Krishna at Mahabharatha

“ನಿನ್ನ ಕೊನೆಯ ಕ್ಷಣ ಸನ್ನಿಹಿತವಾಗಿದೆ. ಇಷ್ಟದೇವರನ್ನು ಸ್ಮರಿಸು”
ಪ್ರಾಣಹಾರಿಯಾದ ಪ್ರಹಾರವನ್ನು ಮಾಡುವ ಮೊದಲು ವೀರನೊಬ್ಬ ಪ್ರತಿವೀರನಿಗೆ ಹೇಳುವ ಮಾತಿದು..!(

 

ವ್ಯಕ್ತಿ ದೇಹಾಂತ ಸಮಯದಲ್ಲಿ ಯಾವುದನ್ನು ಸ್ಮರಿಸುವನೋ, ಮುಂದೆ ಆತ ಅದೇ ಸ್ವರೂಪವನ್ನು ಹೊಂದುವನು.!

(ಯಂ ಯಂ ವಾಪಿ ಸ್ಮರನ್ ಭಾವಂ ತ್ಯಜತ್ಯಂತೇ ಕಲೇವರಮ್ |
ತಂ ತಮೇವೈತಿ ಕೌಂತೇಯ ಸದಾ ತದ್ಭಾವಭಾವಿತಃ || – ಗೀತೆ )

ಜಿಂಕೆಯನ್ನು ಸ್ಮರಿಸುತ್ತಾ ಪ್ರಾಣ ಬಿಟ್ಟ ಭರತ ಜಿಂಕೆಯೇ ಆಗಿ ಹುಟ್ಟಬೇಕಾಯಿತು..
ದೇವರನ್ನು ಸ್ಮರಿಸುತ್ತಾ ಪ್ರಾಣ ಬಿಡುವವನು ದೇವರೇ ಆಗುವನು..

ಅದುವೇ ಮೋಕ್ಷ..
ಪುತ್ರವತ್ಸಲರು, ಮಿತ್ರವತ್ಸಲರು, ಭೃತ್ಯವತ್ಸಲರು, ಭಕ್ತವತ್ಸಲರು

ಎಲ್ಲೆಲ್ಲಿಯೂ ಸಿಗಬಹುದು..
ಆದರೆ ಶತ್ರುವತ್ಸಲರನ್ನು ಕಾಣಲುಂಟೇ..!?

ಹಾಗೊಮ್ಮೆ ಕಂಡರೆ ಅದು ಭಾರತದಲ್ಲಿ, ಭಾರತೀಯರಲ್ಲಿ, ಭಾರತೀಯರ ಯುದ್ಧಪರಿಭಾಷೆಯಲ್ಲಿ ಮಾತ್ರ..
ಶತ್ರುವಿಗೂ ಶಾಶ್ವತ ಶ್ರೇಯಸ್ಸನ್ನು – ಮೋಕ್ಷವನ್ನು ಹಾರೈಸುವ ಹೃದಯವೆಂತಹುದು..?

ಇಹದ ಬದುಕನ್ನು ಕೊನೆಗೊಳಿಸುವಾಗಲೂ ಪರದಲ್ಲಿ ಪರಮೋಚ್ಚಪದವಿಯನ್ನು ಕಟ್ಟಿಕೊಡುವ ಯುದ್ಧವಿಜ್ಞಾನವೆಂತಹುದು..?
ದ್ವೇಷ – ವಿಷಯದ ಮೇಲೆಮಾತ್ರ, ಜೀವದ ಮೇಲಲ್ಲ…

ನಶ್ವರ ಶರೀರದ ಮೇಲೆ ಪ್ರಹಾರ..
ಆದರೆ ಶಾಶ್ವತ ಆತ್ಮದ ಉದ್ಧಾರ…

ಭಾರತೀಯರ ಯುದ್ಧಕ್ರಮದಲ್ಲಿ  ಸೋಲು ಯಾರಿಗೂ ಇಲ್ಲ…
ಎರಡೂ ಕಡೆ ಲಾಭವೇ..!!!!!

