ಬದುಕು ಸಮೃದ್ಧವಾಗಬೇಕು..
ಬದುಕು ಸಾರ್ಥಕವೂ ಆಗಬೇಕು..
ಬದುಕು ಸಮೃದ್ಧವಾಗಲು ತಾಯಿ ಲಕ್ಷ್ಮಿಯ ಕೃಪೆ ಬೇಕು..
ಬದುಕು ಸಾರ್ಥಕವಾಗಲು ತಂದೆ ನಾರಾಯಣನ ಕೃಪೆ ಬೇಕು..
ಲಕ್ಷ್ಮಿಯು ಅರ್ಥದ ರೂಪದಲ್ಲಿ ಹರಿಯುತ್ತಿದ್ದರೆ ಬದುಕಿಗೆ ಸಮೃದ್ಧಿ..
ನಾರಾಯಣನು ಧರ್ಮದ ರೂಪದಲ್ಲಿ ನೆಲೆ ನಿಂತರೆ ಬದುಕಿಗೆ ಸಾರ್ಥಕತೆ..
ಧರ್ಮವು ನೆಲೆ ನಿಲ್ಲಬೇಕೆಂದರೆ ಅರ್ಥವು ಸರಿಯಾದ ದಾರಿಯಲ್ಲಿ ಹರಿಯುತ್ತಲೇ ಇರಬೇಕು..
ಅರ್ಥವು ಧರ್ಮದ ದಾರಿಯಲ್ಲಿ ಒಳಹರಿದು ಬರಬೇಕು..
ಅರ್ಥವು ಧರ್ಮದ ದಾರಿಯಲ್ಲಿಯೇ ಹೊರಹರಿದು ಹೋಗಬೇಕು..
ಇದು ಅಯೋಧ್ಯೆಯ ಅರ್ಥ ನೀತಿ..
ಇದುವೇ ಭಾರತೀಯರ ಆದರ್ಶಬದುಕಿನ ಅರ್ಥನೀತಿ..

ನಾರಾಯಣನಿಲ್ಲದಲ್ಲಿ ಲಕ್ಷ್ಮಿ ಇರುವುದೆಂತು..?
ಸಾರ್ಥಕತೆಯಿಲ್ಲದಲ್ಲಿ ಸಮೃದ್ಧಿ ಉಳಿಯುವುದೆಂತು..?
ಆಕೆ ಭಾಗ್ಯದ ಲಕ್ಷ್ಮಿಯೇ ಆದರೆ ಸರಿಯಾದ ದಾರಿಯಲ್ಲಿಯೇ ಬರುತ್ತಾಳೆ..ಸರಿಯಾದ ದಾರಿಯಲ್ಲಿಯೇ ಹೋಗುತ್ತಾಳೆ..!
“ಸನ್ಮಾರ್ಗದಲ್ಲಿ ಬರಲಿಲ್ಲ..ಸತ್ಕಾರ್ಯಕ್ಕೆ ವಿನಿಯೋಗವಾಗಲಿಲ್ಲ..ಆದರೂ ಲಕ್ಷ್ಮಿಯಿದ್ದಾಳೆ” ಎಂದರೆ ಅದು ಖಂಡಿತವಾಗಿಯೂ ಲಕ್ಷ್ಮಿಯಲ್ಲ..! ಲಕ್ಷ್ಮಿಯ ರೂಪದಲ್ಲಿ ನಮ್ಮೊಡನಿದ್ದು ನಮ್ಮ ಪತನಕ್ಕೆ ಹೊಂಚು ಹಾಕುತ್ತಿರುವ ಅಲಕ್ಷ್ಮಿಯದು..ನಮ್ಮ ಪೂರ್ವಪಾಪದ ಕನಕಮೃಗ ರೂಪವದು..!!

