#ತತ್ತ್ವ_ಭಾಗವತಮ್, ಭಾಗವತದಲ್ಲಿ ನಿಹಿತವಾದ ಗಹನತತ್ತ್ವಗಳನ್ನಾಧರಿಸಿದ ನಿತ್ಯಪ್ರವಚನಮಾಲಿಕೆ:
#ಗೋಸ್ವರ್ಗ_ಚಾತುರ್ಮಾಸ್ಯ
15-08-2018:

ಕಾಲ ರಾಜನನ್ನು ಬದಲಾಯಿಸುತ್ತದೆಯೋ, ರಾಜನೇ ಕಾಲವನ್ನು ಬದಲಿಸುತ್ತಾನೋ? ಕಾಲದಿಂದ ರಾಜನೋ ರಾಜನಿಂದ ಕಾಲವೋ ಇದು ಒಂದು ಹಳೆಯ ಜಿಜ್ಞಾಸೆ. ಇದಕ್ಕೆ ಉತ್ತರವನ್ನೂ ಆಗಲೇ ನೀಡಿದ್ದಾರೆ. ಕಾಲಕ್ಕೆ ರಾಜನೇ ಕಾರಣ, ಒಳ್ಳೆಯದಾಗಲೀ, ಕೆಟ್ಟದ್ದಾಗಲೀ ರಾಜನೇ ಅದಕ್ಕೆ ಹೊಣೆ. ರಾಜ ಒಳ್ಳೆಯವನಾದರೆ ರಾಜ್ಯ ಒಳ್ಳೆ ರೀತಿಯಲ್ಲಿ ಇರುತ್ತದೆ, ಕೆಟ್ಟವನಾದರೆ ಅದೂ ಕೆಡುತ್ತದೆ. ಈಗಿನ ಪರಿಸ್ಥಿತಿಯಲ್ಲಿ ಒಬ್ಬ ಕೆಡುಕರಾಜ ಬಂದರೆ 5 ವರ್ಷಗಳ ಕಾಲ ಅವನು ಎಷ್ಟು ಸಾಧ್ಯವೋ ಅಷ್ಟು ಕೆಡಿಸಿ ಹೋಗುತ್ತಾನೆ ಮುಂದೆ 25 ವರ್ಷಗಳಾದರೂ ಅದನ್ನು ಸರಿ ಮಾಡಲು ಬರುವುದಿಲ್ಲ. ಇಂತಹ ಉದಾಹರಣೆ ನಮ್ಮ ಮುಂದೆ ಇದೆ.
ಇದಕ್ಕೆ ವ್ಯತ್ಯಸ್ತ ಉದಾಹರಣೆ ಪರೀಕ್ಷಿತ.
ಹೀಗೆ ಮೇಲೆ ಕುಳಿತವನು ಎಂಥವನೋ ಅದರಂತೆ ಇಡೀ ವ್ಯವಸ್ಥೆ ನಡೆಯುತ್ತದೆ.

ತತ್ತ್ವಭಾಗವತಮ್

ಕಲಿ ನಿಗ್ರಹ ಅನ್ನುವುದು ಯಾವ ಕಾಲದಲ್ಲಾದರೂ ಕಷ್ಟ. ಕಲಿ ಅಂದರೇನೇ ವ್ಯವಸ್ಥೆಯನ್ನು ಹಾಳು ಮಾಡುವ ಶಕ್ತಿ.
ಇರುವುದು ಇರಬೇಕಾದಂತೆ ಇರಲು ಯಾವುದು ಕಾರಣವೋ ಅದು ಧರ್ಮ. ಅದನ್ನು ಹಾಳು ಮಾಡುವುದು ಕಲಿ.
ಸೂರ್ಯನ ಸ್ವಭಾವ ಬೆಳಗುವುದು ಅದು ಅವನ ಧರ್ಮ, ಬೆಳಗಲಿಲ್ಲವಾದರೆ ಅದು ಕಲಿ. ಯಾವ ವಸ್ತುವೇ ಆಗಲಿ ತನ್ನ ಮೂಲ ನೆಲೆಯಲ್ಲಿ ಇರಲು ಕಾರಣ ಧರ್ಮ, ಅದರಲ್ಲಿ ತೋರುವ ವಿಕೃತಿಯೇ ಕಲಿ.
ಹಾಲು-ಹಾಳು ಆಗಲಿಕ್ಕೆ ಕಾಲವೊಂದೇ ಸಾಕು… ಸುಮ್ಮನೆ ಇಟ್ಟಿದ್ದರೆ ಕೆಡುತ್ತದೆ. ಹಣ್ಣು ಕೂಡಾ ಹಾಗೆಯೇ. ಅದನ್ನು ಕೆಡದಂತೆ ಕಾಪಾಡುವವನು ಧರ್ಮ ಪುರುಷ, ಕಲಿಯನ್ನು ಹುಡುಕಿ, ನಿಗ್ರಹಿಸಿ ಶರಣಾಗುವಂತೆ ಮಾಡಿ, ಸೆರೆಗೆ ಅಟ್ಟಿದವನು.

