ಕಣ್ಣು- ಕಿವಿಗಳಿಗೆ ಆರಂಗುಲವೇ ಅಂತರ..

ಆದರೆ ಕಾರ್ಯವಿಧಾನದಲ್ಲಿ ಮಹದಂತರ..!

ಕಣ್ಣುಗಳು ಸಮಕಾಲದಲ್ಲಿ ನಮ್ಮೆದುರು ನಡೆಯುತ್ತಿರುವುದನ್ನು ಮಾತ್ರವೇ ಕಾಣಬಲ್ಲವು..

ಕಿವಿಗಳು ??

ಎಂದೋ , ಎಲ್ಲಿಯೋ ನಡೆದದ್ದನ್ನು ಮತ್ತೆಂದೋ, ಮತ್ತೆಲ್ಲಿಯೋ ಕಾಣಬಲ್ಲವು !!

ಮುಂದೆಂದೋ ನಡೆಯುವುದನ್ನು ಇಂದೇ ನೋಡಬಲ್ಲವು !!

ಕಣ್ಣಿಗೆ ಒಂದು ಘಂಟೆಯ ಘಟನೆಯನ್ನು ಕಾಣಲು ಒಂದು ಘಂಟೆಯೇ ಬೇಕು..

ಕಿವಿಗೆ ಒಂದು ಜೀವನವಿಡೀ ನಡೆದ ಘಟನೆಗಳನ್ನು ತಿಳಿಯಲು ಹಲವು ಬಾರಿ ಒಂದು ಘಂಟೆಯೇ ಸಾಕು !!

ಕಣ್ಣಿನದು ತನ್ನನುಭವ ಮಾತ್ರ..

ಮತ್ತೊಬ್ಬರ ಅನುಭವವನ್ನು ತನ್ನದಾಗಿಸಿಕೊಳ್ಳಬೇಕೆಂದರೆ ಅದಕ್ಕೆ ಕಿವಿಯೇ ಬೇಕು !!

ಬೆಟ್ಟದಷ್ಟು ಅನುಭವವನ್ನು ಆ ಪುಟ್ಟ ಪುಟ್ಟ ರಂಧ್ರಗಳು ಅದು ಹೇಗೆ ಮಿದುಳಿನೊಳಗಿಳಿಸುವವೋ? ಆಶ್ಚರ್ಯ !!

ದೇವರಿಂದ ದೇಹದಲ್ಲಿಯೇ ದತ್ತವಾದ ಅರಿವಿನ ಆ ಎರಡು ಹೆಬ್ಬಾಗಿಲುಗಳನ್ನು ತೆರೆದಿಡದಿದ್ದರೆ ಬದುಕು ವ್ಯರ್ಥ !!

ಎಲ್ಲವನ್ನೂ ಸ್ವಯಂ ಅನುಭವಿಸಿಯೇ ತಿಳಿದುಕೊಳ್ಳಲು ಸಾಧ್ಯವೇ ಇಲ್ಲ ! ಹಲವು ವಿಷಯಗಳಲ್ಲಿ ಅದು ಸಾಧುವೂ ಅಲ್ಲ..

ಅಲ್ಲಿ ನಮ್ಮ ನೆರವಿಗೆ ಬರುವವು ಕಿವಿಗಳು..

ನಮ್ಮ ಪೂರ್ವಜರು ಈಗಾಗಲೇ ಎಲ್ಲಿಯವರೆಗೆ ಕ್ರಮಿಸಿರುವರೋ ಅಲ್ಲಿಂದ ಮುಂದಲ್ಲವೇ ನಾವು ಕ್ರಮಿಸಬೇಕಿರುವುದು..?ಇಲ್ಲಿಯವರೆಗೆ ಲೋಕವು ನಡೆದು ಬಂದ ಹಾದಿಯ ಸಾರಸಂಗ್ರಹವನ್ನು ಕಿವಿಗಳಿಂದ ಒಳಗೊಂಡು, ಅದನ್ನು ಆಧರಿಸಿಯೇ ಮುಂದೆ ಸಾಗಬೇಕಲ್ಲವೇ..?

ಪೂರ್ವ ಪುರುಷರು ಪಟ್ಟ ಕಷ್ಟವನ್ನು ನಾವು ಪಡದೆಯೇ, ಅವರು ಪಡೆದ ಅನುಭವವನ್ನು ಮಾತ್ರ ನಾವು ಪಡೆಯಲು ನೆರವಾಗುವ ಕಿವಿಗಳು ಸೃಷ್ಟೀಶ್ವರನು ನಮಗಿತ್ತ ಅದ್ಭುತ ವರಗಳು !!

ವರವನ್ನು ಆತನೇನೋ ಇತ್ತಾಗಿದೆ, ನಾವು ಪಡೆದುಕೊಳ್ಳಬೇಕೆಂದರೆ….

ಕೇಳಬೇಕು..

ಅಲ್ಪವನ್ನಲ್ಲ, ಬಹುವನ್ನು ಕೇಳಬೇಕು..

ಬಹುಕಾಲ ಕೇಳಬೇಕು..

ಬಹುಜನರಿಂದ ಕೇಳಬೇಕು..

ಬಹುವಿಷಯಗಳನ್ನು ಕೇಳಬೇಕು..

ಕೇಳುತ್ತಲೇ ಇರಬೇಕು..

ಇಂಥವರಿಗೆ ‘ ಬಹುಶ್ರುತ ‘ ರೆಂದು ಹೆಸರು..

ಹಾಗಿದ್ದರು ಅಯೋಧ್ಯೆಯ ರಾಜಪುರುಷರು…

Facebook Comments