ಗೆದ್ದವನಿಗೆ ಭೂ ಸ್ವರ್ಗ….
ಸತ್ತವನಿಗೆ ಅದಕ್ಕಿಂತಲೂ ಮಿಗಿದಾದ ವೀರ ಸ್ವರ್ಗ – ಮೋಕ್ಷ..!!!!

ಯುದ್ಧದಲ್ಲಿಯೂ ಅಧ್ಯಾತ್ಮದ ಹರಿವೆಯನ್ನು ಹೊಂದಿದ, ವಿಶ್ವದ ಏಕೈಕ ಸಂಸ್ಕೃತಿ ಎಂದರೆ ಅದು ನಮ್ಮ ಸಂಸ್ಕೃತಿ, ಭಾರತೀಯ ಸಂಸ್ಕೃತಿ…!

ಭಾರತೀಯರ ಕೆಲವು ಯುದ್ಧ ನಿಯಮಗಳನ್ನು ಗಮನಿಸಿ:

ಶರಣಾಗತರಾದವರನ್ನು ಸಂಹರಿಸಬಾರದು..
ಶಸ್ತ್ರಕೆಳಗಿಟ್ಟವರನ್ನು ಸಂಹರಿಸಬಾರದು..
ಪಲಾಯನ ಮಾಡುತ್ತಿರುವವರನ್ನು ಸಂಹರಿಸಬಾರದು
ಕೂದಲು ಬಿಚ್ಚಿರುವಾಗ ಸಂಹರಿಸಬಾರದು..
(ಪುರುಷರಿಗಾಗಲಿ ಸ್ತ್ರೀಯರಿಗಾಗಲೀ ಕೂದಲು ಕಟ್ಟುವುದು ಹಿಂದಿನಕಾಲದಲ್ಲಿ ಕಡ್ಡಾಯವಾಗಿದ್ದಿತು)

ಈ ನಿಯಮಗಳ ಉದ್ದೇಶ,

ಎದುರಾಳಿ ಬದುಕಬಯಸಿದರೆ ಬದುಕಿಗೆ ಅವಕಾಶ ಮಾಡಿಕೊಡುವುದು..
ಹಾಗಿಲ್ಲದಿದ್ದರೆ ಸಾಯುವ ಸಿದ್ಧತೆಗೆ ಅವಕಾಶ ಮಾಡಿಕೊಡುವುದು..
ಸಿದ್ಧತೆ ಎಂದರೆ ಸ್ಮರಣೆ..
ಮರಣದ ಆ ಒಂದು ಕ್ಷಣದಲ್ಲಿ ಮಾಡುವ ಸ್ಮರಣೆ ಮುಕ್ತಿಯ ಮಹಾಮಂಗಲವನ್ನೇ ಕೊಡಮಾಡುವುದು..
ಪಲಾಯನ ಮಾಡುವಾಗ ಇರುವ ಭಯಗ್ರಸ್ತ, ವ್ಯಗ್ರ ಮನಸ್ಥಿತಿಯಲ್ಲಿ ಸತ್ತರೆ ಮುಂದಿನ ಗತಿ ಒಳ್ಳೆಯದಾಗದು..!!
ಕೂದಲು ಬಿಚ್ಚಿ ಹರಡಿ – ಹಾರಾಡುತ್ತಿರುವಾಗ ಮನಸ್ಸು ಚಂಚಲವಾಗಿರುತ್ತದೆ..!
ಕೂದಲುಗಳಿಗೂ ಚಿತ್ತವೃತ್ತಿಗಳಿಗೂ ನೇರ ಸಂಬಂಧ..!!
ಕೇಶ – ಪಾಶಗಳನ್ನು ಬಂಧಿಸುವುದು ಮನಃಸಂಯಮಕ್ಕೆ ಪೂರಕ..!
ಚಂಚಲ ಮನಸ್ಥಿತಿಯಲ್ಲಿ ಸಾವು ಬಂದರೆ ನಿಶ್ಚಲ ಮುಕ್ತಿ ಸಿಗಲು ಹೇಗೆ ತಾನೇ ಸಾಧ್ಯ..!!

