“ಕನ್ನಡಪ್ರಭ” ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಶ್ರೀಗುರುಗಳ ಲೇಖನಾಮೃತ “ಧರ್ಮಜ್ಯೋತಿ” ಇದೀಗ “ಹರೇರಾಮ.ಇನ್” ನಲ್ಲಿ, ಪ್ರತಿ ಭಾನುವಾರದಂದು. ಪ್ರಕಟಣೆ ಕೃಪೆ & Copyright: ಶ್ರೀ ಭಾರತೀ ಪ್ರಕಾಶನ, ಗಿರಿನಗರ – ಬೆಂಗಳೂರು.

~

ಜ್ಯೋತಿಯಿಂದಲೇ ಬೆಳಗುವುದು ಜ್ಯೋತಿ ಗುರುವಿನಿಂದಲೇ ಬೆಳಗುವುದು ಧರ್ಮಜ್ಯೋತಿ

ಜ್ಯೋತಿಯಿಂದಲೇ ಬೆಳಗುವುದು ಜ್ಯೋತಿ
ಗುರುವಿನಿಂದಲೇ ಬೆಳಗುವುದು ಧರ್ಮಜ್ಯೋತಿ

ಜ್ಯೋತಿ 14: “ಬಾಡದ ಹೂಮಾಲೆ”

ಭಾರತ ವರ್ಷದಾದ್ಯಂತ ವೇದಾಂತದಿಂಡಿಮವನ್ನು ಮೊಳಗಿಸಿದ ಆಚಾರ್ಯ ಶಂಕರ ಭಗವತ್ಪಾದರ ಜೀವನದಲ್ಲಿ ನಡೆದ ಘಟನೆಯಿದು. ಜ್ಞಾನಪ್ರಸಾರ, ಧರ್ಮಪ್ರತಿಷ್ಠೆಯ ದೈವಕಾರ್ಯಕ್ಕಾಗಿ ಸಂಚರಿಸುತ್ತಾ ಶಂಕರರು ಕಾಶ್ಮೀರವನ್ನು ಪ್ರವೇಶಿಸಿದರು. ಕಾಶ್ಮೀರ, ವಿದ್ಯೆಯ ತವರೂರಾಗಿದ್ದ ಕಾಲವದು. ಅಲ್ಲಿ ಮಂಡನಮಿಶ್ರರೆಂಬ ಸುವಿಖ್ಯಾತರಾದ ಪಂಡಿತರಿದ್ದರು. ಮಂಡನಮಿಶ್ರರು ಕರ್ಮವೇ ಮಿಗಿಲೆನ್ನುವ ಮೀಮಾಂಸಾದರ್ಶನಕ್ಕೆ ಸೇರಿದವರು. ಶಂಕರರೋ ಜ್ಞಾನಕ್ಕಿಂತ ಶ್ರೇಷ್ಠವಾದುದು ಯಾವುದೂ ಇಲ್ಲವೆನ್ನುವ ಮಹಾವೇದಾಂತಿಗಳು. ಸಹಜವಾಗಿಯೇ ಶಂಕರರು ಮಂಡನಮಿಶ್ರರ ಮಧ್ಯೆ ಕರ್ಮ-ಜ್ಞಾನಗಳ ಮೇಲ್ಮೈಯನ್ನು ನಿಶ್ಚಯಿಸುವ ವಾದಕೂಟದ ಏರ್ಪಾಡಾಯಿತು. ವಾದದಲ್ಲಿ ಸೋಲುಗೆಲುವಿನ ನಿರ್ಣಯಕ್ಕೆ ಸ್ವಾರಸ್ಯಕರವಾದ ನಿಯಮವೊಂದು ನಿಶ್ಚಯಿಸಲ್ಪಟ್ಟಿತು. ವಾದಾರಂಭದಲ್ಲಿ ಇಬ್ಬರ ಕೊರಳಿಗೂ ಹೂಮಾಲೆಗಳನ್ನು ಹಾಕಲಾಯಿತು. ಯಾರ ಕೊರಳಿನ ಹೂಮಾಲೆ ಮೊದಲು ಬಾಡುವುದೋ ಅವರು ಸೋಲೊಪ್ಪಿಕೊಂಡು ಗೆದ್ದವರ ಅನುಯಾಯಿಯಾಗಬೇಕೆಂಬುದು ನಿಯಮದ ಸಾರ. ಈ ನಿಯಮವನ್ನೊಪ್ಪಿ ವಾದ ಪ್ರಾರಂಭವಾಯಿತು. ಭಾರತ ಧರಿತ್ರಿಯು ಕಂಡ ಇಬ್ಬರು ಮಹಾಮೇಧಾವಿಗಳ ನಡುವೆ ಕೆಲ ಸಮಯ ಕರ್ಮಜ್ಞಾನಗಳ ಮೇಲ್ಮೈಯನ್ನು ನಿಶ್ಚಯಿಸುವ ರೋಮಾಂಚಕರವಾದ ವಾಕ್ಸಮರ ನಡೆಯಿತು. ಕೂಡಿದ್ದ ಪಂಡಿತ ಮಂಡಲ ನೋಡನೋಡುತ್ತಿದ್ದಂತೆ ಶಂಕರರ ಕೈ ಮೇಲಾಯಿತು. ಕಂಠದಲ್ಲಿ ಶೋಭಿಸುತ್ತಿದ್ದ ಪುಲ್ಲಕುಸುಮಗಳ ಮಾಲೆಯೊಂದಿಗೆ ಮಂಡನಮಿಶ್ರರ ಮುಖವೂ ಬಾಡಿತು. ಶಂಕರರು ವಿಜಯಿಗಳಾದರು. ಮಾತಿನಂತೆ ಮಂಡನಮಿಶ್ರರು ‘ಸುರೇಶ್ವರಾಚಾರ್ಯ’ ಎಂಬ ಹೊಸ ಅಭಿದಾನದೊಂದಿಗೆ ಶಂಕರರ ಶಿಷ್ಯತ್ವವನ್ನು ಸ್ವೀಕರಿಸಿದರು.

