಸಹಸ್ರಪಾಲು ಮಿಗಿಲಾದ ವಾತ್ಸಲ್ಯ ತುಂಬಿದ ನೋಟದಿಂದ ನೋಡಿದಳು ಗೋಮಾತೆ. ಮಹಾಮಾತೆಯ ಮರಣ ತಪ್ಪಿದ ಮಂಗಲ ಮುಹೂರ್ತವದು.
ಗೋವೆಂದರೆ ಸೂರ್ಯಕಿರಣ; ಅಂದು, ಅನಂತ ಮಹಿಮೆಯ ಕರುಣೆಯ ಕಿರಣವೊಂದು ಶಿವಾಜಿಯೆದೆಯನ್ನು ಪ್ರವೇಶಿಸಿರಬೇಕು.
#LokaLekha by @SriSamsthana SriSri RaghaveshwaraBharati MahaSwamiji

ತಾಯಿಯ ಕರುಣೆಗೆ ಸರಿಮಿಗಿಲುಂಟೇ! ಅದರಲ್ಲೂ – ತಾಯಿಯರ ತಾಯಿ – ಮಹಾತಾಯಿಯ ಪರಿಪೂರ್ಣ ಆಶೀರ್ವಾದವು ಲಭಿಸಿದವನಿಗೆ ಇದಿರುಂಟೇ? ತಾಯಿಯ ಕೊರಳುಳಿಸಿದ ಕತ್ತಿಗೆ ಮುಂದೆ ವಿಜಯಪುರದ ಕೋಟೆಯೇ ವಶವಾಯಿತು. ವಿಜಯಪುರದ ಕೋಟೆಯ ವಿಜಯವು ಪ್ರಾರಂಭವಷ್ಟೇ; ಭಾರತವರ್ಷದ ಅಸಂಖ್ಯ ಕೋಟೆಗಳ ವಿಜಯವು ಮುಂದಿತ್ತು. ಸನಾತನ ಧರ್ಮಸಾಮ್ರಾಜ್ಯದ ಮಹಾಸಮ್ರಾಟನಾಗಿ “ಛತ್ರಪತಿ” ಪದವಿಯೊಡನೆ ಮೂರ್ಧಾಭಿಷಿಕ್ತನಾಗುವ ಮಹಾಸುಯೋಗವು ಗೋಕರುಣಕಿರಣದ ಅಂತಿಮ ಫಲಿತವಾಗಿತ್ತು.

“ಗೋಹತ್ಯೆಯ ಫಲಿತವು ಪತನ” ಎಂಬುದಕ್ಕೆ ಛಿನ್ನಗೊಂಡು ಪತಿತವಾದ ಕಟುಕನ ಕರವು ಸಾಕ್ಷಿಯಾದರೆ, “ಗೋರಕ್ಷೆಯ ಫಲಿತವು ಪರಮೋನ್ನತಿ” ಎಂಬುದಕ್ಕೆ ಚರಿತ್ರೆ ಕಂಡ ಮೇರುಪುರುಷ ಶಿವಾಜಿಯ ಸರ್ವೋತ್ಕರ್ಷವು ಸಾಕ್ಷಿ

~*~

ಕ್ಲಿಷ್ಟ~ಸ್ಪಷ್ಟ:

  • ಕರವಾಲ = ಕತ್ತಿ
  • ಉರ = ಎದೆ
  • ಆತತಾಯಿ = ತನ್ನನ್ನು ಕೊಲ್ಲಲು ಸಿದ್ಧನಾದವನು
  • ಭಾ-ರತರು = ಬೆಳಕಿನಲ್ಲಿ ಮುಳುಗಿದವರು; ಭೀ-ರತರು = ಭಯದಲ್ಲಿ ಮುಳುಗಿದವರು

 

ತಿಳಿವು~ಸುಳಿವು:

  • <ಅಗಸೆಬಾಗಿಲು> : ವಿಜಯಪುರದ ಕೋಟೆಯ ಐದು ಅಗಸೆ ಬಾಗಿಲುಗಳಲ್ಲೊಂದಾದ ಆ ಅಗಸೆ ಬಾಗಿಲಿಗೆ ಇಟ್ಟ ಹೆಸರು ಶಹಾಪುರಗಸಿ; ಆದರೆ ಆ ಬಾಗಿಲು ಕಬ್ಬಿಣದ ಮುಳ್ಳುಗಳಿಂದ ಕೂಡಿದ್ದುದರಿಂದ ಸ್ಥಳೀಯರು ಅದನ್ನು ‘ಮುಳ್ಳಗಸಿ’ ಎಂದೇ ಕರೆಯುತ್ತಿದ್ದರು. ಸುಲ್ತಾನನ ಬಂಟರಿಂದಲೇ ತುಂಬಿಹೋಗಿದ್ದ, ಅತಿಬರ್ಬರ ಜೀವಹಿಂಸೆಯ ನಿತ್ಯನರಕವಾಗಿದ್ದ ಆ ಸ್ಥಳಕ್ಕೆ “ಮುಳ್ಳಗಸಿ” ಎಂಬ ಹೆಸರೇ ಸರಿ! ಏಕೆಂದರೆ ಮಾನವತೆಗೇ ಮುಳ್ಳಾಗಿತ್ತಲ್ಲವೇ ಆ ಬಾಗಿಲು?
  • <ಶಿವನೇ ಬಲ್ಲ> : ಇಲ್ಲಿ, ಶಿವಾಜಿಯೇ ಬಲ್ಲ ಎಂಬುದು ಒಂದು ಅರ್ಥವಾದರೆ; ಆ ಪರಶಿವನೇ ಬಲ್ಲ ಎಂಬುದು ಇನ್ನೊಂದು ಗೂಢಾರ್ಥ
  • <ಕೈ-ಬಾಯಿಲ್ಲದ ತಾಯಿ> : ಇಲ್ಲಿ, ಗೋಮಾತೆಗೆ ಕೈ ಇದ್ದೂ ಪ್ರತಿರೋಧ ತೋರಿಸಲಾಗದ; ಬಾಯಿದ್ದೂ ಬಿಡಿಸಿಕೊಳ್ಳಲಾಗದ ಎಂಬರ್ಥ

ಇದು, ಜಗದ್ಗುರುಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಸಾಮಾಜಿಕ ಕಾಳಜಿಯ ಬ್ಲಾಗ್ ಬರಹಗಳ – #ಲೋಕಲೇಖ ದ ಸಂಚಿಕೆ.

ಈವರೆಗಿನ ಎಲ್ಲಾ ಲೋಕ~ಲೇಖಗಳನ್ನು ಓದಲು : ಇಲ್ಲಿದೆ ಕೊಂಡಿ.

Facebook Comments