ಸುತ್ತಲೆಲ್ಲ ಮಲಗಿದ ಹಚ್ಚ ಹಸಿರು, ಬೀಸಿ ಬರುವ ಕಡಲ ಗಾಳಿ, ವಿಶಾಲವಾಗಿ ಹರಡಿದ ಮುರಕಲ್ಲಿನ ಬಯಲು, ಮಧ್ಯೆ ಸರೋವರ, ಪ್ರಶಾಂತ ಪರಿಸರದ ನಡುವೆ ಧಾರ್ಮಿಕ, ಆಧ್ಯಾತ್ಮಿಕ, ಮಾನಸಿಕ ಸಂತಸಗಳನ್ನು ಹೆಚ್ಚಿಸುವ ಮುಜುಂಗಾವು, ಮುಚುಕುಂದ ಮಹರ್ಷಿಯ ತಪೋಭೂಮಿ. ಧರ್ಮ ರಕ್ಷಕನೆಂದೇ ಹೆಸರು ಪಡೆದ ಪಾರ್ಥಸಾರಥಿ ಶ್ರೀಕೃಷ್ಣ ಆರಾಧ್ಯ ಮೂರುತಿಯಾಗಿರುವ ಈ ಭೂಮಿ ದೇವಾಲಯ, ನೇತ್ರಾಲಯ ಮತ್ತು ವಿದ್ಯಾಲಯಗಳ ಸಂಗಮ ಸ್ಥಳ. ದೇವಾಲಯದ ಸನಿಹದಲ್ಲಿರುವ ಶ್ರೀ ಭಾರತೀ ನೇತ್ರ ಚಿಕಿತ್ಸಾಲಯವು ಜಗತ್ತಿನ ಕಣ್ಣು ತೆರೆಸುವಲ್ಲಿ ತನ್ನ ಮಹತ್ವದ ಪ್ರಯತ್ನಗಳನ್ನು ಮಾಡುತ್ತಿದೆ. ಜಾತಿ ಮತ ವರ್ಗಗಳ ಬೇಧವಿಲ್ಲದೆ ನೇತ್ರ ಚಿಕಿತ್ಸೆಯನ್ನು ನೀಡುವ ಈ ನೇತ್ರ ಚಿಕಿತ್ಸಾಲಯವು ಉನ್ಮೇಷ: ಎನ್ನುವ ಸಂಸ್ಕೃತ ಪದಕ್ಕೆ ಅನ್ವರ್ಥವಾಗಿದೆ. ಸಂಸ್ಕೃತ ಭಾರತೀಯ ಪರಂಪರೆಯ ಅವಿಭಾಜ್ಯ ಅಂಗ. ಜನಜೀವನವನ್ನು ಆಧ್ಯಾತ್ಮದೊಂದಿಗೆ ಬೆರೆಸಿದ ಭಾಷೆ. ಆದರೆ…

ಪಾಶ್ಚಾತ್ಯ ಸಂಸ್ಕೃತಿಯ ದುಷ್ಪರಿಣಾಮಗಳ ಪ್ರವಾಹದಲ್ಲಿ ನಮ್ಮ ಸನಾತನ ಸಂಸ್ಕೃತಿಯ ಮೌಲ್ಯ ಆದರ್ಶಗಳು ನಿಧಾನವಾಗಿ ಮರೆಯಾಗುತ್ತಿವೆ. ಭಾರತೀಯರ ಜೀವನಾಡಿಯಾಗಿರುವ ಸಂಸ್ಕೃತ ಮತ್ತು ಸಂಸ್ಕೃತಿಗಳ ಮೇಲೆ ಆಧುನಿಕ ವಿಚಾರಧಾರೆಗಳ ಆಕ್ರಮಣ ತೀವ್ರವಾಗಿ ನಡೆಯುತ್ತಿದೆ. ಆದರೂ ಸನಾತನ ಸಂಸ್ಕೃತಿ ಮತ್ತು ಸಂಸ್ಕೃತದ ಉಳಿವಿಗಾಗಿ ನಮ್ಮೆಲ್ಲರ ಪ್ರಯತ್ನಗಳು ಮುಂದೆ ಸಾಗುತ್ತಿವೆ. ಸಂಸ್ಕೃತ ವಿದ್ಯಾಭ್ಯಾಸ ಇಂದಿನ ಆಧುನಿಕ ಯುಗಕ್ಕೆ ಹೇಳಿದ್ದಲ್ಲ ಎನ್ನುವ ಅಭಿಪ್ರಾಯ ಈಗಲೂ ಹಲವರ ಮನಸ್ಸಿನಲ್ಲಿದೆ. ಇಂತಹ ಅನಾನುಕೂಲಕರ ಪರಿಸ್ಥಿತಿಯಲ್ಲೂ ನಮ್ಮ ಸಂಸ್ಕೃತಿಗೆ ಉತ್ತಮ ಭವಿಷ್ಯವಿದೆ ಎನ್ನುವುದನ್ನು ಸಾಬೀತುಪಡಿಸಲು ಕಾಸರಗೋಡಿನಿಂದ ಹದಿನೈದು ಕಿಲೋ ಮೀಟರು ದೂರದಲ್ಲಿ ಅಂದರೆ ಕುಂಬಳೆಯ ಸನಿಹದ ಮುಜುಂಗಾವಿನಲ್ಲಿ ಶ್ರೀ ಭಾರತೀ ವಿದ್ಯಾಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ.