ಜೂಜಿನಲ್ಲಿ ಕಲಿಯ ವಾಸ ಇದೆ, ಅದಕ್ಕೆ ಶರಣಾದವನು ಎಲ್ಲ ಕಳೆದುಕೊಂಡು ಮಾಡಬಾರದ ಪಾಪ ಮಾಡುತ್ತಾನೆ. ಮದ್ಯ ಅಮಲೇರಿದರೆ ರಕ್ತಗತ ಮಾಂಸಗತ, ಕಡೆಗೆ ಆತ್ಮಸಾಥ್ ಆಗುತ್ತದೆ. ರಾತ್ರಿ ಕುಡಿದು ಮಲಗುತ್ತಾನೆ ಯಾರಿಗೂ ತೊಂದರೆ ಇಲ್ಲ ಎಂದರೆ, ಅವನಲ್ಲಿ ಕಲಿ ತುಂಬಿಕೊಳ್ಳುತ್ತಾನೆ ಹಾಗೂ ಅವನನ್ನೇ ತಿನ್ನುತ್ತಾನೆ. ಸ್ವಭಾವ ಕೆಡುತ್ತೆ, ನಮ್ಮತನ ಹಾಳಾಗುತ್ತದೆ. ಇನ್ನು ವಧಾಸ್ಥಾನ ದಲ್ಲಿ ಎಂತೆಲ್ಲಾ ಪಾಪ ಕಾರ್ಯ ನಡೆಯುತ್ತದೋ ಹೇಳಲು ಸಾಧ್ಯವಿಲ್ಲ..
ಇದೆಲ್ಲ ಯಾಕೆ ಹೇಳಿದ್ದಾರೆ ಅಂದರೆ ಇಲ್ಲೆಲ್ಲ ನಾವು ಹೋಗಬಾರದು ಅಂತ.

ಕಲಿಯುಗದ ಬಹು ಒಳ್ಳೆ ಸಮಯದಲ್ಲಿ ನಾವಿದ್ದೇವೆ. ಇಲ್ಲಿಯೂ ಕೃತ, ತ್ರೇತ, ದ್ವಾಪರ ಭೇದಗಳಿವೆ. ಕಲಿಯಲ್ಲಿನ ಕಲಿಗಾಲ ಅತ್ಯಂತ ಕಠಿಣ. ನಮಗೂ ಪರೀಕ್ಷಿತನಿಗೂ ಕೇವಲ 5500 ವರ್ಷಗಳ ವ್ಯತ್ಯಾಸ.

ಬದಲಾವಣೆ ಪ್ರಕೃತಿಯ ನಿಯಮ, ಯಾಕೆ ಹೊಂದಿಕೊಳ್ಳಬಾರದು ಎಂದು ಕೇಳುವುದಾದರೆ, ನಾವು ಕೊಳೆತ ಹಣ್ಣನ್ನು ಸಹಜ ಎಂದು ತಿನ್ನುತ್ತೇವಾ…. ಹಾಳಾದ ಪದಾರ್ಥಗಳನ್ನು ತಿನ್ನಲು ಬಳಸುತ್ತೇವಾ… ಹಾಗಿದ್ದರೆ ಸರಿ.
ನಾವು ಧರ್ಮದಲ್ಲಿದ್ದರೆ ಅದರ ಫಲ ಸುಖ, ಕಲಿಯ ಜೊತೆಗಿದ್ದರೆ ದುಃಖ.

