“ಕನ್ನಡಪ್ರಭ” ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಶ್ರೀಗುರುಗಳ ಲೇಖನಾಮೃತ “ಧರ್ಮಜ್ಯೋತಿ” ಇದೀಗ “ಹರೇರಾಮ.ಇನ್” ನಲ್ಲಿ, ಪ್ರತಿ ಭಾನುವಾರದಂದು.
ಪ್ರಕಟಣೆ ಕೃಪೆ & Copyright: ಶ್ರೀ ಭಾರತೀ ಪ್ರಕಾಶನ, ಗಿರಿನಗರ – ಬೆಂಗಳೂರು.

~

ಜ್ಯೋತಿಯಿಂದಲೇ ಬೆಳಗುವುದು ಜ್ಯೋತಿ ಗುರುವಿನಿಂದಲೇ ಬೆಳಗುವುದು ಧರ್ಮಜ್ಯೋತಿ

ಜ್ಯೋತಿಯಿಂದಲೇ ಬೆಳಗುವುದು ಜ್ಯೋತಿ
ಗುರುವಿನಿಂದಲೇ ಬೆಳಗುವುದು ಧರ್ಮಜ್ಯೋತಿ

ಜ್ಯೋತಿ 13:ಅಂತರಂಗದ ಸಂನ್ಯಾಸಿ

ಅವನೊಬ್ಬ ಸನ್ಯಾಸಿ. ಸನ್ಯಾಸದ ವ್ರತ-ನಿಯಮಗಳನ್ನು ಆತ ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದ. ಅವನ ದಿನಚರಿಯ ಬಹುಪಾಲು ಸಮಯ ಪೂಜೆ-ಜಪಗಳಲ್ಲಿ ಕಳೆಯುತ್ತಿತ್ತು.
ಸನ್ಯಾಸಿಯ ಆಶ್ರಮದ ಸಮೀಪದಲ್ಲಿಯೇ ಊರಿನ ಪ್ರಸಿದ್ಧ ವೇಶ್ಯೆಯ ಮನೆಯಿತ್ತು. ಜೀವನದ ಅನಿವಾರ್ಯತೆಗಳಿಂದಾಗಿ ವೇಶ್ಯಾವೃತ್ತಿಗಿಳಿದಿದ್ದರೂ, ಅವಳ ಅಂತರಂಗ ಮಾತ್ರ ಪರಿಶುದ್ಧ ಜೀವನಕ್ಕಾಗಿ ಹಪಹಪಿಸುತ್ತಿತ್ತು.
