“ನೈನಂ ಸೂರ್ಯಃ ಪ್ರತಪತಿ, ಪಾರ್ಶ್ವೇ ವಾತಿ ನ ಮಾರುತಃ |
ಚಲೋರ್ಮಿಮಾಲೀ ತಂ ದೃಷ್ಟ್ವಾ ಸಮುದ್ರೋsಪಿ ನ ಕಂಪತೇ ||”
(ವಾಲ್ಮೀಕಿ ರಾಮಾಯಣ, ಬಾಲಕಾಂಡ, ಸರ್ಗ 15, ಶ್ಲೋಕ 10)
“ರಾವಣನಿರುವಲ್ಲಿ ಸೂರ್ಯನು ತನ್ನ ಪ್ರಖರ ಕಿರಣಗಳನ್ನು ಬೀರುವಂತಿಲ್ಲ! ವಾಯುವಂತೂ ದಶಮುಖನ ಪಕ್ಕದಲ್ಲಿಯೂ ಬೀಸುವಂತಿಲ್ಲ! ತನ್ನ ತರಂಗ~ಕರಗಳನ್ನು ತೂರಿ, ಸದಾ ಲಾಸ್ಯಗೈಯುತ್ತಲೇ ಇರುವ ಸಮುದ್ರರಾಜನು ರಾವಣನ ಭೀಕರಾಕೃತಿಯನ್ನು ಕಾಣುತ್ತಿರುವಂತೆಯೇ ಚಲನೆಯನ್ನೇ ಕಳೆದುಕೊಳ್ಳುವನು!”

~

ಸೃಷ್ಟಿಯ ಬೆಳಕು-ಉಸಿರು-ತಂಪುಗಳೇ ಆದ ಸೂರ್ಯ-ಸಮೀರ-ಸಾಗರರು- ರಕ್ಕಸರ ದೊರೆಯ ಕೈಗೊಂಬೆಗಳಾಗಿ ಅನುಭವಿಸುತ್ತಿರುವ ದುರವಸ್ಥೆಯನ್ನು ದೇವತೆಗಳು ಸೃಷ್ಟಿಕರ್ತನಿಗೆ ಅರುಹಿದ ಪರಿಯಿದು! ಈ ಮೂವರು ಮಾತ್ರವಲ್ಲ, ಮೂವತ್ಮೂರು ಕೋಟಿ ದೇವತೆಗಳೂ ರಾವಣಕೃತ- ಕಷ್ಟಕೋಟಲೆಗಳಿಗಾಗಿ ತೊಳಲಾಡುತ್ತಿರುವವರೇ! ದೇವತೆಗಳು ಮಾತ್ರವೇನು, ಅಖಂಡ ಬ್ರಹ್ಮಾಂಡವೇ ರಾವಣನ ಕಾಮ-ಕ್ರೋಧಗಳೆಂಬ ಕಾಲ್ಗಳ ನಡುವೆ ನಲುಗುವ ಕಾಲ್ಚೆಂಡಾಗಿ ಪರಿಣಮಿಸಿತ್ತು!
~
‘ಸೃಷ್ಟಿಯು ಇರುವುದು ನಮ್ಮೆಲ್ಲರ ಸುಖಕ್ಕಾಗಿ’ – ಸ್ವಸ್ಥ ಮನಸ್ಸಿನ ಸು-ಭಾವವಿದು.
‘ಸೃಷ್ಟಿಯು ಇರುವುದು ನನಗಾಗಿ- ಕೇವಲ ನನ್ನೊಬ್ಬನ ಸುಖಕ್ಕಾಗಿ’ – ವಿಕೃತ ಮನಸ್ಸಿನ ಸ್ವಭಾವವಿದು!