ಲಕ್ಷ್ಮಿಯ ಲಾಸ್ಯದಲ್ಲಿ ಪದವಿನ್ಯಾಸವೆರಡು ಬಗೆ..
ಸಂಗ್ರಹವೊಂದು ಪದವಾದರೆ ಸದ್ವಿನಿಯೋಗವಿನ್ನೊಂದು ಪದ..
ಸಂಗ್ರಹವು ಲಕ್ಷ್ಮಿಯ ಪದವಾದರೆ ಸದ್ವಿನಿಯೋಗವು ನಾರಾಯಣಪದ..
ವ್ಯಕ್ತಿಯು ದುಡಿದು ಸಂಪಾದಿಸಬೇಕು..ಅದು ಲಕ್ಷ್ಮಿಯ ಲಾಸ್ಯ..!
ವ್ಯಕ್ತಿಯು ದುಡಿದದ್ದನ್ನು ಕುಟುಂಬಕ್ಕೆ ಸಮರ್ಪಿಸಬೇಕು..ಅದು ನಾರಾಯಣನರ್ತನ…!!
ವ್ಯಕ್ತಿಗಳ ದುಡಿಮೆಯಿಂದ ಕುಟುಂಬವು ಸಮೃದ್ಧವಾದರೆ ಅದು ಲಕ್ಷ್ಮಿಯ ಲಾಸ್ಯ..
ಕುಟುಂಬವು ತನ್ನ ಸಮೃದ್ಧಿಯಲ್ಲಿ ಒಂದು ಪಾಲನ್ನು ನಾಡಿಗೆ ನೀಡಿದರೆ ಅದು ನಾರಾಯಣ ನರ್ತನ..
ವ್ಯಕ್ತಿಯ ದುಡಿಮೆಯಲ್ಲಿ ಶಿಶುವಾಗಿ ಜನ್ಮತಾಳುವ ಲಕ್ಷ್ಮಿಯು ಕುಮಾರಿಯಾಗಿ ಕುಟುಂಬದಲ್ಲಿ ಬೆಳೆಯುತ್ತಾಳೆ..ಪ್ರೌಢೆಯಾಗಿ ನಾಡನ್ನೇ ವ್ಯಾಪಿಸುತ್ತಾಳೆ..
“ನಾನು” ಎಂಬಲ್ಲಿ ಜನಿಸಿ, “ನಾವು” ಎಂಬಲ್ಲಿ ಬೆಳೆದು, “ನಾಡು” ಎಂಬಲ್ಲಿ ವಿಶ್ವರೂಪಿಣಿಯಾಗಿ ವ್ಯಾಪಿಸಬೇಕು ಆಕೆ..ಅದು ಅರ್ಥನೀತಿ..ಇದಕ್ಕೆ ಕರವೆಂದು ಹೆಸರು..
ದುಡಿಯುವ, ನೀಡುವ ಕೋಟಿ ಕರಗಳು ಸೇರಿ ಒಂದು ರಾಜ್ಯವನ್ನು ನಡೆಸುವುದನ್ನಲ್ಲವೇ “ಕರ” ವೆಂದು ಕರೆಯುವುದು..?
ಲಕ್ಷ್ಮಿಯ ಲೋಕಮಂಗಲಕರವಾದ “ಕರ”ವದು..
ಈ ಹರಿವಿನಲ್ಲಿ ಎಲ್ಲಿಯೂ ತಡೆಯಿಲ್ಲದಂತೆ, ಲಕ್ಷ್ಮಿಯು ಒಂದೆಡೆಯಿಂದ ಇನ್ನೊಂದೆಡೆಗೆ ಹರಿಯುವಾಗ ಎಲ್ಲಿಯೂ, ಯಾರಿಗೂ ನೋವಾಗದಂತೆ ನೋಡಿಕೊಳ್ಳಬೇಕಾದದ್ದು ’ರಾಜ್ಯಭಾರಧಾರಿ’ಗಳ ಕರ್ತವ್ಯ..
ಅಯೋಧ್ಯೆಯ ಅಮಾತ್ಯರ ಅರ್ಥನೀತಿ ಈ ಬಗೆಯದು..ಅಮಾತ್ಯರು ಅಯೋಧ್ಯೆಯ ಕೋಶದಲ್ಲಿ “ಧನ”ವೆಂಬ ಲಕ್ಷ್ಮಿಯು ಸದಾ ತುಂಬಿ ಹರಿಯುತ್ತಿರುವಂತೆ ನೋಡಿಕೊಂಡರು..ಆದರೆ ಅದು ಪ್ರಜೆಗಳ ಮನೆ-ಮನಗಳಲ್ಲಿ “ಆನಂದ” ವೆಂಬ ನಾರಾಯಣನನ್ನು ಬರಿದು ಮಾಡಿಯಲ್ಲ..!!