ಈ ಕಥೆಯನ್ನು ಕೇಳಿದ ಒಡನೆಯೇ ಕೇಳುಗನ ಮನದಲ್ಲಿ ಎರಡು ಜಿಜ್ಞಾಸೆಗಳು ಮೂಡುತ್ತವೆ. ಮೊದಲನೆಯದು ಹೂಮಾಲೆಯ ಬಾಡುವಿಕೆಗೂ ವಾದದಲ್ಲಿನ ಸೋಲು-ಗೆಲುವುಗಳಿಗೂ ಏನು ಸಂಬಂಧ? ಎರಡನೆಯದು ಸಮಕಾಲದಲ್ಲಿ- ಸಮಾನ ವಾತಾವರಣದಲ್ಲಿ ಇಬ್ಬರ ಕೊರಳಿಗೆ ಹಾಕಿದ ಹೂಮಾಲೆಗಳಲ್ಲಿ ಒಂದು ಹೂಮಾಲೆ ಬೇಗ ಬಾಡುವುದು ಹೇಗೆ?

ಈ ಜಿಜ್ಞಾಸೆಗಳಿಗೆ ಯೋಗಿಶ್ರೇಷ್ಠರಾದ ಮೈಸೂರಿನ ಶ್ರೀರಂಗ ಮಹಾಗುರುಗಳು ಕೊಟ್ಟ ವಿವರಣೆ ಹೀಗಿದೆ:

“ಮಂಡನಮಿಶ್ರರು ತನ್ನ ಗೆಲುವಿಗಾಗಿ ವಾದಿಸಿದರು. ಶಂಕರಾಚಾರ್ಯರು ತತ್ತ್ವದ ಗೆಲುವಿಗಾಗಿ ವಾದಿಸಿದರು. ಮಂಡನಮಿಶ್ರರಿಗೆ ಯಾರೂ ಜಯಿಸಲಾರದ ಪಂಡಿತಾಗ್ರಣಿಯೆಂಬ ತನ್ನ ಪದವಿಯು ಉಳಿಯಬೇಕಿತ್ತು. ಶಂಕರಾಚಾರ್ಯರಿಗೆ ತಾವು ಕಂಡ ಸತ್ಯವನ್ನು ಜೀವಹಿತಕ್ಕಾಗಿ ಜಗತ್ತಿನ ಮುಂದಿಡಬೇಕಾಗಿತ್ತು. ಸ್ವಪ್ರತಿಷ್ಥೆಯೇ ಮುಖ್ಯವಾಗಿದ್ದ ಮಂಡನಮಿಶ್ರರಿಗೆ ವಾದದಲ್ಲಿ ತಾನು ಸೋಲುವೆನೆಂದೆನಿಸಿದಾಗ ಮೈಬಿಸಿಯೇರಿತು. ಅದರ ಪರಿಣಾಮವಾಗಿ ಹೂಮಾಲೆ ಬೇಗನೆ ಬಾಡಿತು”. ಶಂಕರಾಚಾರ್ಯರಿಗೆ ಸೋಲು-ಗೆಲುವುಗಳ ಪರಿವೆಯೇ ಇರಲಿಲ್ಲ. ಯುದ್ಧರಂಗದಲ್ಲಿ ಹೋರಾಡುವ ಸೈನಿಕನಿಗೆ ಸೋಲು- ಗೆಲುವುಗಳ ಪರಿವೆ ಇರುವುದಿಲ್ಲ. ತನ್ನ ಪ್ರಭುವಿನ ಶಾಸನವನ್ನು ಹೃದಯದಲ್ಲಿ ಧರಿಸಿ ಪ್ರಾಣದ ಹಂಗು ತೊರೆದು ಆತ ಕಾದಾಡುತ್ತಾನೆ. ಭಗವಂತನ ಸೇನಾನಿಯಾಗಿದ್ದ ಶಂಕರರು ಅವನ ಶಾಸನದಂತೆ ವಾದಿಸಿದರು. ತನ್ನ ಸೋಲುಗೆಲುವಿನ ಚಿಂತೆ ಅವರಿಗಿರಲಿಲ್ಲ. ಆದ್ದರಿಂದ ಅವರ ಮೈಮನಗಳು ತಂಪಾಗಿಯೇ ಇದ್ದವು.

ನ್ಯಾಯದರ್ಶನಕಾರರಾದ ಅಕ್ಷಪಾದ ಮುನಿಗಳು ಹೇಳುತ್ತಾರೆ-

ತತ್ತ್ವದ ಅರಿವಿಗಾಗಿ ಇಬ್ಬರ ನಡುವೆ ನಡೆಯುವ ಸಾತ್ವಿಕ ಸಂಭಾಷಣೆಗೆ “ವಾದ” ಎಂದು ಹೆಸರು.

ಪರಸ್ಪರರ ಸೋಲು-ಗೆಲುವುಗಳನ್ನುದ್ದೇಶಿಸಿ ಇಬ್ಬರ ನಡುವೆ ನಡೆಯುವ ರಾಜಸ ಸಂಭಾಷಣೆಗೆ “ಜಲ್ಪ” ಎಂದು ಹೆಸರು.

ತನ್ನ ನಿಲುವೇನೆಂಬುದನ್ನೇ ಹೇಳದೇ ಬೇರೆಯವರು ಹೇಳಿದ್ದನ್ನೆಲ್ಲ ಖಂಡಿಸುವ ವಿಧ್ವಂಸಕ ತಾಮಸ ಪ್ರವೃತ್ತಿಯ ಸಂಭಾಷಣೆಗೆ “ವಿತಂಡಾ” ಎಂದು ಹೆಸರು.

ವಾದಗಳು ವಿವಾದವಾಗದೇ ಸಂವಾದದಲ್ಲಿ ಪರ್ಯವಸಾನವಾಗುವುದಾದರೆ ಜೀವನಸುಮಮಾಲೆ ಎಂದಿಗೂ ಬಾಡದು.

~*~

Facebook Comments