ವ್ರತ ನಿಯಮಗಳಿಂದ ಕೂಡಿದ ಸನ್ಯಾಸಿಯ ಮಡಿ ಜೀವನವನ್ನು ನೋಡುವಾಗ “ತಾನೂ ಹಾಗಿರಬಾರದೇ!” ಎನ್ನುವ ತೀವ್ರ ಬಯಕೆ ಅವಳ ಅಂತರಂಗವನ್ನು ವ್ಯಾಪಿಸುತ್ತಿತ್ತು. ವಿಪರ್ಯಾಸವೆಂದರೆ ಸಮಾಜದ ಭೀತಿಯಿಂದಾಗಿ ವ್ರತ – ನಿಯಮಗಳನ್ನು ಪಾಲಿಸುತ್ತಿದ್ದ ಸನ್ಯಾಸಿಯ ಮನಸ್ಸು ಭೋಗ ಜೀವನದಲ್ಲಿ ನೆಟ್ಟಿತ್ತು. ವಿಷಯಸುಖಗಳಿಂದ ಸಮೃದ್ಧವಾದ ವೇಶ್ಯೆಯ ಜೀವನವನ್ನು ನೋಡುವಾಗ ಅವನ ಮನಸ್ಸಿನಲ್ಲಿ ಸುಖಭೋಗಗಳ ಕಾಮಗಳು ಜ್ವಲಿಸುತ್ತಿದ್ದವು. ವಾಸಸ್ಥಾನಗಳ ಸಾಮೀಪ್ಯ ಇಬ್ಬರಿಗೂ ಪರಸ್ಪರರ ಜೀವನವನ್ನು ವೀಕ್ಷಿಸಲು ಅವಕಾಶ ಮಾಡಿಕೊಟ್ಟಿತ್ತು. ತಮ್ಮ ತಮ್ಮ ಜೀವನಗಳ ಮೇಲೆ ಜುಗುಪ್ಸೆ ಪಡುತ್ತಿದ್ದ ಇಬ್ಬರೂ ಪರಸ್ಪರರ ಜೀವನವನ್ನು ಬಯಸುತ್ತಿದ್ದರು. ವಿಧಿವಿಲಾಸವೆಂಬಂತೆ ಒಂದೇ ದಿನ ಇಬ್ಬರಿಗೂ ಮರಣ ಬಂತು. ಸನ್ಯಾಸಿಯ ದೇಹವನ್ನು ಊರಿನ ಪ್ರಮುಖ ಬೀದಿಗಳಲ್ಲಿ ವಿಜೃಂಭಣೆಯಿಂದ ಮೆರವಣಿಗೆ ಮಾಡಿ ಸಮಾಧಿ ಮಾಡಲಾಯಿತು. ಆ ಸ್ಥಳದಲ್ಲಿ ಭವ್ಯವಾದ ಬೃಂದಾವನವನ್ನು ಕಟ್ಟಲಾಯಿತು. ವೇಶ್ಯೆಯ ದೇಹವನ್ನು ಕೇಳುವವರೇ ಇರಲಿಲ್ಲ. ಅವಳ ದೇಹವನ್ನು ಊರಿನ ಹೊರಗೊಯ್ದು ನಾಯಿನರಿಗಳಿಗೆ ಆಹಾರವಾಗಿ ಎಸೆಯಲಾಯಿತು. ಆದರೆ ವೇಶ್ಯೆಯನ್ನು ವೈಕುಂಠಕ್ಕೆ ಕರೆದೊಯ್ಯಲು ವಿಷ್ಣುದೂತರು ಬಂದರು. ಸನ್ಯಾಸಿಯನ್ನು ಕರೆದೊಯ್ಯಲು ನರಕದಿಂದ ಯಮದೂತರ ಆಗಮನವಾಯಿತು. ಇದರಿಂದ ಆಘಾತಗೊಂಡ ಸನ್ಯಾಸಿ ವಿಷ್ಣುದೂತರನ್ನು ಪ್ರಶ್ನಿಸಿದ –

