ಡೈರಿ ಉದ್ಯಮದ ಕರಾಳ ಮುಖವನ್ನು ಚಿತ್ರಿಸುವ, ಶ್ರೀಸಂಸ್ಥಾನ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಲೋಕಲೇಖದ ಮೊದಲ ಅಂಕಣವನ್ನು ಕಳೆದ ವಾರಗಳಲ್ಲಿ ಓದಿದ್ದೇವೆ. ಅದೇ ವಿಷಯದ ಮುಂದಿನ, ಮತ್ತಷ್ಟು ವಿವರಗಳಲ್ಲಿ ಈ ಲೇಖನ..
ಡೈರಿಯ ಕ್ರೌರ್ಯ – ಭಾಗ 1 : ಹಸುವನ್ನು ಸಾಕುವುದಲ್ಲ; ಸಾವಿಗೆ ನೂಕುವುದು ಡೈರಿಗಳ ಪರಿ!
ಡೈರಿಯ ಕ್ರೌರ್ಯ – ಭಾಗ 2:
|| ಮಾತೃದೇವೋ ಭವ ||
ತಾನು ಎಲ್ಲೆಲ್ಲೂ ತೋರುವಂತೆ ಇರಲಾರೆನೆಂದು ದೇವರು ತಾಯಿಯನ್ನು ಸೃಜಿಸಿದನಂತೆ. ತಾಯಿಯೆಂದರೆ ತೋರುವ ದೇವರು! ದೇವರು ತೋರುವ ವಾತ್ಸಲ್ಯವನ್ನು ತಾಯಿ ತೋರುತ್ತಾಳೆ. ದೇವರು ಜೀವಗಳನ್ನು ನೋಡಿಕೊಳ್ಳುವಂತೆ ತನ್ನ ಕಂದಗಳನ್ನು ನೋಡಿಕೊಳ್ಳುತ್ತಾಳೆ. ಎಳೆಶಿಶುವಿನ ಪಾಲಿಗೆ ಎಲ್ಲವೂ ತಾನೇ ಆಗಿಬಿಡುತ್ತಾಳೆ. ತಾಯಿಯ ಹೊರತು ಬೇರೇನೂ ಅರಿಯದ, ತಾಯಿಯೇ ಪ್ರಪಂಚವಾದ ಎಳೆಜೀವವನ್ನು ತಾಯಿಯಿಂದ ಬೇರ್ಪಡಿಸುವುದು ಮಹಾಪಾತಕ!
ಆದರೆ ಹೆಣ್ಣಿರಲಿ ಗಂಡಿರಲಿ, ಡೈರಿಗಳು ತಮ್ಮಲ್ಲಿ ಹುಟ್ಟಿದ ಕರುವಿಗೆ ಈ ಮಹಾಪಾತಕವನ್ನು ಎಸಗಿಯೇ ಕ್ರೌರ್ಯಪರ್ವವನ್ನು ಪ್ರಾರಂಭಿಸುತ್ತವೆ!
ಹಾಲು – ಯಾರ ಹಕ್ಕು?:
ಬಾಳಪಯಣದ ಆರಂಭದಲ್ಲಿ ಪ್ರತಿಯೊಂದು ಜೀವವೂ ನಿಸ್ಸಹಾಯಕವೇ; ಆದುದರಿಂದಲೇ ದೇವರು ತಾಯಿಯನ್ನು ಕೊಟ್ಟನು; ಆಕೆಯೊಳಗೆ ಹಾಲೆಂಬ ಸುಲಭಾಮೃತ*ವನ್ನು ಇಟ್ಟನು. ಕರುವಿಗೆ ದೇವರು ಕೊಟ್ಟ ಹಾಲನ್ನು ಕಿತ್ತುಕೊಳ್ಳುವ ಹಕ್ಕು ಯಾರಿಗೂ ಇಲ್ಲ. ನಮ್ಮ ತಾಯಿಯ ಹಾಲು ನಮಗೇ ಲಭಿಸಿದೆಯಲ್ಲವೇ! ಕರು ಕುಡಿದು ಮಿಕ್ಕಿದ ಹಾಲಿಗೆ ಮಾತ್ರವೇ ಮನುಷ್ಯನು ಅಧಿಕಾರಿ. ‘ರಾಮನ ವನಗಮನದ ಕಾರಸ್ಥಾನದಲ್ಲಿ ಭಾಗಿ’ ಎಂಬ ಆಪಾದನೆ ಬಂದಾಗ “ಅಣ್ಣನ ವನವಾಸ ತನಗೆ ಸಮ್ಮತವಾದರೆ ಎಳೆಗರುವಿನ ಪಾಲಿನ ಹಾಲನ್ನು ಕರೆದು ಕುಡಿದ ಪಾಪಕ್ಕೆ ತಾನು ಗುರಿಯಾಗಲಿ” ಎಂದು ಭರತ ಗೈದ ಶಪಥ ರಾಮಾಯಣವು ನಮಗೆ ತೋರಿದ ಸತ್ಪಥ.