‘ನಾನೇನೂ ಅಲ್ಲ’ – ಇದು- ತನ್ನ ಮಹತಿಯನ್ನು ತಾನೇ ಅರಿಯದ ಕುಗ್ಗು – ಕೀಳರಿಮೆ.
‘ನಾನೇ ಎಲ್ಲ!’ – ಇದು- ಇಲ್ಲದ ಮಹಿಮೆಯನ್ನು ತನ್ನಲ್ಲಿ ಆರೋಪಿಸಿಕೊಂಡು ಬಂದ ಕೊಬ್ಬು – ಮೇಲರಿಮೆ.
‘ನಾನು ಎಲ್ಲರಲ್ಲೊಬ್ಬ’ – ಇದು- ಕೀಳರಿಮೆಯಲ್ಲಿ ಕೊರಗದ, ಮೇಲರಿಮೆಯಲ್ಲಿ ಮೈಮರೆಯದ, ಇಲ್ಲದಿರುವುದನ್ನು ಇದೆಯೆಂದುಕೊಂಡು ಭ್ರಮಿಸದ, ಇರುವುದನ್ನು ಮರೆಯದ, ಸುಸ್ವಸ್ಥ ಮನಸ್ಥಿತಿ.

‘ಸೂರ್ಯನ ಬೆಳಕು ನಮ್ಮೆಲ್ಲರಿಗಾಗಿ’ ಎಂಬುದು ಎಷ್ಟು ಸರಿಯೋ,
‘ಸೂರ್ಯಪ್ರಭೆ ನನ್ನೋರ್ವನ ಸೊತ್ತು!’ ಎನ್ನುವುದು ಅಷ್ಟೇ ತಪ್ಪು!

ಸೃಷ್ಟಿಯ ಸೌಲಭ್ಯ~ಸೌಖ್ಯಗಳನ್ನು ಸಕಲರಿಗೂ ಒದಗಿಸಲು ಸಾಧನವಾಗುವುದು- ಮಾಧ್ಯಮವಾಗುವುದು ಸುರತ್ವ; ಇತರರಿಗೆ ಹಾನಿಯಾಗದಂತೆ ತಾನು ಅನುಭವಿಸುವುದು ನರತ್ವ; ತನ್ನ ಸ್ವಾಹಾಕಾರವಾಗಿ ಮತ್ತು ಮತ್ತೆಲ್ಲರ ಹಾಹಾಕಾರವಾಗಿ ಸೃಷ್ಟಿ-ಸಕಲವನ್ನೂ ಬಳಸುವುದು ಅಸುರತ್ವ!
~
ಬ್ರಹ್ಮರ್ಷಿ ವಿಶ್ರವಸರ ಪುತ್ರನು ‘ರಾವಣಾಸುರ’ನೆನಿಸಿಕೊಂಡುದು ಇದೇ ಕಾರಣಕ್ಕಾಗಿ!
ಸ್ವಾರ್ಥ! ಅತಿಯಾದ ಸ್ವಾರ್ಥ! ಧರ್ಮದಂಕೆಯಿಲ್ಲದ, ಪಾಪಶಂಕೆಯಿಲ್ಲದ ವಿಕೃತ ಸ್ವಾರ್ಥವು ಲಂಕೇಶ್ವರನನ್ನು ಪಾಪ-ಪಂಕೇಶ್ವರನನ್ನಾಗಿಸಿತು! ತನ್ನ ಸಾಮರ್ಥ್ಯಾತಿಶಯದ ಫಲವಾಗಿ ಲೋಕೇಶ್ವರನಾಗಬಹುದಾದವನನ್ನು ಸ್ವಾರ್ಥಾತಿರೇಕವು ರಾಕ್ಷಸೇಶ್ವರನನ್ನಾಗಿಸಿತು!