ಪೂರ್ಣಮದಃ ಪೂರ್ಣಮಿದಂ ಪೂರ್ಣಾತ್ ಪೂರ್ಣಮುದಚ್ಯತೇ |
ಪೂರ್ಣಸ್ಯ ಪೂರ್ಣಮಾದಾಯ ಪೂರ್ಣಮೇವಾವಶಿಷ್ಯತೇ ||

ಅದೂ (ಪರಮಾತ್ಮನು) ಪೂರ್ಣ, ಇದೂ (ಜಗತ್ತು) ಪೂರ್ಣ, ಪೂರ್ಣದಿಂದ (ಪರಮಾತ್ಮನಿಂದ) ಪೂರ್ಣವು (ಜಗತ್ತು) ಹೊರಹೊಮ್ಮಿತು..ಪೂರ್ಣದಿಂದ (ಪರಮಾತ್ಮನಿಂದ) ಪೂರ್ಣವು (ಜಗತ್ತು) ಹೊರಬಂದ ಮೇಲೆಯೂ ಪೂರ್ಣವು (ಪರಮಾತ್ಮನು) ಪೂರ್ಣವಾಗಿಯೇ ಉಳಿಯಿತು…!! ಇದು ಪರಮಾರ್ಥನೀತಿ..

ಅದು (ಅಯೋಧ್ಯೆಯ ಪ್ರಜೆಗಳು) ಪೂರ್ಣ, ಇದು(ಅಯೋಧ್ಯೆಯ ಕೋಶವೂ)ಪೂರ್ಣ, ಪೂರ್ಣದಿಂದ(ಪ್ರಜೆಗಳಿಂದ) ಪೂರ್ಣವು(ಕೋಶವು) ಹೊರಹೊಮ್ಮಿತು..ಪೂರ್ಣದಿಂದ(ಪ್ರಜೆಗಳಿಂದ) ಪೂರ್ಣವು(ಸಮೃದ್ಧವಾದ ಕೋಶವು) ಹೊರಹೊಮ್ಮಿದ ಮೇಲೆಯೂ ಪೂರ್ಣವು(ಪ್ರಜಾವರ್ಗ) ಪೂರ್ಣವಾಗಿಯೇ ಉಳಿಯಿತು…!! ಇದು ಅರ್ಥನೀತಿ..!

“ಬ್ರಹ್ಮಕ್ಷತ್ರಮಹಿಂಸಂತಃ ತೇ ಕೋಶಂ ಸಮಪೂರಯನ್”

( ಕರಭಾರವನ್ನು ಹೇರಿ ಬ್ರಹ್ಮ-ಕ್ಷತ್ರಗಳನ್ನು ಪೀಡಿಸದೆಯೇ ಅವರು ಕೋಶವನ್ನು ತುಂಬಿದರು..)

ಮೇಲ್ನೋಟಕ್ಕೆ ಇದು ತಾರತಮ್ಯವೆಂದೆನಿಸುತ್ತದೆಯಲ್ಲವೇ..? ..
ಮಾನವಶರೀರದ ಅಂಗವಾದ ಕರದಲ್ಲಿ ತಾರತಮ್ಯವಿರುವುದೇನೋ ಸರಿ..
ರಾಜ್ಯಾಡಳಿತದ ಅಂಗವಾದ ಕರದಲ್ಲಿಯೂ ತಾರತಮ್ಯ ಮಾಡುವುದೇ..?

ಹೌದು,
ತಾರತಮ್ಯವೇ ಹೌದು..
ಆದರೆ ನಾವೆಂದುಕೊಂಡಂತೆ ಅಲ್ಲ..
ಮತ್ತುಳಿದವರು ತಮ್ಮ ಬದುಕಿನ ಒಂದಂಶವನ್ನು ನಾಡಿಗೆ ನೀಡಿದರೆ ಬ್ರಹ್ಮ-ಕ್ಷತ್ರವರ್ಗಗಳು ಸಂಪೂರ್ಣವಾಗಿ ತಮ್ಮ ಬದುಕನ್ನೇ ಸಮರ್ಪಿಸುತ್ತಿದ್ದವು….