ಡೈರಿಗಳಲ್ಲಿ ಕರು ಗಂಡಾದರೆ ತಾಯಿಯ ಹಾಲು ಸಿಗುವ ಮಾತೇ ಇಲ್ಲ. ಹೆಣ್ಣಾದರೆ- ಕರುವಾಗಲೀ/ಹಸುವಾಗಲೀ, ಕಂಪ್ಯೂಟರ್ ಸೂಚಿಸುವ ಆಹಾರವು*, ಅದು ಸೂಚಿಸಿದ ಪ್ರಮಾಣದಲ್ಲಿ ಮುಂದೆ ಬಂದು ಬೀಳುತ್ತದೆ. ಕಂಪ್ಯೂಟರ್ ನೋಡುವುದು ಕರುವಿನ/ಹಸುವಿನ ಕ್ಷೇಮವನ್ನಲ್ಲ; ಯಜಮಾನನ ಲಾಭವನ್ನು! ಆಹಾರವು ಸಾಕು/ಬೇಕು ಎಂದು ತೃಪ್ತಿಯು ಹೇಳಬೇಕೇ ಹೊರತು ಯಂತ್ರವಲ್ಲ! ‘ನಿನಗೆ ಬೇಕಾದುದನ್ನಲ್ಲ; ನಾನು ಹಾಕುವುದನ್ನು, ಹಾಕಿದಾಗ, ಹಾಕಿದಷ್ಟು ತಿನ್ನು ಎನ್ನುವುದು’ ಸಾಕುವ ಪರಿಯೇ!? ಇದೂ ಮನುಷ್ಯತ್ವವೇ?
ಶೃಂಗಭಂಗವೆಂಬ ಕ್ರೌರ್ಯೋತ್ತುಂಗ:
ಕೊಂಬುಗಳು ಹಸುಗಳಿಗೆ ರಕ್ಷೆ ಮಾತ್ರವಲ್ಲ; ಶೋಭೆಯೂ ಹೌದು. ಕರುಗಳಿಗೆ ಕೊಂಬು ಮೂಡುವುದೆಂದರೆ ಆಗಸದಲ್ಲಿ ಅಷ್ಟಮಿಯ ಚಂದ್ರ ಮೂಡಿದಂತೆ! ಆದರೆ ಡೈರಿಗೆ ಚೂರಿ ಗೊತ್ತೇ ಹೊರತು ಚಂದ್ರನೆಲ್ಲಿ ಗೊತ್ತು! ‘ಹಾಕಿದ ಆಹಾರವೆಲ್ಲವೂ ಹಾಲಾಗಬೇಕು ಹೊರತು ಕೊಂಬಾಗಬಾರದು’ ಎಂಬ ದುರ್ಲಾಭದ ದುರಾಸೆಯ ದುರ್ಬುದ್ಧಿಯ ಫಲವಾಗಿ ಎಳೆಗರುಗಳ ಕೊಂಬು ಮೂಡುವ ಸ್ಥಳವನ್ನು, ಕೊಂಬು ಮೂಡದಂತೆ ಡೈರಿಗಳಲ್ಲಿ ಸುಡಲಾಗುತ್ತದೆ. ಕ್ರೂರಾತಿಕ್ರೂರವಾದ ಈ ಪ್ರಕ್ರಿಯೆಯಲ್ಲಿ, ಗರಗಸಗಳು, ಹರಿತವಾದ ತಂತಿಗಳು, ಕಾದ ಕಬ್ಬಿಣ , (ಗಿಲೋಟಿನ್) ಶೃಂಗಚ್ಛೇದಕಗಳು*, ಸುಡುವ ಘೋರ ಕಾಸ್ಟಿಕ್ ರಾಸಾಯನಿಕಗಳು(Caustic Chemicals) ಮೊದಲಾದವುಗಳನ್ನು ಬಳಸಿ ಬರ್ಬರವಾಗಿ ಅವುಗಳ ಶೃಂಗಭಂಗ ಮಾಡಲಾಗುತ್ತದೆ. ಹೆಚ್ಚಿನ ಬಾರಿಯೂ ಅರಿವಳಿಕೆಯನ್ನು ಬಳಸದೆಯೇ ಈ ಕ್ರೌರ್ಯಕಾರ್ಯವು ನಡೆಯುತ್ತದೆ.
