ಶ್ರೀ ರಘೂತ್ತಮ ಮಠ ಕೆಕ್ಕಾರು : 13.08.2014, ಬುಧವಾರ

ಲೋಹಿತ್ ಶರ್ಮಾರವರು ರಚಿಸಿದ ಶ್ರೀ ಭಾರತೀ ಪ್ರಕಾಶನದ ಗುರುಗ್ರಂಥ ಮಾಲಿಕೆಯ ’ಸಂತಗೋರಕ್ಷನಾಥ’ ಎಂಬ ೩೩ನೇ ಕೃತಿಯನ್ನು ಶ್ರೀಗಳು ಲೋಕಾರ್ಪಣೆಗೊಳಿಸಿದರು. ಪ್ರಾಯೋಜಕತ್ವ ವಹಿಸಿದ ಹೊಸಾಕುಳಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕನ ಅಧ್ಯಕ್ಷ ಪರಮೇಶ್ವರ ಹೆಗಡೆ ಶ್ರೀಗಳಿಂದ ಅನುಗ್ರಹ ಪಡೆದರು. ಧರ್ಮಭಾರತೀ ಅಂಕಣ ಬರಹ ’ಚುರುಕು- ಚಾವಡಿ’ ಕೃತಿಯನ್ನು ರಾಮಕ್ಷತ್ರಿಯ ಸಮಾಜದ ಪ್ರಮುಖರಾದ ವೈಭವ ಪ್ಯಾಲೇಸ್ನ ಸುಬ್ರಾಯ ನಾಯ್ಕ ಹಾಗೂ ಜೋಗಿನಿಕಟ್ಟೆಯ ಸೀತಾರಾಮ ನಾಯ್ಕರವರು ಬಿಡುಗಡೆಗೊಳಿಸಿದರು. ಇದರ ಪ್ರಾಯೋಜಕತ್ವವನ್ನು ಸಾಗರದ ಸಂಪದ ಚಿದಾನಂದ ಭಟ್ಟ ಹಾಗೂ ಗೌರಮ್ಮ ದಂಪತಿಗಳು ವಹಿಸಿದ್ದರು. ಸೇವೆಗಾಗಿ ಸಂಪರ್ಕ ದ ಫಲಕಗಳನ್ನು ಶ್ರೀಗಳು ಸರ್ವಸೇವೆ ನಡೆಸಿದ ಹೊನ್ನಾವರ ಮಂಡಲದ ಕರ್ಕಿ, ಕಡ್ಲೆ ಹಾಗೂ ಹೊಸಾಕುಳಿ ವಲಯಗಳಿಗೆ ಅನುಗ್ರಹಿಸಿದರು. ಜಯಚಾತುರ್ಮಾಸ್ಯ ಸಮಿತಿ ರಾಮಕ್ಷತ್ರಿಯ ಸಮಾಜದ ಶ್ರೇಯಸ್ಸನ್ನು ಬಯಸಿ ರಾಮತಾರಕ ಹವನವನ್ನು ನಡೆಸಿತು. ಸಮಾಜದ ಬಾಂಧವರು ಶ್ರೀಗಳಿಂದ ಅನುಗ್ರಹ ಮಂತ್ರಾಕ್ಷತೆ ಪಡೆದರು. ಶ್ರೀ ಆಂಜನೇಯನ ಸನ್ನಿಧಿಯಲ್ಲಿ ವಿನಾಯಕ ಕೃಷ್ಣ ಹೆಗಡೆಕಟ್ಟೆ, ವಾಲಗಳ್ಳಿ ಅವರು ವಿವಿಧ ಫಲಗಳ ಕಣಜ ಸೇವೆ ನಡೆಸಿದರು. ಮಹಾಮಂಡಲದ ಕಾರ್ಯದರ್ಶಿ ಪ್ರಮೋದ ಪಂಡಿತ, ಹೊನ್ನಾವರ ಮಂಡಲ ಅಧ್ಯಕ್ಷ ಜಿ. ಜಿ. ಭಟ್ಟ ಹಾಗೂ ಕಾರ್ಯದರ್ಶಿ ಸತೀಶ ಭಟ್ಟ ವಲಯಸಭೆ ನಡೆಸಿಕೊಟ್ಟರು. ರಾಜಾರಾಮ ಹೆಬ್ಬಾರ ಹಾಗೂ ಎಸ್. ಜಿ. ಭಟ್ಟ, ಕಬ್ಬಿನಗದ್ದೆ ಕಾರ್ಯಕ್ರಮ ನಿರೂಪಿಸಿದರು. ಸಿರ್ಸಿಯ ಟಿ.ಎಸ್.ಎಸ್. ಆಸ್ಪತ್ರೆ, ಹಾಗೂ ಜಯ ಚಾತುರ್ಮಾಸ್ಯ ಸಮಿತಿ, ಕೆಕ್ಕಾರು ಇವರ ಸಹಯೋಗದೊಂದಿಗೆ ಮೂರು ದಿನಗಳ ಕಾಲ ನಡೆದ ರಕ್ತದ ಗುಂಪು ವರ್ಗೀಕರಣ ಹಾಗೂ ದಾಖಲಾತಿ ಕಾರ್ಯಾಗಾರ ಇಂದು ಮುಕ್ತಾಯಗೊಂಡಿತು. ಐದುನೂರಕ್ಕೂ ಹೆಚ್ಚು ಜನರು ಇದರ ಪ್ರಯೋಜನ ಪಡೆದದ್ದು ವಿಶೇಷವಾಗಿತ್ತು.