ನಿನ್ನೆ ಹೇಳಿದಂತೆ ಧರಣಿ ಧೇನು, ಧರ್ಮ ವೃಷಭ. ಕಲಿ ಭೂಮಿಯನ್ನು ಕಾಲಿನಿಂದ ಒದೆದು ದುಃಖಿಸುವಂತೆ ಮಾಡುತ್ತಿದ್ದಾನೆ. ಭೂಮಿಗೆ ಎಲ್ಲರೂ ಮಕ್ಕಳೇ ಆದರೂ, ಸುಖ ಕೊಡುವವರು ಒಳ್ಳೆಯವರು, ಕೆಟ್ಟ ಫಲ ಕೊಡುವವರು ದುರ್ಮಾರ್ಗಿಗಳು. ನಾವು ನೀವು ಕೂಡಾ ಕಲಿ ನಿಗ್ರಹ ಮಾಡೋಣ, ಅಂದರೆ ಧನುರ್ಧಾರಿಗಳಾಗಿ ಯುದ್ಧ ಮಾಡಬೇಕೆ ಪರೀಕ್ಷಿತನಂತೆ ಅಂದರೆ … ಅದು ಅಲ್ಲ.. ನಮ್ಮನ್ನು ಸರಿ ಮಾಡಿಕೊಳ್ಳೋಣ, ದೇಶಕ್ಕಾಗಿ ಅಲ್ಲದಿದ್ದರೂ ಕನಿಷ್ಠ ದೇಹಕ್ಕಾಗಿ ಕಲಿ ನಿಗ್ರಹ ಮಾಡಿಕೊಳ್ಳೋಣ.
ಸಹಜತೆಯಲ್ಲಿರು,ಸ್ವಸ್ಥತೆಯಲ್ಲಿರು, ನಿನ್ನ ನೆಲೆಯಲ್ಲಿ ನೀನು ನೆಲೆನಿಲ್ಲು, ಅದೇ ಸಾರಾಂಶ.

ನಾವು ಸರಿ ಇದ್ದರೆ ಅದೇ ಕಲಿ ನಿಗ್ರಹ. ಕಾಮ, ಕ್ರೋಧಾದಿಗಳು ಎಲ್ಲರಿಗೂ ಬೇಕಾದದ್ದೇ ಆದರೆ ಅದನ್ನು ಸರಿಯಾಗಿ ಬಳಸಿದರೆ ಆ ಭಾವಗಳನ್ನು ಕೃಷ್ಣನಲ್ಲಿ ನೆಲೆಗೊಳಿಸಿದರೆ ಅದು ಮುಕ್ತಿಗೆ ದಾರಿ. ಗೋಪಿಯರ ಕಾಮ, ಕಂಸನ ಭಯ, ಶಿಶುಪಾಲನ ದ್ವೇಷ ಎಲ್ಲವೂ ಮುಕ್ತಿಗೆ ಕಾರಣವಾಯಿತು.
ಶ್ರೀರಾಮನಲ್ಲಿಯೂ ನವರಸಗಳನ್ನು ಹೇಳುತ್ತಾರೆ ಬಾಕಿ ಎಲ್ಲ ಸರಿ ಆದರೆ ಭಯ… ರಾಮನೂ ಭಯ ಪಡುತ್ತಿದ್ದನೇ ಎಂದರೆ… ಹೌದು ಪಾಪದಲ್ಲಿ ಭಯವಿತ್ತು ಎಂದು ಉತ್ತರ.
ರಾಜನಲ್ಲಿ ಒಂದು ಮಟ್ಟಿಗೆ ಗತ್ತು ಬೇಕು. ಆ ಸ್ಥಾನಕ್ಕೆ ತಕ್ಕಂತೆ ಕ್ರೋಧ ಬೇಕು, ಆಗಲೇ ಕೆಲಸ ಆಗುವುದು… ರಾವಣನ ಸಂಹಾರ ಕಾಲದಲ್ಲಿ ರಾಮ ಕ್ರೋಧವನ್ನ ತನ್ನೊಳಗೆ ಕರೆಯುತ್ತಾನೆ, ಅದು ಸಂಹಾರಕ್ಕೆ ಪ್ರೇರಕ. ಅದಲ್ಲದೆ ಶಾಂತ ಗುಣವೋ ಕರುಣೆಯೋ ಬಂದರೆ ಕೆಲಸ ಆಗಲ್ಲ.