ಆ ಸಮಯದಲ್ಲಿ ಕರುಗಳು ಗೈಯುವ ಕರುಳ ಕರಗಿಸುವ ಆಕ್ರಂದನವನ್ನು ಕೇಳಿದವನು ಡೈರಿಯ ಹಾಲನ್ನು ಜೀವನಪರ್ಯಂತ ಸೇವಿಸಲಾರ!
ಅನುಬಂಧವಿಲ್ಲ – ಬಂಧನವೇ ಬದುಕೆಲ್ಲ:
ಮೇಲಿನ ಚಿತ್ರವನ್ನು ನೋಡಿ. ಅಲುಗಾಡಲೂ ಅವಕಾಶವಿಲ್ಲದಂತೆ ಹಸುಗಳನ್ನು ಬಂಧಿಸಲಾಗಿದೆ. ಕಿರಿದಾದ ರಂಧ್ರದ ಮೂಲಕ ತಲೆಯನ್ನು ಹೊರತೂರಿಸಿ ತಲೆಯಾಡಿಸಲೂ ಸಾಧ್ಯವಿಲ್ಲದಂತೆ ಕೊರಳ ಬಳಿ ಸರಳುಗಳನ್ನು ಬಿಗಿಗೊಳಿಸಲಾಗಿದೆ. ಎಂಥ ಘೋರ ಅಪರಾಧ ಗೈದ ಮಹಾಪಾತಕಿಗೂ- ಜಗತ್ತಿನಲ್ಲಿ ಎಲ್ಲಿಯೂ ಈ ಪರಿಯ ಬಂಧನವನ್ನು ವಿಧಿಸುವುದು ಕಂಡು ಕೇಳರಿಯದ ಸಂಗತಿ! ನೀಡಿದ ಆಹಾರವು ಹಾಲಾಗಬೇಕು, ಬೇರಾವ ಚಟುವಟಿಕೆಗೂ ಆಹಾರದ ಶಕ್ತಿಯು ವಿನಿಯೋಗವಾಗಬಾರದು ಎಂಬ ದುರಾಲೋಚನೆಯು ಈ ಕ್ರೂರಬಂಧನದ ಮೂಲ! ಚಟುವಟಿಕೆಯೇ ಇಲ್ಲದುದರ ಫಲವಾಗಿ ಹಸುಗಳು ಇನ್ನಷ್ಟು ಮಾಂಸ ತುಂಬಿ ಬೆಳೆಯಲಿ ಎಂಬುದು ಮತ್ತೊಂದು ದುರುದ್ದೇಶ. ಪಾಪ! ದೇಹದ ಮೂಲಭೂತ ಆರೋಗ್ಯಕ್ಕೆ ಬೇಕಾದಷ್ಟೂ ಚಟುವಟಿಕೆಗಳನ್ನು ಮಾಡಲಾರದೇ ಹಸುಗಳು ರುಗ್ಣಜೀವನದ ದಾರಿ ಹಿಡಿಯುತ್ತವೆ.
ಚುಚ್ಚುಮದ್ದುಗಳ ಸಾಲುಸಾಲು – ಹರಿದು ಬಂತು ಹಾಲುಹಾಲು!:
ಇಡಿಯ ಡೈರಿ ಉದ್ಯಮ/ಪಶುವೈದ್ಯಕೀಯ ವಿಜ್ಞಾನಗಳು ಕೇಂದ್ರೀಕೃತವಾಗಿರುವುದೇ ಕೆಚ್ಚಲಿನಲ್ಲಿ. ದ್ರೋಣಾಚಾರ್ಯರ ನಿರ್ದೇಶನದಂತೆ ಪಕ್ಷಿಯ ಗೊಂಬೆಯ ಕಣ್ಣಿನ ಮೇಲೆ ಗುರಿಯಿಟ್ಟಿದ್ದ ಅರ್ಜುನನ ಏಕಾಗ್ರತೆ ಎಷ್ಟಿತ್ತೆಂದರೆ, ಆತನಿಗೆ ಪಕ್ಷಿಯ ಕಣ್ಣು ಮಾತ್ರವೇ ಕಾಣುತ್ತಿತ್ತು ಹೊರತು ಶರೀರವು ಕಾಣುತ್ತಲೇ ಇರಲಿಲ್ಲ. ಹಾಗೆಯೇ ಡೈರಿಗೆ ಕಾಣುವುದು ಕೆಚ್ಚಲೊಂದೇ. ಕೆಚ್ಚಲ ಹೊತ್ತ ಹಸುವಿನ ಕುರಿತಾಗಲೀ, ಅದರ ಯೋಗಕ್ಷೇಮದ ಕುರಿತಾಗಲೀ ಡೈರಿಯು ತಲೆಯನ್ನೇ ಕೆಡಿಸಿಕೊಳ್ಳುವುದಿಲ್ಲ. ಹುಟ್ಟಿದ ಕರುವು ಆದಷ್ಟು ಬೇಗ ಹಾಲುಕೊಡಬೇಕು ಮತ್ತು ಆದಷ್ಟು ಹೆಚ್ಚು ಹಾಲನ್ನು ಕೊಡಬೇಕು. ಈ ಕಾರಣಕ್ಕಾಗಿ ಎಳೆ ವಯಸ್ಸಿನಲ್ಲೇ ಹೆಣ್ಣುಕರುಗಳಿಗೆ BGH (Bovine Growth Hormone) ಇಂಜಕ್ಷನ್ ಗಳನ್ನು ನೀಡಲಾಗುತ್ತದೆ.