ಪ್ರಾಥಮಿಕ ಹಂತದಿಂದಲೇ ಸಾಂಪ್ರದಾಯಿಕ ಶಿಕ್ಷಣದ ಜೊತೆಗೆ ಭಾರತೀಯ ಸಂಸ್ಕೃತಿಯ ಪರಿಚಯವನ್ನು ಮತ್ತು ಜೀವನ ಮೌಲ್ಯಗಳನ್ನು ಉದ್ದೀಪನಗೊಳಿಸುವ ದೃಷ್ಟಿಯಿಂದ ವಿಶಿಷ್ಟ ರೀತಿಯ ಕನ್ನಡ ಮಾಧ್ಯಮ ಪ್ರಾಥಮಿಕ ಶಿಕ್ಷಣವನ್ನು ಒದಗಿಸುವ ಶ್ರೀ ಭಾರತೀ ವಿದ್ಯಾಪೀಠ ಮುಜುಂಗಾವಿನಲ್ಲಿದೆ. ಸಂಸ್ಕೃತ – ಕನ್ನಡ ಮಾಧ್ಯಮ ಶಿಕ್ಷಣ ರಂಗದಲ್ಲಿ ಈ ಸಂಸ್ಥೆ ಉತ್ತಮ ಪ್ರಗತಿಯನ್ನು ಸಾಧಿಸಿ ತೋರಿಸುತ್ತಿವೆ. ಪಂಚಮುಖಿ ಶಿಕ್ಷಣಕ್ಕೆ ಒತ್ತು ನೀಡಿ ಇಲ್ಲಿನ ವಿದ್ಯಾರ್ಥಿಗಳು ಬಹುಮುಖಿಯಾಗಿ ಅಭಿವೃದ್ಧಿಗೊಳ್ಳಬೇಕು ಎಂಬ ಜನಮಾನಸದ ಅಭಿಪ್ರಾಯಕ್ಕೆ ಮನ್ನಣೆ ನೀಡಿ ಶ್ರೀ ಭಾರತೀ ವಿದ್ಯಾಪೀಠವು ಆಂಗ್ಲ ಮಾಧ್ಯಮ ಶಿಕ್ಷಣದ ಕಡೆಗೆ ಮುಖಮಾಡಿ ನಿಂತಿದೆ. ಶೈಕ್ಷಣಿಕ ವಿಕಾಸದ ಈ ಮಜಲಿಗೆ ಹಿರಿಯ ಪ್ರಾಥಮಿಕ ಹಂತದಿಂದ ಆಂಗ್ಲ ಮಾಧ್ಯಮ ಶಿಕ್ಷಣ ಎನ್ನುವ ವಿಚಾರವು ಹೊಸ ಗರಿಯನ್ನು ಮೂಡಿಸಿದೆ. ಆಧುನಿಕ ಶಿಕ್ಷಣ ವಿಧಾನದೊಂದಿಗೆ ಬಹುಬೇಗ ಹೊಂದಿಕೊಳ್ಳುವ ಉದ್ದೇಶದಿಂದ ಪ್ರಸ್ತುತ ಎಂಟನೇ ತರಗತಿಯ ತನಕ ಇಲ್ಲಿ ಕೇಂದ್ರೀಯ (ಸಿಬಿಎಸ್ಇ) ಪಾಠ್ಯ ಪದ್ಧತಿಯ ಪ್ರಕಾರ ಐದನೇ ತರಗತಿಯಿಂದ ಇಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣವನ್ನು ನೀಡಲಾಗುತ್ತಿದೆ.