ಸಮಾಜಕ್ಕಾಗಿಯೇ ಬದುಕುವ ವರ್ಗವೊಂದು- ಅದು ಬ್ರಹ್ಮವರ್ಗ..
ಸಮಾಜಕ್ಕಾಗಿಯೇ ಸಾವನ್ನಪ್ಪುವ ವರ್ಗವಿನ್ನೊಂದು- ಅದು ಕ್ಷತ್ರವರ್ಗ..
ಸಮಾಜದ ಅಂತರಂಗವನ್ನು ಅರಿವು-ಆನಂದಗಳಿಂದ ತುಂಬುವುದು ಬ್ರಹ್ಮವರ್ಗ..
ಬಹಿರಂಗದಲ್ಲಿ ಬಂದೆರಗುವ ಆಪತ್ತುಗಳಿಂದ ಸಮಾಜವನ್ನು ರಕ್ಷಿಸುವುದು ಕ್ಷತ್ರವರ್ಗ..
ಆನೆ ಕೊಟ್ಟವರಿಂದ ಅಡಕೆ ಕೇಳುವುದೇ..?
ಹಸುವನ್ನೇ ಸಮರ್ಪಿಸಿದವನಲ್ಲಿ ಹಗ್ಗಕ್ಕಾಗಿ ಗುದ್ದಾಡುವುದೆಂತು..?
ಆದುದರಿಂದಲೇ ಅಯೋಧ್ಯೆಯಲ್ಲಿ, ಸಮಾಜಕ್ಕೆ ಸರ್ವಾಪ೯ಣೆ ಮಾಡಿಕೊಂಡ ಈ ಎರಡು ವರ್ಗಗಳ ಮೇಲೆ ಬಹುವಾದ “ಕರಭಾರ”ವಿರಲಿಲ್ಲ..!

ವೃದ್ಧಿಯೆಂಬ ಅರ್ಥದಲ್ಲಿರುವ ‘ಬೃಹಿ-ಮಹಿ’ಗಳೆಂಬ ಜೋಡಿಧಾತುಗಳಿಂದ ನಿರ್ಮಿತವಾಗಿದೆ ಬ್ರಹ್ಮಶಬ್ದ..
ಬ್ರಹ್ಮವೆಂದರೆ ವೃದ್ಧಿ..
ಯಾವುದು ‘ಬೃಹತ್’ ಆಗಿ, ‘ಮಹತ್’ ಆಗಿ, ವಿರಾಟ್ ವಿಶ್ವವಾಗಿ ಬೆಳೆದುನಿಂತಿತೋ ಆ ಪರಮಾತ್ಮನಿಗೇ ಬ್ರಹ್ಮವೆಂದು ಹೆಸರು..
ಯಾರು ಅರಿವು-ಆನಂದಗಳ ರಾಶಿಯೇ ಆದ ಆ “ಬ್ರಹ್ಮ”ವನ್ನು ತಾವು ತಮ್ಮೊಳಗೇ ಕಂಡುಕೊಂಡು, ಸರ್ವಸಮಾಜಕ್ಕೆ ಪಸರಿಸಲು ತಮ್ಮ ಆಯುಸ್ಸಿನ ಸರ್ವಸ್ವವನ್ನೂ ಧಾರೆಯೆರೆದರೋ ಆ ಬಗೆಯ ಜನರಿಗೆ ’ಬ್ರಹ್ಮವರ್ಗ’ವೆಂದೇ ಹೆಸರು ಬಂದಿತು..!
ಅವರು ತಮ್ಮ ಬಹುಮೂಲ್ಯವಾದ ಆಯುಸ್ಸನ್ನೇ-ತಪಸ್ಸನ್ನೇ ಕರವಾಗಿ ನಾಡಿಗೆ ನೀಡುತ್ತಿದ್ದರು..
ಅವರ ಬದುಕೇ ನಾಡಿಗೆ ನೀಡಿದ ಕರ.. ಮಂಗಲಕರ..!