ದೇವರ ಸೃಷ್ಟಿಯಲ್ಲಿ ಎಲ್ಲವೂ ಬೇಕಾದದ್ದೇ, ಆದರೆ ಎಲ್ಲಕ್ಕೂ ನಿಯಂತ್ರಣ ಬೇಕು. ನಮ್ಮ ಮಟ್ಟಿಗಾದರೂ ನಾವು ಮಾಡಿಕೊಳ್ಳಬೇಕು. ನಮ್ಮಲ್ಲಿ ನಾವು ಕೃತಯುಗವನ್ನು ಆಹ್ವಾನ ಮಾಡಿಕೊಳ್ಳಬೇಕು.
ಯಾರ ಹೃದಯದಲ್ಲಿ ಗೋವಿಂದನಿದ್ದಾನೋ ಅವನ ಪಾಲಿಗೆ ಕಲಿಯುಗವೂ ಕೃತಯುಗವೇ ಆಗಿ ಪರಿಣಮಿಸುತ್ತೆ. ಅವನಿಲ್ಲದ್ದು ಕೃತಯುಗವಾದರೂ ಕಲಿಯ ಪ್ರಭಾವ ಇರುತ್ತೆ.

108 ಉಪನಿಷತ್ತುಗಳ ಪೈಕಿ 107ನೆಯದು ಕಲಿಸಂತರಣ ಉಪನಿಷತ್. ಕಲಿಯನ್ನು ದಾಟುವ ಉಪಾಯಗಳ ಕುರಿತು ನಾರದರಿಗೆ ಬ್ರಹ್ಮನು ಬೋಧಿಸುವ ವಿಚಾರ ಇದರಲ್ಲಿದೆ. ಇದರ ಪ್ರಕಾರ ಭಗವಂತನ ನಾಮೋಚ್ಛಾರ ಮಾತ್ರದಿಂದ ಮನುಷ್ಯ ಕಲಿಯಿಂದ ಬಿಡುಗಡೆ ಪಡೆಯುತ್ತಾನೆ. ಅದು ಯಾವ ನಾಮವೆಂದರೆ ಅದೇ…. ನಾವು ನಿತ್ಯ ಪಠಿಸುವುದು
“ಹರೇರಾಮ ಹರೇರಾಮ ರಾಮರಾಮ ಹರೇಹರೇ ಹರೇಕೃಷ್ಣ ಹರೇಕೃಷ್ಣ ಕೃಷ್ಣ ಕೃಷ್ಣ ಹರೇಹರೇ”
ಇದನ್ನು ಅನುಸಂಧಾನ ಮಾಡುತ್ತಾ ಕ್ರಮವಾಗಿ, ಸಲೋಕ, ಸಮೀಪ, ಸರೂಪ, ಸಾಯುಜ್ಯ ಮುಕ್ತಿಯನ್ನು ಹೊಂದುತ್ತಾನೆ. ಹೀಗೆ ಈ ನಾಮಕ್ಕಿಂತ ದೊಡ್ಡ ಉಪಾಯ ವೇದಗಳಲ್ಲಿ ಹುಡುಕಿದರೂ ಸಿಗಲಿಲ್ಲ.