ಮಕ್ಕಳ ವಿದ್ಯಾಭ್ಯಾಸವು ಮನೆಯಿಂದಲೇ ಆರಂಭವಾಗುತ್ತದೆ. ಅಲ್ಲಿನ ಉತ್ತಮ ಸಂಸ್ಕಾರದಲ್ಲಿ ಬೆಳೆದ ಮಕ್ಕಳು ಜೀವನದಲ್ಲಿ ಉನ್ನತಿಯನ್ನು ಪಡೆಯುತ್ತಾರೆ. ಪ್ರಾಥಮಿಕ ವಿದ್ಯಾ ಸಂಸ್ಥೆಗಳು ವಿದ್ಯಾರ್ಥಿಗಳ ಮನೋವಿಕಾಸಕ್ಕೆ ಪೂರಕ ವಾತಾವರಣವನ್ನು ಕಟ್ಟಿ ಕೊಡುತ್ತವೆ. ಈ ನಿಟ್ಟಿನಲ್ಲಿ ಶ್ರೀ ಭಾರತೀ ವಿದ್ಯಾ ಪೀಠವು ವಿದ್ಯಾರ್ಥಿಗಳ ಧನಾತ್ಮಕ ಬೆಳವಣಿಗೆಗೆ ಸಹಾಯ ಮಾಡುತ್ತಿದೆ. ಯೋಗ, ಸಂಗೀತ, ನೃತ್ಯ, ಸಾಹಿತ್ಯ, ಭಜನೆ, ಚಿತ್ರಕಲೆ, ರಾಮಾಯಣ ಮಹಾಭಾರತಗಳ ಅಧ್ಯಯನದ ಕಡೆಗೆ ಎರಡೂ ವಿದ್ಯಾಸಂಸ್ಥೆಗಳಲ್ಲಿ ವಿಶೇಷ ಗಮನವನ್ನು ನೀಡಲಾಗುತ್ತಿದೆ. ಸಂಸ್ಕೃತ – ಜ್ಯೋತಿಷ್ಯ ಸಂಶೋಧನೆಗಳಿಗೆ ಸೂಕ್ತ ಅವಕಾಶ ಮತ್ತು ಮಾರ್ಗದರ್ಶನಗಳನ್ನೂ ನೀಡಲಾಗುತ್ತಿದೆ. ಶಾರೀರಿಕವಾಗಿ ಇಲ್ಲಿನ ವಿದ್ಯಾರ್ಥಿಗಳು ಸಕ್ಷಮರಾಗಿರಲು ದೈಹಿಕ ಅಭ್ಯಾಸಗಳನ್ನೂ ಕ್ರೀಡಾ ಕೂಟಗಳನ್ನೂ ಆಯೋಜಿಸಲಾಗುತ್ತಿದೆ.