ಇಂದು ನಾವು ಬಹಳ ಮುಂದುವೆರೆದಿದ್ದೇವೆ..!
ಬಿಲ್ಲು – ಬಾಣಗಳ ಸ್ಥಾನದಲ್ಲಿ ಬಂದೂಕು, ಬಾಂಬುಗಳು ಬಂದಿವೆ..!!
ಆದರೊಂದು ಪ್ರಶ್ನೆ..

ನಮ್ಮ ಪೂರ್ವಜರು ಶತ್ರುಗಳ ಕುರಿತು ತೋರಿಸುತ್ತಿದ್ದ ಕಾಳಜಿ, ವಾತ್ಸಲ್ಯ ಇಂದು  ನಮ್ಮಲ್ಲಿ ಉಳಿದಿದೆಯೇ..?

ಅಂದು ಸೈನ್ಯಗಳ ಮಧ್ಯೆ ಮಾತ್ರವೇ ಯುದ್ಧಗಳು ನಡೆಯುತ್ತಿದ್ದವು..
ನಿರಪರಾಧಿಗಳು ಸಾಯುವ ಮಾತೇ ಇರಲಿಲ್ಲ..!!

ಸೈನಿಕ ಸಾವಿಗೆ ಸಿದ್ಧನಾಗಿಯೇ ಮನೆಯಿಂದ ಹೊರಡುತ್ತಿದ್ದ..!
ಆತನನ್ನಾಶ್ರಯಿಸಿದ್ದವರೂ ಕೂಡಾ ಬರಬಹುದಾದ ವಿಪತ್ತಿಗೆ ಸಿದ್ಧರಾಗಿರುತ್ತಿದ್ದರು..

ಸಾವಿನ ಕೊನೆಯಕ್ಷಣಗಳು ಸಾವಿನ ನಂತರದ ಬದುಕನ್ನು ಕಟ್ಟಿಕೊಡುತ್ತವೆ..
ಆದರೆ ಅವುಗಳನ್ನು ಬಳಸಿಕೊಳ್ಳಲು ಸಾಧ್ಯವಾಗುವುದು ಸಾವಿನ ಮುನ್ಸೂಚನೆ ಇದ್ದಾಗ ಮಾತ್ರ..!!
ಅತ್ತ ಸೈನಿಕನು ಸಾವಿಗೆ ಸಿದ್ಧನಾದರೆ, ಇತ್ತ ಅವನವರು ಅವನಿಲ್ಲದ ಬದುಕಿಗೆ ಸಿದ್ಧರಾಗಿರುತ್ತಿದ್ದರು..!

ಆದರೆ ಇಂದಿನ ಯುದ್ಧಗಳು ಸೈನ್ಯಗಳು – ಸೈನಿಕರ ನಡುವೆ ಮಾತ್ರವೇ ನಡೆಯುವುದಿಲ್ಲ..!
ಇಂದಿನ ಯುದ್ಧತಂತ್ರದಲ್ಲಿ ಮುಗ್ಧ ಜನಗಳೇ ಮುಖ್ಯ ದಾಳಗಳು..!!
ಇಂದಿನ ಕ್ಷಿಪಣಿಗಳಿಗೆ ಮಹಾನಗರಗಳೇ ಮುಖ್ಯ ಗುರಿಗಳು..!
ಜನನಿಬಿಡ ಸ್ಥಳಗಳಲ್ಲಿ ಬಾಂಬ್ ಸ್ಫೋಟಿಸಿದರೆ ಸಾಯುವವರು ಅಮಾಯಕರಲ್ಲವೇ..?

ಧ್ವಸ್ತವಾಗುವುದು ಅವರ ಜೀವನ ವ್ಯವಸ್ಥೆಗಳಲ್ಲವೇ..?

ಈ ರೀತಿಯ ಯುದ್ಧದಲ್ಲಿ, ಸಾಯುವವರಲ್ಲಿ ಸಾವಿನ ಸಿದ್ಧತೆಯಾಗಲೀ  ಅಥವಾ ಅವರನ್ನು ನಂಬಿದವರಲ್ಲಿ ಮುಂದಿನ ಜೀವನದ ಸಿದ್ಧತೆಯಾಗಲೀ ಇರಲು ಸಾಧ್ಯವೇ..?