ದೊರೆಗಳ ಬಗ್ಗೆ ಹೇಳುತ್ತಾರೆ, ಅವರು ಸ್ತ್ರೀಯರು, ಬಾಲಕರು, ಗೋವುಗಳು ಹಾಗೂ ಬ್ರಾಹ್ಮಣರನ್ನು ರಕ್ಷಿಸಬೇಕು ಎಂದು. ಸ್ತ್ರೀಯರನ್ನು ಸಮಾಜ, ಪುರುಷರು ರಕ್ಷಣೆ ಮಾಡಬೇಕು, ಹಾಗೆಯೇ ಗೋವುಗಳನ್ನೂ ವ್ಯವಸ್ಥಿತವಾಗಿ ಪಾಲನೆ ಮಾಡಬೇಕು. ಬ್ರಾಹ್ಮಣರು ತಪಸ್ಸಂಪನ್ನರು ಅವರು ಚೆನ್ನಾಗಿದ್ದರೆ ಸಮಾಜ ಚೆನ್ನಾಗಿರತ್ತೆ.
ಕಲಿಯುಗದಲ್ಲಿ ಹೀಗಿರಲಾರದು. ಅವರು ಪರಸತಿ, ಪರರ ಸೊತ್ತುಗಳ ಮೇಲೆ ದೃಷ್ಟಿಯಿಟ್ಟು ಇರುತ್ತಾರೆ. ಅಧಿಕಾರಕ್ಕೆ ಬಂದದ್ದೇ ಹಣ ಮಾಡಲಿಕ್ಕೆ, ಅದು ಸಮಾಜದ ಸ್ವತ್ತು. ಹಾಗೆಯೇ ಅವರು ಇದ್ದಕ್ಕಿದ್ದಂತೆಯೇ ಮೇಲೆ ಬರುತ್ತಾರೆ ಹಾಗೆಯೇ ಮರೆಯಾಗಿ ಬಿಡುತ್ತಾರೆ, ಹಿಂದೆ ರಾಜರು ನೂರಾರು ವರ್ಷಗಳ ಕಾಲ ರಾಜ್ಯಭಾರ ಮಾಡುತ್ತಿದ್ದರು ಎಂದರೆ ಈಗ ನಂಬಲೇ ಸಾಧ್ಯವಿಲ್ಲ.
ಈ ಕಾಲದಲ್ಲಿ ಅಲ್ಪಸತ್ವ, ಅಲ್ಪ ಆಯಸ್ಸು, ಶಕ್ತಿ, ಪ್ರಮಾಣ ದೇಹಗಾತ್ರ ಎಲ್ಲವೂ ಕಿರಿದೇ…ಕ್ಷುದ್ರತೆಯೇ ಕಲಿಯುಗ, ಇಲ್ಲಿ ಎಲ್ಲವೂ ಕಡಿಮೆಯಾಗುತ್ತಾ ಬರುತ್ತದೆ. ದಿನದಿನಕ್ಕೆ ಕಡಿಮೆಯಾಗಿ ಬಿಡುತ್ತೆ.

ರಾಮಾಯಣ ಓದಿದರೆ ಅಂದಿನ ಕಾಲದ ಸ್ಥಿತಿ ಮನಸ್ಸಿಗೆ ಬರುತ್ತದೆ, ಆಗಲೇ ಈಗಿನದ್ದೂ ಬರೆದಿದ್ದಾರೆ. ಇನ್ನು ಮುಂದೆ ಹೀಗೆಲ್ಲಾ ಆಗುತ್ತೆ ಅಂತ. ಕೆಲವು ಸಂಗತಿಗಳು ಈಗಾಗಲೇ ತೋರಿಕೊಂಡಿವೆ, ಹಾಳಾಗುವುದರ ಪೈಕಿ ಈಗಿರುವುದೇ ಉತ್ತಮ ಅಂತ ತಿಳಿಯಬಹುದು.