ಲೋಕಕ್ಕೆಲ್ಲ ಏಕಪ್ರಕಾರವಾಗಿ ಬೆಳಕೀಯುವುದು ಪ್ರಭಾಕರನ ಪದ್ಧತಿ; ಬಿಸಿಲು ಹೆಚ್ಚೆನಿಸಿದವರು ಕೊಡೆ ಹಿಡಿದುಕೊಳ್ಳಬಹುದು, ಅಥವಾ ಗೂಡಿನೊಳ ಸೇರಿಕೊಳ್ಳಬಹುದು; ಅದನ್ನು ಬಿಟ್ಟು, ತನ್ನೊಬ್ಬನ ಸಲುವಾಗಿ ಸಮಸ್ತಲೋಕವನ್ನೇ ಬೆಳಕಿನಿಂದ ವಂಚಿತಗೊಳಿಸುವುದೆಂದರೆ – ಇದೆಂಥ ಸ್ವಾರ್ಥ!?

ಈ ಪರಿಯ ದುರ್ಮಾನಸರಿಗೆ ಪರಮಾರ್ಥವು ಹೇಗೂ ದೂರ; ಸ್ವಾರ್ಥಸಾಧನೆಯೂ ಅವರಂದುಕೊಂಡಂತೆ ಆಗದು! ಏಕೆಂದರೆ, ತನ್ನ ದುರುಪಯೋಗವನ್ನು ಸೃಷ್ಟಿಯು ಸಹಿಸಬಹುದು; ಆದರೆ ಎಂದೂ ಕ್ಷಮಿಸದು! ಸೃಷ್ಟಿಯ ಸಹನೆಯು ತಾತ್ಕಾಲಿಕ; ಆದರೆ ದುಷ್ಟರ ನಾಶವು ನಿಶ್ಚಿತ! ಸೃಷ್ಟಿಪೀಡಕನ ಸರ್ವನಾಶವನ್ನು ಸೃಷ್ಟಿಯು ಎಷ್ಟು ಮಾತ್ರಕ್ಕೂ ಸಾಧಿಸದೇ ಬಿಡದು!

ಈ ಹಿನ್ನೆಲೆಯಲ್ಲಿಯೇ ಅಲ್ಲವೇ ಸೃಷ್ಟಿಯನ್ನು ಮೆಟ್ಟಿ- ಮುರಿದು- ಮೆರೆಯುವ ದುಷ್ಟ ದಶಕಂಠನ ವಧೋಪಾಯವನ್ನು ವಿಧಿಯೇ ದೇವತೆಗಳಿಗೆ ಹೇಳಿದುದು?

(ಸಶೇಷ)

~*~*~

ತಿಳಿವು~ಸುಳಿವು:

  • <ಸೃಷ್ಟಿಯ ಬೆಳಕು-ಉಸಿರು-ತಂಪುಗಳೇ ಆದ ಸೂರ್ಯ-ಸಮೀರ-ಸಾಗರರು> : ಇಲ್ಲಿ ಬೆಳಕಿನ ಮೂಲ ಸೂರ್ಯ, ಉಸಿರಿನ ಮೂಲ ಸಮೀರ (ವಾಯು), ತಂಪಿನ ಮೂಲ ಗಾಳಿ ಇವುಗಳನ್ನು ಸಮೀಕರಣವಾಗಿ ಅನ್ವಯಿಸಲಾಗಿದೆ.
  • <ವಿಧಿಯೇ ದೇವತೆಗಳಿಗೆ ಹೇಳಿದುದು> : ವಿಧಿ ಎಂದರೆ ‘ಬ್ರಹ್ಮ’ನ ಪರ್ಯಾಯ ಪದ

ಇದು, ಜಗದ್ಗುರುಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಅಕ್ಷರರೂಪದಲ್ಲಿ ಅನುಗ್ರಹಿಸುತ್ತಿರುವ ರಾಮಾಯಣ – #ರಾಮರಶ್ಮಿ74ನೇ ರಶ್ಮಿ.

73 ನೇ ರಶ್ಮಿಯನ್ನು ಓದಲು ಇಲ್ಲಿದೆ ಕೊಂಡಿ.

ರಾಮರಶ್ಮಿಯ ಈವರೆಗಿನ ಎಲ್ಲಾ ಲೇಖನಗಳನ್ನು ಓದಲು : ಇಲ್ಲಿದೆ ಕೊಂಡಿ.

Facebook Comments Box