ಭಗವಂತನೇ ಬಂದರೂ ಬದಲಾಗದ ನಿಯಮವೊಂದಿದೆ; ಅದೆಂದರೆ, ಇಳೆಗಿಳಿದವರಾರೂ ಇಲ್ಲಿಯೇ ಉಳಿಯುವಂತಿಲ್ಲ! ಅವರವರ ಅವಧಿ ತೀರುತ್ತಿದ್ದಂತೆಯೇ ಮರಣವೆಂಬ ಬದುಕಿನ ಬಹಿರ್ಗಮನ-ದ್ವಾರದ ದ್ವಾರಾ ಹೊರ ಹೊರಟುಹೋಗಲೇಬೇಕು! ‘ಜಾತಸ್ಯ ಹಿ ಧ್ರುವೋ ಮೃತ್ಯುಃ’ – ಜನನವಿದ್ದಲ್ಲಿ ಮರಣವೂ ಇದ್ದೇ ಇದೆ!’. ಇಲ್ಲಿ ಯಾರೂ ಶಾಶ್ವತರಲ್ಲ; ಯಾವುದೂ ಶಾಶ್ವತವಲ್ಲ; ಪೃಥಿವಿಯೆಂದರದು ಕ್ಷಣ-ಕ್ಷಣ ಪರಿವರ್ತನೆಯ ತಾಣ! ಜೀವಗಳು ಬರುವುದು~ಹೋಗುವುದು ಪೃಥಿವಿಯ ಪ್ರತಿಕ್ಷಣದ ಪ್ರಕ್ರಿಯೆ! ಇಲ್ಲಿ ಬದಲಾಗದಿರುವುದೆಂದರೆ ಬದಲಾವಣೆಯೊಂದೇ!

ಆದರೊಂದಿದೆ; ಸಂತಾನವೆಂಬ ತನ್ನ ಪ್ರತಿರೂಪದ ರೂಪದಲ್ಲಿ ಮರಣದ ಬಳಿಕವೂ ಧರಣಿಯಲ್ಲಿ ಮುಂದುವರಿಯಲು ಜೀವಗಳಿಗೆ ಅವಕಾಶವಿದೆ; ಇರುವ ನೀರೆಲ್ಲವೂ ಅನುಕ್ಷಣವೂ ಹರಿದುಹೋಗುತ್ತಿದ್ದರೂ ಬರುವ ಹೊಸ ನೀರಿನಿಂದಾಗಿ ಹೊಳೆಯು ಉಳಿದುಕೊಂಡಿರುವಂತೆ ಅದು. ತನ್ನ ಸಂತಾನ- ಆ ಸಂತಾನದ ಸಂತಾನ- ಅದರ ಸಂತಾನ, ಎಂಬಂತೆ ಅನಂತವಾಗಿ ಮುಂದುವರಿದು ಜೀವವು ಇಹದಲ್ಲಿಯೇ ಅಮೃತತ್ವವನ್ನು ಪಡೆಯಲು ಸೃಷ್ಟಿಯೇ ಕಲ್ಪಿಸಿದ ವ್ಯವಸ್ಥೆ ಅದು.

ಸಂತತಿಯೆಂದರೆ ಇಳೆಯಲ್ಲಿ ನಾವು ಇಲ್ಲವಾಗದಂತೆ ನೋಡಿಕೊಳ್ಳುವ ಅದ್ಭುತವಾದರೆ, ಸಂತತಿಯೇ ಇಲ್ಲವಾದವರಿಗೆ ಅದನ್ನು ಅನುಗ್ರಹಿಸುವ ಪರಮಾದ್ಭುತವು ಪುತ್ರಕಾಮೇಷ್ಟಿ!

ಅಫಲನಾದ ಅವನಿಪಾಲಕನನ್ನು ಅಪರೂಪದ ಫಲವಿತ್ತು ಸಫಲನನ್ನಾಗಿಸಲು ಅಪರೂಪದಲ್ಲಿ ಅಪರೂಪದ ಆ ಮಹಾಕ್ರತುವನ್ನು ಅಯೋಧ್ಯೆಯಲ್ಲಿ ಅನಾವರಣಗೊಳಿಸಿದರು ಕರ್ಮ-ಸರ್ವಜ್ಞರೂ ಮತ್ತು ಕರ್ಮ-ಮರ್ಮಜ್ಞರೂ ಆದ ಋಷ್ಯಶೃಂಗರು.
ಅಯೋಧ್ಯೆಯ ಮಣ್ಣೆಂದರದು ಮಣ್ಣಲ್ಲ, ಹೊನ್ನು! ಸರಯೂ~ಸಲಿಲವೆಂದರದು ಬರಿಯ ನೀರಲ್ಲ, ಅಮೃತ! ಪಂಚಭೂತಗಳ ನಡುವೆ ಮೊದಲೆರಡೂ ಪರಮೋತ್ಕೃಷ್ಟವಾಗಿರುವ ಅಯೋಧ್ಯಾ~ಸರಯೂ ಪರಿಸರದಲ್ಲಿ- ಮೂರನೆಯದಾದ ವಹ್ನಿಯೂ, ಪುತ್ರಕಾಮೇಷ್ಟಿಯ ಯಾಗಾಂಗಣದಲ್ಲಿ ಸುಪ್ರತಿಷ್ಠಿತಗೊಂಡು ಬ್ರಹ್ಮಾಂಡದ ಬೇರೆಲ್ಲ ತೇಜಸ್ಸುಗಳನ್ನು ಅತಿಶಯಿಸಿ ಬೆಳಗಿತು!