ಕಲಿ ನಿಗ್ರಹ ಮಾಡುವುದು ಅತ್ಯವಶ್ಯ. ವೈಯಕ್ತಿಕವಾಗಿ ಮಾಡಬೇಕು, ಮನೆಯ ಯಜಮಾನನಾದರೆ ಮನೆಯಲ್ಲಿ ಮಾಡು, ಊರಿನ ಪ್ರಮುಖನಾದರೆ ಊರಿನಲ್ಲಿ ಮಾಡು, ರಾಜನಾದರೆ ದೇಶದಲ್ಲಿಡೀ ಮಾಡು ಪರೀಕ್ಷಿತನಂತೆ.
ದೇಶದಲ್ಲಿ ಕಲಿನಿಗ್ರಹ ಮಾಡು, ಒಳ್ಳೆಯ ಆಡಳಿತ ಕೊಡು, ಅಲ್ಪ ದೃಷ್ಟಿ, ಅದೀರ್ಘ ದೃಷ್ಟಿ ಬೇಡ, ಚುನಾವಣೆ ಚಿಂತೆ ಬೇಡ, ಸಮಾಜಕ್ಕೆ ನಿಜವಾದ ಒಳಿತನ್ನು ಮಾಡಬೇಕು, ಏನು ಬೇಕೋ ಅದನ್ನು ಕೊಡಬೇಕು.
ನಮ್ಮ ಮನಸ್ಸೇ ಕಲಿಯ ರೀತಿ ಆಡುತ್ತೆ, ಅದನ್ನು ಸರಿಯಾಗಿ ಇಟ್ಟುಕೊಳ್ಳಬೇಕು.
ಅಧಿಕಾರಕ್ಕೆ ಬಂದ ಮೇಲೆ ಜವಾಬ್ದಾರಿ ತೆಗೆದುಕೊಂಡು ಮಾಡು, ಅದು ನಿನಗೆ ಕರ್ತವ್ಯ, ಮನಸ್ಸು ಸಹಜವಾಗಿ ಮಾಡಬಾರದ್ದನ್ನು ಮಾಡಲು ಪ್ರೇರಣೆ ಕೊಡುತ್ತದೆ ಅಥವಾ ಮಾಡುತ್ತಾನೇ ಇರುತ್ತದೆ.

ಹೊರಗಿನಿಂದ ಪ್ರತಿ ದಿನ ಮೈ ತೊಳೀತಾ ಇರುತ್ತೇವೆ ಆದರೆ ಮನಸ್ಸು ಎಷ್ಟು ಕೊಳೆತಿರುತ್ತೋ ಯಾರಿಗೆ ಗೊತ್ತು. ಮನಸ್ಸನ್ನು ಸರಿಯಾಗಿ ಇಟ್ಟುಕೊಳ್ಳುವುದು ಅತೀ ಮಹತ್ವದ ವಿಚಾರ.

ಇಂದು ಸ್ವತಂತ್ರ ದಿವಸ. ನಾವು ಕಲಿನಿಗ್ರಹ ಮಾಡಿ ಮನಸ್ಸನ್ನು ಸರಿಯಾಗಿ ಇಟ್ಟು ಕೊಳ್ಳೋಣ, ನಾವೂ ಪರೀಕ್ಷಿತರಾಗೋಣ, ನಮ್ಮ ಮಟ್ಟಿಗೆ ಕೃತಯುಗವನ್ನು ತಂದುಕೊಳ್ಳೋಣ.
ಸ್ವಾತಂತ್ರ್ಯಕ್ಕೂ ಸ್ವಚ್ಛಂದಕ್ಕೂ ವ್ಯತ್ಯಾಸ ಇದೆ. ಸ್ವ ಅಂದರೆ ಆತ್ಮ, ತಂತ್ರ ಅಂದರೆ ವ್ಯವಸ್ಥೆ ಅದು ವ್ಯವಸ್ಥಿತವಾಗಲಿ. ಆತ್ಮಕ್ಕೆ ಬಂಧನ ಇದೆ ಅದು ಬಿಡುಗಡೆ ಆಗಬೇಕು. ನಮ್ಮತನ ದೇಶದಲ್ಲಿಯೂ ಬರಲಿ. ನಿಜವಾದ ಆಶಯದಲ್ಲಿ ಸ್ವತಂತ್ರವಾಗಲಿ.

ಚಿತ್ರ:ಅಂತರ್ಜಾಲದಿಂದ

 

 

ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳ ಅಮೃತವಾಣಿಯಲ್ಲಿ ಹರಿದು ಬಂದ ತತ್ತ್ವಭಾಗವತಮ್ ನ ಪೂರ್ಣವೀಡಿಯೋ:

Facebook Comments