ಶ್ರೀ ಶ್ರೀಗಳ ಪ್ರವಚನ:

’ಸಮಾಜವನ್ನ ಒಡೆಯುವವರಾಗದೆ ಕಟ್ಟುವವರಾಗಿ’

ಮಕ್ಕಳು ದೇವರ ಆಟ ಆಡಬೇಕು. ಅದು ಶಾಂತಿಧಾಮಕ್ಕೆ ದಾರಿ. ಅದು ಆನಂದಮಯ. ನಾವೆಲ್ಲ ಭಗವಂತನ ಮಕ್ಕಳೆಂಬ ಭಾವ ಬೆಳೆಯಬೇಕು. ಯಾವ ಕ್ರೀಡೆಯಲ್ಲಿ ಮಗು ಆನಂದವನ್ನು-ಪರಮಾನಂದವನ್ನು ಕಾಣುವುದೋ ಅಂತಹ ಆಟ ಆಡಬೇಕು ಎಂದು ರಾಘವೇಶ್ವರ ಶ್ರೀಗಳು ಬಾಯೊಳು ಬ್ರಹ್ಮಾಂಡ ತೋರಿದ ಶ್ರೀಕೃಷ್ಣ ಲೀಲೆಯನ್ನು ಉದಾಹರಿಸುತ್ತಾ ನುಡಿದರು. ಜಯ ಚಾತುರ್ಮಾಸ್ಯದ ಧರ್ಮ ಸಭೆಯಲ್ಲಿ ’ಭಜಗೋವಿಂದಂ’ ಪ್ರವಚನ ನೀಡಿ ಮಾತನಾಡುತ್ತಿದ್ದ ಅವರು ಬಾಲ್ಯದಿಂದಲೇ ಮಕ್ಕಳನ್ನು ಸಂಸ್ಕಾರಪೂರ್ಣ ದಾರಿಯಲ್ಲಿ ಬೆಳೆಸಿದರೆ ಅವರು ಯೋಗ್ಯತಾವಂತರೇ ಆಗುತ್ತಾರೆ. ಮಕ್ಕಳಿಗೆ ಏನು ಕೊಡಬೇಕೊ ಅದನ್ನು ಕೊಡಬೇಕು. ಮಕ್ಕಳು ದೇವರನ್ನು ಕಾಣುವ ದಾರಿಯನ್ನು ತೋರಿಸಬೇಕು. ಅವರನ್ನು ಜಗದೀಶರಾಗುವಂತೆ ಪ್ರೇರೇಪಿಸಬೇಕು ಎಂದು ಕರೆನೀಡಿದರು.

Facebook Comments