BGH ಇಂಜಕ್ಷನ್ ಕರುಗಳಲ್ಲಿ ಅಸಹಜ ಮತ್ತು ಅನಿಯಂತ್ರಿತ ಬೆಳವಣಿಗೆಯನ್ನು ಉಂಟುಮಾಡುತ್ತದೆ. ಕೆಚ್ಚಲು ಮತ್ತು ಕೆಚ್ಚಲಗ್ರಂಥಿಗಳನ್ನು ಹಿಗ್ಗಿಸುತ್ತದೆ. ಹಾಲು ಮತ್ತು ಮಾಂಸದ ಪ್ರಮಾಣಗಳನ್ನು ಅನೈಸರ್ಗಿಕವಾಗಿ-ಅಪಾರವಾಗಿ ಹೆಚ್ಚಿಸುತ್ತವೆ. ಇದು ಅವುಗಳ ಶರೀರದ ಸಮತೋಲನವನ್ನು ಸಂಪೂರ್ಣವಾಗಿ ಹಾಳುಗೈಯುವುದಲ್ಲದೆ ಅವುಗಳ ರೋಗನಿರೋಧಕ ಶಕ್ತಿಯನ್ನು ಧ್ವಂಸಗೊಳಿಸುತ್ತದೆ. ಆಗ ಆ್ಯಂಟಿಬಯೋಟಿಕ್ ಗಳ ಅತಿಯಾದ ಬಳಕೆ ಅನಿವಾರ್ಯ. ಮಾಡಿದ್ದುಣ್ಣೋ ಮಹಾರಾಯ ಎಂಬಂತೆ ನಾವೇ ನೀಡಿದ ಆ್ಯಂಟಿಬಯೋಟೆಕ್ ಗಳು ಹಾಲಿನ ಮೂಲಕ ಬಂದು ನಮ್ಮ ಶರೀರಗಳನ್ನೇ ಸೇರುತ್ತವೆ. BGH ಹಾರ್ಮೋನ್ ಮನುಷ್ಯನ ಶರೀರವನ್ನು ಪ್ರವೇಶ ಮಾಡಿದರೆ ಅಸಹಜ ಬೆಳವಣಿಗೆಯನ್ನು ಉಂಟುಮಾಡುವುದು ಮಾತ್ರವಲ್ಲ, ಕ್ಯಾನ್ಸರ್ ಗೂ ಕಾರಣವಾಗುತ್ತದೆ.