ವಿದ್ಯಾಲಯವು ಶಿಶುಮಂದಿರದಿಂದಲೇ ಕನ್ನಡ ಮತ್ತು ಆಂಗ್ಲ ಭಾಷೆಯ ಪರಿಚಯವನ್ನು ಮಾಡಿಕೊಡುತ್ತಿದ್ದು ಎರಡನೇ ತರಗತಿಯಿಂದ ಸಂಸ್ಕೃತ, ಮೂರನೇ ತರಗತಿಯಿಂದ ಹಿಂದಿ ಭಾಷೆಯನ್ನು ಕಲಿಸಲಾಗುತ್ತಿದೆ. ಸಂಸ್ಕೃತ ಮತ್ತು ಸಂಸ್ಕೃತಿಗೆ ಸಂಬಂಧಪಟ್ಟ ಧಾರ್ಮಿಕ ಕಾರ್ಯಕ್ರಮಗಳನ್ನೂ ಉತ್ಸವಗಳನ್ನೂ ಇಲ್ಲಿ ಆಚರಿಸಲಾಗುತ್ತಿದೆ. ಶಾರದೋತ್ಸವ, ಶ್ರೀಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ, ಸ್ವಾತಂತ್ರ್ಯೋತ್ಸವ, ಗುರುಪೂರ್ಣಿಮಾ, ಮಕ್ಕಳ ದಿನ, ವಾರ್ಷಿಕೋತ್ಸವ, ನಕ್ಷತ್ರ ವನ, ವನ ಮಹೋತ್ಸವ ಇತ್ಯಾದಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳ ಬೌದ್ಧಿಕ ವಿಕಾಸಕ್ಕಾಗಿ ರಜಾದಿನಗಳಲ್ಲಿ ಮತ್ತು ಬೇಸಿಗೆ ರಜೆಯಲ್ಲಿ ನುರಿತ ಸಂಪನ್ಮೂಲ ವ್ಯಕ್ತಿಗಳ ನೇತೃತ್ವದಲ್ಲಿ ಬೌದ್ಧಿಕ ವಿಕಾಸ ಶಿಬಿರವನ್ನು ನಡೆಸಲಾಗುತ್ತಿದೆ. ವಿದ್ಯಾರ್ಥಿಗಳೇ ನಿರೂಪಿಸಿ, ನಿರ್ವಹಿಸುವ `ಪ್ರತಿಭಾ ಭಾರತೀ’ ಸಭಾ ಕಾರ್ಯಕ್ರಮಗಳು ಇಲ್ಲಿನ ಇನ್ನೊಂದು ವಿಶೇಷ. ಎಲ್ಲ ಸಂಘಸಂಸ್ಥೆಗಳ ಕೇಂದ್ರವಾಗಿ ಪ್ರಬೋಧನ, ವಿಕಸನ, ಚಿಂತನದ ಧ್ಯೇಯಗಳನ್ನು ಹೊತ್ತ `ಜ್ಞಾನ ದೀಪ್ತಿ’ ಇಲ್ಲಿ ಕಾರ್ಯ ನಿರ್ವಹಿಸುತ್ತಿದೆ. ವಿದ್ಯಾರ್ಥಿಗಳ ಅಭಿವೃದ್ಧಿಯಲ್ಲಿ ಪೂರಕವಾಗುವ ನಿಟ್ಟಿನಲ್ಲಿ ಭಿತ್ತಿ ಪತ್ರಿಕೆ ಮತ್ತು `ಬೆಳಕು’ ಹಸ್ತ ಪ್ರತಿ ಸಂಚಿಕೆಗಳನ್ನು ಪುಟಾಣಿಗಳು ಬಹಳ ಆಸ್ಥೆಯಿಂದ ರೂಪಿಸುತ್ತಿದ್ದಾರೆ.

ವಿದ್ಯಾರ್ಥಿಗಳಲ್ಲಿ ಸಾಹಸಿಕ ಮನೋಭಾವವನ್ನು ಬೆಳೆಸಿ ಅವರಲ್ಲಿ ಶಾರೀರಿಕ ಮತ್ತು ಮಾನಸಿಕ ವಿಕಾಸವನ್ನು ನಿರೂಪಿಸಲು ನೆರವಾಗುವ ಸ್ಕೌಟ್ ಆಂದೋಲನವೂ ಕೂಡಾ ಇಲ್ಲಿ ಸಕ್ರಿಯವಾಗಿ ನಡೆಯುತ್ತಿದೆ . ಸ್ಕೌಟ್ ಆಂದೋಲನದ ಶತಮಾನೋತ್ಸವ ವರ್ಷಾಚರಣೆಯ ಅಂಗವಾಗಿ ಬೇಕೂರಿನಲ್ಲಿ ಜರಗಿದ ಎರಡು ದಿನಗಳ ಕಬ್ ಬುಲ್ಬುಲ್ ಉತ್ಸವವದಲ್ಲಿ ವಿದ್ಯಾರ್ಥಿಗಳಿಗಾಗಿ ನಡೆದ ಹಗ್ಗದ ಮೇಲೆ ನಡಿಗೆ, ಏಣಿ ಏರುವುದು, ಮೊಸಳೆ ಕುಂಡ, ತೂಗುಯ್ಯಾಲೆ… ಹೀಗೆ ವಿವಿಧ ಸಾಹಸಿಕ ಚಟುವಟಿಕೆಗಳು, ಸ್ಪರ್ಧೆಗಳು, ಶಿಬಿರಾಗ್ನಿ ಮತ್ತು ಮನರಂಜನಾ ಕಾರ್ಯಕ್ರಮಗಳಲ್ಲಿ ಶ್ರೀ ಭಾರತೀ ವಿದ್ಯಾಪೀಠವು ಪ್ರಥಮ ಸ್ಥಾನವನ್ನು ಗಳಿಸಿದೆ.