ಹೀಗೆ, ಅಯೋಧ್ಯಾ~ಸರಯೂ-ಪರಿಸರದಲ್ಲಿ, ದಶರಥ~ಕೌಸಲ್ಯೆಯರ ಕರ್ತೃತ್ವದಲ್ಲಿ, ವಸಿಷ್ಠ~ಋಷ್ಯಶೃಂಗರ ಕಣ್ಗಾವಲಿನಲ್ಲಿ ಪುತ್ರಕಾಮೇಷ್ಟಿಯು ಪ್ರಾರಂಭವಾಯಿತು: ಯಾಗದಲ್ಲಿ ಭಾಗಿಯಾದ ಭಾವಿತಾತ್ಮರು ತಮ್ಮ ಭಾವವನ್ನು ಭಗವಂತನಲ್ಲಿ ಬೆರೆಸಿದರು; ಮಂತ್ರಗಳು ಆ ಮನೀಷಿಗಳ ಮುಖದಿಂದ ಹೊರಹೊಮ್ಮಿ, ದಿವಿ-ಭುವಿಗಳಲ್ಲಿ ವ್ಯಾಪಿಸಿದವು; ಜೀವರುಗಳ-ದೇವರುಗಳ ಕಿವಿಗೆ ಸವಿಯಾದವು; ಹೃದಯದ ಕದ ತೆರೆದವು; ಅಲ್ಲಿ ಮಧುರ~ಮಂಗಲ~ಸ್ಪಂದವನ್ನೇ ತಂದವು. ಭೂಮಾತೆ-ಗೋಮಾತೆಯರ ಸಾರವು ಸಮ್ಮಿಲಿತಗೊಂಡು*, ಹವಿಸ್ಸು ಎನಿಸಿಕೊಂಡು, ವಿಪ್ರವರರ ಪಾವನ ಹಸ್ತಗಳಿಂದ ಮೆಲ್ಲನಿಳಿದು, ಪಾವಕನಲ್ಲಿ ಒಂದಾಗತೊಡಗಿತು..

ತಮ್ಮೊಳಗಿಳಿದ ಹವಿರ್ಭಾಗದ ಸುಗಂಧವನ್ನು ಹೊತ್ತು, ಹೊನ್ನ ಕಾಂತಿಯ ವಹ್ನಿ-ಶಿಖೆಗಳು ದಿವಿಯೆಡೆಗೆ ಧಾವಿಸಿದವು. ಕ್ಷಣ-ಕ್ಷಣವೂ ಮೇಲೇರಿ ಮಾಯವಾಗುವ ತನ್ನ ಜ್ವಾಲಾಕರಗಳಿಂದ ಯಜ್ಞಪುರುಷನು ಕರೆದನೋ ಎಂಬಂತೆ ದಿವಿಜರು ಹವಿರ್ಭಾಗದ ಸ್ವೀಕಾರಕ್ಕಾಗಿ ದಿವಿಯನ್ನು ತೊರೆದು ಸಾಲುಸಾಲಾಗಿ ಭುವಿಗಿಳಿದರು. ಪುತ್ರಕಾಮೇಷ್ಟಿಯ ಪವಿತ್ರಮಂಟಪದಲ್ಲಿ ಪ್ರಪಂಚವನ್ನು ಪಾಲಿಸುವ ಪರಮಾತ್ಮ~ಕಿರಣಗಳೆಲ್ಲವೂ ಸಮಾವೇಶಗೊಂಡವು!

ಪರಮೇಶ್ವರನ ಆಣತಿಯನ್ನು ಆಲಿಸುವ, ಅದರಂತೆ ಪ್ರಪಂಚವೆಲ್ಲವನ್ನೂ ಪಾಲಿಸುವ, ಜೀವಗಳ ಬೇಕು-ಬೇಡಗಳನ್ನು ದಯಪಾಲಿಸುವ ದೇವತೆಗಳೆಲ್ಲರೂ ಅಲ್ಲಿ ಬಂದು ಸೇರುವುದನ್ನು ಋಷಿಶ್ರೇಷ್ಠರು ತಪಶ್ಚಕ್ಷುವಿನಿಂದ ವೀಕ್ಷಿಸಿದರು; ದೇವತಾ-ದರ್ಶನವೆಂಬುದು ಅವರಿಗೆ ಊಟ~ಉಸಿರಾಟಗಳಷ್ಟೇ ಸಹಜ! ಆದರೆ ಯಾಗಶಾಲೆಯ ಹೊರಗೊಳಗೆ ತುಂಬಿ ಹೋಗಿದ್ದ ಜನಸ್ತೋಮದಲ್ಲಿ ಯಾರೊಬ್ಬರಿಗೂ ಅಲ್ಲಿ ನೆರೆದ ದೇವಸ್ತೋಮವು ದೃಗ್ಗೋಚರವಾಗಲಿಲ್ಲ! ಏಕೆಂದರೆ ದಿವ್ಯಶಕ್ತಿಗಳನ್ನು ದಿವ್ಯದೃಷ್ಟಿಯಿಲ್ಲದೆ ನೋಡಲಾಗದು! ಚರ್ಮಚಕ್ಷುವು ಚರ್ಮವನ್ನು ನೋಡೀತು, ಹೊರತು ಸೃಷ್ಟಿಯ ಮರ್ಮವನ್ನೆಂತು ನೋಡೀತು!?