“ಜೀವನಪರ್ಯಂತ ಸನ್ಯಾಸ ಧರ್ಮವನ್ನು ಪಾಲಿಸಿದ ನನಗೆ ನರಕದ ಶಿಕ್ಷೆ. ಬದುಕಿನುದ್ದಕ್ಕೂ ಭೋಗ ಜೀವನವನ್ನೇ ನಡೆಶಿದ ವೇಶ್ಯೆಗೆ ವಿಷ್ಣುಲೋಕದ ಪುರಸ್ಕಾರ. ಇದು ಯಾವ ನ್ಯಾಯ?”

ಸನ್ಯಾಸಿಯ ಪ್ರಶ್ನೆಗೆ ವಿಷ್ಣುದೂತರು ಕೊಟ್ಟ ಉತ್ತರ ಬಹಳ ಮಾರ್ಮಿಕವಾದುದು –

ನೀನು ಸನ್ಯಾಸಿಯ ದೇಹವನ್ನು ಹೊತ್ತಿದ್ದರೂ ಅಂತರಂಗದಲ್ಲಿ ವೇಶ್ಯೆಯೇ ಆಗಿದ್ದೆ. ಆಕೆ ಹಾಗಲ್ಲ. ವೇಶ್ಯೆಯ ದೇಹವನ್ನು ಹೊತ್ತಿದ್ದರೂ ಅಂತರಂಗದಲ್ಲಿ ಸನ್ಯಾಸಿಯೇ ಆಗಿದ್ದಳು. ವ್ರತನಿಯಮಗಳನ್ನು ಪಾಲಿಸಿದ್ದು ನಿನ್ನ ದೇಹ. ಆ ದೇಹಕ್ಕೆ ವಿಜೃಂಭಣೆಯ ಮೆರವಣಿಗೆಯೊಂದಿಗೆ ಭವ್ಯ ಬೃಂದಾವನದ ಪುರಸ್ಕಾರವೇ ಸಿಕ್ಕಿದೆ. ಪಾಪದೂಷಿತವಾದ ನಿನ್ನ ಆತ್ಮಕ್ಕೆ ನರಕದ ಶಿಕ್ಷೆಯಾಗಿದೆ. ಹಾಗೆಯೇ ಪಾಪದೂಷಿತವಾದ ವೇಶ್ಯೆಯ ಶರೀರ ನಿರ್ಲಕ್ಷಿತವಾಗಿ ನಾಯಿ ನರಿಗಳಿಂದ ತಿನ್ನಲ್ಪಡುತ್ತಿದೆ. ಪಶ್ಚಾತ್ತಾಪದಿಂದ ನಿರ್ಮಲವಾದ ಅವಳ ಭವ್ಯ ಆತ್ಮಕ್ಕೆ ವಿಷ್ಣುಲೋಕದ ದಿವ್ಯ ಪುರಸ್ಕಾರವೇ ಸಿಕ್ಕಿದೆ. ಇದರಲ್ಲಿ ಏನು ದೋಷವಿದೆ ಹೇಳು?”
ಸನ್ಯಾಸಿಯ ಬಳಿ ಉತ್ತರವಿರಲಿಲ್ಲ.

ಈ ಕಥೆಯ ಉದ್ದೇಶ ಸನ್ಯಾಸಜೀವನದ ತಿರಸ್ಕಾರವಾಗಲೀ, ವೇಶ್ಯಾಜೀವನದ ಪುರಸ್ಕಾರವಾಗಲೀ ಅಲ್ಲ. ಬದಲಿಗೆ ಪರಿಶುದ್ಧ ಅಂತರಂಗಕ್ಕೆ ಭಗವಂತ ಕೊಡುವ ರಕ್ಷೆಯನ್ನೂ, ಮಲಿನ ಮನಸ್ಸಿಗೆ ಕೊಡುವ ಶಿಕ್ಷೆಯನ್ನೂ ತಿಳಿಯಪಡಿಸುವುದೇ ಆಗಿದೆ.

“ಯೋಂತಃ ಶುಚಿಃ ಸ ಶುಚಿಃನ ಮೃದ್ವಾರಿಶುಚಿಃ ಶುಚಿಃ-“

ಸಾಬೂನು ನೀರಿನಿಂದ ಮೈ ತೊಳೆದ ಮಾತ್ರಕ್ಕೆ ಶುಚಿಯಾಗಲು ಸಾಧ್ಯವಿಲ್ಲ. ಯಾರ ಅಂತರಂಗ ಶುಚಿಯಾಗಿದೆಯೋ ಅವನು ಮಾತ್ರ ಶುಚಿಯೆನಿಸುತ್ತಾನೆ. ಧರ್ಮಸಂಹಿತೆಯ ಉದ್ಘೋಷಣೆಯಿದು. ಮನುಷ್ಯನ ಜೀವನ ಚೆನ್ನಾಗಲು ಅವನ ಅಂತರಂಗ-ಬಹಿರಂಗಗಳೆರಡೂ ಚೆನ್ನಾಗಿರಬೇಕು. ಅದು ಸಾಧ್ಯವಿಲ್ಲದಿದ್ದರೆ ಅಂತರಂಗವಾದರೂ ಚೆನ್ನಾಗಿರಬೇಕು.

ಕಾಣದ ದೇವರೇನಾದರೂ ಕೃಪೆದೋರಿ ಬಂದರೆ, ನಮ್ಮ ಮುಂದೆ ಮೈದಳೆದು ನಿಂದರೆ, “ಪರಿಶುದ್ಧ ಮನ”ವೇ ನಾವು ಕೇಳಬೇಕಾದ ವರ.

~*~

Facebook Comments Box