ವಿದ್ಯಾರ್ಥಿಗಳ ಜ್ಞಾನಾಭಿವೃದ್ದಿಗೆ ನೆರವಾಗಲು ಸುಮಾರು ಹತ್ತು ಸಾವಿರ ಪುಸ್ತಕಗಳನ್ನು ಒಳಗೊಂಡ ಶ್ರೀ ಭಾರತೀ ಗ್ರಂಥಾಲಯವು ಮುಜುಂಗಾವಿನಲ್ಲಿದೆ. ಇಲ್ಲಿ ಅತ್ಯಪೂರ್ವ ತಾಳೆಗರಿ ಗ್ರಂಥಗಳನ್ನೂ ಸಂಗ್ರಹಿಸಿಡಲಾಗಿದೆ. ಆಧುನಿಕ ವಿದ್ಯಾಭ್ಯಾಸಕ್ಕೆ ಪೂರಕವಾಗಲು ಕಂಪ್ಯೂಟರ್ ಪ್ರಯೋಗಾಲಯವನ್ನೂ ಸಜ್ಜುಗೊಳಿಸಲಾಗಿದೆ. ಅಂದರೆ ಶಿಶುಮಂದಿರದಿಂದ ಎಂಟನೇ ತರಗತಿಯ ತನಕ ಪಂಚಮುಖೀ ಶಿಕ್ಷಣದ ಅಂಗವಾಗಿ ನೈತಿಕ, ಯೋಗ, ಸಂಗೀತ, ನೃತ್ಯ, ಶಾರೀರಿಕ ವಿಷಯಗಳನ್ನು ಇಲ್ಲಿ ಅನುಷ್ಠಾನಗೊಳಿಸಲಾಗಿದೆ. 2009-10ನೇ ಸಾಲಿನಲ್ಲಿ ಇಲ್ಲಿ 150ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ವಿದ್ಯಾರ್ಜನೆಗೈಯ್ಯುತ್ತಿದ್ದಾರೆ. ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯ ಅಂಗವಾಗಿರುವ ನ್ಯಾಶನಲ್ ಇನ್ಸ್ಟಿಟ್ಯೂಟ್ ಓಫ್ ಓಪನ್ ಸ್ಕೂಲಿನ ನೇರ ಅಂಗೀಕಾರವನ್ನು ಪಡೆದ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ಜತೆಗೆ ಮುಜುಂಗಾವಿನ ವಿದ್ಯಾಪೀಠವೂ ಕಾಯರ್ಾಚರಿಸುತ್ತಿದೆ.

ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಸೇವಾ ಯೋಜನೆಯಲ್ಲಿ ಒಳಪಟ್ಟ ಈ ವಿದ್ಯಾಸಂಸ್ಥೆಗಳ ಮೇಲ್ನೋಟವನ್ನು ಸ್ವತಃ ಶ್ರೀಗಳವರೇ ಕೈಗೊಳ್ಳುತ್ತಿದ್ದಾರೆ. ಪ್ರಧಾನ ಆಚಾರ್ಯ ಶ್ಯಾಮ ಭಟ್ ದರ್ಬೆ-ಮಾರ್ಗ ಮತ್ತು ಡಾ| ಡಿ.ಪಿ.ಭಟ್ ಅಧ್ಯಕ್ಷತೆಯಲ್ಲಿ ಸಕ್ರಿಯವಾದ ಆಡಳಿತ ಸಮಿತಿ ವಿದ್ಯಾಲಯಗಳ ನಿರ್ವಹಣೆಯನ್ನು ನೋಡಿಕೊಳ್ಳುತ್ತಿವೆ.

Blog:   http://mujungavu.blogspot.com/

ಶಾಲಾ ಮಕ್ಕಳ ಬ್ಲೊಗ್ ವಿಕೃತಿ ನಾಮ ಸಂವತ್ಸರ ಯುಗಾದಿ ದಿನದಂದು ಶ್ರೀ ಶ್ರೀ ರಾಘವೇಶ್ವರಭಾರತೀ ಸ್ವಾಮಿಗಳವರ ಅಮೃತ ಹಸ್ತದಿಂದ ಲೋಕಾರ್ಪಣಗೊಂಡಿತು

.

ಛಾಯಾಚಿತ್ರಗಳು:

Facebook Comments