ಯಾಗದ ಭಾಗವಾಗಿ ಸಮರ್ಪಿಸಲ್ಪಡುವ ಹವಿರ್ಭಾಗವೇ ದೇವತೆಗಳ ನಿತ್ಯಭೋಜನ; ಮಹಾವಿಪ್ರರ ಮಂತ್ರಾಹ್ವಾನವನ್ನು ಮನ್ನಿಸಿ, ಮಖ-ಮಧ್ಯದಲ್ಲಿ ಸನ್ನಿಹಿತಗೊಂಡು, ಅವರು ಭಾವದಿಂದಲೀಯುವ ಹವಿಸ್ಸನ್ನು ಭುಜಿಸಿ- ಬಲಗೊಂಡು, ಆ ಬಲದಿಂದಲೇ ಲೋಕವನ್ನು ಸಲಹುವುದು ದೇವತೆಗಳ ಜೀವನ; ಆದರೆ ದಶರಥನ ಪುತ್ರಕಾಮೇಷ್ಟಿಯಲ್ಲಿ ಸನ್ನಿಹಿತಗೊಂಡ ದೇವತೆಗಳಿಗೇಕೋ ಹವಿಷ್ಯಾನ್ನವು ರುಚಿಸಲೇ ಇಲ್ಲ!

ದಶರಥನಂಥ ಯಜಮಾನ ದುರ್ಲಭ; ವಸಿಷ್ಠ~ಋಷ್ಯಶೃಂಗರಂಥ ಋತ್ವಿಜರು ಇನ್ನೂ ದುರ್ಲಭ; ಯಾಗದಲ್ಲಿ ಭಾವಲೋಪವಿಲ್ಲ; ಮಂತ್ರಲೋಪವಿಲ್ಲ; ಕರ್ಮಲೋಪವಿಲ್ಲ; ಕಾಲಲೋಪವಿಲ್ಲ; ದ್ರವ್ಯಲೋಪವಿಲ್ಲ; ಚಾಚೂ ತಪ್ಪದೆ ವೇದಬೋಧಿತವಾದ ಪದ್ಧತಿಯಲ್ಲಿಯೇ ಸಿದ್ಧವಾದ, ಅಮೃತತುಲ್ಯವಾದ ಹವಿಸ್ಸು; ಬೇಡವೆನ್ನಲು ಕಾರಣವೇ ಇಲ್ಲ; ಆದರೂ ಭುಜಿಸಬೇಕಾದ ದೇವರುಗಳಿಗೇಕೋ ಅದು ಇಂದು ರುಚಿಸದು!

ಏಕೆ..!?

~*~*~

(ಸಶೇಷ)

ಕ್ಲಿಷ್ಟ~ಸ್ಪಷ್ಟ:

  • ಭಾವಿತಾತ್ಮರು = ಋಷಿ/ಋತ್ವಿಜರು. ಭಾವಿತ+ಆತ್ಮ – ಆತ್ಮಭಾವ ಇರುವವರು.
  • ಮಖ = ಯಾಗ

ತಿಳಿವು~ಸುಳಿವು:

  • <ಭೂಮಾತೆ-ಗೋಮಾತೆಯರ ಸಾರ> = ಭೂಮಾತೆಯ ಫಲವಾದ ಸಮಿತ್ತು, ಪುರೋಷಾಡಗಳು ಮತ್ತು ಗೋಮಾತೆಯ ಪ್ರಸಾದವಾದ ತುಪ್ಪ – ಇವೆರಡೂ ಹವಿಸ್ಸಾಯಿತು

ಇದು, ಜಗದ್ಗುರುಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಅಕ್ಷರರೂಪದಲ್ಲಿ ಅನುಗ್ರಹಿಸುತ್ತಿರುವ ರಾಮಾಯಣ – #ರಾಮರಶ್ಮಿ70ನೇ ರಶ್ಮಿ.

 

69 ನೇ ರಶ್ಮಿಯನ್ನು ಓದಲು ಇಲ್ಲಿದೆ ಕೊಂಡಿ.

ರಾಮರಶ್ಮಿಯ ಈವರೆಗಿನ ಎಲ್ಲಾ ಲೇಖನಗಳನ್ನು ಓದಲು : ಇಲ್ಲಿದೆ ಕೊಂಡಿ.

Facebook Comments Box