ಗರ್ಭ-ಹೆರಿಗೆ-ಹಾಲು; ಇಷ್ಟೇ ಹಸುವಿನ ಬದುಕು!:
ಡೈರಿಯ ಹತಭಾಗ್ಯ ಹಸುಗಳಿಗೆ ಸಹಜ ಗರ್ಭಧಾರಣೆಯ ಅವಕಾಶವು ಇಲ್ಲವೇ ಇಲ್ಲ! ಕೃತಕಗರ್ಭಧಾರಣೆಯ ದುಷ್ಪರಿಣಾಮಗಳು ಅನೇಕ. ಪರಿಣತಿಯ ಕೊರತೆಯಿಂದಾಗಿ ಅದೆಷ್ಟೋ ಬಾರಿ ಗರ್ಭಕೋಶದಲ್ಲಿ ಗಾಯಗಳಾಗುತ್ತವೆ, ಹುಣ್ಣುಗಳಾಗುತ್ತವೆ. ಒಂದು ಹೋರಿಯಿಂದ ಸಾವಿರಾರು ಕರು ಎನ್ನುವುದು ಕೃತಕಗರ್ಭಧಾರಣೆಯ ರೀತಿಯಾಗಿರುವುದರಿಂದ, ಆ ಹೋರಿಯಲ್ಲಿ ಇದ್ದಿರಬಹುದಾದ ಸಾಂಕ್ರಾಮಿಕ ರೋಗಗಳು, ಇನ್ನಿತರ ದೋಷಗಳು ಹಸುವನ್ನೂ ಅದರ ಸಂತಾನವನ್ನೂ ವ್ಯಾಪಿಸುತ್ತದೆ. ಎಲ್ಲಕ್ಕಿಂತ ಕ್ಲೇಶಕರ ಸಂಗತಿಯೆಂದರೆ ಡೈರಿ ಉದ್ಯಮವು ಲಾಭದಲ್ಲಿ ನಡೆಯಬೇಕಾದರೆ ಕರುಹಾಕಿದ ಮೂರೇ ತಿಂಗಳಲ್ಲಿ ಮತ್ತೆ ಹಸು ಗರ್ಭ ಧರಿಸಬೇಕು! ಮತ್ತೆ ಮತ್ತೆ ಗರ್ಭ ಧರಿಸಬೇಕು! ಜೀವನವಿಡೀ ಗರ್ಭ ಧರಿಸಿಕೊಂಡೇ ಇರಬೇಕು! ಬಿಡುವೇ ಇಲ್ಲದೆ ಹಾಲು ಕೊಡುತ್ತಲೇ ಇರಬೇಕು… ಕೊಡುತ್ತಲೇ ಇರಬೇಕು! ಸಾಯುವವರೆಗೂ ಸದಾ ಹಾಲು ಕೊಡುತ್ತಲೇ ಇರಬೇಕು!
ಕರು ಹಾಕಿದ ಮೂರು ತಿಂಗಳಲ್ಲಿ ಬೆದೆಗೆ ಬಾರದಿದ್ದರೆ ಬರುವಂತೆ ಮಾಡಲು ಇಂಜಕ್ಷನ್ ಗಳು. ಡೈರಿಯಲ್ಲಿರುವ ಹಸುಗಳೆಲ್ಲವೂ ಒಟ್ಟಿಗೆ ಬೆದೆಗೆ ಬರುವಂತಾದರೆ, ಕೃತಕಗರ್ಭಧಾರಣೆಯು ಒಮ್ಮೆಲೇ ಆಗುವುದರಿಂದ ಖರ್ಚು ಉಳಿತಾಯ; ಈ ಹಿನ್ನೆಲೆಯಲ್ಲಿ ಡೈರಿಗೆ ಬೇಕಾದ ಸಮಯದಲ್ಲಿ ಹಸುಗಳು ಬೆದೆಗೆ ಬರುವಂತೆ ಮಾಡಲು ಪುನಃ ಇಂಜಕ್ಷನ್!
ಹಸುವಿಗೆ ಇಷ್ಟವಿರಲಿ-ಇಲ್ಲದಿರಲಿ, ಇರುವ ಎಲ್ಲ ಹಾಲನ್ನೂ ಇಳಿಸಿಬಿಡಲು Oxytocin ಇಂಜೆಕ್ಷನ್. ಇದರಿಂದಾಗಿ ಕೇವಲ ಹಾಲಿಳಿಸಲು ಹಸುವು ಹೆರಿಗೆ ನೋವನ್ನನುಭವಿಸುವುದು ಒಂದೆಡೆಯಾದರೆ, ಅದರ ದೇಹದ ಮೇಲಾಗುವ ದೀರ್ಘಕಾಲದ ದುಷ್ಪರಿಣಾಮಗಳು ಇನ್ನೊಂದೆಡೆ!
ಹಸಿದ ಕರುವನ್ನು ಕಂಡೊಡನೆಯೇ ವಾತ್ಸಲ್ಯದಿಂದ ಕರಗಿ ಹಸುವು ಹಾಲಿಳಿಸುವುದು ಬಲುಚೆಂದದ ಪ್ರಕೃತಿಧರ್ಮ. ಹಾಲನ್ನು ಬಲಾತ್ಕಾರವಾಗಿ ಸೆಳೆದಿಳಿಸುವ ಯಂತ್ರಗಳನ್ನು ಹಸುವಿನ ಕೆಚ್ಚಲಿಗೇ ಅಳವಡಿಸುವುದು ಡೈರಿಯ ಕ್ರೂರಕರ್ಮ!