ಅಂದು ಯುದ್ಧದ ನಿರ್ಣಯವನ್ನು ಕೈಗೊಳ್ಳುತ್ತಿದ್ದ ರಾಜರು, ಸೇನಾಪತಿಗಳು ಸ್ವಯಂ ಯುದ್ಧಭೂಮಿಯನ್ನು ಪ್ರವೇಶಿಸಿ ಯುದ್ಧದ ನೇತೃತ್ವವನ್ನು ವಹಿಸುತ್ತಿದ್ದರು..!
ತಾವು ಕೈಗೊಂಡ ನಿರ್ಣಯದ ಪರಿಣಾಮವನ್ನು ಸಾಕ್ಷಾತ್ ತಾವೇ ಸ್ವೀಕರಿಸುತ್ತಿದ್ದರು..!!
ಇಂದು………??
ಯುದ್ಧದ ನಿರ್ಣಯವನ್ನು ಕೈಗೊಳ್ಳುವವರು ಸಕಲ ವಿಧದ ರಕ್ಷಣೆಯ ಸುಭದ್ರ ಕೋಟೆಯಲ್ಲಿ ಸುರಕ್ಷಿತರಾಗಿರುತ್ತಾರೆ…..!!!!
ಸಾಯುವವರು ಸೈನಿಕರು ಮತ್ತು ಸಾಮಾನ್ಯ ಜನತೆ ಮಾತ್ರ..!!

ನಮ್ಮ ಪ್ರಗತಿ ತಂತ್ರಜ್ಞಾನದಲ್ಲಿ ಮಾತ್ರ..!
ಮಾನಸಿಕತೆಯಲ್ಲಿ ನಾವು ಅದೆಷ್ಟು ಹಿಂದುಳಿದಿದ್ದೇವೆ..!!

ದ್ವಾವಿಮೌ ಪುರುಷೌ ಲೋಕೇ ಸೂರ್ಯಮಂಡಲ ಭೇದಿನೌ |
ಪರಿವ್ರಾಟ್ ಯೋಗಯುಕ್ತಶ್ಚ ರಣೇ ಚ ಅಭಿಮುಖೋ ಹತಃ ||

ಜಗದ ಕೋಟ್ಯಂತರ ಜೀವರಾಶಿಗಳಲ್ಲಿ ಈರ್ವರು ಮಾತ್ರವೇ  ಸೂರ್ಯ ಮಂಡಲವನ್ನು ಭೇದಿಸಿ ಮುಂದೆ ಸಾಗುವರು..
ಪರಮೇಶ್ವರನನ್ನು ಹೊಂದುವರು..
ಯೋಗಯುಕ್ತನಾಗಿ ದೇಹ ಬಿಡುವ ಯೋಗಿಯೊಬ್ಬ..
ಯುದ್ಧದಲ್ಲಿ ಅಭಿಮುಖನಾಗಿ ಹೋರಾಡುತ್ತಾ ಪ್ರಾಣಾರ್ಪಣೆ ಮಾಡುವ ಯೋಧನೊಬ್ಬ..

ಯೋಧನೂ ಯೋಗಿಯೇ. . .
ಯುದ್ಧವೂ ಯೋಗವೇ…..!!!!!

ಇದು ಭಾರತ . . . !

ಇದು ಭಾರತೀಯತೆ. . . !!

ಇವರು ಭಾರತೀಯರು. . . !!!

ರಾಮಬಾಣ :
ವಿರಾಧವಧ ಪಂಡಿತಾಯನಮಃ ||ಇದು ಶ್ರೀ ರಾಮನ ಆಷ್ಟೋತ್ತರ ನಾಮ ನಮನಗಳಲ್ಲೊಂದು..
ವಿರಾಧರಾಕ್ಷಸನ ವಧೆಯಲ್ಲಿ ಪಾಂಡಿತ್ಯವೇನಿರಬಹುದಪ್ಪಾ..!!??

Facebook Comments