ಕ್ಷತವೆಂದರೆ ಆಘಾತ..ಸಮಾಜಕ್ಕೊದಗಿ ಬರುವ ಆಘಾತಗಳನ್ನು ಯಾರು ತಾವು ಸ್ವೀಕರಿಸಿ, ಸಮಾಜವನ್ನುಳಿಸುವರೋ ಆ ಬಗೆಯ ಜನರಿಗೆ “ಕ್ಷತ್ರವರ್ಗ’ ವೆಂದೇ ಹೆಸರು ಬಂದಿತು..
ಇವರು ತಮ್ಮ ಅಮೂಲ್ಯವಾದ ಜೀವವನ್ನೇ ಕರವಾಗಿ ತೆರುವವರು..!
ಸಾವು-ನೋವುಗಳನ್ನು ತಾವುಂಡು ಸಮಾಜವನ್ನು ನಲಿವಿನಲ್ಲಿಡುವ ಅಭಿನವವಿಷಕಂಠರು..!
ಸಮಾಜಪುರುಷನಿಗೆ ಕವಚವಿದ್ದಂತೆ..
ಸಮಾಜವೆಂಬ ತೋಟಕ್ಕೆ ಬೇಲಿಯಿದ್ದಂತೆ..
ಸಮಾಜವೆಂಬ ನೇತ್ರಕ್ಕೆ ರೆಪ್ಪೆಯಿದ್ದಂತೆ..

ಹುಟ್ಟಿದ ಪ್ರತಿಯೊಂದು ಜೀವವೂ ಬಯಸುವುದಾದರೂ ಏನನ್ನು..?
ಒಳಿತಾಗಬೇಕು..
ಕೆಡುಕಾಗಬಾರದು..
ಸಮಾಜಕ್ಕೆ ಒಳಿತಾಗುವಂತೆ ಮಾಡುವುದು ಬ್ರಹ್ಮವರ್ಗದ ಕರ್ತವ್ಯ..
ಕೆಡುಕಾಗದಂತೆ ನೋಡಿಕೊಳ್ಳುವುದು ಕ್ಷತ್ರದ ಕರ್ತವ್ಯ..
ಅಲಭ್ಯವಾದುದರ ಲಾಭವು ’ಯೋಗ’
ಅದು ಬ್ರಹ್ಮವರ್ಗದ ಹೊಣೆ..
ಲಬ್ಧವಾದುದರ ರಕ್ಷಣೆಯು ‘ಕ್ಷೇಮ’
ಅದು ಕ್ಷತ್ರವರ್ಗದ ಹೊಣೆ..
ಸಮಾಜದ “ಯೋಗಕ್ಷೇಮ”ದ ಹೊಣೆ ಹೊತ್ತ ಈ ವರ್ಗಗಳಿಂದ ಧನದ ರೂಪದಲ್ಲಿ ಕರದ ನಿರೀಕ್ಷೆಯಿರಲಿಲ್ಲ..
ಸಮಾಜವನ್ನು ಬೆಳೆಸುವುದೇ ‘ಬ್ರಹ್ಮವರ್ಗ’ಕ್ಕೆ ಕರವಾಗಿತ್ತು..
ಸಮಾಜವನ್ನು ಉಳಿಸುವುದೇ ’ಕ್ಷತ್ರವರ್ಗ”ಕ್ಕೆ ಕರವಾಗಿತ್ತು..

ಹೀಗೆ ಬ್ರಹ್ಮವರ್ಗವು ಆತ್ಮವನ್ನಿತ್ತು, ಕ್ಷತ್ರವರ್ಗವು ಜೀವವನ್ನೇ ತೆತ್ತು, ಮತ್ತುಳಿದ ಪ್ರಜೆಗಳು ಕರಗಳನ್ನೊಪ್ಪಿಸಿ ಅಯೋಧ್ಯೆಯ ಕೋಶ ತುಂಬಿತು..ಶೋಕ ತೊಲಗಿತು..!!

Facebook Comments