‘ಹೆಚ್ಚು ಹೆಚ್ಚು ಹಾಲು ಮತ್ತು ಅದಕ್ಕಾಗಿ ಹೆಚ್ಚು ಹೆಚ್ಚು ಹೆರಿಗೆ’ ಎಂಬ ಹುಚ್ಚಿನಲ್ಲಿ ಹಸುವಿನ ಗರ್ಭಕೋಶ ಮತ್ತು ಕೆಚ್ಚಲುಗಳು ತಾಳಲಾರದ ಒತ್ತಡಕ್ಕೆ ಒಳಗಾಗುತ್ತವೆ. ಕೇವಲ ನಾಲ್ಕೈದೇ ವರ್ಷಗಳಲ್ಲಿ ಈಯುವ ಶಕ್ತಿ ಮತ್ತು ಹಾಲೀಯುವ ಶಕ್ತಿಗಳೆರಡೂ ಕ್ಷೀಣಿಸುತ್ತವೆ. ಕೆಚ್ಚಲುಬೇನೆ ಮತ್ತು ಡೌನರ್* ರೋಗ -ಇವೆರಡು ಮೂಕಹಸುಗಳಿಗೆ ಮಾನವನ ದುರಾಸೆಯ ಕೊಡುಗೆಗಳು! ಮಾತ್ರವಲ್ಲ, ಕೃತ್ರಿಮ ಜೀವನಚಕ್ರದ ಪರಿಣಾಮವಾಗಿ ಈ ಮುಗ್ಧಜೀವಗಳ ಜೀವಿತಾವಧಿಯೇ ಕ್ಷೀಣಿಸುತ್ತದೆ. ಸಾಮಾನ್ಯವಾಗಿ ೨೦-೨೫ ವರ್ಷ ಬದುಕುವ ಹಸುವು, ಡೈರಿಯ ಚಕ್ರವ್ಯೂಹದಲ್ಲಿ ಸಿಲುಕಿದರೆ ೧೦ ವರ್ಷವೂ ಬದುಕುವುದಿಲ್ಲ!
ಮಹಾದುರಂತವೆಂದರೆ, ಹಸುಗಳಿಗೆ ಅಷ್ಟು ಕಾಲ ಬದುಕಲೂ ಡೈರಿಗಳು ಅವಕಾಶ ನೀಡುವುದಿಲ್ಲ!
ಆಧುನಿಕ ಪಶುವೈದ್ಯಶಾಸ್ತ್ರವು ನಾಲ್ಕು ಕರುಗಳವರೆಗೆ ಮಾತ್ರವೇ ಹಸುಗಳು ಲಾಭಕಾರಿ, ಬಳಿಕ ಅವುಗಳನ್ನು Cull ಮಾಡಬೇಕು ಎಂದು ಬೋಧಿಸುತ್ತದೆ! Cull ಮಾಡುವುದು ಎಂದರೆ, ಆಯ್ದ ಹಸುಗಳನ್ನು ಹೆಣವಾಗಿಸಿ, ತನ್ಮೂಲಕ – ಒಂದೆಡೆ ಸಾಕುವ ಖರ್ಚಿನ ಉಳಿತಾಯ; ಇನ್ನೊಂದೆಡೆ ಮಾಂಸದ ಮಾರಾಟದಿಂದ ಆದಾಯ.
ಕಸಾಯಿಖಾನೆಯ ಸಾವಿನ ಬರ್ಬರತೆಯನ್ನು ವರ್ಣಿಸಲು ಜಗತ್ತಿನ ಯಾವ ಭಾಷೆಯೂ, ಯಾವ ಪದಕೋಶವೂ ಶಕ್ತವಲ್ಲ!
ಹೀಗೆ, ಡೈರಿಯೆಂದರೆ ಹಸುವಿನ ಪಾಲಿಗೆ ಸಾವಿನ ದಾರಿ. ಹಾಲಿನ ಡೈರಿ ಮತ್ತು ಕಸಾಯಿಖಾನೆಗಳು ಒಂದೇ ನಾಣ್ಯದ ಎರಡು ಮುಖಗಳು. ಡೈರಿಯೆಂಬ ಯಮಪುರಿಯೊಳಗೆ ಹಸುವಿಗೆ ಸಹಜದ ಹುಟ್ಟಿಲ್ಲ; ಸಹಜದ ಬದುಕಿಲ್ಲ; ಸಹಜದ ಸಾವಿಲ್ಲ; ಸಹಜತೆಯ ಸುಖ ಇಲ್ಲವೇ ಇಲ್ಲ!
ಡೈರಿಗಳಿಗೆ ಹಸುಗಳ ಮೇಲೆ ಕರುಣೆ ಹೇಗೂ ಇಲ್ಲ; ನಮ್ಮ ನಿಮ್ಮ ಆರೋಗ್ಯದ ಕುರಿತೂ ಕಾಳಜಿಯಿಲ್ಲ. ಹಸುವಿನ ಹಿಂಸೆಯ ದೋಷದ ಜೊತೆಗೆ ಪರಿಪರಿ ವಿಷಗಳನ್ನೂ ಹಾಲಿನಲ್ಲಿ ಬೆರೆಸಿ ನಮಗೆ ಕುಡಿಸಿ ಅವು ಕೃತಾರ್ಥವಾಗಿಬಿಡುತ್ತವೆ. ಬುದ್ಧಿಯಿಲ್ಲದೇ ಕುಡಿಯುವರ ಕಥೆ???
ಬುದ್ಧಿಯಿಲ್ಲದವನಿಗೆ ಬದುಕುವ ಹಕ್ಕೆಲ್ಲಿ!?
ಡೈರಿಯಿಂದ ಬರುವ ಹಾಲಿನ ಒಂದು ಬಿಂದು ಸೇವಿಸುವ ಮೊದಲು ಇನ್ನೊಂದು ಬಾರಿ ಯೋಚಿಸಿ; ಹನ್ನೊಂದು ಬಾರಿ ಯೋಚಿಸಿ. ನಮಗೀ ಹಾಲು ಬೇಕೇ? ಹಸುವನ್ನು ಹಿಂಡಿ ಹಿಪ್ಪೆ ಮಾಡಿ, ಕ್ಷಣಕ್ಷಣವೂ ಹಿಂಸೆಯ ಪರಾಕಾಷ್ಠೆಗೆ ದೂಡಿ ಬರುವ ಹಾಲನ್ನು ಕುಡಿದರೆ ಮೆಚ್ಚನಾ ಪರಮಾತ್ಮನು!
~*~
*ತಿಳಿವು-ಸುಳಿವು:
- ಹಾಲೆಂಬ ಸುಲಭಾಮೃತ : ಸೇವಿಸಲು ಹಲ್ಲು ಬೇಕಿಲ್ಲ; ಜೀರ್ಣಿಸಲು ಹೊತ್ತು ಬೇಕಿಲ್ಲ..
- ಹೆಚ್ಚು ಹಾಲು ಉತ್ಪಾದನೆಗೆ ಆಹಾರ: ಆಹಾರದಲ್ಲಿ ಇರಬೇಕಾದ ಸಾರಜನಕ ಪ್ರಮಾಣವನ್ನು ಪೂರೈಸಲು ೧೦೦ Kg ಗೆ ೫ ಕೆಜಿ ಎಳ್ಳುಹಿಂಡಿ/ ಕಡ್ಳೆ / ತೆಂಗು / ಸೋಯಾ ಹಿಂಡಿ ಬೇಕಾಗುತ್ತದೆ. ಇದಕ್ಕೆ ಕನಿಷ್ಠ 100/- ರೂ ಖರ್ಚು ಬೀಳುತ್ತದೆ. ಇದರ ಬದಲು 1Kg ಯೂರಿಯಾ ಬಳಸಿದರೆ, ಅಷ್ಟು ಪ್ರಮಾಣದ ಸಾರಜನಕವನ್ನು ಮೆಷಿನ್ ತೋರಿಸುತ್ತದೆ. ಅಂದರೆ 100/- ಖರ್ಚಿನ ಪಶು ಆಹಾರದ ಬದಲು 10/- ವಿಷಾಹಾರವು ಉದ್ಯಮಕ್ಕೆ ಲಾಭದಾಯಕವಾಗಿರುತ್ತದೆ.!
- ಗಿಲೋಟಿನ್ ಶೃಂಗಚ್ಛೇದಕಗಳು : Guillotine Dehorners – ಹರಿತವಾದ ಅಲಗುಳ್ಳ ತಿರುಗಣೆ ಯಂತ್ರಗಳು. ಇದನ್ನು ಕಸಾಯಿಗಳಲ್ಲಿ ಕೊರಳು ಕತ್ತರಿಸಲೂ ಉಪಯೋಗಿಸುತ್ತಾರೆ.
- BGH ಹಾರ್ಮೋನ್ : ಇದರ ಬಳಕೆ ಭಾರತದಲ್ಲಿ ಅಷ್ಟಾಗಿ ಬಳಕೆಯಿಲ್ಲ. ಅಮೆರಿಕದಲ್ಲಿ ಹೇರಳವಾಗಿ ಬಳಸುವುತ್ತಾರೆ. ರೈತರೇ ಮಾರುಕಟ್ಟೆಯಿಂದ ಈ ಹಾರ್ಮೋನನ್ನು ತಂದು ಪಶುಗಳಿಗೆ ಕೊಡುತ್ತಾರೆ. ಇದರಿಂದಾಗಿಯೇ ಅಲ್ಲಿನ ವೈದ್ಯರು ‘ಹಸುವಿನ ಹಾಲು ಮಕ್ಕಳಿಗೆ ಕೊಡಬೇಡಿ’ ಎಂದು ಹೇಳುತ್ತಾರೆ.
- ರುಗ್ಣ ಜೀವನ : ರೋಗಗ್ರಸ್ತ ಜೀವನ
- ಡೌನರ್ ರೋಗ : Downer Cow Syndrome – ಒಟ್ಟು ಶರೀರದ ಮೇಲೆ ಬೀಳುವ ಅತಿಯಾದ ಒತ್ತಡದಿಂದಾಗಿ ಸೊಂಟದ ಎಲುಬುಗಳು ಕ್ಷೀಣಿಸಿ, ಹಸುವು ಏಳಲಾರದ ಸ್ಥಿತಿಯನ್ನು ತಲುಪುವುದು.
- ಡೈರಿಯ, ಹಾಲಿನ ಉದ್ದಿಮೆಯ ಬಗೆಗೆ ಶ್ರೀಶ್ರೀಗಳವರ ಲೋಕಲೇಖ ಗಳು:
- ಶತಕೋಟಿ ಭಾರತೀಯರಿಗೆ ನಿತ್ಯ ‘ಹಾಳು’ ಕುಡಿಸಲಾಗುತ್ತಿದೆಯೇ? – ಭಾಗ 1
- ಶತಕೋಟಿ ಭಾರತೀಯರಿಗೆ ನಿತ್ಯ ‘ಹಾಳು’ ಕುಡಿಸಲಾಗುತ್ತಿದೆಯೇ? – ಭಾಗ 2
- ಶತಕೋಟಿ ಭಾರತೀಯರಿಗೆ ನಿತ್ಯ ‘ಹಾಳು’ ಕುಡಿಸಲಾಗುತ್ತಿದೆಯೇ? – ಭಾಗ 3/3
- ಡೈರಿಯ ಕ್ರೌರ್ಯ – ಭಾಗ 1 : ಹಾಲಿನ ಡೈರಿ ಎಂದರದು ಸಾವಿನ ದಾರಿ!
- ಡೈರಿಯ ಕ್ರೌರ್ಯ – ಭಾಗ 2 : ಹಸುವನ್ನು ಸಾಕುವುದಲ್ಲ; ಸಾವಿಗೆ ನೂಕುವುದು ಡೈರಿಗಳ ಪರಿ!
ಇದು, ಜಗದ್ಗುರುಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಸಾಮಾಜಿಕ ಕಾಳಜಿಯ ಬ್ಲಾಗ್ ಬರಹಗಳ – #ಲೋಕಲೇಖ ದ ಸಂಚಿಕೆ.
ಈವರೆಗಿನ ಎಲ್ಲಾ ಲೋಕ~ಲೇಖಗಳನ್ನು ಓದಲು : ಇಲ್ಲಿದೆ ಕೊಂಡಿ.
November 27, 2017 at 8:52 AM
ಮನುಜನ ದುರಾಸೆಗೆ ಅಂತ್ಯವಿಲ್ಲವೇ?ಗೋವಿಗೆ ಇದು ಯಾವ ರೀತಿಯ ಹಿಂಸೆ??? ಈ ರೀತಿಯ ಹಿಂಸೆ ಕೊಟ್ಟು ಗಳಿಸಿದ ಆ ಹಣ ಫಲಿಸೀತೆ?ಈ ಹಿಂದಿನ,ಈ ದಿನದ ಲೋಕಲೇಖ ಓದಿದವರು ಡೈರಿಯ ಹಾಲು ಕುಡಿಯಲಾರರು… #ಲೋಕಲೇಖ
November 27, 2017 at 9:23 AM
ಬೆಳ್ಳಂಬೆಳಗ್ಗೆ ಮುಂಬಾಗಿಲಿನಲ್ಲಿ ಬಂದು ಬೀಳುವುದು ಬರ್ಬರತೆ ತುಂಬಿದ ಪ್ಯಾಕೆಟ್’ಗಳೇ ಹೊರತು, ಅಮೃತ ಕಲಶಗಳಲ್ಲ!